ನಮಗೆ ಅಧಿಕಾರಕ್ಕಿಂತ ರೈತರ ಹಿತಾಸಕ್ತಿ ಮುಖ್ಯ : ಸಿಎಂ

ಮಂಡ್ಯ: 

     ಅಧಿಕಾರಕ್ಕಿಂತ ರೈತರ ಹಿತಾಸಕ್ತಿ ಕಾಪಾಡುವುದು ನಮಗೆ ಮುಖ್ಯ. ಎಂಥಾದ್ದೇ ಪರಿಸ್ಥಿತಿ ಬಂದರೂ ರೈತರ ಹಿತ ಕಾಯುವುದು ಶತಸಿದ್ಧ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಯ ನೀಡಿದ್ದಾರೆ. 

    ತಮಿಳುನಾಡಿಗೆ ಕಾವೇರಿ ನೀರು ಬಿಡುಗಡೆ ವಿರೋಧಿಸಿ ಕಳೆದ 56 ದಿನಗಳಿಂದ ಇಲ್ಲಿನ ವಿಶ್ವೇಶ್ವರಯ್ಯ ಪ್ರತಿಮೆ ಬಳಿ ಪ್ರತಿಭಟನೆ ನಡೆಸುತ್ತಿರುವ ರೈತರಿಂದ ಮನವಿ ಪತ್ರ ಸ್ವೀಕರಿಸಿ ಮಾತನಾಡಿದ ಮುಖ್ಯಮಂತ್ರಿ, ಈ ವರ್ಷ ಭೀಕರ ಬರಗಾಲ ಎದುರಿಸುತ್ತಿದ್ದೇವೆ. ಮಳೆ ಪೂರ್ತಿ ಕೈ ಕೊಟ್ಟಿದೆ. ಇದರಿಂದ ಜಲಾಶಯಗಳು ತುಂಬದೆ ಇರುವ ಸಂಕಷ್ಟದ ವರ್ಷದಲ್ಲಿ ತಮಿಳುನಾಡಿಗೆ 177.25 ಟಿಎಂಸಿ ನೀರು ಕೊಡಬೇಕು ಎನ್ನುವ ಆದೇಶ ಹೊರಬಿದ್ದಿದೆ ಎಂದರು. 

    ಪ್ರತಿ ತಿಂಗಳು ಇಷ್ಟಿಷ್ಟು ನೀರು ಬಿಡಬೇಕು ಎನ್ನುವ ಆದೇಶ ಇದೆ. ಕಾವೇರಿ ಪ್ರಾಧಿಕಾರ ಮತ್ತು ಸಮಿತಿ ಎದುರು ನೀರು ಬಿಡಲು ಸಾಧ್ಯವಿಲ್ಲ ಎಂದು ವಾದವನ್ನು ಬಲವಾಗಿ ಮಂಡಿಸಿದ್ದೇವೆ. ಆದರೂ ಮೊದಲು 5, 000 ಕ್ಯೂಸೆಕ್ಸ್ ನೀರು ಬಿಡಲು ಹೇಳಿದರು, ಬಳಿಕ 3000 ಕ್ಯೂಸೆಕ್ಸ್ ನೀರು ಬಿಡಲು ಆದೇಶ ಬಂತು. ಅದಕ್ಕೂ ನಾವು ಒಪ್ಪಲಿಲ್ಲ. ಈಗ 2,600 ಕ್ಯೂಸೆಕ್ಸ್ ನೀರು ಬಿಡಲು ಆದೇಶವಾಗಿದೆ. ಆದರೆ ನಾವು ಕುಡಿಯುವ ನೀರಿಗೆ ಮತ್ತು ಬೆಳೆ ಉಳಿಸಿಕೊಳ್ಳಲು ಮೊದಲ ಆದ್ಯತೆ ನೀಡುತ್ತೇವೆ ಎಂದರು.

    ಮುಂಗಾರು ಬೆಳೆಯನ್ನು ಉಳಿಸಿಕೊಳ್ಳಲು ಶತಾಯಗತಾಯ ಪ್ರಯತ್ನಿಸುತ್ತೇವೆ. ನಾನೂ ಕೂಡಾ ರೈತ ಹೋರಾಟದಲ್ಲಿ ಬಂದಿರುವ ರೈತರ ಮಗ. ನಾವೂ ಅಚ್ಚುಕಟ್ಟು ಪ್ರದೇಶದಲ್ಲೇ ಇದ್ದೇವೆ. ಆದ್ದರಿಂದ ರೈತರ ಸಂಕಷ್ಟ ನನಗೆ ಚೆನ್ನಾಗಿ ಗೊತ್ತಿದೆ. ಆದ್ದರಿಂದ ನಿಮ್ಮ ಹಿತ ಕಾಯಲು ಹಿಂದೆ ಬೀಳುವುದಿಲ್ಲ. ಅಧಿಕಾರಕ್ಕಾಗಿ ರೈತರನ್ನು ಬಲಿ ಕೊಡುವುದಿಲ್ಲ. ನಾವು ಕೇವಲ ಅಧಿಕಾರಕ್ಕಾಗಿ ಅಂಟಿಕೊಂಡು ಕೂರುವವರಲ್ಲ.ರೈತರ ಹಿತ ಕಾಯಲು ಗಂಭೀರವಾದ, ಪ್ರಾಯೋಗಿಕವಾದ ಕ್ರಮ ಕೈಗೊಳ್ಳುತ್ತೇವೆ ಎಂದು ಭರವಸೆ ನೀಡಿದರು. 

    ಕಬ್ಬು ಬೆಳೆಗಾರರ ಹಿತಕ್ಕಾಗಿ ಮೈಶುಗರ್ ಸಕ್ಕರೆ ಕಾರ್ಖಾನೆಗೆ 50 ಕೋಟಿ ರೂ ಬಿಡುಗಡೆ ಮಾಡಿದಿದ್ದು, ಸರ್ಕಾರ ರೈತರ ಪರವಾಗಿದ್ದು, ಅನುಮಾನ ಬೇಡವೇ ಬೇಡ ಎಂದರು. ಕೃಷಿ ಸಚಿವ ಚಲುವರಾಯಸ್ವಾಮಿ, ಶಾಸಕರಾದ ರವಿ ಗಣಿಗ, ದಿನೇಶ್ ಗೂಳಿಗೌಡ, ನರೇಂದ್ರಸ್ವಾಮಿ ಸೇರಿದಂತೆ ಹಲವು ಮಂದಿ ನಾಯಕರು ಪ್ರತಿಭಟನಾಕಾರರ ಬೇಡಿಕೆಗಳನ್ನು ಆಲಿಸಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link