ಶ್ರಾವಣ ಮಾಸ ಆರಂಭ : ಗಗನ ಮುಖಿಯಾದ ತರಕಾರಿ ಬೆಲೆ

ಬೆಂಗಳೂರು, ಆಗಸ್ಟ್ 6: ದಿನದಿಂದ ದಿನಕ್ಕೆ ಆಗತ್ಯ ವಸ್ತುಗಳ ಬೆಲೆ ಏರಿಕೆಯಾಗುತ್ತಲೇ ಇದೆ.‌ ತರಕಾರಿ ಬೆಲೆಗೆಂತೂ ಮೂಗುದಾರವೇ ಇಲ್ಲದಂತಾಗಿದೆ.‌ ಇಷ್ಟು‌ ದಿನ ಮಳೆ ಕಾರಣದಿಂದ ಬೆಲೆ‌ ಏರಿಕೆ ಮಾಡಿದ್ದ ವ್ಯಾಪಾರಸ್ಥರು, ಇದೀಗ ಶ್ರಾವಣ ಮಾಸ ಆರಂಭವಾಗಿದೆ ಎನ್ನುವ ಕಾರಣಕ್ಕೆ ಹೂ, ಹಣ್ಣು, ತರಕಾರಿಗಳ ಬೆಲೆ ಏರಿಕೆ ಮಾಡಿದ್ದಾರೆ.‌ ಹೀಗಾಗಿ ಕಳೆದ ವಾರಕ್ಕೆ ಹೋಲಿಕೆ ಮಾಡಿದರೆ ತರಕಾರಿಗಳ ಬೆಲೆ‌ 10 ರಿಂದ 20 ರೂಪಾಯಿ ಏರಿಕೆಯಾಗಿದ್ದು, ಹೂವಿನ ಬೆಲೆ 200 ರೂಪಾಯಿಯಷ್ಟು ಏರಿಕೆಯಾಗಿದೆ.

ಶ್ರಾವಣ‌ಮಾಸ ಆಭವಾಗುತ್ತಿದ್ದಂತೆಯೇ ನಾಗಾರ ಪಂಚಮಿ, ವರಮಹಲಕ್ಷ್ಮಿ, ಶ್ರಾವಣ ಶನಿವಾರ, ಗೌರಿ – ಗಣೇಶ ಚತುರ್ಥಿಗಳು ಒಂದರ ಮೇಲೊಂದು ಬರುತ್ತಲೇ ಇರುತ್ತವೆ.‌ ಈ ಅವಧಿಯಲ್ಲಿ ತರಕಾರಿ, ಹೂ, ಹಣ್ಣುಗಳಿಗೆ ಬೇಡಿಕೆ ಹೆಚ್ಚು.‌ ಹೀಗಾಗಿ ತರಕಾರಿಗಳ ಬೆಲೆ ದುಪ್ಪಟ್ಟಾಗಿ ಹೋಗಿವೆ.‌ ಟೊಮೆಟೊ, ಈರುಳ್ಳಿ, ಬೆಳ್ಳಳ್ಳಿ, ಆಲೂಗಡ್ಡೆ, ಕ್ಯಾರೆಟ್ ಬಿಟ್ರೂಟ್ ಬೆಲೆ ವಿಪರೀತ ಜಾಸ್ತಿಯಾಗಿದೆ.