ತುಮಕೂರು : ಮೂರು ಪಕ್ಷಗಳ ಸಮಬಲದ ಹೋರಾಟ

ತುಮಕೂರು:

     ಕಲ್ಪತರು ನಾಡು ಎಂದೇ ಖ್ಯಾತಿಯಾಗಿರುವ ತುಮಕೂರು ಜಿಲ್ಲೆಯಲ್ಲಿ ಪ್ರಮುಖ ಮೂರೂ ಪಕ್ಷಗಳ ನಡುವೆ ಸಮಬಲದ ಹೋರಾಟ ನಡೆದಿದೆ. ಕಾಂಗ್ರೆಸ್, ಜೆಡಿಎಸ್ ಮತ್ತು ಬಿಜೆಪಿ ಪಕ್ಷದ ಅಭ್ಯರ್ಥಿಗಳ ತೀವ್ರ ಸೆಣಸಾಟವನ್ನು ಗುರುತಿಸಬಹುದಾಗಿದೆ.

    ಜಿಲ್ಲೆಯ 11 ಕ್ಷೇತ್ರಗಳ ಪೈಕಿ 5 ಕ್ಷೇತ್ರಗಳಲ್ಲಿ ಬಿಜೆಪಿ ಶಾಸಕರಿದ್ದಾರೆ. ಈ ಕ್ಷೇತ್ರಗಳನ್ನು ಉಳಿಸಿಕೊಳ್ಳಲು ಆ ಪಕ್ಷದ ಮುಖಂಡರು ತಂತ್ರಗಾರಿಕೆ ಹೆಣೆದಿದ್ದಾರೆ. ತಲಾ ಮೂರು ಕ್ಷೇತ್ರಗಳಲ್ಲಿರುವ ಕಾಂಗ್ರೆಸ್ ಹಾಗೂ ಜೆಡಿಎಸ್ ಮತ್ತಷ್ಟು ಕ್ಷೇತ್ರಗಳನ್ನು ವಿಸ್ತರಿಸಿಕೊಳ್ಳಲು ಪ್ರಯತ್ನಿಸಿದೆ. ಯಾವ ಕ್ಷೇತ್ರ ಉಳಿದುಕೊಳ್ಳಲಿದೆ ಮತ್ತು ಯಾವ ಪಕ್ಷ ಯಾವ ಕ್ಷೇತ್ರವನ್ನು ಕಳೆದುಕೊಳ್ಳಲಿದೆ ಎಂಬ ಕುತೂಹಲ ಗರಿಗೆದರಿದೆ.

    ಹಳೆ ಮೈಸೂರು ಭಾಗದ ಜೆಡಿಎಸ್ ಭದ್ರಕೋಟೆಗಳಲ್ಲಿ ತುಮಕೂರು ಜಿಲ್ಲೆಯೂ ಒಂದು. ಕ್ರಮೇಣ ಈ ಭದ್ರಕೋಟೆ ಶಿಥಿಲವಾಗುತ್ತಿರುವುದನ್ನು ಮನಗಂಡು ಮತ್ತೆ ಭದ್ರಪಡಿಸಲು ಜೆಡಿಎಸ್ ವರಿಷ್ಠರು ಇನ್ನಿಲ್ಲದ ಸರ್ಕಸ್‌ನಲ್ಲಿ ನಿರತರಾಗಿದ್ದಾರೆ. ಕಳೆದುಕೊಂಡಿರುವ ಸ್ಥಾನಗಳನ್ನು ಮರು ಪಡೆಯಲು ಮತ್ತು ಇನ್ನಷ್ಟು ಕ್ಷೇತ್ರಗಳನ್ನು ವಿಸ್ತರಿಸಿಕೊಳ್ಳಲು ಕಾಂಗ್ರೆಸ್ ಪ್ರಯತ್ನಿಸುತ್ತಿದೆ. ಆಡಳಿತ ವಿರೋಧಿ ಅಲೆ, ಪಕ್ಷದೊಳಗಿನ ಬಂಡಾಯ ಬಿಜೆಪಿಗೆ ತಲೆನೋವು ತರಿಸಿದೆ. ಇರುವ ಕ್ಷೇತ್ರಗಳನ್ನು ಉಳಿಸಿಕೊಳ್ಳಲು ಬಿಜೆಪಿ ಸಾಹಸ ಪಡುತ್ತಿದೆ.

    ಇಡೀ ಜಿಲ್ಲೆಯನ್ನು ಭೌಗೋಳಿಕವಾಗಿ ನೋಡುವುದಾದರೆ ಇಲ್ಲಿ 2 ಭಾಗಗಳನ್ನಾಗಿ ವಿಂಗಡಿಸಬಹುದು. ತೆಂಗು ಬೆಳೆಯುವ ತಾಲ್ಲೂಕುಗಳು ಒಂದು ಕಡೆಯಾದರೆ ಶೇಂಗಾ ಬೆಳೆಯುವ ತಾಲ್ಲೂಕುಗಳು ಮತ್ತೊಂದು ಕಡೆ. ಕಲ್ಪತರು ಭಾಗದ ಎಲ್ಲ ಕ್ಷೇತ್ರಗಳಲ್ಲಿ ತ್ರಿಕೋನ ಸ್ಪರ್ಧೆ ಇದ್ದರೆ ಬರಗಾಲ ಪೀಡಿತ ಪ್ರದೇಶಗಳು ಎಂದೇ ಬಿಂಬಿತವಾಗಿರುವ ಶೇಂಗಾ ಬೆಳೆಯುವ ಪ್ರಾಂತ್ಯದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಅಸ್ಥಿತ್ವ ಇದ್ದು ಇಲ್ಲಿ ಬಿಜೆಪಿ ಶಕ್ತಿ ಅಷ್ಟಕ್ಕಷ್ಟೆ. ಹೀಗಾಗಿ ಈ ಭಾಗದ ಕೆಲವು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಮತ್ತು ಜೆ ಡಿಎಸ್ ನಡುವೆ ನೇರ ಸ್ಪರ್ಧೆ ಕಾಣಬಹುದು.

ತುಮಕೂರು ನಗರ ಕ್ಷೇತ್ರ :

     ತುಮಕೂರು ನಗರದ ಸ್ಥಿತಿಯನ್ನು ನೋಡುವುದಾದರೆ ಬಿಜೆಪಿಯ ಜಿ.ಬಿ.ಜ್ಯೋತಿಗಣೇಶ್, ಜೆಡಿಎಸ್‌ನ ಗೋವಿಂದರಾಜು ಹಾಗು ಪಕ್ಷೇತರ ಅಭ್ಯರ್ಥಿ ಎಸ್.ಶಿವಣ್ಣ, ಕಾಂಗ್ರೆಸ್‌ನ ಇಕ್ಬಾಲ್ ಅಹಮದ್ ಅವರುಗಳ ನಡುವೆ ಚತುಸ್ಕೋನ ಸ್ಪರ್ಧೆ ಏರ್ಪಟ್ಟಿದೆ. ಸ್ಮಾರ್ಟ್ಸಿಟಿ ಯೋಜನೆಯಡಿಯಲ್ಲಿ ನಗರ ಅಭಿವೃದ್ಧಿಪಡಿಸಿರುವುದು, ಸೌಮ್ಯ ಸ್ವಭಾವದ ಯುವಕ, ಬಿಜೆಪಿ ಪಕ್ಷ ಇವೆಲ್ಲವನ್ನು ಮುಂದಿಟ್ಟುಕೊAಡು ಬಿಜೆಪಿ ಪ್ರಚಾರದಲ್ಲಿದೆ. ಇವರ ಓಟಕ್ಕೆ ಪಕ್ಷೇತರ ಅಭ್ಯರ್ಥಿ ತೊಡರುಗಾಲು ಒಡ್ಡಿದ್ದಾರೆ.

    ಪರ ವಿರೋಧದ ಹೇಳಿಕೆಗಳು ಒಂದೆರಡು ದಿನ ಗೊಂದಲ ಉಂಟು ಮಾಡಿತಾದರೂ ಅದರ ಡ್ಯಾಮೇಜ್ ಕಂಟ್ರೋಲ್ ಗೆ ಎರಡು ದಿನಗಳಿಂದ ಪ್ರಯತ್ನಗಳು ಸಾಗಿವೆ. ಈ ನಡುವೆ ವಿವಿಧ ಸಮುದಾಯಗಳು ಚುನಾವಣೆಯ ಪಕ್ಷ ಬೆಂಬಲಿಸುವ ಹೇಳಿಕೆಗಳು ಹೆಚು ಸದ್ದು ಮಾಡುತ್ತಿದೆ. ಕೋವಿಡ್ ಸಮಯದಲ್ಲಿ ಜನಸೇವೆಗೆ ಮುಂದಾದ ಇಕ್ಬಾಲ್ ಅಹಮದ್ ಅವರಿಗೆ ಕಾಂಗ್ರೆಸ್ ಟಿಕೆಟ್ ನೀಡಿದ ನಂತರ ಮಾಜಿ ಶಾಸಕ ಷಫಿ ಅಹಮದ್ ಬಂಡಾಯವೆೆದ್ದು ಜೆಡಿಎಸ್ ಸೇರಿಕೊಂಡಿದ್ದಾರೆ. ಜೆಡಿಎಸ್‌ನ ಎನ್.ಗೋವಿಂದರಾಜು ಕಾಂಗ್ರೆಸ್ ಬಂಡಾಯದ ಲಾಭ ಪಡೆಯಲು ಮುಂದಾಗಿದ್ದಾರೆ.

     ಜೆಡಿಎಸ್ ನಲ್ಲಿದ್ದ ಹಲವರು ಆ ಪಕ್ಷ ಬಿಟ್ಟು ಹೋದರೂ ಧೃತಿಗೆಡದೆ ಮತದಾರನನ್ನು ಮುಟ್ಟುವ ತಂತ್ರಗಾರಿಕೆಯನ್ನು ಅವರು ಮುನ್ನಡೆಸಿಕೊಂಡು ಬಂದಿದ್ದಾರೆ. ಹಲವು ಬಾರಿ ಸೋತ ಅನುಕಂಪ, ಕಾಂಗ್ರೆಸ್ ಹಾಗೂ ಬಿಜೆಪಿಯೊಳಗಿನ ಬಂಡಾಯ ಇವೆಲ್ಲ ತನಗೆ ಅನುಕೂಲ ಆಗಬಹುದು ಎಂಬ ಲೆಕ್ಕಾಚಾರ ಅವರದ್ದು. ಕಾಂಗ್ರೆಸ್ ಅಭ್ಯರ್ಥಿ ಮಾತ್ರ ಯಾವುದಕ್ಕೂ ತಲೆಕೆಡಿಸಿಕೊಳ್ಳದೆ ತನ್ನ ಸಾಂಪ್ರದಾಯಿಕ ಮತಗಳನ್ನು ಭದ್ರಪಡಿಸಿಕೊಳ್ಳುವತ್ತ ನಿರತರಾಗಿದ್ದಾರೆ. ಪ್ರಚಾರದಲ್ಲಿ ಬಿಜೆಪಿ, ಸ್ವತಂತ್ರ ಅಭ್ಯರ್ಥಿ ಮತ್ತು ಜೆಡಿಎಸ್ ಹೆಚ್ಚು ಆರ್ಭಟಿಸಿದ್ದರೆ ಕಾಂಗ್ರೆಸ್ ಮೌನ ಕಾರ್ಯಾಚರಣೆಯಲ್ಲಿದೆ.

ತುಮಕೂರು ಗ್ರಾಮಾಂತರ :

    ತುಮಕೂರು ಗ್ರಾಮಾಂತರದಲ್ಲಿ ಬಿಜೆಪಿಯ ಬಿ. ಸುರೇಶ್ ಗೌಡ, ಜೆಡಿಎಸ್‌ನ ಡಿ.ಸಿ.ಗೌರಿಶಂಕರ್ ನಡುವೆ ನೇರ ಹಣಾಹಣಿ ಇದೆ. ಕೋವಿಡ್ ಸಮಯದಲ್ಲಿ ಜನಸೇವೆ ಮಾಡಿರುವ, ಅಲ್ಲಲ್ಲಿ ನಡೆದಿರುವ ಕೆಲಸ ಕಾರ್ಯಗಳನ್ನು ಮುಂದಿಟ್ಟುಕೊAಡು ಮತ್ತೊಮ್ಮೆ ಅಧಿಕಾರಕ್ಕೆ ಬರಲು ಗೌರಿಶಂಕರ್ ಪ್ರಯತ್ನದಲ್ಲಿದ್ದಾರೆ. ಇವರ ಓಟಕ್ಕೆ ಬಿ.ಸುರೇಶ್ ಗೌಡ ಬ್ರೇಕ್ ಹಾಕುತ್ತಲೇ ಬಂದಿದ್ದಾರೆ. ನಕಲಿ ಕಾರ್ಡ್ ಬಳಕೆ ಮಾಡಿ ಗೆದ್ದಿರುವ ವಿಚಾರ, ಅಲ್ಲಲ್ಲಿ ಗಲಾಟೆ ಗೊಂದಲಗಳು ಇತ್ಯಾದಿಗಳನ್ನು ಮುಂದಿಟ್ಟುಕೊಂಡು ಬಿಜೆಪಿ ತನ್ನ ಅಧಿಪತ್ಯ ಮರು ಸ್ಥಾಪಿಸಲು ತಂತ್ರ ರೂಪಿಸಿದೆ. ಕ್ಷೇತ್ರಕ್ಕೆ ಕಾಂಗ್ರೆಸ್ ಅಭ್ಯರ್ಥಿ ಜಿ.ಎಚ್.ಷಣ್ಮುಖಪ್ಪ ಹೊಸಬರು. ಆದರೆ ಬಿಜೆಪಿ ಮತ್ತು ಜೆಡಿಎಸ್ ಆರ್ಭಟಗಳಿಂದ, ಗಲಾಟೆ – ಗೊಂದಲಗಳಿಂದ ಜನ ಬೇಸತ್ತಿದ್ದು, ಕಾಂಗ್ರೆಸ್ ಪರ ಮತ ಚಲಾಯಿಸಲಿದ್ದಾರೆಂಬ ನಂಬಿಕೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕಣದಲ್ಲಿದ್ದಾರೆ.

    2008 ರಿಂದ ಅಸ್ಥಿತ್ವಕ್ಕೆ ಬಂದಿರುವ ಈ ಕ್ಷೇತ್ರದಲ್ಲಿ ಇದು ನಾಲ್ಕನೇಯ ಚುನಾವಣೆ. ಎರಡು ಬಾರಿ ಗೆದ್ದಿರುವ ಬಿ. ಸುರೇಶ್ ಗೌಡ ಈ ಬಾರಿ ಶತಾಯ ಗತಾಯ ಗೆಲ್ಲಲೇಬೇಕೆಂಬ ಸಾಹಸದಲ್ಲಿದ್ದಾರೆ. ಜೆಡಿಎಸ್ ನ ಡಿ.ಸಿ. ಗೌರಿಶಂಕರ್ ಕೂಡಾ ಮತದಾರರು ನನ್ನ ಕೈಬಿಡಲಾರರು ಎಂದು ಹೇಳುತ್ತಿದ್ದಾರೆ. ಇವರಿಬ್ಬರ ನಡುವಿನ ವ್ಯಕ್ತಿಗತ ಪ್ರತಿಷ್ಠೆಯ ಕಣವಾಗಿ ಮಾರ್ಪಟ್ಟಿರುವ ಈ ಕ್ಷೇತ್ರದ ಸಾರಥಿ ಯಾರಾಗಲಿದ್ದಾರೆ ಎಂಬುದು ಕೂಡಾ ಅಷ್ಟೇ ಗಮನ ಸೆಳೆದಿದೆ.

ಕುಣಿಗಲ್ ವಿಧಾನಸಭಾ ಕ್ಷೇತ್ರ

     ಕುಣಿಗಲ್‌ನಲ್ಲಿ ಇದುವರೆಗೆ ಸಹೋದರರ ಸವಾಲ್ ನಡೆಯುತ್ತಿತ್ತು. ಈಗ ಚಿಕ್ಕಪ್ಪ-ಮಗನ ನಡುವೆಯೇ ಸಮರ ಶುರುವಾಗಿದೆ. ಮಾಜಿ ಸಚಿವ ಡಿ.ನಾಗರಾಜಯ್ಯ ಹಿಡಿತದಲ್ಲಿದ್ದ ಈ ಕ್ಷೇತ್ರ ಕಳೆದ ಬಾರಿ ಡಿ.ಕೆ.ಬ್ರರ‍್ಸ್ ಕೈವಶವಾಗಿದೆ. ಮತ್ತೊಮ್ಮೆ ಅಧಿಕಾರಕ್ಕೇರಲು ಡಾ.ರಂಗನಾಥ್ ಕಾಂಗ್ರೆಸ್‌ನಿಂದ ಸ್ಪರ್ಧೆಯಲ್ಲಿದ್ದರೆ, ಇವರಿಗೆ ಬಂಡಾಯ ಅಭ್ಯರ್ಥಿಯಾಗಿ ಬಿ.ಬಿ.ರಾಮಸ್ವಾಮಿಗೌಡ ಕಣದಲ್ಲಿದ್ದಾರೆ. 

    ಜೆಡಿಎಸ್‌ನಿಂದ ಡಾ.ರವಿ.ನಾಗರಾಜಯ್ಯ ಜೆಡಿಎಸ್ ಟಿಕೆಟ್ ಪಡೆದು ಅಖಾಡದಲ್ಲಿದ್ದಾರೆ. ಸತತವಾಗಿ ಸೋಲು ಅನುಭವಿಸುತ್ತಿರುವ ಬಿಜೆಪಿಯ ಡಿ.ಕೃಷ್ಣಕುಮಾರ್ ಅನುಕಂಪದ ಅಲೆ ಸೃಷ್ಟಿಸಿದ್ದಾರೆ. ಪಕ್ಷದೊಳಗಿನ ಬಂಡಾಯ ಇಲ್ಲಿಯೂ ಮನೆ ಮಾಡಿದ್ದು, ಕ್ಷೇತ್ರದ ಮತದಾರ ಯಾರನ್ನು, ಯಾವುದನ್ನು ಆಯ್ಕೆ ಮಾಡಿಕೊಳ್ಳಲಿದ್ದಾನೆ ಎಂಬುದು ಕುತೂಹಲ ಕೆರಳಿಸಿದೆ.

    ಈ ಕ್ಷೇತ್ರದ ವಿಶೇಷತೆ ಎಂದರೆ ತುಮಕೂರು ಜಿಲ್ಲೆಯಲ್ಲಿ ಆಯೋಜನೆಗೊಂಡ ಎಲ್ಲ ಪಕ್ಷಗಳ ಕಾರ್ಯಕ್ರಮಗಳೂ ಕೂಡಾ ಕುಣಿಗಲ್ ನಿಂದಲೇ ಆರಂಭವಾಗಿರುವುದು. ಅಲ್ಲಿಂದ ತುಮಕೂರು ಕಡೆಗೆ ಪಾದಾರ್ಪಣೆ ಮಾಡಿರುವುದು. ಮುಖ್ಯಮಂತ್ರಿ, ಮಾಜಿ ಮುಖ್ಯಮಂತ್ರಿ, ಕೆಪಿಸಿ ಅಧ್ಯಕ್ಷರು, ಕೇಂದ್ರದ ಮಂತ್ರಿಗಳೆಲ್ಲ ಈ ಭಾಗಕ್ಕೆ ಬಂದು ಹೋಗಿದ್ದಾರೆ.

ತುರುವೇಕೆರೆ ಕ್ಷೇತ್ರ

    ತುರುವೇಕೆರೆ ಕ್ಷೇತ್ರದಲ್ಲಿ ಜೆಡಿಎಸ್‌ನ ಎಂ.ಟಿ.ಕೃಷ್ಣಪ್ಪ, ಮಸಾಲ ಜಯರಾಂ ಮತ್ತು ಕಾಂಗ್ರೆಸ್‌ನ ಬೆಮೆಲ್ ಕಾಂತರಾಜು ಅವರುಗಳ ನಡುವೆ ಪೈಪೋಟಿ ಇದೆ. ಆಡಳಿತ ವಿರೋಧಿ ಅಲೆಯ ಜೊತೆಗೆ ತನಗಿದು ಕೊನೆಯ ಚುನಾವಣೆ ಎಂಬ ಅಸ್ತçವನ್ನು ಎಂ.ಟಿ.ಕೃಷ್ಣಪ್ಪ ಬಳಸುತ್ತಿದ್ದಾರೆ. ಕಳೆಗುಂದಿದ್ದ ಕಾಂಗ್ರೆಸ್‌ಗೆ ಜೀವ ತುಂಬಿರುವ ಬೆಮೆಲ್ ಕಾಂತರಾಜು ಅವರಿಂದಾಗಿ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ. ಬಿಜೆಪಿ ಹಾಗು ಜೆಡಿಎಸ್ ಪಕ್ಷದೊಳಗಿನ ಅಸಮಧಾನಿತರ ಮತ ಹಾಗೂ ಸಾಂಪ್ರದಾಯಿಕ ಮತಗಳನ್ನು ಕಾಂಗ್ರೆಸ್ ಅಭ್ಯರ್ಥಿ ನಿರೀಕ್ಷಿಸಿದ್ದಾರೆ. ಇಲ್ಲಿಯೂ ಸಹ ಪಕ್ಷದಿಂದ ಪಕ್ಷಕ್ಕೆ ಹಾರುವವರ ಸಂಖ್ಯೆ ಹೆಚ್ಚಳಗೊಂಡದ್ದು ಮತ್ತೊಂದು ವಿಶೇಷ. ತ್ರಿಕೋನ ಸ್ಪರ್ಧೆ ಇರುವ ಈ ಕ್ಷೇತ್ರದಲ್ಲಿ ಮತದಾರನ ಗುಟ್ಟೇನು ಎಂಬುದು ನಾಳೆ ತೀರ್ಮಾನವಾಗಲಿದೆ.

    ತಿಪಟೂರು

     ಕ್ಷೇತ್ರದಲ್ಲಿ ಹಾಲಿ ಸಚಿವ ಬಿ.ಸಿ.ನಾಗೇಶ್, ಮಾಜಿ ಶಾಸಕ ಕೆ.ಷಡಕ್ಷರಿ ನಡುವೆ ಸ್ಪರ್ಧೆ ಚುರುಕು ಪಡೆದಿದೆ. ಜೆಡಿಎಸ್‌ನಿಂದ ಕೆ.ಟಿ.ಶಾಂತಕುಮಾರ್ ಸ್ಪರ್ಧೆಯನ್ನು ಕಡೆಗಣಿಸುವಂತಿಲ್ಲ. ಬಿ.ಸಿ. ನಾಗೇಶ್ ಅವರು ಶಾಸಕರಾಗಿ ಸಚಿವರೂ ಆಗಿದ್ದಾರೆ. ಆಡಳಿತ ವಿರೋಧಿ ಅಲೆಯ ಲಾಭ ಪಡೆಯಲು ಷಡಕ್ಷರಿ ಯತ್ನಿಸುತ್ತಿದ್ದಾರೆ. ವಯಕ್ತಿಕ ವರ್ಚಸ್ಸು, ಸಂಘ ಪರಿವಾರದ ಹಿನ್ನೆಲೆ ಇವೆಲ್ಲ ಈ ಹಿಂದೆ ಬಿ.ಸಿ. ನಾಗೇಶ್ ಇವರ ಗೆಲುವಿಗೆ ಸಹಕಾರಿಯಾಗಿದ್ದವು .

    ಸಚಿವರಾದ ನಂತರ ಕೆಲವು ವಿವಾದಾತ್ಮಕ ಸಂಗತಿಗಳ ಬಗ್ಗೆ ಕೈಹಾಕಿದ ಪರಿಣಾಮ ರಾಜ್ಯಮಟ್ಟದಲ್ಲಿ ಸುದ್ದಿಗೆ ಗ್ರಾಸವಾದರು. ಇವರ ಹಿಂದೆ ಇದ್ದ ಹಲವರು ಕಾಂಗ್ರೆಸ್ ನತ್ತ ವಾಲಿದ್ದಾರೆ. ಕಾಂಗ್ರೆಸ್ ಟಿಕೆಟ್ ಬಯಸಿದ್ದ ಕೆ.ಟಿ. ಶಾಂತಕುಮಾರ್ ಜೆಡಿಎಸ್‌ಗೆ ಜಿಗಿದು ಕಣದಲ್ಲಿದ್ದಾರೆ. ಹಾಲಿ ಸರ್ಕಾರದಲ್ಲಿ ಬಿ.ಸಿ. ನಾಗೇಶ್ ಸಚಿವರಾದ್ದರಿಂದ ಈ ಕ್ಷೇತ್ರ ಕುತೂಹಲ ಮೂಡಿಸಿದೆ.

ಚಿಕ್ಕನಾಯಕನಹಳ್ಳಿ

     ಕ್ಷೇತ್ರವು ಸಹ ರಾಜ್ಯದ ಗಮನ ಸೆಳೆದಿದೆ. ಕಾನೂನು ಸಚಿವರ ಕ್ಷೇತ್ರವಾಗಿರುವುದರಿಂದ ಹೈ ಓಲ್ಟೇಜ್ ಕ್ಷೇತ್ರವಾಗಿ ಪರಿಣಮಿಸಿದೆ. ಇಲ್ಲಿ ಕೆ.ಎಸ್.ಕಿರಣ್ ಕುಮಾರ್ ಬಿಜೆಪಿಯಿಂದ ಸ್ಪರ್ಧೆ ಅಸಾಧ್ಯ ಎಂದು ತಿಳಿಯುತ್ತಿದ್ದಂತೆ ಕಾಂಗ್ರೇಸ್ ಸೇರಿದರು. ಆ ಪಕ್ಷದಿಂದ ಟಿಕೆಟ್ ಪಡೆದು ಜೆಸಿಎಂ ನಿದ್ದೆಗೆಡಿಸಿದ್ದಾರೆ. ಕೆ.ಎಸ್.ಕೆ. ಮಾಜಿ ಶಾಸಕರು, ಜೆಸಿಎಂ ಹಾಲಿ ಸಚಿವರು ಇಬ್ಬರು ಒಂದೆ ಸಮುದಾಯಕ್ಕೆ ಸೇರಿದವರು. ಜೆಸಿಎಂ ಅವರ ವ್ಯಕ್ತಿಗತ ನಡೆ ಅವರ ವೈಖರಿ, ಆಡಳಿತ ವಿರೋಧಿ ಅಲೆಯನ್ನು ಲಾÀಭವಾಗಿಸಿಕೊಳ್ಳುವ ಪ್ರಯತ್ನದಲ್ಲಿ ಕಾಂಗ್ರೆಸ್ ಪ್ರಯತ್ನದಲ್ಲಿದ್ದರೆ, ಪಕ್ಷ ಹಾಗೂ ತನ್ನ ಅವಧಿಯಲ್ಲಾದ ಅಭಿವೃದ್ಧಿ ಕಾರ್ಯಗಳನ್ನು ಮುಂದಿಟ್ಟುಕೊAಡು ಜೆಸಿಎಂ ಪ್ರಚಾರದಲ್ಲಿದ್ದಾರೆ.

    ಜೆಡಿಎಸ್ ನಿಂದ ಸಿ.ಬಿ.ಸುರೇಶ್‌ಬಾಬು ಇವರಿಬ್ಬರಿಗೂ ಠಕ್ಕರ್ ಕೊಡುತ್ತಿದ್ದಾರೆ. ಜೆಡಿಎಸ್ ಮತಗಳ ಜೊತೆಗೆ ಅಹಿಂದ ಮತ್ತು ಪರಿಶಿಷ್ಟ ಮತಗಳನ್ನು ಕ್ರೋಢೀಕರಿಸಲು ಸುರೇಶ್ ಬಾಬು ಪ್ರಯತ್ನಿಸಿದ್ದು, ಇದೇ ಮತ ಬುಟ್ಟಿಗೆ ಕಿರಣ್ ಕುಮಾರ್ ಸಹ ಕೈ ಹಾಕಿದ್ದಾರತೆ. ಹೀಗಾಗಿ ಕ್ಷೇತ್ರದಲ್ಲಿ ತ್ರಿಕೋನ ಸ್ಪರ್ಧೆಯ ಪ್ರಬಲ ಪೈಪೋಟಿ ಎದುರಾಗಿದ್ದು ಯಾರನ್ನೂ ಸು¯ಭವಾಗಿ ಅಲ್ಲಗಳೆಯುವಂತಿಲ್ಲ.

ಗುಬ್ಬಿ ವಿಧಾನಸಭಾ ಕ್ಷೇತ್ರ

    ದಿನಕ್ಕೊಂದು ತಿರುವು ¥ಡೆಯುತ್ತಲೇ ಬಂದಿತು. ಜೆಡಿಎಸ್‌ನಲ್ಲಿದ್ದ ಎಸ್.ಆರ್.ಶ್ರೀನಿವಾಸ್ ಕಾಂಗ್ರೇಸ್ ಅಭ್ಯರ್ಥಿಯಾಗುತ್ತಿದ್ದಂತೆ ಕೆಲವರು ಅಸಮಧಾನ ಹೊರ ಹಾಕಿದ್ದರು, ಪಕ್ಷ ಬಿಟ್ಟು ಹೋದರು. ಇದಾವುದು ಲೆಕ್ಕಕ್ಕಿಲ್ಲ ಎನ್ನುವಂತೆ ಎಂದಿನ ಹುರುಪಿನಲ್ಲಿ ವಾಸು ಪ್ರಚಾರದಲ್ಲಿದ್ದಾರೆ. ಕಳೆದ ಬಾರಿ ಬಿಜೆಪಿಯಿಂದ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧೆಗೆ ಇಳಿದಿದ್ದ ಎಸ್.ಡಿ.ದಿಲೀಪ್ ಕುಮಾರ್ ಈಗ ಬಿಜೆಪಿ ಅಭ್ಯರ್ಥಿ. ಕೊನೆ ಗಳಿಗೆಯಲ್ಲಿ ಬಿಜೆಪಿ ಅಭ್ಯರ್ಥಿಯ ಆಯ್ಕೆ ಪ್ರಕಟಿಸಲಾಯಿತು. ಸಹಜವಾಗಿಯೆ ಆಕಾಂಕ್ಷಿಗಳಲ್ಲಿ ಕೆಲವರು ಮುನಿಸಿಕೊಂಡು ಪಕ್ಷ ತೊರೆದಿದ್ದಾರೆ.

    ಜೆಡಿಎಸ್‌ನಿಂದ ನಾಗರಾಜು ಅವರನ್ನು ದಳಪತಿಗಳು ಕಣಕ್ಕಿಳಿಸಿದ್ದಾರೆ. ಬಿಜೆಪಿಯಿಂದ ಅಸಮಧಾನಗೊಂಡವರು ಜೆಡಿಎಸ್‌ಗೆ ಬಂದಿದ್ದಾರೆ. ಜೆಡಿಎಸ್‌ನಲ್ಲಿದವರು ಕಾಂಗ್ರೇಸ್‌ಗೆ ಹೋಗಿದ್ದಾರೆ. ಹೀಗೆ ಪಕ್ಷದಿಂದ ಪಕ್ಷಕ್ಕೆ ಜಿಗಿಯುವವರ ಸಂಖ್ಯೆ ಈ ಕ್ಷೇತ್ರದಲ್ಲಿ ಹೆಚ್ಚಾಗಿದೆ. ಪ್ರಬಲ ಸಮುದಾಯದ ಅಭ್ಯಥಿಗಳ ನಡುವಿನ ಸಮರದಲ್ಲಿ ಅಹಿಂದ ಮತ್ತು ಪರಿಶಿಷ್ಟರ ಮತಗಳನ್ನು ಯಾರು ಹೆಚ್ಚು ಪಡೆಯುವರೋ ಅವರ ಹಾದಿ ಸುಗಮವಾಗಲಿದೆ ಎಂದು ಹೇಳಲಾಗುತ್ತಿದೆ. ಎಲ್ಲಾ ಅಸಮಧಾನಗಳನ್ನು ನಿವಾರಿಸಿಕೊಂಡು ಇಲ್ಲಿ ಯಾರು ಅಧಿಕಾರ ಹಿಡಿಯುತ್ತಾರೆ ಎಂಬುದು ಕುತೂಹಲ ಮೂಡಿಸಿದೆ. ಕ್ಷೇತ್ರದಲ್ಲಿ ಮೂರು ಪಕ್ಷಗಳ ನಡುವೆ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ.

ಶಿರಾ ವಿಧಾನಸಭಾ ಕ್ಷೇತ್ರ

       ಕಾಂಗ್ರೆಸ್ ಅಭ್ಯರ್ಥಿ ಟಿ.ಬಿ.ಜಯಚಂದ್ರ ಇದು ನನ್ನ ಕೊನೆಯ ಚುನಾವಣೆ ಎನ್ನುತ್ತಾ ತನ್ನ ಅವಧಿಯಲ್ಲಿ ಆಗಿರುವ ಅಭಿವೃದ್ಧಿ ಕಾರ್ಯಗಳನ್ನು ಮುಂದಿಟ್ಟುಕೊAಡು ಚುನಾವಣಾ ಪ್ರಚಾರ ನಡೆಸಿದ್ದಾರೆ. ಹಾಲಿ ಶಾಸಕ ರಾಜೇಶ್ ಗೌಡ ಅವರ ಪರ ಇದ್ದ ಅನೇಕ ಮುಖಂಡರು ಈಗ ಜೆಡಿಎಸ್ ಮತ್ತು ಕಾಂಗ್ರೆಸ್‌ನಲ್ಲಿ ಹಂಚಿ ಹೋಗಿದ್ದಾರೆ. ಜೆಡಿಎಸ್‌ನಿಂದ ಉಗ್ರೇಶ್ ಅವರಿಗೆ ಟಿಕೆಟ್ ನೀಡಿದ ನಂತರ ಅಲ್ಲಿಯೂ ಕೆಲವರು ಪಕ್ಷ ಬಿಟ್ಟಿದ್ದಾರೆ. ಕುಂಚಿಟಿಗ ಒಕ್ಕಲಿಗರ ಪ್ರಾಬಲ್ಯ ಇರುವ ಈ ಕ್ಷೇತ್ರದಲ್ಲಿ ಆಡಳಿತ ವಿರೋಧಿ ಅಲೆಯ ಲಾಭ ಪಡೆಯಲು ಜಯಚಂದ್ರ ಕಸರತ್ತು ನಡೆಸಿದ್ದಾರೆ. ತ್ರಿಕೋನ ಸ್ಪರ್ಧೆ ಇರುವ ಈ ಕ್ಷೇತ್ರದಲ್ಲಿ ಶಿರಾ ಕೋಟೆಯ ಅಧಿಪತಿ ಯಾರಾಗಲಿದ್ದಾರೆ ಎಂಬುದು ಕುತೂಹಲ ಮೂಡಿಸಿದೆ.

ಪಾವಗಡ ಕ್ಷೇತ್ರ

     ಮೇಲ್ನೋಟಕ್ಕೆ ಮೂವರು ಅಭ್ಯರ್ಥಿಗಳ ನಡುವೆ ಸ್ಪರ್ಧೆ ಕಂಡು ಬಂದರೂ ಇಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆಯೇ ನೇರ ಹಣಾಹಣಿ ಇದೆ. ಮಾಜಿ ಸಚಿವರು, ಹಾಲಿ ಶಾಸಕ ವೆಂಕಟರವಣಪ್ಪ ಪುತ್ರ ಎಚ್.ವಿ. ವೆಂಕಟೇಶ್‌ಗೆ ಮಾಜಿ ಶಾಸಕ ಜೆಡಿಎಸ್‌ನ ಕೆ.ಎಂ.ತಿಮ್ಮರಾಯಪ್ಪ ಪ್ರಬಲ ಪೈಪೋಟಿ ನೀಡಿದ್ದಾರೆ. ಆಂಧ್ರಶೈಲಿಯ ರಾಜಕಾರಣ ಇಲ್ಲಿ ಕಂಡು ಬರುತ್ತಿದ್ದು, ತಮ್ಮದೆ ಆದ ವರಸೆಗಳನ್ನು ಅಭ್ಯರ್ಥಿಗಳು ಮುಂದಿಟ್ಟುಕೊAಡು ಪ್ರಚಾರ ನಿರತರಾಗಿದ್ದಾರೆ. ಇಲ್ಲಿ ಬಿಜೆಪಿ ಅಷ್ಟು ಪ್ರಬಲವಾಗಿಲ್ಲ. ಪಕ್ಷವು ಕೃಷ್ಣ ನಾಯಕ್ ಅವರನ್ನು ಕಣಕ್ಕಿಳಿಸಿದೆ. ಅವರು ಸಹ ಕೆಲವೊಂದು ಮತಗಳನ್ನು ಸೆಳೆಯಲು ಮುಂದಾಗಿರುವುದು ಕಂಡು ಬಂದಿದೆ.

ಮಧುಗಿರಿ ಕ್ಷೇತ್ರ

     ಒಂದು ವಿಶೇಷ ಕ್ಷೇತ್ರವಾಗಿ ಪರಿಣಮಿಸಿದೆ. ಸಿದ್ದರಾಮಯ್ಯ ಅವರ ಆಪ್ತರು, ಡಿಸಿಸಿ ಬ್ಯಾಂಕ್ ಅಧ್ಯಕ್ಷರೂ ಆಗಿರುವ ಕೆ.ಎನ್. ರಾಜಣ್ಣ ಅವರ ಸ್ಪರ್ಧೆಯಿಂದಾಗಿ ರಾಜ್ಯದ ಗಮನ ಸೆಳೆದಿದೆ. ಹಾಲಿ ಶಾಸಕ ಜೆಡಿಎಸ್‌ನ ವೀರಭದ್ರಯ್ಯ ಅವರಿಗೆ ಕೆ.ಎನ್ ರಾಜಣ್ಣ ತೀವ್ರ ಪೈಪೋಟಿ ನೀಡಿದ್ದಾರೆ. ತನ್ನ ಅವಧಿಯಲ್ಲಿ ಆಗಿರುವ ಅಭಿವೃದ್ಧಿ ಕಾರ್ಯಗಳು ಹಾಗೂ ಮುಂದೆ ಆಗಬೇಕಿರುವ ಕಾರ್ಯ ಯೋಜನೆಗಳನ್ನು ಮುಂದಿಟ್ಟುಕೊAಡು ಕೆಎನ್‌ಆರ್ ಪ್ರಚಾರ ನಿರತರಾಗಿದ್ದಾರೆ. ಜೆಡಿಎಸ್ ಸಹ ತಮ್ಮದೆ ಆದ ಓಟ್ ಬ್ಯಾಂಕ್‌ನೊAದಿಗೆ ಇತರೆಯವರ ಮತಬುಟ್ಟಿಗೆ ಕೈ ಹಾಕುವ ಹವಣಿಕೆಯಲ್ಲಿದೆ. ಬಿಜೆಪಿಯಿಂದ ನಿವೃತ್ತ ಕೆ.ಎ.ಎಸ್ ಅಧಿಕಾರಿ ಎಲ್.ಸಿ. ನಾಗರಾಜು ಸ್ಪರ್ಧೆಯಲ್ಲಿದ್ದಾರೆ.

ಕೊರಟಗೆರೆ ಕ್ಷೇತ್ರ

      ಹೈ ಓಲ್ಟೇಜ್ ಕ್ಷೇತ್ರವಾಗಿ ಪರಿಣಮಿಸಿದೆ. ಮಾಜಿ ಉಪಮುಖ್ಯಮಂತ್ರಿಗಳ ಕ್ಷೇತ್ರವಾಗಿರುವುದರಿಂದ ಸಹಜವಾಗಿಯೆ ಇಲ್ಲಿ ಕುತೂಹಲ ಮೂಡಿಸಿದೆ. ಕಾಂಗ್ರೆಸ್‌ನ ಡಾ.ಜಿ.ಪರಮೇಶ್ವರ್ ಮತ್ತು ಜೆಡಿಎಸ್‌ನ ಸುಧಾಕರ್ ಲಾಲ್ ನಡುವೆ ನೇರಾ ನೇರ ಸ್ಪರ್ಧೆ ಏರ್ಪಡುತ್ತಾ ಬಂದಿರುವ ಈ ಕ್ಷೇತ್ರದಲ್ಲಿ ಈ ಬಾರಿ ನಿವೃತ್ತ ಐಎಎಸ್ ಅಧಿಕಾರಿ ಅನಿಲ್ ಕುಮಾರ್ ಸ್ಪರ್ಧೆಯಿಂದಾಗಿ ಕಣ ಮತ್ತಷ್ಟು ರಂಗೇರಿದೆ. ಇಲ್ಲಿ ಪ್ರಬಲ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ.

ಜಿಲ್ಲೆಯಲ್ಲಿ ಇಬ್ಬರು ಸಚಿವರಿದ್ದಾರೆ. ಕಾಂಗ್ರೆಸ್‌ನಲ್ಲಿ ಹಳೆಯ ಹುಲಿಗಳು ಕಣಕ್ಕಿಳಿದಿದ್ದಾರೆ. ಜೆಡಿಎಸ್ ಪಕ್ಷದಲ್ಲಿಯೂ ಹಳಬರು ಮತ್ತು ಹೊಸ ಮುಖಗಳು ಅಖಾಡದಲ್ಲಿದ್ದಾರೆ. ಪ್ರಮುಖ ಮೂರೂ ಪಕ್ಷಗಳಲ್ಲಿಯು ಘಟಾನುಘಟಿಗಳು ಇರುವುದರಿಂದ ರಾಜಕೀಯ ಚಿತ್ರಣ ಕುತೂಹಲ ಮೂಡಿಸಿದೆ. ಇಂದು ಚುನಾವಣೆ ನಡೆಯುತ್ತಿದ್ದು, ಮತದಾರರ ತೀರ್ಮಾನ ಇಂದು ಮತಪೆಟ್ಟಿಗೆಯಲ್ಲಿ ಭದ್ರವಾಗಲಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap