ನವದೆಹಲಿ:
ಭಾರತದ ಬಿಷ್ಣೋಯ್ ಕ್ರೈಂ ಗ್ಯಾಂಗ್ ಹತ್ಯೆಗಳು ಮತ್ತು ಸುಲಿಗೆ ಪ್ರಕರಣಗಳ ಮೂಲಕ ಕುಖ್ಯಾತಿ ಹೊಂದಿದ್ದು, ಇದೀಗ ಕೆನಡಾದಲ್ಲಿ ಸಿಖ್ ಪ್ರತ್ಯೇಕತಾವಾದಿಯ ಹತ್ಯೆಯಲ್ಲಿ ಭಾಗಿಯಾಗಿರುವ ಆರೋಪದ ನಂತರ ಅದರ ವ್ಯಾಪ್ತಿಯು ಜಗತ್ತಿಗೇ ಹೆಚ್ಚು ವಿಸ್ತರಿಸಿದೆ.
ಈ ಗ್ಯಾಂಗ್ ನ ಆಪಾದಿತ ಮುಖ್ಯಸ್ಥ 31 ವರ್ಷದ ಕಾನೂನು ಪದವೀಧರ ಲಾರೆನ್ಸ್ ಬಿಷ್ಣೋಯ್ ಸುಮಾರು ಒಂದು ದಶಕದಿಂದ ಜೈಲಿನಲ್ಲಿದ್ದು, ಪ್ರಸ್ತುತ ಭಾರತದ ಗುಜರಾತ್ ರಾಜ್ಯದಲ್ಲಿ ಪಾಕಿಸ್ತಾನದಿಂದ ಹೆರಾಯಿನ್ ಕಳ್ಳಸಾಗಣೆ ಮಾಡಿದ ಪ್ರಕರಣದ ವಿಚಾರಣೆಯನ್ನು ಎದುರಿಸುತ್ತಿದ್ದಾರೆ.
ಈ ಬಿಷ್ಣೋಯ್ ಗ್ಯಾಂಗ್ 2022 ರಲ್ಲಿ ಜನಪ್ರಿಯ ಸಿಖ್ ರ್ಯಾಪರ್ ಹತ್ಯೆಯಲ್ಲಿ ಶಂಕಿತವಾಗಿದ್ದು, ಈ ತಿಂಗಳ ಆರಂಭದಲ್ಲಿ ಭಾರತದ ಆರ್ಥಿಕ ರಾಜಧಾನಿ ಮುಂಬೈನಲ್ಲಿ ಉನ್ನತ ಮಟ್ಟದ ರಾಜಕಾರಣಿ ಎನ್ ಸಿಪಿ ಮುಖಂಡ ಬಾಬಾ ಸಿದ್ದಿಕಿಯನ್ನು ಕೊಂದು ಹಾಕಿದ ಬಳಿಕ ಮತ್ತಷ್ಟು ಜೋರಾಗಿ ಈ ಗ್ಯಾಂಗ್ ನ ಹೆಸರು ವ್ಯಾಪಕವಾಗಿ ಕೇಳಿಬರುತ್ತಿದೆ. ಇದೇ ಗ್ಯಾಂಗ್ ಕೆನಡಾ ಪ್ರಜೆ ಹಾಗೂ ಖಲಿಸ್ತಾನಿ ಬಂಡುಕೋರ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯಲ್ಲೂ ಭಾಗಿಯಾಗಿರುವ ಆರೋಪ ಕೇಳಿಬಂದಿದ್ದು, ಈ ಬಗ್ಗೆ ಸ್ವತಃ ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೋ ಗಂಭೀರ ಆರೋಪ ಮಾಡಿದ್ದಾರೆ. ಈ ಹತ್ಯೆಗೆ ಸಂಬಂಧಿಸಿದಂತೆ ತಮ್ಮ ಬಳಿ ಗಂಭೀರ ಪುರಾವೆಗಳಿದ್ದು, ಬಿಷ್ಣೋಯ್ ಗ್ಯಾಂಗ್ ಮತ್ತು ಭಾರತೀಯ ರಾಯಭಾರ ಕಚೇರಿ ಅಧಿಕಾರಿಗಳು ಜಂಟಿಯಾಗಿ ಈ ಹತ್ಯೆ ಸಂಚಿನಲ್ಲಿ ಭಾಗಿಯಾಗಿದ್ದರು ಎಂದು ಆರೋಪಿಸಿದ್ದಾರೆ.
ಇದಕ್ಕೆ ಇಂಬು ನೀಡುವಂತೆ ಕೆನಡಾದ ರಾಯಲ್ ಕೆನಡಿಯನ್ ಮೌಂಟೆಡ್ ಪೋಲೀಸರು, ‘ಭಾರತವು ದಕ್ಷಿಣ ಏಷ್ಯಾದ ವಲಸೆಗಾರರನ್ನು ಮತ್ತು ಸಿಖ್ ಪ್ರತ್ಯೇಕತಾವಾದಿಗಳ ಸದಸ್ಯರನ್ನು ಗುರಿಯಾಗಿಸಲು “ಸಂಘಟಿತ ಅಪರಾಧ ಅಂಶಗಳನ್ನು” ಬಳಸುತ್ತಿದ್ದು, ಇದಕ್ಕೆ “ಬಿಷ್ಣೋಯ್ ಗ್ಯಾಂಗ್” ಉದಾಹರಣೆ ಎಂದು ಆರೋಪಿಸಿದೆ. ಈ ಗುಂಪು ಭಾರತ ಸರ್ಕಾರದ ಏಜೆಂಟರೊಂದಿಗೆ ಸಂಪರ್ಕ ಹೊಂದಿದೆ ಎಂದು ನಾವು ನಂಬುತ್ತೇವೆ ಎಂದು ಆರ್‌ಸಿಎಂಪಿ ಸಹಾಯಕ ಆಯುಕ್ತ ಬ್ರಿಗಿಟ್ಟೆ ಗೌವಿನ್ ಸುದ್ದಿಗಾರರಿಗೆ ತಿಳಿಸಿದರು.








