ವಿದ್ಯಾರ್ಥಿ ನಿಲಯ  ಅವ್ಯವಸ್ಥೆಯ ಆಗರ

ಪಾವಗಡ:


ಎರಡು ವರ್ಷದಿಂದ ಕೊರೋನಾ ಮಹಾಮಾರಿಯಿಂದ ಶಾಲಾ ಕಾಲೇಜ್‍ಗಳನ್ನು ಮುಚ್ಚಿ, ಪೋಷಕರ ಸಭೆ ಕರೆದು, ಸುಮಾರು 3-4 ತಿಂಗಳಿಂದ ವಸತಿ ನಿಲಯಗಳನ್ನು ತೆರೆದು, ವಿದ್ಯಾರ್ಥಿಗಳು ವಸತಿ ನಿಲಯಗಳಿಗೆ ಬಂದಿದ್ದಾರೆ. ಇಲ್ಲಿನ ಕೆಲ ವಸತಿ ನಿಲಯಗಳಲ್ಲಿ ಸ್ವಚ್ಛತೆಯಿಲ್ಲದೆ ದುರ್ನಾತ ಬೀರುತ್ತಿರುವ ಅವ್ಯವಸ್ಥೆ ವಸತಿ ನಿಯಗಳಿಗೆ ಭೇಟಿ ನೀಡಿದರೆ ಸಾಕು ಅನುಭವಕ್ಕೆ ಬರುತ್ತದೆ.


ಪಟ್ಟಣದಿಂದ ಎರಡು ಕಿಲೋ ಮೀಟರ್ ದೂರದಲ್ಲಿ ಇರುವ ಶ್ರೀ ವೈ.ಇ.ರಂಗಯ್ಯ ಶೆಟ್ಟಿ ಪ್ರಥಮ ದರ್ಜೆ ಕಾಲೇಜಿನ ಒಳಗಡೆ ನಿರ್ಮಿಸಿದ ಪ್ರಥಮ ದರ್ಜೆ ಕಾಲೇಜಿನ ಬಾಲಕರ ವಸತಿ ನಿಲಯದ ಸುತ್ತ-ಮುತ್ತ ಸ್ವಚ್ಛತೆ ಇಲ್ಲದೆ, ಕೊಳಚೆ ನೀರು ನಿಂತು ದುರ್ವಾಸನೆ ಬೀರುತ್ತಿರುವ ಮಾಹಿತಿಯಿಂದ ನಿಲಯಕ್ಕೆ ಭೇಟಿ ನೀಡಿದಾಗ ಸ್ವಚ್ಛತೆ ಇಲ್ಲದೆ ದುರ್ನಾತ ಬೀರುತ್ತಿರುವುದನ್ನು ಕಣ್ಣಾರೆ ಕಂಡಂತಾಯಿತು.

ಕೊರೋನಾ ಭೀತಿಯಲ್ಲಿ ಪೋಷಕರು ಮಕ್ಕಳನ್ನು ವಸತಿ ನಿಲಯಗಳಿಗೆ ಕಳುಹಿಸಲು ಹಿಂದೆ ಮುಂದೆ ನೋಡಿದ ಹಿನ್ನೆಲೆಯಲ್ಲಿ ಶಿಕ್ಷಣ ಇಲಾಖೆಯು ಹಲವಾರು ನಿಯಮಗಳನ್ನು ಜಾರಿಗೆ ತಂದು, ಕಾಲೇಜ್‍ಗಳನ್ನು ತೆರೆದು ವಿದ್ಯಾರ್ಥಿಗಳಿಗೆ ವಸತಿ ಮತ್ತು ಊಟದ ವ್ಯವಸ್ಥೆ ಕಲ್ಪಿಸಿತು. ಆದರೆ ಈ ಎಲ್ಲಾ ನಿಯಮಗಳನ್ನು ಗಾಳಿಗೆ ತೂರಿ, ಅಧಿಕಾರಿಗಳಿಗೆ ಇಷ್ಟ ಬಂದಂತೆ ವಸತಿ ನಿಲಯಗಳನ್ನು ನಿರ್ವಹಿಸುತ್ತಿದ್ದಾರೆ.
ವಸತಿ ನಿಲಯಗಳಲ್ಲಿ ಸ್ವಚ್ಛತೆಯೆಂಬುದು ಮರೀಚಿಕೆಯಾಗಿ, ಸಾಂಕ್ರಾಮಿಕ ರೋಗಗಳ ತಾಣವಾಗಿ ಮಾರ್ಪಟ್ಟಿವೆ. ಇದರ ಹೊಣೆಯನ್ನು ನಿಲಯ ಪಾಲಕರೆ ಹೊರಬೇಕಾಗಿದೆ.

ವೈ.ಇ.ರಂಗಯ್ಯ ಶೆಟ್ಟಿ ಪ್ರಥಮ ದರ್ಜೆ ಕಾಲೇಜ್ ಜಿಲ್ಲೆಯಲ್ಲಿ ಹೆಸರುವಾಸಿಯಾಗಿದೆ. ಕಾಲೇಜ್ ಆವರಣದಲ್ಲಿರುವ ವಸತಿ ನಿಲಯವನ್ನು ಸಮಾಜ ಕಲ್ಯಾಣ ಇಲಾಖೆ ವತಿಯಿಂದ ನಡೆಸಲಾಗುತ್ತಿದೆ. ವಸತಿ ಕಟ್ಟಡದ ಸ್ವಚ್ಛತೆಗೆ ರಾಜ್ಯ ಸರಕಾರವು ಹಣ ನೀಡುತ್ತಿಲ್ಲ ಎಂದು ನಿಲಯ ಪಾಲಕರು ತಮ್ಮ ಅಸಹಾಯಕತೆ ತೋರುತ್ತಿದ್ದಾರೆ.


ಈ ವಸತಿ ನಿಲಯದಲ್ಲಿ 160 ವಿದ್ಯಾರ್ಥಿಗಳಿದ್ದು, ಇಲ್ಲಿ ನಿಯಮದ ಪ್ರಕಾರ ವಿದ್ಯಾರ್ಥಿಗಳಿಗೆ ಗುಣ ಮಟ್ಟದ ಆಹಾರ ನೀಡುತ್ತಿಲ್ಲ. ವಸತಿ ನಿಲಯದಲ್ಲಿ ಸೀನಿಯರ್ಸ್‍ಗೆ ಮತ್ತು ಜ್ಯೂನಿಯರ್ಸ್‍ಗೆ ಊಟ ನೀಡಿಕೆಯಲ್ಲಿ ತಾರತಮ್ಯ ಮಾಡಲಾಗುತ್ತಿದೆ. ಸೀನಿಯರ್ಸ್‍ಗೆ ಹೊಟ್ಟೆ ತುಂಬಾ ಊಟ ನೀಡಿ, ಜ್ಯೂನಿಯರ್ಸ್ ಅನ್ನ ಕೇಳಿದರೆ ಗದರಿಸುವ ಅಮಾನವೀಯ ಪರಿಸ್ಥಿತಿ ಇದೆ. ಊಟದ ಸಮಯದಲ್ಲಿ ನಿಲಯ ಪಾಲಕರು ಇರುವುದಿಲ್ಲ. ಸಮಯ ನಿಗದಿ ಪಡಿಸದೆ ಇರುವ ಕಾರಣ ಮೊದಲು ಬಂದ ವಿದ್ಯಾರ್ಥಿಗಳು ಊಟ ಮಾಡಿ ಹೋದರೆ,ನಂತರ ಬಂದವರು ಊಟವಿಲ್ಲದೆ ವಾಪಸ್ಸು ತೆರಳಬೇಕಾಗುತ್ತದೆ ಎಂಬ ಅಮಾನುಷಕರ ಮಾಹಿತಿಯೂ ತಿಳಿದು ಬಂದಿದೆ.


ವಸತಿ ನಿಲಯದ ಅಡುಗೆ ಕೋಣೆಯು ಜೇನು ಸಾಕಾಣಿಕೆ ಘಟಕದಂತಿದ್ದು, ಅಡುಗೆ ಕೋಣೆಯಲ್ಲಿ ಸೊಳ್ಳೆಗಳು ತುಂಬಿವೆ. ಕಟ್ಟಡದಿಂದ ನೀರು ಹೊರ ಹೋಗಲು ಚರಂಡಿ ವ್ಯವಸ್ಥೆಯಿಲ್ಲದೆ, ಕಟ್ಟಡ ಸುತ್ತಲು ನೀರು ನಿಂತು ಕೊಳಚೆ ಸೃಷ್ಟಿಯಾಗಿ ದುರ್ವಾಸನೆ ಬರುತ್ತಿದೆ. ಇಲ್ಲಿಗೆ ಸಮಾಜ ಕಲ್ಯಾಣಾಧಿಕಾರಿಗಳು ಎಷ್ಟು ಸಲ ಭೇಟಿ ನೀಡಿದ್ದಾರೋ ಗೊತ್ತಿಲ್ಲ. ವಸತಿ ನಿಲಯವಂತೂ ಸಮಸ್ಯೆಗಳ ತಾಣವಾಗಿದೆ.

ಅಡುಗೆ ಕೋಣೆಯಲ್ಲಿ ರಾಶಿಗಟ್ಟಲೆ ಕಸ, ಕೊಳೆತ ತರಿಕಾರಿ ತುಂಬಿದ್ದು, ತರಿಕಾರಿ ಬುಟ್ಟಿಯೆ ಸೊಳ್ಳೆಗಳ ತಾಣವಾಗಿ ಮಾರ್ಪಟ್ಟಿದೆ. ಇದರ ಬಗ್ಗೆ ನಿಲಯದ ಪಾಲಕರನ್ನು ಪ್ರಶ್ನಿಸಿದರೆ, ಕಿಟಕಿ ಬಾಗಿಲು ನಿಲಯದ ಸುತ್ತ-ಮುತ್ತ ಗಿಡ-ಮರಗಳು ಅಲ್ಲದೆ, ಹುಲ್ಲು ಬೆಳೆದಿರುವುದರಿಂದ ಸೊಳ್ಳೆಗಳ ಕಾಟವಿದೆ, ನಾವೇನು ಮಾಡಬೇಕು ನೀವೆ ಹೇಳಿ ಸಾರ್ ಎಂಬ ಪ್ರಶ್ನೆ ನಮಗೇ ತಿರುಗುಬಾಣವಾಯಿತು.

ತಾಲ್ಲೂಕು ಸಮಾಜ ಕಲ್ಯಾಣಾಧಿಕಾರಿ ಶ್ರೀನಿವಾಸನಾಯ್ಕ್ ವಸತಿ ನಿಲಯಗಳಿಗೆ ಭೇಟಿ ನೀಡಿ ಪರಿಶೀಲನೆ ಮಾಡುವುದೇ ಇಲ್ಲ ಎಂಬ ಆರೋಪ ಕೂಡ ಕೇಳಿ ಬಂದಿದೆ. ಇದರ ಹಿಂದಿನ ರಹಸ್ಯವಾದರೂ ಏನು ಇರಬಹುದೆಂಬ ಅನುಮಾನಗಳು ಸೃಷ್ಟಿಯಾಗುವಂತಾಗಿದೆ. ಇಂತಹ ನಿಲಯ ಪಾಲಕರ ವೈಫÀಲ್ಯದಿಂದ ವಸತಿ ಕಟ್ಟಡಗಳಲ್ಲಿ ಸಾಂಕ್ರ್ರಾಮಿಕ ರೋಗಗಳು ಹರಡಿದರೆ, ತಮ್ಮ ಪಾಡೇನು ಎಂಬುದು ಹಲವು ವಿದ್ಯಾರ್ಥಿಗಳ ದುಗುಡದ ಆವೇದನೆಯಾಗಿದೆ.

ವಸತಿ ನಿಲಯದ ಸುತ್ತ-ಮುತ್ತ ಬೆಳೆದಿದ್ದ ಮರ-ಗಿಡಗಳನ್ನು ಸ್ವತಃ ನಿಲಯ ಪಾಲಕರೆ ಮುಂದೆ ನಿಂತು ಕಡಿಸಿ, ಪರಿಸರ ಹಾಳು ಮಾಡಿರುವುದು, ಹಲವು ವಿದ್ಯಾರ್ಥಿಗಳಲ್ಲಿ ನಿಲಯ ಪಾಲಕರ ನಡೆಗೆ ಬೇಸರ ವ್ಯಕ್ತವಾಗಿದೆ.
ಜಿಲ್ಲಾ ಉಸ್ತುವಾರಿ ಸಚಿವರು ತಾಲ್ಲೂಕು ಕೇಂದ್ರಗಳಿಗೆ ಭೇಟಿ ನೀಡಿದ ಸಮಯದಲ್ಲಿ ವಸತಿ ನಿಲಯಗಳಿಗೂ ಒಮ್ಮೆ ಭೇಟಿ ನೀಡಿ ಇಲ್ಲಿ ಕೈಗೊಂಡಿರುವ ಸ್ವಚ್ಛತೆ ಬಗ್ಗೆ ಪರಿಶೀಲನೆ ಮಾಡಬೇಕೆಂಬುದು ಹಲವು ವಿದ್ಯಾರ್ಥಿಗಳ ಒತ್ತಾಯವಾಗಿದೆ.

ಸರಕಾರದಿಂದ ವಸತಿ ನಿಲಯ ನಡೆಸಲು ಸಕಾಲದಲ್ಲಿ ಅನುದಾನ ಬಿಡುಗಡೆಯಾಗುತ್ತಿಲ್ಲ. ಸ್ವಂತ ಹಣದಲ್ಲಿ ವಸತಿ ನಿಲಯ ನಡೆಸಲಾ ಗುತ್ತಿದೆ. ಅಡುಗೆ ಸಹಾಯಕರು ಕುಡುಕರಾಗಿದ್ದು, ಹೇಳಿದ ಮಾತನ್ನೆ ಕೇಳುತ್ತಿಲ್ಲ. ಇದರ ಬಗ್ಗೆ ಮೇಲಧಿಕಾರಿಗಳಿಗೂ ಮಾಹಿತಿ ನೀಡಿದ್ದೇನೆ. ಇದಕ್ಕೂ ಮಿಗಿಲಾಗಿ ನಾನೇನು ತಾನೆ ಮಾಡಲು ಸಾಧ್ಯ? ನೀವೆ ಹೇಳಿ..!
-ಅಶ್ವತ್ಥಪ್ಪ, ನಿಲಯ ಪಾಲಕರು.

ಎರಡು ಮೂರು ಬಾರಿ ಭೇಟಿ ನೀಡಿದ್ದೆ. ಆಗ ವಸತಿ ನಿಲಯ ಸ್ವಚ್ಛತೆಯಿಂದ ಕೂಡಿತ್ತು. ಇತ್ತೀಚೆಗೆ ಭೆಟಿ ನೀಡಿಲ್ಲ, ಪರಿಶೀಲನೆ ಮಾಡುತ್ತೇನೆ.
-ಶ್ರೀನಿವಾಸ ನಾಯ್ಕ್, ತಾಲ್ಲೂಕು ಸಮಾಜ ಕಲ್ಯಾಣಾಧಿಕಾರಿ.

ವಸತಿ ನಿಲಯದಲ್ಲಿ ಮೆನು ಪ್ರಕಾರ ಊಟವಿಲ್ಲ, ಕೇಳಿದರೆ ದೌರ್ಜನ್ಯ ಮಾಡುತ್ತಾರೆ, ಊಟ ಸಾಲದೆ ಬಂದರೂ ಕೇಳುವಂತಿಲ್ಲ. ಉಟದ ಸಮಯದಲ್ಲಿ ನಿಲಯಪಾಲಕರೆ ಇರುವುದಿಲ್ಲ, ಯಾರನ್ನು ಕೇಳಬೇಕು.
-ಹೆಸರು ಹೇಳಲು ಇಚ್ಛಿಸದ ವಿದ್ಯಾರ್ಥಿಗಳು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link