ಬೆಂಗಳೂರು:
2023ಕ್ಕೆ ವಿದಾಯ ಹೇಳಿ 2024ನ್ನು ಸ್ವಾಗತಿಸಲು ಬಹಳಷ್ಟು ಜನರು ಕಾತುರರಾಗಿದ್ದು, ಪ್ರತೀ ವರ್ಷದಂತೆಯೇ ಈ ವರ್ಷವೂ ಎಂ.ಜಿ ರಸ್ತೆ, ಬ್ರಿಗೇಡ್ ರಸ್ತೆ ಹಾಗೂ ಕಮರ್ಷಿಯರ್ ಸ್ಟ್ರೀಟ್ ಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಸೇರುವ ನಿರೀಕ್ಷೆಗಳಿವೆ. ಈ ಹಿನ್ನೆಲೆಯಲ್ಲಿ ಈ ಹಿಂದೆ ಚರ್ಚ್ ಸ್ಟ್ರೀಟ್ ನಲ್ಲಿ ಸಂಭವಿಸಿದ ಸ್ಫೋಟ, ದೌರ್ಜನ್ಯದಂತಹ ಅಹಿತಕರ ಘಟನೆಗಳು ಸಂಭವಿಸದಂತೆ ಮಾಡಲು ಕ್ಯಾಮೆರಾ, ವೀಕ್ಷಣಾ ಗೋಪುರ (ವಾಚ್ ಟವರ್)ಗಳನ್ನು ಸ್ಥಾಪಿಸಿ ಭದ್ರತೆಗಳ ಹೆಚ್ಚಿರುವಂತೆ ವ್ಯಾಪಾರಿಗಳು ಹಾಗೂ ಅಂಗಡಿ ಸಂಘಗಳು ಅಧಿಕಾರಿಗಳಿಗೆ ಮನವಿ ಮಾಡಿಕೊಂಡಿದ್ದಾರೆ.
ಬ್ರಿಗೇಡ್ ಶಾಪ್ಸ್ ಆ್ಯಂಡ್ ಎಸ್ಟಾಬ್ಲಿಷ್ ಮೆಂಟ್ ಅಸೋಸಿಯೇಷನ್ ಕಾರ್ಯದರ್ಶಿ ಸುಹೇಲ್ ಯೂಸುಫ್ ಮಾತನಾಡಿ, ಬಿಗಿ ಪೊಲೀಸ್ ನಿಯೋಜನೆಗಾಗಿ ಕೇಂದ್ರ ಡಿಸಿಪಿಗೆ ಪತ್ರದ ಮೂಲಕ ಮನವಿ ಮಾಡಿಕೊಳ್ಳಲಾಗಿದೆ. ನಮ್ಮ ಸಂಘದಿಂದ ಕ್ಯಾಮೆರಾ, ವಾಟ್ ಟವರ್ ಗಳನ್ನು ಅಳವಡಿಸಲಾಗುತ್ತಿದೆ ಎಂದು ಹೇಳಿದ್ದಾರೆ.
ಡಿಸೆಂಬರ್ 31 ರಂದು ಬ್ರಿಗೇಡ್ ರಸ್ತೆಯಲ್ಲಿ ಬೀದಿ ಬದಿ ವ್ಯಾಪಾರಗಳು ಮಾಡದಂತೆ ಪೊಲೀಸರು ವ್ಯಾಪಾರಿಗಳಿಗೆ ಮನವಿ ಮಾಡಿಕೊಂಡಿದ್ದು, ಅಂದು ಸಂಜೆ 6 ಗಂಟೆಯಿಂದ ಸಂಚಾರ ನಿರ್ಬಂಧಗಳು ಜಾರಿಯಲ್ಲಿರಲಿವೆ. ಎಂಜಿ ರಸ್ತೆ ಜಂಕ್ಷನ್ ನಲ್ಲಿ ಪಾದಚಾರಿಗಳಿಗೆ ಮಾತ್ರ ಅವಕಾಶ ನೀಡಲಾಗುತ್ತಿದೆ. ಪಾದಚಾರಿಗಳನ್ನು ರೆಸ್ಟ್ ಹೌಸ್ ರಸ್ತೆ ಅಥವಾ ಚರ್ಚ್ ಸ್ಟ್ರೀಟ್‌ನಿಂದ ಬ್ರಿಗೇಡ್ ರಸ್ತೆಗೆ ಹೋಗದಂತೆ ನೋಡಿಕೊಳ್ಳುವಂತ ಪೊಲೀಸರಿಗೆ ವಿನಂತಿಸಲಾಗಿದೆ. ಕಾನೂನುಬಾಹಿರ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವ ಕಿಡಿಗೇಡಿಗಳು ನಂದರ ಜನನಿಬಿಡ ಪ್ರದೇಶಗಳಲ್ಲಿ ತಲೆ ಮರೆಸಿಕೊಳ್ಳುವ ಸಾಧ್ಯತೆಗಳಿವೆ. ಹೀಗಾಗಿ ಯಾವುದೇ ಅಂಗಡಿಗಳ ಮೆಟ್ಟಿಲುಗಳ ಮೇಲೆ, ಶಾಪಿಂಗ್ ಕಾಂಪ್ಲೆಕ್ಸ್ ಗಳ ನೆಲಮಾಳಿಗೆ ಪ್ರವೇಶಿಸುವುದರ ಮೇಲೆ ಸಂಘ ನಿರ್ಬಂಧ ಹೇರಿದೆ ಎಂದು ತಿಳಿಸಿದ್ದಾರೆ.
ಏತನ್ಮಧ್ಯೆ, ಕಮರ್ಷಿಯಲ್ ಸ್ಟ್ರೀಟ್ ಅಸೋಸಿಯೇಷನ್ ರಾತ್ರಿ 10 ಗಂಟೆಯ ನಂತರ ತನ್ನ ಕಾರ್ಯಾಚರಣೆಯನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲು ನಿರ್ಧರಿಸಿದೆ.
ಕಮರ್ಷಿಯಲ್ ಸ್ಟ್ರೀಟ್ ಅಸೋಸಿಯೇಷನ್‌ನ ಕಾರ್ಯದರ್ಶಿ ಮಯಾಂಕ್ ರೋಹಟಗಿ ಮಾತನಾಡಿ, ಈ ಹಿಂದೆ ಬ್ರಿಗೇಡ್ ರಸ್ತೆ ಹೊಸ ವರ್ಷದ ಮುನ್ನಾದಿನದ ಸಂದರ್ಭದಲ್ಲಿ ಕೆಲವು ಘಟನೆಗಳಿಗೆ ಸಾಕ್ಷಿಯಾಗಿತ್ತು. ಇಂತಹ ಘಟನೆಗಳು ಮರುಕಳುಹಿಸದಂತೆ ಮಾಡಲು ಸಂಘವು ಈ ನಿರ್ಧಾರ ಕೈಗೊಂಡಿದೆ ಎಂದು ಹೇಳಿದ್ದಾರೆ.
ಭದ್ರತೆಯ ಸಮಸ್ಯೆಯ ಜೊತೆಗೆ ಹೆಚ್ಚುತ್ತಿರುವ ಕೋವಿಡ್ -19 ಸೋಂಕುಗಳ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವುದನ್ನು ಸಂಘ ಬಯಸುತ್ತಿದೆ. ಕಮರ್ಷಿಯಲ್ ಸ್ಟ್ರೀಟ್‌ನಲ್ಲಿರುವ ಎಲ್ಲಾ 70 ಅಂಗಡಿಗಳು ರಾತ್ರಿ 10 ಗಂಟೆಗೆ ಮುಚ್ಚಲ್ಪಡುತ್ತವೆ ಎಂದು ತಿಳಿಸಿದ್ದಾರೆ.
ಏತನ್ಮಧ್ಯೆ, ಹೊಸ ವರ್ಷಾಚರಣೆಯ ಅಂಗವಾಗಿ, ಸಂಘದ ವ್ಯಾಪ್ತಿಯ ಅಂಗಡಿಗಳು 10 ಐಪ್ಯಾಡ್ ಮತ್ತು 10 ಸ್ಮಾರ್ಟ್ ಟಿವಿಗಳನ್ನು ಲಕ್ಕಿ ಡ್ರಾ ಮೂಲಕ ನೀಡಲು ನಿರ್ಧರಿಸಿದ್ದು, ವಿಜೇತರಿಗೆ ಜನವರಿ 1 ರಂದು ಪ್ರಶಸ್ತಿ ನೀಡಲಾಗುವುದು ಎಂದು ಮಾಹಿತಿ ನೀಡಿದ್ದಾರೆ.
ಎಲ್ಲಾ ಅಂಗಡಿಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಇದಲ್ಲದೆ, ಕಾಮರಾಜ್ ರಸ್ತೆ ಮತ್ತು ಕಮರ್ಷಿಯಲ್ ಸ್ಟ್ರೀಟ್ ಪ್ರವೇಶದ್ವಾರದಲ್ಲಿ ಭದ್ರತೆಗೆ ಸಿಬ್ಬಂದಿಗಳ ನಿಯೋಜಿಸಲು ಪೊಲೀಸರಿಗೆ ಮನವಿ ಮಾಡಲಾಗಿದೆ ಎಂದ ಹೇಳಿದ್ದಾರೆ.