ದಕ್ಷಿಣ ಕನ್ನಡ:
ರಾಜ್ಯದಲ್ಲಿ ಬರ ಪರಿಸ್ಥಿತಿ ತೀವ್ರವಾಗಿದೆ. ಇತ್ತ ಪಶ್ಚಿಮ ಘಟ್ಟ ಪ್ರದೇಶದಲ್ಲಿ ಡಿಸೆಂಬರ್ ಆರಂಭದಲ್ಲೇ ನೀರಿನ ಒರತೆಗಳು ಬತ್ತಿವೆ. ಮಳೆಗಾಲದ ಸ್ವರ್ಗ ಚಾರ್ಮಾಡಿ ಫಾಲ್ಸ್ ನಲ್ಲಿ ಹಾಲ್ನೊರೆಯಂತೆ ಧುಮ್ಮುಕ್ಕುತ್ತಿದ್ದ ಜಲಪಾತಗಳು ಕಣ್ಮರೆಯಾಗಿದ್ದು, ಪರಿಸರ ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ.
ಡಿಸೆಂಬರ್ ಚುಮು ಚುಮು ಚಳಿಗೆ ತಂಪನೆಯ ನೀರು ತುಂಬಿ ಹರಿಯಬೇಕಿದ್ದ ಚಾರ್ಮಾಡಿ ಘಾಟ್ನ ಫಾಲ್ಸ್ಗಳು ಈಗ ನಿಸ್ತೇಜವಾಗಿದೆ. ಕಲ್ಲು ಬಂಡೆಗೆ ಅಂಟಿಕೊಂಡೇ ಸಣ್ಣದಾಗಿ ನೀರು ಹರಿಯುತ್ತಿದೆ. ಮಳೆಗಾಲದ ತುಂಬೆಲ್ಲಾ ಫಾಲ್ಸ್ ಹರಿಯುವ ಪ್ರದೇಶದಲ್ಲಿ ವಾಹನ ನಿಲ್ಲಿಸಿ ಸುಂದರ ವಾತವರಣದ ಸೌಂದರ್ಯ ಅನುಭವಿಸುತ್ತಿದ್ದ ಜನರು ಈಗ ವಾಹನ ನಿಲ್ಲಿಸುವ ಪ್ರಮೇಯವೇ ಕಂಡುಬರುತ್ತಿಲ್ಲ.
ಈ ಬಾರಿ ಮಳೆ ಕಡಿಮೆಯಾಗಿ ಇಳೆಯಲ್ಲಿ ಹಸಿರು ಮಾಯವಾಗಿದೆ. ಸುಡುವ ಬಿಸಿಲು ಚಾರ್ಮಾಡಿ ಎಂಬ ತಂಪನೆಯ ಪ್ರದೇಶದಲ್ಲೇ ನಿಗಿನಿಗಿ ಕೆಂಡದಂತಹ ವಾತಾವರಣವನ್ನು ಸೃಷ್ಠಿ ಮಾಡಿದೆ. ಅತೀ ಸೂಕ್ಷ್ಮ ಪ್ರದೇಶವಾದ ಪಶ್ಚಿಮ ಘಟ್ಟ ಪ್ರದೇಶಗಳಲ್ಲಿ ಸರ್ಕಾರದ ಅವೈಜ್ಞಾನಿಕ ಯೋಜನೆಗಳು, ಮಾನವನ ಹಸ್ತಕ್ಷೇಪ ನೀರಿನ ಒರೆತೆಗೇ ಕೊಡಲಿಯೇಟನ್ನು ನೀಡಿದೆ. ಇದು ಅಪಾಯದ ಮುನ್ಸೂಚನೆ ಅಂತಾ ಪರಿಸರ ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.
ಇನ್ನೊಂದೆಡೆ ಪಶ್ಚಿಮ ಘಟ್ಟದಲ್ಲಿ ಹುಟ್ಟಿ, ಉಪನದಿಗಳು ಸೇರಿ ಬೃಹತ್ ನದಿಯಾಗುವ ನೇತ್ರಾವತಿಯಲ್ಲೂ ಈ ಬಾರಿ ನೀರಿನ ಹರಿವು ಕಡಿಮೆಯಾಗಿದೆ. ಮಳೆಗಾಲದಲ್ಲಿ ಕೇವಲ ಒಮ್ಮೆ ಮಾತ್ರ ಅಪಾಯ ಮಟ್ಟ ಮೀರಿ ಹರಿದ ನೇತ್ರಾವತಿ ಸೇರಿದಂತೆ ಇತರ ನದಿಗಳಲ್ಲಿ ನೀರಿನ ಹರಿವು ಗಣನೀಯ ಇಳಿಕೆಯಾಗಿದೆ. ಸದ್ಯ ಕರಾವಳಿಯಲ್ಲಿ ಬಿಸಿಲ ಬೇಗೆ ಜಾಸ್ತಿಯಾಗುತ್ತಿದ್ದು, ಬೇಸಿಗೆ ಕಾಲದಲ್ಲಿ ನೀರಿಗಾಗಿ ಹಾಹಾಕಾರ ಸೃಷ್ಟಿಯಾಗೋದು ಖಂಡಿತಾ ಎನ್ನೋದು ಜಲತಜ್ಞರ ಅಭಿಪ್ರಾಯವಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ