ಮಂಗಳೂರು:
ರಾಜ್ಯದಲ್ಲಿ ದಿನದಿಂದ ದಿನಕ್ಕೆ ಬಿಸಿದ ಧಗೆ ಹೆಚ್ಚಾಗುತ್ತಿದ್ದು, ಬಿಸಿಲ ತಾಪ ಮಿತಿ ಮೀರುತ್ತಿರುವ ಪರಿಣಾಮ ಚುನಾವಣಾ ಪ್ರಚಾರದ ಮೇಲೂ ಬಿದ್ದಿದೆ. ಹೆಚ್ಚುತ್ತಿರುವ ತಾಪಮಾನ ಬಹಿರಂಗ ಪ್ರಚಾರಕ್ಕಿಳಿದಿರುವ ಅಭ್ಯರ್ಥಿಗಳು, ಕಾರ್ಯಕರ್ತರಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.
ದಕ್ಷಿಣ ಕನ್ನಡ ಬಿಜೆಪಿ ಮಾಜಿ ಅಧ್ಯಕ್ಷ ಸುದರ್ಶನ್ ಮಾತನಾಡಿ, ದಕ್ಷಿಣ ಕನ್ನಡದಲ್ಲಿ ಮನೆಗಳು ದೂರ ದೂರ ಇರುವುದರಿಂದ ಸುಡು ಬಿಸಿನಲ್ಲಿ ಮನೆ-ಮನೆ ಪ್ರಚಾರ ಕಠಿಣವಾಗಿ ಪರಿಣಮಿಸಿದೆ ಎಂದು ಹೇಳಿದ್ದಾರೆ.
ನಾವು ಮೊದಲ ಸುತ್ತಿನ ಮನೆ-ಮನೆ ಪ್ರಚಾರವನ್ನು ಪೂರ್ಣಗೊಳಿಸಿದ್ದೇವೆ. ದಿನಕ್ಕೆ ಗರಿಷ್ಠ 100 ಮನೆಗಳನ್ನು ತಲುಪಲಾಗಿದೆ. ಕಳೆದ ಕೆಲವು ದಿನಗಳಲ್ಲಿ ತಾಪಮಾನದ ಏರಿಕೆಯಿಂದಾಗಿ, ನಾವು ಬೆಳಿಗ್ಗೆ ಬೇಗನೆ ಹೊರಾಂಗಣ ಪ್ರಚಾರವನ್ನು ಪ್ರಾರಂಭಿಸುತ್ತಿದ್ದೇವೆ. 11.30ಕ್ಕೆ ನಮ್ಮ ಹೊರಾಂಗಣ ಪ್ರಚಾರ ಕೊನೆಗೊಳ್ಳುತ್ತಿದೆ. ನಂತರ ಸಂಜೆ 4 ಗಂಟೆಗೆ ಮತ್ತೆ ಪ್ರಚಾರವನ್ನು ಆರಂಭಿಸುತ್ತಿದ್ದೇವೆ. ಈ ಪ್ರಚಾರ ತಡರಾತ್ರಿಯವರೆಗೆ ಮುಂದುವರಿಯುತ್ತಿದೆ. ಪ್ರಚಾರದ ವೇಳೆ ಮತದಾರರು ಕೂಡ ನಮಗೆ ಕುಡಿಯಲು ನೀರು ಕೊಡುತ್ತಿದ್ದಾರೆ. ಪಕ್ಷದ ಹಿರಿಯ ನಾಯಕರೂ ಕೂಡ ಮಧ್ಯಾಹ್ನದ ವೇಳೆ ಪ್ರಚಾರ ಕಾರ್ಯಕ್ಕಾಗಿ ಹೋಗುವುದು ಬೇಡ ಎಂದು ಹೇಳಿದ್ದಾರೆಂದು ತಿಳಿಸಿದರು.
ಬಿಜೆಪಿ ಕಾರ್ಯಕರ್ತರೊಬ್ಬರು ಮಾತನಾಡಿ, ಒಂದು ಪ್ರದೇಶ ಅಥವಾ ಕಾಲೋನಿಯ ಜನರನ್ನು ಒಂದು ಸ್ಥಳದಲ್ಲಿ ಸೇರಿಸುವ ಕೆಲಸ ಮಾಡುತ್ತಿದ್ದೇವೆ. ಹೊರಗೆ ಹೋಗದೆ ನಮಗೆ ಬೇರೆ ದಾರಿಯಿಲ್ಲ. ಅಭ್ಯರ್ಥಿಗಳ ಪರ ಪ್ರಚಾರ ನಡೆಸುತ್ತಿದ್ದೇವೆ. ಈ ಸಂದರ್ಭದಲ್ಲಿ ನಿರ್ಜಲೀಕರಣ ಸಮಸ್ಯೆಯಾಗದಂತೆ ಹೆಚ್ಚೆಚ್ಚು ನೀರು ಕುಡಿಯುತ್ತಿದ್ದೇನೆಂದು ಹೇಳಿದ್ದಾರೆ.
ಕಾಂಗ್ರೆಸ್ ಅಭ್ಯರ್ಥಿಯ ಪ್ರಚಾರ ತಂಡದ ಭಾಗವಾಗಿರುವ ಪ್ರಶಾಂತ್ ಎಂಬುವವರು ಮಾತನಾಡಿ, ಬಿಸಿಲಿನ ತಾಪದಿಂದ ರಕ್ಷಿಸಿಕೊಳ್ಳಲು ಪಕ್ಷದ ಕಾರ್ಯಕರ್ತರಿಗೆ ಕ್ಯಾಪ್‌ಗಳನ್ನು ವಿತರಿಸಲಾಗುತ್ತಿದೆ ಎಂದು ಹೇಳಿದ್ದಾರೆ.
ಗ್ರಾಮೀಣ ಪ್ರದೇಶಗಳಲ್ಲಿ ಮನೆಗಳು ದೂರ ದೂರ ಇವೆ, ರಸ್ತೆಗಳಿಲ್ಲದ ಕಡೆಗಳಲ್ಲಿ ನಡೆದಾಡುವುದು ಅನಿವಾರ್ಯವಾಗಿದೆ. ಹೆಚ್ಚುತ್ತಿರುವ ತಾಪಮಾನ ಪ್ರಚಾರ ಹಾಗೂ ಸಾರ್ವಜನಿಕ ಸಭೆಗಳ ಮೇಲೆ ಪರಿಣಾಮ ಬೀರಿದೆ. ಪ್ರಚಾರದ ವೇಳೆ ನೀರು ಮತ್ತು ಹಣ್ಣುಗಳನ್ನು ಕೊಂಡೊಯ್ಯುತ್ತಿದ್ದೇವೆ. ಅಲ್ಲದೆ, ಹೆಚ್ಚಾಗಿ ಹತ್ತಿ ಬಟ್ಟೆಗಳನ್ನು ಧರಿಸುತ್ತಿದ್ದೇವೆಂದು ತಿಳಿಸಿದ್ದಾರೆ.