ಲೆಬನಾನ್:
ಇಸ್ರೇಲ್ ಹಾಗೂ ಹೆಜ್ಬುಲ್ಲಾ ನಡುವಿನ ಸಂಘರ್ಷ ಇನ್ನೂ ನಡೆಯುತ್ತಲೇ ಇದೆ. ಸೆಪ್ಟೆಂಬರ್‌ನಲ್ಲಿ ಇಸ್ರೇಲ್ ನಡೆಸಿದ ಕಾರ್ಯಾಚರಣೆಯಲ್ಲಿ ಹಸನ್ ನಸ್ರಾಲ್ಲಾಹನ್ ಮೃತಪಟ್ಟಿದ್ದ. ಇದೀಗ ಹೊಸ ಮುಖ್ಯಸ್ಥನಾಗಿ ನೈಮ್ ಕಾಸ್ಸೆಮ್ ನೇಮಕಗೊಂಡಿದ್ದಾನೆ. ತಮ್ಮ ಉದ್ಘಾಟನಾ ಭಾಷಣದಲ್ಲಿ , ನೈಮ್ ಕಾಸ್ಸೆಮ್ ಮಾತನಾಡಿ ತಮ್ಮ ಮೊದಲ ನಾಯಕ ಹಸನ್ ನಸ್ರಲ್ಲಾ ಸ್ಥಾಪಿಸಿದ ಮಿಲಿಟರಿ ವಿಧಾನವನ್ನು ನಿರ್ವಹಿಸುವುದಾಗಿ ಬುಧವಾರ ಘೋಷಿಸಿದ್ದಾನೆ. ನನ್ನ ಕೆಲಸದ ಕಾರ್ಯಕ್ರಮವು ನಮ್ಮ ನಾಯಕ ಸಯ್ಯದ್ ಹಸನ್ ನಸ್ರಲ್ಲಾ ಅವರ ಕೆಲಸದ ಕಾರ್ಯಕ್ರಮದ ಮುಂದುವರಿಕೆಯಾಗಿದೆ ಎಂದು ಕಾಸ್ಸೆಮ್ ನಾಯಕತ್ವವನ್ನು ವಹಿಸಿಕೊಂಡ ನಂತರ ತಮ್ಮ ಮೊದಲ ಭಾಷಣದಲ್ಲಿ ಹೇಳಿದ್ದಾನೆ.
ನಮ್ಮ ನಾಯಕ ನಮಗಾಗಿ ಪ್ರಾಣ ತ್ಯಾಗ ಮಾಡಿದ್ದಾರೆ. ಅವರ ತ್ಯಾಗ ಅಮರವಾಗಬೇಕು. ಅವರು ನಮಗೆ ಮಾರ್ಗದರ್ಶನ ನೀಡಿದ್ದಾರೆ ಅವರ ಯೋಜನೆಯಂತೆಯೇ ನಾವು ಮುಂದುವರೆಯ ಬೇಕು ಎಂದು ಆತ ಹೇಳಿದ್ದಾನೆ. ಇರಾನ್ ನಮಗೆ ಬೆಂಬಲ ಸೂಚಿಸುತ್ತಿದೆ. ಆದರೆ ನಾವು ಯಾರಿಂದ ಏನನ್ನೂ ಬಯಸುತ್ತಿಲ್ಲ ಎಂದು ಹೇಳಿದ್ದಾರೆ. ಇಸ್ರೇಲ್ ಬಯಸಿದರೆ ನಾವು ಮಾತುಕತೆಗೆ ಸಿದ್ಧರಿದ್ದೇವೆ, ಷರತ್ತುಬದ್ಧ ಕದನ ವಿರಾಮಕ್ಕೆ ನಾವು ಒಪ್ಪಿಕೊಳ್ಳುತ್ತೇವೆ ಎಂದು ಹೇಳಿದ್ದಾರೆ.
ಈ ನಡುವೆ ದಕ್ಷಿಣ ಲೆಬನಾನ್ ನಲ್ಲಿ ಹೆಜ್ಬುಲ್ಲಾ ವಿರುದ್ಧ ಕಾರ್ಯಾಚರಣೆ ಮುಂದುವರಿಸಿರುವ ಇಸ್ರೇಲ್ ಸೇನೆ ಬುಧವಾರ ಮಹತ್ವದ ಮುನ್ನಡೆ ಸಾಧಿಸಿದ್ದು, ಹಿಜ್ಬುಲ್ಲಾ ಕಮಾಂಡರ್ ನನ್ನು ವಶಕ್ಕೆ ಪಡೆದಿದೆ. ಎರಡು ವಾರಗಳ ಹಿಂದೆ ದಕ್ಷಿಣ ಲೆಬನಾನ್‌ನಲ್ಲಿನ ಅಯ್ತಾ ಆಶ್-ಶಾಬ್‌ನಲ್ಲಿ ಸೇನಾ ಕಾರ್ಯಾಚರಣೆ ಆರಂಭಿಸಿದ್ದ ಇಸ್ರೇಲ್ ಸೇನೆ ಇದೀಗ ಹೆಜ್ಬುಲ್ಲಾದ ಕಮಾಂಡರ್ ಹಸನ್ ಅಕಿಲ್ ಜವಾದ್‌ನನ್ನು ವಶಕ್ಕೆ ಪಡೆದಿದೆ. ಅಂತೆಯೇ ಇದೇ ಸುರಂಗದಲ್ಲಿ ಹಸನ್ ಅಕಿಲ್ ಜವಾದ್‌ಗೆ ರಕ್ಷಣೆ ನೀಡುತ್ತಿದ್ದ ಬಂಡುಕೋರರನ್ನೂ ಕೂಡ ಇಸ್ರೇಲ್ ನ ಗೋಲಾನಿ ಬ್ರಿಗೇಡ್ ಪಡೆಗಳು ವಶಪಡಿಸಿಕೊಂಡಿದೆ ಎಂದು ಘೋಷಿಸಿದೆ.
ಕಾರ್ಯಾಚರಣೆ ಯಾವುದೇ ಕಾರಣಕ್ಕೂ ಹಿಂಪಡೆಯುವುದಿಲ್ಲ. ನಮ್ಮ ಗುರಿ ತಲುಪುವವರೆಗೂ ನಮ್ಮ ಹೋರಾಟ ಮುಂದುವರಿಯಲಿದೆ ಎಂದು ಇಸ್ರೇಲ್ ಸರ್ಕಾರ ಹೇಳಿದೆ.