ಗ್ರಾ.ಪಂ.ಉಪಚುನಾವಣೆ ಪಟ್ಟು ಸಡಿಲಿಸಿದ ಗ್ರಾಮಸ್ಥರು

ತುಮಕೂರು:

ಹೊನ್ನವಳ್ಳಿಯಲ್ಲಿ ಮತದಾನ ಬಹಿಷ್ಕಾರಕ್ಕೆ ತೆರೆ- ಪಂಚಾಯ್ತಿ ಚುನಾವಣೆಗೆ ಒಲವು 

      ವಿವಿಧ ಕಾರಣಗಳಿಂದ ಖಾಲಿ ಇರುವ 28 ಗ್ರಾಮ ಪಂಚಾಯತಿ ಸದಸ್ಯ ಸ್ಥಾನಗಳಿಗೆ ಡಿ.27 ರಂದು ಮತದಾನ ನಡೆಯಲಿದೆ. ಇದಕ್ಕಾಗಿ ಈಗಾಗಲೇ ಅಧಿಸೂಚನೆ ಹೊರಡಿಸಲಾಗಿದ್ದು, ನಾಮಪತ್ರ ಸಲ್ಲಿಕೆಯ ಪ್ರಕ್ರಿಯೆಯೂ ಆರಂಭವಾಗಿದೆ. ಕಡಿಮೆ ಸ್ಥಾನಗಳಿಗೆ ನಡೆಯುತ್ತಿರುವ ಉಪ ಚುನಾವಣೆ ಇದಾದರೂ ಸದ್ಯದ ಪರಿಸ್ಥಿತಿಯಲ್ಲಿ ಹೆಚ್ಚು ಮಹತ್ವ ಪಡೆದುಕೊಳ್ಳುತ್ತಿದೆ. ಈಗತಾನೆ ಮುಗಿದಿರುವ ವಿಧಾನ ಪರಿಷತ್ ಚುನಾವಣೆ, 2023ಕ್ಕೆ ಎದುರಾಗಲಿರುವ ಸಾರ್ವತ್ರಿಕ ಚುನಾವಣೆ ಹಿನ್ನೆಲೆಯಲ್ಲಿ ಈಗ ನಡೆಯುತ್ತಿರುವ ಪ್ರತಿ ಚುನಾವಣೆಯೂ ಹೆಚ್ಚು ಮಹತ್ವ ಪಡೆದುಕೊಳ್ಳುತ್ತಿದೆ.

ಕಳೆದ ಕೆಲವು ವರ್ಷಗಳಿಂದ ಜಿಲ್ಲೆಯಲ್ಲಿÀ ಗಮನ ಸೆಳೆದಿರುವ ಪಂಚಾಯತಿಯೆಂದರೆ ತಿಪಟೂರು ತಾಲ್ಲೂಕು ಹೊನ್ನವಳಿ ಗ್ರಾಮ. ಗ್ರಾಮದ ಕೆರೆಗೆ ನೀರು ಹರಿಸಿಲ್ಲ ಎಂಬ ಕಾರಣಕ್ಕೆ ಅಲ್ಲಿನ ಗ್ರಾಮಸ್ಥರು ಗ್ರಾಮ ಪಂಚಾಯತಿ ಚುನಾವಣೆಯನ್ನು ಕೆಲವು ವರ್ಷಗಳಿಂದ ಬಹಿಷ್ಕರಿಸುತ್ತಲೇ ಬಂದಿದ್ದಾರೆ. ಹೊನ್ನವಳ್ಳಿ ಕೆರೆಗೆ ನೀರು ತುಂಬಿಸುವವರೆಗೂ ಚುನಾವಣೆ ನಡೆಸಲು ಬಿಡುವುದಿಲ್ಲ ಎಂಬ ಪಟ್ಟು ಅಲ್ಲಿನ ಜನರದ್ದು. ಜಿಲ್ಲಾಧಿಕಾರಿ ಸೇರಿದಂತೆ ವಿವಿಧ ಅಧಿಕಾರಿಗಳು ಭೇಟಿ ನೀಡಿ ಎಷ್ಟೇ ಪ್ರಯತ್ನ ಹಾಕಿದರೂ ಗ್ರಾಮಸ್ಥರು ಜಗ್ಗಲೇ ಇಲ್ಲ.

ಸತತ ಬರಗಾಲದಿಂದ ಬಸವಳಿದಿದ್ದ ಆ ಭಾಗದಲ್ಲಿ ನೀರು ಇಲ್ಲದೆ ಅಂತರ್ಜಲ ಕ್ಷೀಣಿಸಿತ್ತಲೇ ಇದೆ. ಈ ಹಿನ್ನೆಲೆಯಲ್ಲಿ ಹೇಮಾವತಿ ನೀರು ಹರಿಸಬೇಕೆಂದು ಪ್ರತಿಭಟನೆಗಳು ನಡೆದವು. ಸಮೀಪದ ಗಂಗನಘಟ್ಟ ಅಥವಾ ನೊಣವಿನಕೆರೆಯಿಂದ ನೇರವಾಗಿ ನೀರು ಹರಿಸಬಹುದು ಎಂಬುದು ಹೋರಾಟಗಾರರ ಒತ್ತಾಯ. ಆದರೆ ಗ್ರಾಮಸ್ಥರ ಬೇಡಿಕೆ ಈಡೇರಿರಲಿಲ್ಲ. ಇದನ್ನೇ ಮುಂದಿಟ್ಟುಕೊಂಡು ಚುನಾವಣೆಯನ್ನೇ ಬಹಿಷ್ಕರಿಸುತ್ತಾ ಬಂದಿದ್ದರು.

ಕಳೆದ ಲೋಕಸಭಾ ಚುನಾವಣೆ ಸಂದರ್ಭದಲ್ಲಿಯೂ ಚುನಾವಣೆ ಬಹಿಷ್ಕರಿಸಿದಾಗ ಚನ್ನರಾಯಪಟ್ಟಣ ಕ್ಷೇತ್ರದ ಶಾಸಕರು ಸಂಧಾನ ಸಭೆ ನಡೆಸಿದರು. ಆನಂತರ ಹೆಚ್.ಡಿ.ರೇವಣ್ಣ ಆಗಮಿಸಿದ್ದರು. ಸ್ವತಃ ಅಭ್ಯರ್ಥಿ ದೇವೇಗೌಡರೇ ಗ್ರಾಮಕ್ಕೆ ಆಗಮಿಸಿ ಮುಂದಿನ ದಿನಗಳಲ್ಲಿ ಇಲ್ಲಿಗೆ ನೀರು ಹರಿಯುವ ಸಾಧ್ಯತೆಗಳಿವೆ. ಚುನಾವಣೆ ಬಹಿಷ್ಕಾರ ವಾಪಸ್ ಪಡೆಯಿರಿ ಎಂದು ಮನವಿ ಮಾಡಿದ್ದರು. ಇದಾದÀ ನಂತರ ಮತ್ತೆ ಎರಡು ಬಾರಿ ಗ್ರಾ.ಪಂ. ಉಪ ಚುನಾವಣೆಗಳು ಎದುರಾದರೂ ಗ್ರಾಮಸ್ಥರು ತಮ್ಮ ಪಟ್ಟು ಸಡಿಲಿಸಿರಲಿಲ್ಲ. ಅಲ್ಲಿನ ನೀರಾವರಿ ತಂಡದ ತೀರ್ಮಾನದ ಪ್ರಕಾರವೆ ಜನತೆ ತಲೆಬಾಗುತ್ತಾ ಬಂದಿದ್ದಾರೆ.

ಈ ಬಾರಿ ಎಲ್ಲ ಕಡೆ ಉತ್ತಮ ಮಳೆಯಾಗಿದೆ. ವರುಣ ಕೃಪೆ ತೋರಿರುವುದರಿಂದ ಕೆರೆಕಟ್ಟೆಗಳಿಗೆ ನೀರು ಬಂದಿದೆ. ಅಂತರ್ಜಲವೂ ವೃದ್ಧಿಯಾಗಿದೆ. ಹೊನ್ನವಳ್ಳಿ ಭಾಗದಲ್ಲಿ ಮಳೆಯಾದರೂ ಕೆರೆಕಟ್ಟೆಗಳಿಗೆ ನೀರು ತುಂಬಿಲ್ಲ. ಹೊನ್ನವಳ್ಳಿ ಕೆರೆಗೂ ನೀರು ಸಂಗ್ರಹಣೆಯಾಗಿಲ್ಲ. ಆದರೆ ನೀರು ಬಿಡಲಿಲ್ಲ ಎಂಬ ಕಾರಣಕ್ಕೆ ಚುನಾವಣೆ ಬಹಿಷ್ಕಾರ ಬೇಡ ಗ್ರಾಮದ ಅಭಿವೃದ್ಧಿಗೆ ಚುನಾವಣೆಗೆ ಮುಂದಾಗೋಣ ಎಂಬ ಅಭಿಪ್ರಾಯ ಅಲ್ಲಿನ ಕೆಲವು ಮುಖಂಡರಲ್ಲಿ ಮೂಡಿದೆ. ಅಲ್ಲಿನ ನೀರಾವರಿ ಹೋರಾಟ ತಂಡವು ಚುನಾವಣೆಗೆ ಅಣಿಯಾಗುವಂತೆ ಸೂಚನೆ ಇತ್ತಿದೆ.

ಈ ಗ್ರಾಮದಲ್ಲಿ ಎಲ್ಲ ಪಕ್ಷಕ್ಕೆ ಸೇರಿದವರೂ ಇದ್ದಾರೆ. ಆದರೆ ಊರಿನ ಹಿತದ ವಿಷಯ ಬಂದಾಗ ಪಕ್ಷ, ಜಾತಿ ಎಲ್ಲವನ್ನೂ ಬದಿಗಿಟ್ಟು ಒಗ್ಗಟ್ಟು ಪ್ರದರ್ಶಿಸುತ್ತಾ ಬಂದಿರುವುದರಿಂದ ಈವರೆಗೆ ಅಲ್ಲಿನ ಮುಖಂಡರ ನಿರ್ಧಾರಕ್ಕೆ ಅಪಸ್ವರಗಳು ಎದುರಾಗಿಲ್ಲ. ಈ ಬಾರಿಯೂ ಅಪಸ್ವರಗಳು ಬಾರದಂತೆ ನಿರ್ಣಯ ಕೈಗೊಂಡಿದ್ದಾರೆ. ಅದಕ್ಕೆ ಮುಖ್ಯ ಕಾರಣ ಪಂಚಾಯತಿ ಪ್ರತಿನಿಧಿಗಳು ಇಲ್ಲದೆ ಗ್ರಾಮದ ಸೌಕರ್ಯಗಳು ಸಿಗಲು ವಿಳಂಬವಾಗುತ್ತಿರುವುದು.

ಗ್ರಾಮದ ಸಮಸ್ಯೆಗಳನ್ನು ಪರಿಹರಿಸಲು ಚುನಾವಣಾ ಬಹಿಷ್ಕಾರವೊಂದೇ ಮುಖ್ಯವಾಗಬಾರದು. ಜನಪ್ರತಿನಿಧಿಗಳನ್ನು ಸೆಳೆಯಲು, ಅಧಿಕಾರಿಗಳ ಗಮನಕ್ಕೆ ತರಲು ಪ್ರತಿಭಟನೆ ಒಂದು ಅಸ್ತ್ರವಾಗಬೇಕೇ ಹೊರತು ಚುನಾವಣೆಯನ್ನೇ ಬಹಿಷ್ಕರಿಸಿದರೆ ಪ್ರಜಾಪ್ರಭುತ್ವದ ಪ್ರಾತಿನಿಧಿಕ ಅವಕಾಶದಿಂದಲೇ ವಂಚಿತರಾಗಬೇಕಾಗುತ್ತದೆ. ಗ್ರಾಮ ಪಂಚಾಯತಿಗಳಿಗೆ ಪಂಚಾಯತ್ ರಾಜ್ ವ್ಯವಸ್ಥೆಯಲ್ಲಿ ವಿಶೇಷ ಸ್ಥಾನಮಾನಗಳಿದ್ದು, ಅವುಗಳನ್ನು ಚಲಾಯಿಸಿ ಗ್ರಾಮದ ಅಭಿವೃದ್ಧಿ ಮಾಡಬೇಕಾದರೆ ಗ್ರಾಮ ಪಂಚಾಯತಿಗಳು ಸಕ್ರಿಯವಾಗಬೇಕು. ಸದಸ್ಯರು ಬದ್ಧತೆಯಿಂದ ಕಾರ್ಯನಿರ್ವಹಿಸಬೇಕು. ಆದರೆ ಆ ವ್ಯವಸ್ಥೆಯ ಒಳಗೆ ಕಾಲಿಡದೆ ದೂರವೇ ನಿಂತರೆ ಸೌಲಭ್ಯಗಳು ದೊರಕುವುದಾದರೂ ಹೇಗೆ . ಬಹುಶ: ಇವೆಲ್ಲ ಈಗ ಗ್ರಾಮದ ಜನರಿಗೆ ಅರ್ಥವಾಗಿರಬಹುದು.

ಅಧಿಕಾರಿಗಳಿಂದ ಗ್ರಾಮ ನಿರ್ಲಕ್ಷ್ಯ
ಹೊನ್ನವಳ್ಳಿ ಕೆರೆಗೆ ನೀರು ಹರಿಸಲೆಂದು ಹೋರಾಟ ಮಾಡುತ್ತಾ ಊರ ಜನರು ಒಗ್ಗಟ್ಟು ಪ್ರದರ್ಶಿಸಿದ್ದರು. ಹೀಗಾಗಿ ಇಲ್ಲಿ ಚುನಾವಣೆ ನಡೆದಿರಲಿಲ್ಲ. ತಾಲ್ಲೂಕು ಕಾರ್ಯನಿರ್ವಹಣಾಧಿಕಾರಿಗಳು ಗ್ರಾ.ಪಂ.ಗೆ ನೋಡಲ್ ಅಧಿಕಾರಿಯಾಗಿದ್ದರು. ಪಂಚಾಯತಿ ಸದಸ್ಯರು ಅಧಿಕಾರದಲ್ಲಿ ಇಲ್ಲದ ಕಾರಣ ಗ್ರಾಮಕ್ಕೆ ಬೇಕಾದ ಸಣ್ಣಪುಟ್ಟ ಸವಲತುಗಳಿಗೂ ಅಧಿಕಾರಿಗಳ ಬಳಿ ಬೇಡಬೇಕಾಗಿತ್ತು. ಅಧಿಕಾರಿಗಳು ಕೆಲಸ ಮಾಡುತ್ತಿರಲಿಲ್ಲ. ಇದೆಲ್ಲವನ್ನು ಮನಗಂಡು ಗ್ರಾಮದ ಅಭಿವೃದ್ಧಿ ಹಿನ್ನೆಲೆಯಲ್ಲಿ ಚುನಾವಣೆಗೆ ಸ್ಪರ್ಧಿಸಲು ಗ್ರಾಮಸ್ಥರು ನಿರ್ಧರಿಸಿದ್ದಾರೆ ಎನ್ನುತ್ತಾರೆ ಎಸ್.ಡಿ.ಎಂ.ಸಿ.ಮಾಜಿ ಅಧ್ಯಕ್ಷ, ಕರ್ನಾಟಕ ಪಬ್ಲಕ್ ಶಾಲೆ ಸದಸ್ಯ ನಂಜಪ್ಪ.

ಪಂಚಾಯತಿ ಸದಸ್ಯರು ಕ್ರಿಯಾಶೀಲರಾಗಬೇಕು
ನಮ್ಮಲ್ಲಿ ಪಂಚಾಯತ್ ರಾಜ್ ವ್ಯವಸ್ಥೆ ಅತ್ಯುತ್ತಮವಾದದ್ದು. ಗ್ರಾಮ ನೈರ್ಮಲ್ಯ, ರಸ್ತೆ ಅಭಿವೃದ್ಧಿ ಇತ್ಯಾದಿ ಕೆಲಸ ಕಾರ್ಯಗಳು ಸ್ಥಳೀಯ ಗ್ರಾಮ ಪಂಚಾಯತಿ ವತಿಯಿಂದಲೇ ಆಗಬೇಕು. ಸದಸ್ಯರೇ ಇಲ್ಲವೆಂದ ಮೇಲೆ ಅಲ್ಲಿ ಅಭಿವೃದ್ಧಿ ಕಾರ್ಯಗಳನ್ನು ನಿರೀಕ್ಷಿಸುವುದು ಹೇಗೆ? ಗ್ರಾಪಂಗಳು ಹೆಚ್ಚು ಕ್ರಿಯಾಶೀಲವಾಗಬೇಕಾದರೆ ಅಲ್ಲಿನ ಸದಸ್ಯರು ಸಕ್ರಿಯರಾಗಬೇಕು. ಆಗ ಮಾತ್ರ ಗ್ರಾಮಗಳು ನೈರ್ಮಲ್ಯ ಹೊಂದಲು ಸಾಧ್ಯ. ಇತರೆ ಅಭಿವೃದ್ಧಿ ಕೆಲಸಗಳು ಸುಗಮವಾಗುತ್ತವೆ ಎನ್ನತ್ತಾರೆ ಕನಾಟಕ ರಾಜ್ಯ ಗ್ರಾಮಪಂಚಾಯತಿ ಸದಸ್ಯರ ಮಹಾ ಒಕ್ಕೂಟದ ರಾಜ್ಯ ಸಂಚಾಲಕ ಕಾಡಶೆಟ್ಟಿಹಳ್ಳಿ ಸತೀಶ್.

ಸಾ.ಚಿ.ರಾಜಕುಮಾರ

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap