ಕೈವ್:
ಯುಕ್ರೇನ್ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ, ಯುಕ್ರೇನ್ ಅಧ್ಯಕ್ಷರೊಂದಿಗೆ ಕೈವ್ ನಲ್ಲಿರುವ ಮಕ್ಕಳಿಗೆ ಸಂಬಂಧಿಸಿದ ಹುತಾತ್ಮ ಸ್ಮಾರಕಕ್ಕೆ ಭೇಟಿ ನೀಡಿದ್ದರು. ಪ್ರಧಾನಿ ಮೋದಿಗೆ ಯುಕ್ರೇನ್ ಅಧ್ಯಕ್ಶ ವೊಲೊದಿಮಿರ್ ಝೆಲೆನ್ಸ್ಕಿ ಸಾಥ್ ನೀಡಿದ್ದರು.ಈ ವೇಳೆ ಮಾತನಾಡಿರುವ ಪ್ರಧಾನಿ ಮೋದಿ, “ಸಂಘರ್ಷ ಮಕ್ಕಳಿಗೆ ವಿನಾಶಕಾರಿ” ಎಂದು ಹೇಳಿದ್ದಾರೆ.
ಪೊಲ್ಯಾಂಡ್ ಪ್ರವಾಸ ಮುಗಿಸಿದ ಪ್ರಧಾನಿ ಮೋದಿ, ಯುಕ್ರೇನ್ ಗೆ ಭೇಟಿ ನೀಡಿ, ಅಲ್ಲಿನ ಅಧ್ಯಕ್ಷರೊಂದಿಗೆ ಮಾತುಕತೆ ನಡೆಸಿದ್ದಾರೆ. ರಷ್ಯಾ ಹಾಗೂ ಯುಕ್ರೇನ್ 2.5 ವರ್ಷಗಳಿಂದ ಸಂಘರ್ಷದಲ್ಲಿ ತೊಡಗಿವೆ. ಈ ಸಂಘರ್ಷದಲ್ಲಿ ಯುಕ್ರೇನ್ ನ ಹಲವು ಪ್ರದೇಶಗಳಲ್ಲಿ ಪ್ರಾಣ ಕಳೆದುಕೊಂಡ ಮಕ್ಕಳ ನೆನಪಿಗಾಗಿ ಸ್ಮಾರಕ ನಿರ್ಮಾಣ ಮಾಡಲಾಗಿದೆ.
ಯುದ್ಧದಲ್ಲಿ ಪ್ರಾಣ ಕಳೆದುಕೊಂಡ ಮಕ್ಕಳ ಕುಟುಂಬಕ್ಕೆ ನನ್ನ ಹೃದಯ ಮಿಡಿಯುತ್ತದೆ. ಅವರಿಗೆ ನೋವು ಭರಿಸುವ ಶಕ್ತಿ ಸಿಗಲಿ ಎಂದು ಪ್ರಾರ್ಥಿಸುವುದಾಗಿ ಪ್ರಧಾನಿ ಮೋದಿ ಟ್ವಿಟರ್ ನಲ್ಲಿ ಬರೆದಿದ್ದಾರೆ. ಉಭಯ ನಾಯಕರು ರಷ್ಯಾ-ಉಕ್ರೇನ್ ಸಂಘರ್ಷಕ್ಕೆ ಸಂಧಾನದ ಇತ್ಯರ್ಥವನ್ನು ಕಂಡುಕೊಳ್ಳುವ ಮಾರ್ಗಗಳ ಮೇಲೆ ಕೇಂದ್ರೀಕರಿಸಿ ಪರಸ್ಪರ ಮತ್ತು ನಿಯೋಗ ಮಟ್ಟದ ಮಾತುಕತೆಗಳನ್ನು ನಡೆಸಲು ಉಭಯ ರಾಷ್ಟ್ರಗಳ ನಾಯಕರು ನಿರ್ಧರಿಸಿದ್ದಾರೆ.
ಸ್ಮಾರಕಕ್ಕೆ ಭೇಟಿ ನೀಡಿದ ಪ್ರಧಾನಿ ಮತ್ತು ಯುಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ, ಗೊಂಬೆಗಳನ್ನಿಟ್ಟು ಯುದ್ಧದಲ್ಲಿ ಮಡಿದ ಮಕ್ಕಳಿಗೆ ಶ್ರದ್ಧಾಂಜಲಿ ಸಲ್ಲಿಸಿದರು. ಪ್ರಧಾನಿ ಮೋದಿ ಅವರೊಂದಿಗೆ ಸ್ಮಾರಕಕ್ಕೆ ಭೇಟಿ ನೀಡಿದ ಯುಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ, ಟ್ವೀಟ್ ಮಾಡಿದ್ದು, ಪ್ರತಿಯೊಂದು ದೇಶದ ಮಕ್ಕಳು ಸುರಕ್ಷಿತವಾಗಿ ಬದುಕಲು ಅರ್ಹರು. ನಾವು ಇದನ್ನು ಸಾಧ್ಯವಾಗಿಸಬೇಕು ಎಂದು ಹೇಳಿದ್ದಾರೆ.
ಫೆಬ್ರವರಿ 24, 2022 ರಂದು ಪ್ರಾರಂಭವಾದ ಸಂಘರ್ಷದ ಆರಂಭದಿಂದಲೂ ಭಾರತ ಸಂವಾದ ಮತ್ತು ರಾಜತಾಂತ್ರಿಕತೆಯ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳುವುದನ್ನು ಪ್ರತಿಪಾದಿಸಿದೆ.