ನವದೆಹಲಿ:
ಕೋವಿಡ್ ತಡೆಯ ‘ಕೋವೊವ್ಯಾಕ್ಸ್’ ಮತ್ತು ‘ಕಾರ್ಬಿವ್ಯಾಕ್ಸ್’ ಲಸಿಕೆಗಳ ತುರ್ತು ಬಳಕೆಗೆ ಭಾರತೀಯ ಔಷಧ ನಿಯಂತ್ರಕರು ಮಂಗಳವಾರ ಅನುಮೋದನೆ ನೀಡಿದ್ದಾರೆ. ಜೊತೆಗೆ ‘ಮೊಲ್ನುಪಿರವಿರ್’ ಔಷಧದ ತುರ್ತು ಬಳಕೆಗೂ ಅನುಮತಿ ನೀಡಲಾಗಿದ್ದು, 13 ಕಂಪನಿಗಳು ಇದನ್ನು ಸ್ಥಳೀಯವಾಗಿ ತಯಾರಿಸಲಿವೆ.
ಎರಡೂ ಲಸಿಕೆ ಹಾಗೂ ಔಷಧವನ್ನು ಅಮೆರಿಕದಲ್ಲಿ ಅಭಿವೃದ್ಧಿಪಡಿಸಲಾಗಿದೆ. ಆದರೆ ಭಾರತದ ಕಂಪನಿಗಳ ಸಹಯೋಗದಲ್ಲಿ ದೇಶೀಯವಾಗಿಯೇ ತಯಾರಾಗಲಿವೆ.
ಈ ಎರಡು ಲಸಿಕೆಗಳ ಮೂಲಕ ದೇಶದಲ್ಲಿ ಒಟ್ಟು ಎಂಟು ಲಸಿಕೆಗಳಿಗೆ ಅನುಮೋದನೆ ಸಿಕ್ಕಂತಾಗಿದೆ. ಕೋವಿಶೀಲ್ಡ್, ಕೋವ್ಯಾಕ್ಸಿನ್, ಝೈಕೋವ್-ಡಿ, ಸ್ಪುಟ್ನಿಕ್ ವಿ, ಮೊಡೆರ್ನಾ, ಜಾನ್ಸನ್ ಅಂಡ್ ಜಾನ್ಸನ್ ಲಸಿಕೆಗಳ ತುರ್ತು ಬಳಕೆಗೆ ಈಗಾಗಲೇ ಅನುಮತಿ ಸಿಕ್ಕಿದೆ.
ಪ್ರೊಟೀನ್ ಆಧಾರಿತ ಕೋವೊವ್ಯಾಕ್ಸ್ ಲಸಿಕೆಯನ್ನು ಅಮೆರಿಕದ ನೋವೊವ್ಯಾಕ್ಸ್ ಪಾಲುದಾರಿಕೆಯಲ್ಲಿ ಪುಣೆಯ ಸೀರಂ ಇನ್‌ಸ್ಟಿಟ್ಯೂಟ್ ತಯಾರಿಸಲಿದೆ. ಹ್ಯೂಸ್ಟನ್‌ನ ಬಾಯ್ಲರ್ ಕಾಲೇಜ್ ಆಫ್ ಮೆಡಿಸಿನ್ ಮತ್ತು ಡೈನಾವ್ಯಾಕ್ಸ್ ಟೆಕ್ನಾಲಜಿ ಸಹಯೋಗದಲ್ಲಿ ಹೈದರಾಬಾದ್‌ನ ಬಯೊಲಾಜಿಕಲ್-ಇ ಸಂಸ್ಥೆಯು ಕಾರ್ಬಿವ್ಯಾಕ್ಸ್ ಲಸಿಕೆ ತಯಾರಿಸಲಿದೆ.
ಈ ಎರಡೂ ಲಸಿಕೆಗಳನ್ನು ಎರಡು ಡೋಸ್‌ಗಳಲ್ಲಿ ನೀಡಲಾಗುತ್ತದೆ. 2ರಿಂದ 8 ಡಿಗ್ರಿ ಸೆಲ್ಸಿಯಸ್ ತಾಪಮಾನದಲ್ಲಿ ಇವನ್ನು ಇರಿಸಬೇಕು. ಕಾರ್ಬಿವ್ಯಾಕ್ಸ್ ಲಸಿಕೆಯು ವುಹಾನ್ ತಳಿಯ ವಿರುದ್ಧ ಶೇ 90ರಷ್ಟು,
ಡೆಲ್ಟಾ ತಳಿ ವಿರುದ್ಧ ಶೇ 80ರಷ್ಟು ಪರಿಣಾಮಕಾರಿ ಎನಿಸಿದ್ದು, ಮೊದಲ ಡೋಸ್ ನೀಡಿದ 28ನೇ ದಿನದ ಬಳಿಕ ಎರಡನೇ ಡೋಸ್ ನೀಡ ಬೇಕು. ಕೋವೊವ್ಯಾಕ್ಸ್ ಶೇ 90ರಷ್ಟು ಪರಿ ಣಾಮಕಾರಿ ಎನಿಸಿದ್ದು, 2ನೇ ಡೋಸ್ ನೀಡಲು 21 ದಿನದ ಅಂತರ ಸಾಕು.
ಬಯೊಲಾಜಿಕಲ್-ಇ ಸಂಸ್ಥೆ ಜೊತೆಗೆ ಜೂನ್‌ನಲ್ಲಿ ಒಪ್ಪಂದ ಮಾಡಿಕೊಂಡಿದ್ದ ಕೇಂದ್ರ ಸರ್ಕಾರವು, ₹1,500 ಕೋಟಿ ವೆಚ್ಚದಲ್ಲಿ 30 ಕೋಟಿ ಡೋಸ್ ಪೂರೈಸಲು ಬೇಡಿಕೆ ಸಲ್ಲಿಸಿತ್ತು. ತಿಂಗಳಿಗೆ 7.5 ಕೋಟಿ ಡೋಸ್ ತಯಾರಿಸಲು ಸಂಸ್ಥೆ ಉದ್ದೇಶಿಸಿದೆ.
2022ರ ಫೆಬ್ರುವರಿಯಿಂದ ಈ ಪ್ರಮಾಣವನ್ನು 10 ಕೋಟಿಗೆ ಹೆಚ್ಚಿಸುವ ಗುರಿ ಇಟ್ಟುಕೊಂಡಿದೆ. ಕೋವೊವ್ಯಾಕ್ಸ್ ಲಸಿಕೆ ತಯಾರಿಯ ಪ್ರಮಾಣದ ಬಗ್ಗೆ ಸೀರಂ ಸಂಸ್ಥೆ ಇನ್ನೂ ಮಾಹಿತಿ ನೀಡಿಲ್ಲ.
ಆಯಂಟಿ ವೈರಲ್ ಔಷಧವಾದ ‘ಮೊಲ್ನುಪಿರವಿರ್’ ದೇಹದೊಳಗೆ ಕೊರೊನಾ ವೈರಸ್ ದುಪ್ಪಟ್ಟಾಗುವುದನ್ನು ತಡೆಯುತ್ತದೆ ಮತ್ತು ಇದನ್ನು ಕೋವಿಡ್‌ನ ಆರಂಭಿಕ ಚಿಕಿತ್ಸೆ ಎಂದು ಪರಿಗಣಿಸಲಾಗಿದೆ.
ಡಾ. ರೆಡ್ಡೀಸ್ ಲ್ಯಾಬ್, ನಾಟ್ಕೊ ಫಾರ್ಮಾ, ಮೈಲಾನ್, ಸ್ಟ್ರೈಡ್ಸ್, ಸಿಪ್ಲಾ, ಸನ್ ಫಾರ್ಮಾ ಸೇರಿದಂತೆ 13 ಕಂಪನಿಗಳು ಈ ಔಷಧ ತಯಾರಿಸಲಿವೆ. ಸೌಮ್ಯ ಮತ್ತು ಮಧ್ಯಮ ಕೋವಿಡ್ ಲಕ್ಷಣಗಳಿರುವ ಜನರಿಗೆ ಈ ಔಷಧವನ್ನು ನೀಡಲು ಅಮೆರಿಕ ಹಾಗೂ ಬ್ರಿಟನ್ ಸರ್ಕಾರಗಳು ಇತ್ತೀಚೆಗೆ ಅನುಮತಿ ನೀಡಿದ್ದವು.
ಈ ಔಷಧವನ್ನು ವೈದ್ಯರ ಸಲಹೆ ಮೇರೆಗೆ ನೀಡಲಾಗುತ್ತದೆ. ರೋಗಿಯ ರಕ್ತದಲ್ಲಿ ಆಮ್ಲಜನಕದ ಪ್ರಮಾಣವು ಶೇ 93ಕ್ಕಿಂತ ಹೆಚ್ಚಿದ್ದು, ಆಸ್ಪತ್ರೆ ಸೇರಬೇಕಾದ ತುರ್ತು ಉಂಟಾದ ವ್ಯಕ್ತಿಗೆ ನೀಡಲಾಗುತ್ತದೆ. 800 ಎಂಜಿ ಪ್ರಮಾಣದಲ್ಲಿ ದಿನಕ್ಕೆ ಎರಡು ಬಾರಿ, ಐದು ದಿನ ಔಷಧ ನೀಡಬೇಕು ಎಂದು ಉಲ್ಲೇಖಿಸಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ