ಸಂಧ್ಯಾ ಕಾಲದಲ್ಲಿ ಪೋಷಕರ ಆರೈಕೆ ಮಕ್ಕಳ ಹೊಣೆ

ತುಮಕೂರು :

    ವೃದ್ಧಾಪ್ಯ ಕಾಲದಲ್ಲಿ ವಯೋಸಹಜ ಕಾಯಿಲೆಗಳು ಹೆಚ್ಚಿದಂತೆ ಇತರೆ ಸಮಸ್ಯೆಗಳು ಹೆಚ್ಚುತ್ತವೆ. ಮಕ್ಕಳಲ್ಲಿ ನೈತಿಕತೆ ಮತ್ತು ಮೌಲ್ಯಯುತ ಸಹಜ ಜೀವನ ಇಲ್ಲದೆ ಹೋದರೆ ಜೀವನದ ಸಂಧ್ಯಾ ಕಾಲದಲ್ಲಿ ವಯೋವೃದ್ಧರು ಮತ್ತಷ್ಟು ಸಂಕಟಕ್ಕೆ ಸಿಲುಕುತ್ತಾರೆ. ಇವರ ಪಾಲನೆ ಮತ್ತು ಆರೈಕೆಯ ಹೊಣೆ ಬಹಳಷ್ಟು ಕುಟುಂಬಗಳಲ್ಲಿ ಬಾಧಿಸುತ್ತದೆ ಮತ್ತು ಇದೇ ಒಂದು ಸಮಸ್ಯೆಯಾಗಿ ಪರಿಗಣಿತವಾಗುತ್ತದೆ.

     ವಯಸ್ಸಾದ ಕಾಲದಲ್ಲಿ ಮಕ್ಕಳು ತಂದೆ ತಾಯಿಯರನ್ನು ಪೋಷಣೆ ಮಾಡಬೇಕು. ಇದು ನೈತಿಕ ಮತ್ತು ಕಾನೂನಾತ್ಮಕ ಜವಾಬ್ದಾರಿ. ಆದರೆ ಜವಾಬ್ದಾರಿಯಿಂದ ನುಸುಳುವ ಮಂದಿ ಹೆಚ್ಚುತ್ತಿದ್ದಾರೆ. ರಾಜ್ಯ ಹೈಕೋರ್ಟ್ ಮತ್ತು ಸುಪ್ರೀಂಕೋರ್ಟ್ಗಳು ಬಹಳಷ್ಟು ಪ್ರಕರಣಗಳಲ್ಲಿ ಈ ಬಗ್ಗೆ ಸ್ಪಷ್ಟ ವ್ಯಾಖ್ಯಾನ ನೀಡಿವೆ. ಹಿರಿಯ ನಾಗರಿಕರ ಕಲ್ಯಾಣ ಕಾಯ್ದೆ ಅಸ್ತಿತ್ವವಕ್ಕೆ ಬಂದ ನಂತರ ವೃದ್ಧರಿಗೆ ಕಾನೂನಾತ್ಮಕ ಅವಕಾಶಗಳು ಹೆಚ್ಚಿವೆ.

     ವಯಸ್ಸಾದ ತಂದೆ ತಾಯಿಯರನ್ನು ನಿರ್ಲಕ್ಷ ಮಾಡಿದ ಪ್ರಕರಣವೊಂದರಲ್ಲಿ ರಾಜ್ಯ ಹೈಕೋರ್ಟ್ ಮಕ್ಕಳಿಗೆ ಚುರುಕು ಮುಟ್ಟಿಸಿವೆ. ತುಮಕೂರು ಜಿಲ್ಲೆಗೆ ಸಂಬಂಧಿಸಿದ ಪ್ರಕರಣ ಇದು.ವಯಸ್ಸಾದ ಪೋಷಕರನ್ನು ಸಂಧ್ಯಾಕಾಲದಲ್ಲಿ ಅವರ ಆರೈಕೆ ಮಾಡುವ ಜವಾಬ್ದಾರಿ ಕಾನೂನು, ಧರ್ಮ ಮತ್ತು ನೈತಿಕತೆಯು ಮಕ್ಕಳ ಮೇಲಿರುತ್ತದೆ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.

    ತಂದೆಯಿಂದ ಆಸ್ತಿಯನ್ನು ಉಡುಗೊರೆಯಾಗಿ ಪಡೆದ ನಂತರ ಹಲ್ಲೆ ನಡೆಸಿ ಮನೆಯಿಂದ ಹೊರಹಾಕಿದ್ದ ಪುತ್ರಿ ಮತ್ತು ಅಳಿಯನ ವರ್ತನೆ ಗಮನಿಸಿ ಮುಖ್ಯ ನ್ಯಾಯಮೂರ್ತಿ ಪಿ.ಬಿ ವರಾಳೆ ಮತ್ತು ನ್ಯಾಯಮೂರ್ತಿ ಕೃಷ್ಣ ಎಸ್ ದೀಕ್ಷಿತ್ ಅವರಿದ್ದ ವಿಭಾಗೀಯ ಪೀಠ, ಪೋಷಕರು ಆಸ್ತಿಯನ್ನು ಉಡುಗೊರೆಯಾಗಿ ನೀಡಿದಾಗ ಈ ಜವಾಬ್ದಾರಿ ಮತ್ತಷ್ಟು ಹೆಚ್ಚಾಗಲಿದೆ ಎಂದು ಆದೇಶಿಸಿದೆ.

     ಅಲ್ಲದೆ, ತಂದೆಯಿಂದ ಆಸ್ತಿಯನ್ನು ಗಿಫ್ಟ್ ಡೀಡ್ (ಉಡುಗೊರೆ ಕ್ರಯ) ಆಗಿ ಪಡೆದಿರುವುದನ್ನು ಅಮಾನ್ಯಗೊಳಿಸಿದ್ದ ತುಮಕೂರು ವಲಯದ ಪೋಷಕರ ಕಲ್ಯಾಣ ಮತ್ತು ಹಿರಿಯ ನಾಗರಿಕರ ನಿರ್ವಹಣೆ ಕಾಯ್ದೆಯಡಿ ನ್ಯಾಯಾಧೀಕರಣದ ವಿಭಾಗಾಧಿಕಾರಿಯ ಆದೇಶ ಮತ್ತು ಅದನ್ನು ಎತ್ತಿಹಿಡಿದಿದ್ದ ಹೈಕೋರ್ಟ್ ಏಕ ಸದಸ್ಯ ಪೀಠದ ತೀರ್ಪನ್ನು ವಿಭಾಗೀಯ ಪೀಠ ಪುರಸ್ಕರಿಸಿದೆ.

      ಪ್ರಸ್ತುತದ ಪ್ರಕರಣದಲ್ಲಿ ಪುತ್ರಿ ಪೋಷಕರ ಆಸ್ತಿಯನ್ನು ಉಡುಗೊರೆಯಾಗಿ ಪಡೆದುಕೊಂಡ ನಂತರ ಅವರನ್ನು  ಆರೈಕೆ ಮಾಡಿಲ್ಲ. ಅಷ್ಟೇ ಅಲ್ಲ, ಪೋಷಕರ ಮೇಲೆ ಹಲ್ಲೆ ನಡೆಸಿ ಮನೆಯಿಂದ ಹೊರಹಾಕಿರುವುದು ಬಹಳ ನೋವಿನ ಸಂಗತಿ. ಪೋಷಕರಿಗೆ ಮಕ್ಕಳು ಕಿರುಕುಳ ನೀಡುವ ಹಲವು ಪ್ರಕರಣಗಳು ಅನೇಕ ಕಾರಣಗಳಿಂದ ಬೆಳಕಿಗೆ ಬರುವುದೇ ಇಲ್ಲ.

     ಈ ರೀತಿಯ ಹಲವು ಪ್ರಕರಣಗಳನ್ನು ನ್ಯಾಯಾಲಯ ಗಮನಿಸುತ್ತಿರುವುದು ಹೃದಯಭಾರವಾಗುವ ವಿಚಾರ. ಇದು ಸ್ವೀಕಾರಾರ್ಹ ಹಾಗೂ ಒಪುö್ಪವಂತಹ ಬೆಳವಣಿಗೆಯಲ್ಲ. ಇಂತಹ ವಿಷಯಗಳಲ್ಲಿ ನ್ಯಾಯಾಲಯಗಳು, ಅಧಿಕಾರಿಗಳು ಮತ್ತು ನ್ಯಾಯಮಂಡಳಿಗಳು ಹೆಚ್ಚಿನ ಜಾಗರೂಕತೆಯಿಂದ ಮತ್ತು ಕಟ್ಟುನಿಟ್ಟಾಗಿ ನಿರ್ವಹಿಸಬೇಕಾಗುತ್ತದೆ ಎಂದು ವಿಭಾಗೀಯ ಪೀಠ ತನ್ನ ಆದೇಶದಲ್ಲಿ ತಿಳಿಸಿದೆ.

ಪ್ರಕರಣದ ಹಿನ್ನೆಲೆ ಏನು?:

    ತುಮಕೂರು ಜಿಲ್ಲೆ ಗುಬ್ಬಿ ತಾಲ್ಲೂಕಿನ ಕವಿತಾ ಎಂಬುವರಿಗೆ ತಂದೆ ತಮ್ಮ ಆಸ್ತಿಯನ್ನು 2018ರ ಸೆ.28ರಂದು ಉಡುಗೊರೆಯಾಗಿ ನೀಡಿದ್ದರು. ಆದರೆ ಕೆಲ ದಿನಗಳ ಬಳಿಕ ನಮ್ಮನ್ನು ಸರಿಯಾಗಿ ನೊಡಿಕೊಳ್ಳುತ್ತಿಲ್ಲ ಮತ್ತು ಮನೆ ನಿರ್ಮಾಣಕ್ಕೆ 10 ಲಕ್ಷ ಹಣ ತೆಗೆದುಕೊಂಡಿದ್ದಾರೆ. ಜೊತೆಗೆ ತಮ್ಮ ಸಾಲ ತೀರಿಸಲು ಜಮೀನು ಆಸ್ತಿ ಮಾರಲು ಒತ್ತಾಯಿಸಿದ್ದರು ಎಂದು ಪೋಷಕರು, ಉಪವಿಭಾಗಾಧಿಕಾರಿ ಕಚೇರಿಗೆ ಅರ್ಜಿ ಸಲ್ಲಿಸಿದ್ದರು.

     ಇದನ್ನು ಅಲ್ಲಗಳೆದಿದ್ದ ಕವಿತಾ ಅವರು, ತಂದೆ ಮತ್ತು ತಾಯಿ ಅವರನ್ನು ತಾವೇ ಆರೈಕೆ ಮಾಡುತ್ತಿದ್ದೇವೆ. ತಂದೆಯ ವೈದ್ಯಕೀಯ ಚಿಕಿತ್ಸೆಗಾಗಿ 30 ಲಕ್ಷ ಹಣವನ್ನು ಖರ್ಚು ಮಾಡಿದ್ದೇವೆ ಎಂದು ತಿಳಿಸಿದ್ದರು. ಆದರೆ ಪೋಷಕರ ಮೇಲೆ ಹಲ್ಲೆ ನಡೆಸಿ, ಮನೆಯಿಂದ ಹೊರಹಾಕಿದ್ದನ್ನು ಉಪವಿಭಾಗಾಧಿಕಾರಿ ಗಮನಿಸಿ, ಆಸ್ತಿ ಉಡುಗೊರೆ ಕ್ರಯವನ್ನು 2021ರ ಫೆ.24 ರಂದು ಅಮಾನ್ಯಗೊಳಿಸಿದ್ದರು. ಈ ಆದೇಶ ಪ್ರಶ್ನಿಸಿ ಕವಿತಾ ಹೈಕೋರ್ಟ್ಗೆ ತಕರಾರು ಅರ್ಜಿ ಸಲ್ಲಿಸಿದ್ದು, ಅದನ್ನು ಏಕ ಸದಸ್ಯ ನ್ಯಾಯಪೀಠ 2021ರ ಸೆ.11ರಂದು ವಜಾಗೊಳಿಸಿತ್ತು. ಇದರಿಂದ ಕವಿತಾ ವಿಭಾಗೀಯ ಪೀಠಕ್ಕೆ ಮೇಲ್ಮನವಿ ಸಲ್ಲಿಸಿದ್ದರು.

      ಪೋಷಕರನ್ನು ನೋಡಿಕೊಳ್ಳುವುದು ಮಕ್ಕಳ ಹೊಣೆಗಾರಿಕೆಯಾಗಿದೆಯೇ ಹೊರತು, ದಯೆ-ದಾನದ ವಿಚಾರವಲ್ಲ. ವೃದ್ಧಾಪ್ಯದಲ್ಲಿ ತಂದೆ-ತಾಯಿಯನ್ನು ಆರೈಕೆ ಮಾಡುವುದು ಮಕ್ಕಳ ಶಾಸನಬದ್ಧ ಜವಾಬ್ದಾರಿ. ‘ರಕ್ಷಂತಿ ಸ್ಥವಿರೇ ಪುತ್ರಃ’ ಎಂದು ಸಹಸ್ರಾರು ವರ್ಷಗಳಿಂದ ಈ ದೇಶದ ಧರ್ಮಗ್ರಂಥಗಳು ಸಾರುತ್ತವೆ. ಜೀವನ ಸಂಧ್ಯಾಕಾಲದಲ್ಲಿರುವ ತಂದೆ-ತಾಯಿಯನ್ನು ಮಕ್ಕಳು ನೋಡಿಕೊಳ್ಳುವುದೇ ಧರ್ಮ ಎನ್ನುವುದೇ ಅದರ ಅರ್ಥ ಎಂದು ಹೈಕೋರ್ಟ್ ನ್ಯಾಯಪೀಠ ತಿಳಿಸಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link