ಈಗಿನ ಯುವಕರು ವಿಜ್ಞಾನ ಮತ್ತು ತಂತ್ರಜ್ಞಾನವನ್ನು ನಂಬುತ್ತಾರೆ : ಕೇಜ್ರಿವಾಲ್‌

ನವದೆಹಲಿ : 

      ಪ್ರಧಾನಿ ನರೇಂದ್ರ ಮೋದಿ ಅವರ ಶೈಕ್ಷಣಿಕ ಅರ್ಹತೆಗಳ ಬಗ್ಗೆ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರು ಟೀಕೆಗಳನ್ನು ಮಾಡಿದ್ದಾರೆ. ಪ್ರಧಾನಿ ಮೋದಿ ವಿದ್ಯಾವಂತ ಪ್ರಧಾನಿಯಾಗಿದ್ದರೆ ನೋಟು ಅಮಾನ್ಯೀಕರಣ ಮತ್ತು ಮೂರು ರೈತ ವಿರೋಧಿ ಕಾನೂನುಗಳಂತಹ ಅಪಾಯಕಾರಿ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿರಲಿಲ್ಲ ಎಂದು ಕೇಜ್ರಿವಾಲ್ ವಾಗ್ದಾಳಿ ಮಾಡಿದ್ದಾರೆ.

    ಅಸ್ಸಾಂ ರಾಜಧಾನಿ ಗುವಾಹಟಿಯಲ್ಲಿ ನಡೆದ ತಮ್ಮ ಚೊಚ್ಚಲ ರ್‍ಯಾಲಿಯನ್ನು ಉದ್ದೇಶಿಸಿ ಭಾನುವಾರ ಮಾತನಾಡಿದ ಅರವಿಂದ್ ಕೇಜ್ರಿವಾಲ್ ಅವರು, “ನರೇಂದ್ರ ಮೋದಿಯವರ ಭಾಷಣವನ್ನು ನಾನು ಕೇಳಿದೆ, ಅವರು ಹಳ್ಳಿಯ ಶಾಲೆಗೆ ಹೋಗುತ್ತಿದ್ದರು ಎಂದು ಹೇಳಿದರು. ಅಲ್ಲಿ ಅವರಿಗೆ ಹೆಚ್ಚು ಓದಲು ಸಾಧ್ಯವಾಗಲಿಲ್ಲ ಎಂದು ಹೇಳಿದರು. ಹೀಗಾಗಿ ಅವರಿಗೆ ಶಿಕ್ಷಣ ಸರಿಯಾಗಿ ಆಗಿಲ್ಲ. ಆದ್ದರಿಂದ ನಾನು ಹೇಳಲು ಬಯಸುವುದೇನೆಂದರೆ ಭಾರತದಂತಹ ಮಹಾನ್ ರಾಷ್ಟ್ರದ ಪ್ರಧಾನಿ ಶಿಕ್ಷಣ ಪಡೆಯಬೇಕಲ್ಲವೇ?” ಎಂದು ನೆರೆದ ಜನರನ್ನು ಕೇಳಿದರು.

    ಯಾರೋ ನಮ್ಮ ಪ್ರಧಾನಿಯನ್ನು ಮೂರ್ಖರನ್ನಾಗಿಸಿದ್ದಾರೆ. ಭ್ರಷ್ಟಾಚಾರವನ್ನು ಕೊನೆಗೊಳಿಸಲು ನೋಟುಗಳನ್ನು ಬ್ಯಾನ್ ಮಾಡಿ ಎಂದು ಮೋದಿಯವರಿಗೆ ಹೇಳಿದರು. ಅದರಂತೆ ಮೋದಿ ನೋಟು ಬ್ಯಾನ್ ಮಾಡಿದರು. ಆದರೆ ನೋಟು ಅಮಾನ್ಯೀಕರಣದಿಂದ ಭ್ರಷ್ಟಾಚಾರ ಕೊನೆಗೊಂಡಿತೇ? ಇಲ್ಲ. ನೋಟು ಅಮಾನ್ಯೀಕರಣದಿಂದ ಭಯೋತ್ಪಾದನೆ ಕೊನೆಗೊಳ್ಳುತ್ತದೆ ಎಂದು ನಮ್ಮ ಪ್ರಧಾನಿಗೆ ಯಾರೋ ಹೇಳಿದ್ದರು. ನೋಟು ರದ್ದತಿ ಭಯೋತ್ಪಾದನೆಯನ್ನು ಕೊನೆಗೊಳಿಸಿದೆಯೇ ಎಂದು ಕೇಜ್ರಿವಾಲ್ ಪ್ರಶ್ನಿಸಿದ್ದಾರೆ.

    ಕೃಷಿ ಕಾನೂನುಗಳ ಬಗ್ಗೆ ಮಾತನಾಡಿದ ಎಎಪಿ ನಾಯಕ, “ಯಾರೋ ನಮ್ಮ ಪ್ರಧಾನಿಯನ್ನು ಮೂರ್ಖರನ್ನಾಗಿಸಿ ರೈತ ವಿರೋಧಿಯಾದ ಮೂರು ಕೃಷಿ ಕಾನೂನುಗಳನ್ನು ಜಾರಿಗೆ ತರಲು ಹೇಳಿದರು. ಒಂದು ವರ್ಷ ಆಂದೋಲನ ನಡೆಯಿತು. ಇದರಿಂದ 750 ಕ್ಕೂ ಹೆಚ್ಚು ಜನರು ಸತ್ತರು. ನಮ್ಮ ಪ್ರಧಾನಿ ವಿದ್ಯಾವಂತರಾಗಿದ್ದರೆ, ಅವರು ಅಂತಹ ಕಾನೂನುಗಳಿಗೆ ಜಾರಿಗೆ ತರಲು ಹೋಗುತ್ತಿರಲಿಲ್ಲ” ಎಂದು ಕೇಜ್ರಿವಾಲ್ ಹೇಳಿದ್ದಾರೆ.

    ಭಾರತ ಬಡ ರಾಷ್ಟ್ರವಾಗಿದ್ದು, ಬಡತನದಿಂದ ಶಾಲೆಗೆ ಹೋಗದಿರುವವರು ಅಪರಾಧವಲ್ಲ. ಆದರೆ ನಮ್ಮ ಪ್ರಧಾನಿ ವಿದ್ಯಾವಂತರಾಗಿರಬೇಕು. ಪ್ರಧಾನಿಯವರು ನೋಟು ಅಮಾನ್ಯೀಕರಣವನ್ನು ಮಾಡಿದರು ಅದು ನಮ್ಮ ಆರ್ಥಿಕತೆಯನ್ನು 10 ವರ್ಷ ಹಿಂದಕ್ಕೆ ಕೊಂಡೊಯ್ಯಿತು ಎಂದರು.

    “ಇದು 21 ನೇ ಶತಮಾನ ಮತ್ತು 21 ನೇ ಶತಮಾನದ ಯುವಕರು ಮಹತ್ವಾಕಾಂಕ್ಷಿಗಳು. ಅವರು ವಿಜ್ಞಾನ ಮತ್ತು ತಂತ್ರಜ್ಞಾನವನ್ನು ನಂಬುತ್ತಾರೆ. ಅವರು ಭಾರತದ ಉದ್ಯೋಗ ಮತ್ತು ಸಮೃದ್ಧಿಯನ್ನು ಬಯಸುತ್ತಾರೆ ಮತ್ತು ಒಬ್ಬ ವಿದ್ಯಾವಂತ ಪ್ರಧಾನಿ ಮಾತ್ರ ಆ ಸಮೃದ್ಧಿಯನ್ನು ತರಲು ಸಾಧ್ಯ. ಕಡಿಮೆ ವಿದ್ಯಾವಂತ ಅಥವಾ ಅನಕ್ಷರಸ್ಥ ವ್ಯಕ್ತಿಯು ಸಮೃದ್ಧಿಯನ್ನು ತರಲು ಸಾಧ್ಯವಿಲ್ಲ. ಖಾಸಗಿ ಕಂಪನಿಯು ಮ್ಯಾನೇಜರ್ ಹುದ್ದೆಗೆ ಎಂಬಿಎ, ಎಂಎ ಮತ್ತು ಬಿಎ ಪದವಿ ಕೇಳುತ್ತದೆ. ಹೀಗಿರುವಾಗ ದೇಶದ ಅಗ್ರಮಾನ್ಯ ಪ್ರಧಾನಿಯಾಗಲು ಶೈಕ್ಷಣಿಕ ಅರ್ಹತೆ ಇರಬೇಕಲ್ಲವೇ? ಎಂದು ಅವರು ಕೇಳಿದರು.

    ಪಂಜಾಬ್ ಸಿಎಂ ಭಗವಂತ್ ಸಿಂಗ್ ಮಾನ್ ಅವರು ಕೇಜ್ರಿವಾಲ್ ಮೊದಲು ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ್ದು, ಅವರು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link