ಮುಂಬೈ:
ರೈಲು ಹತ್ತುವ ವೇಳೆ ಕಾಲು ಜಾರಿ ಹಳಿ ಮೇಲೆ ಬಿದ್ದ 50 ವರ್ಷದ ಮಹಿಳೆಯೊಬ್ಬರ ಮೇಲೆ ರೈಲು ಹರಿದ ಪರಿಣಾಮ ಆಕೆ ಎರಡೂ ಕಾಲುಗಳನ್ನು ಕಳೆದುಕೊಂಡಿರುವ ಘಟನೆ ಬೇಲಾಪುರ ನಿಲ್ದಾಣದಲ್ಲಿ ಸೋಮವಾರ ಸಂಭವಿಸಿದೆ. ಘಟನೆ ವಿಡಿಯೋ ವೈರಲ್ ಆಗಿದ್ದು, ಪ್ಲಾಟ್ ಫಾರ್ಮ್ ನಲ್ಲಿದ್ದ ಪ್ರಯಾಣಿಕರು, ಭದ್ರತಾ ಸಿಬ್ಬಂದಿಯ ಎಚ್ಚರಿಕೆ ನಂತರ ರೈಲು ನಿಧಾನವಾಗಿ ಹಿಂದಕ್ಕೆ ಚಲಿಸುತ್ತಿರುವುದನ್ನು ನೋಡಬಹುದು.
ಬೆಳಗ್ಗೆ ಬೇಲಾಪುರ ನಿಲ್ದಾಣದಿಂದ ಥಾಣೆಗೆ ಹೋಗಲು ರೈಲ್ವೆ ಪ್ಲಾಟ್ ಫಾರ್ಮ್ ಗೆ ಮಹಿಳೆ ಬಂದಿದ್ದಾಗ ಹೆಚ್ಚಿನ ಜನ ಸಂದಣಿ ಇದ್ದುದ್ದರಿಂದ ಆಕೆ ರೈಲು ಹತ್ತುವ ವೇಳೆ ಆಕಸ್ಮಿಕವಾಗಿ ರೈಲಿನಿಂದ ಕೆಳಗೆ ಬಿದ್ದಿದ್ದಾರೆ. ಅಷ್ಟೋತ್ತಿಗಾಗಲೇ ರೈಲು ಹೊರಟಿದೆ. ಇದನ್ನು ಗಮನಿಸಿದ ಅಲ್ಲಿದ್ದ ಭದ್ರತಾ ಸಿಬ್ಬಂದಿ ಕೂಡಲೇ ಸೂಚನೆ ನೀಡಿದ್ದು, ರೈಲು ರಿವರ್ಸ್ ತೆಗೆದುಕೊಂಡಿದೆ. ಆದರೆ ಅಷ್ಟೋತ್ತಿಗಾಗಲೇ ರೈಲಿನ ಒಂದು ಬೋಗಿ ಆಕೆಯ ಕಾಲಿನ ಮೇಲೆ ಹರಿದು ಅವರು ಎರಡೂ ಕಾಲುಗಳನ್ನು ಕಳೆದುಕೊಂಡಿದ್ದರು.
ಹಳಿ ಮೇಲೆ ರಕ್ತಸಿಕ್ತ ಪಾದದೊಂದಿಗೆ ಕುಳಿತಿರುವ ಮಹಿಳೆಗೆ ಪೊಲೀಸರು ಸಹಾಯ ಮಾಡಲು ಯತ್ನಿಸುತ್ತಿರುವುದು ವಿಡಿಯೋದಲ್ಲಿದೆ. ಕೂಡಲೇ ಅವರನ್ನು ಎಂಜಿಎಂ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದ್ದು, ಮಹಿಳೆ ಆರೋಗ್ಯ ಸ್ಥಿತಿ ಸುಧಾರಿಸುತ್ತಿದೆ ಎಂದು ಸೆಂಟ್ರಲ್ ರೈಲ್ವೆ ಸಾರ್ವಜನಿಕ ಸಂಪರ್ಕ ಸ್ವಪ್ನಿಲ್ ನಿಲಾ ತಿಳಿಸಿದ್ದಾರೆ.