ಸರ್ಕಾರಿ ನೌಕರರ ಸಂಘದ ಅಧ್ಯಕ್ಷರ ಎತ್ತಂಗಡಿ….!

ಬೆಂಗಳೂರು:  

   ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಷಡಕ್ಷರಿ ಅವರನ್ನು ಎತ್ತಂಗಡಿ ಮಾಡಲಾಗಿದೆ. ಶಿವಮೊಗ್ಗದಿಂದ ಕೋಲಾರಕ್ಕೆ ವರ್ಗಾಯಿಸಿ ಸರ್ಕಾರ ಆದೇಶ ಹೊರಡಿಸಿದೆ.

   ಕರ್ನಾಟಕ ರಾಜ್ಯ ಲೆಕ್ಕ ಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆಯ ಶಿವಮೊಗ್ಗದ ಜಂಟಿ ನಿರ್ದೇಶಕರ ಕಚೇರಿಯಲ್ಲಿ ಲೆಕ್ಕಾಧೀಕ್ಷಕರಾಗಿದ್ದ ಷಡಕ್ಷರಿ ಅವರನ್ನು ಕೋಲಾರ ಜಿಲ್ಲೆಯಲ್ಲಿ ಖಾಲಿ ಇದ್ದ ಸಮಾಜ ಕಲ್ಯಾಣ ಇಲಾಖೆಯ ಲೆಕ್ಕಾಧೀಕ್ಷಕರ ಹುದ್ದೆಗೆ ವರ್ಗಾವಣೆಗೊಳಿಸಿ ಆರ್ಥಿಕ ಇಲಾಖೆಯ ಅಧೀನ ಕಾರ್ಯದರ್ಶಿ (ಆಡಳಿತ ಮತ್ತು ಮುಂಗಡಗಳು ವಿಭಾಗ) ಆದೇಶಿಸಿದ್ದಾರೆ.

    ಷಡಕ್ಷರಿ ಶಿವಮೊಗ್ಗದಲ್ಲಿ ಕರ್ತವ್ಯ ಸ್ಥಾನದಲ್ಲಿರದೇ ಬೆಂಗಳೂರಿನಲ್ಲಿಯೇ ಹೆಚ್ಚು ಸಮಯ ಇರುತ್ತಾರೆ ಎನ್ನುವ ಆರೋಪ ಕೇಳಿಬಂದಿತ್ತು. ಲೆಕ್ಕಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆಯಲ್ಲಿ ಹೆಚ್ಚು ಕೆಲಸ ಇಲ್ಲದೇ ಇರುವುದರಿಂದ ಶಿವಮೊಗ್ಗದ ಬದಲು ಬೆಂಗಳೂರಿನಲ್ಲಿಯೇ ಸಮಯ ಕಳೆಯುತ್ತಿದ್ದರು ಎಂದು ಹೇಳಲಾಗಿತ್ತು.

    ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದ ಸರ್ಕಾರ, ಇದೀಗ ಶಿವಮೊಗ್ಗದಿಂದ ಕೋಲಾರಕ್ಕೆ ವರ್ಗಾಯಿಸಿದೆ.  ಹೆಚ್ಚಿನ ಕೆಲಸದ ಒತ್ತಡವಿರುವ ಸಮಾಜ ಕಲ್ಯಾಣ ಇಲಾಖೆಯ ಲೆಕ್ಕಾಧೀಕ್ಷಕರನ್ನಾಗಿ ನೇಮಿಸಿದೆ. ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಹಾಗು ಶಿಕ್ಷಣ ಸಚಿವ ಮಧು ಬಂಗಾರಪ್ಪನವರು ಕೂಡಾ ಷಡಕ್ಷರಿ ಶಿವಮೊಗ್ಗದಲ್ಲಿನ ಲೆಕ್ಕಪರಿಶೋಧಕರ ಕಚೇರಿಯಲ್ಲಿ ಅಲಭ್ಯವಾಗಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದರು ಎಂದು ತಿಳಿದುಬಂದಿದೆ.

     ರಾಯಲ್ಟಿ ಪಾವತಿಸದೆ ಶಿವಮೊಗ್ಗದ ಅಬ್ಬಲಗೆರೆ ಕೆರೆಯಿಂದ ಅಕ್ರಮವಾಗಿ ಮಣ್ಣು ಸಾಗಿಸಿ ಸರ್ಕಾರದ ಖಜಾನೆಗೆ 71,45,920 ರೂ. ನಷ್ಟ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಈ ಬಗ್ಗೆ ಶಿವಮೊಗ್ಗ ಜಿಲ್ಲಾ ಪಂಚಾಯಿತಿ ಕಾರ್ಯಪಾಲಕ ಇಂಜಿನಿಯರ್ ವರದಿ ನೀಡಿದ್ದರು. ಅದರಂತೆ ಶಿವಮೊಗ್ಗ ಜಿಲ್ಲಾಉಸ್ತುವಾರಿ ಸಚಿವ ಮಧು ಬಂಗಾರಪ್ಪ ಅವರು ಸಿ.ಎಸ್.ಷಡಕ್ಷರಿಯವರನ್ನು ಕುಡಲೇ ವರ್ಗಾವಣೆ ಮಾಡಬೇಕೆಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಪತ್ರ ಬರೆದಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap