ಬೆಂಗಳೂರು
ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಸುರಕ್ಷಿತ ಕ್ಷೇತ್ರ ಬಯಸುವ ನಾಯಕರ ಸಂಖ್ಯೆ ಮೂರೂ ಪಕ್ಷಗಳಲ್ಲಿ ಕಾಣಿಸಿಕೊಂಡಿದ್ದು ಇದೀಗ ಜೆಡಿಎಸ್ ನಾಯಕ ಹೆಚ್.ಡಿ.ರೇವಣ್ಣ ಮತ್ತು ಬಿಜೆಪಿಯ ವಿಜಯೇಂದ್ರ ಈ ಸಾಲಿಗೆ ಸೇರಿದ್ದಾರೆ.
ಈ ರೀತಿ ಸುರಕ್ಷಿತ ಕ್ಷೇತ್ರ ಬಯಸುವ ನಾಯಕರ ಸಂಖ್ಯೆ ಮೂರೂ ರಾಜಕೀಯ ಪಕ್ಷಗಳಲ್ಲಿ ಕಾಣಿಸಿಕೊಂಡಿರುವುದು ಈ ಬಾರಿಯ ಚುನಾವಣೆ ಎಷ್ಟು ಜಿದ್ದಾಜಿದ್ದಿಯಾಗಿರಲಿದೆ ಎಂಬುದಕ್ಕೆ ಸಾಕ್ಷಿಯಾಗುವಂತಿದೆ. ಅಂದ ಹಾಗೆ ಮೈಸೂರಿನ ವರುಣಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿರುವ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಗೆ,ವರುಣ ಕ್ಷೇತ್ರದ ಜತೆ,ಜತೆಗೆ ಕೋಲಾರ ವಿಧಾನಸಭಾ ಕ್ಷೇತ್ರದ ಮೇಲೂ ಕಣ್ಣು ಬಿದ್ದಿದೆ.
ವರುಣ ಕ್ಷೇತ್ರದಿಂದ ಸ್ಪರ್ಧಿಸಿದರೆ ಗೆಲುವು ಸುಲಭ ಅಂತ ಸಿದ್ಧರಾಮಯ್ಯ ಅವರಿಗೆ ಪಕ್ಷದ ಆಂತರಿಕ ವರದಿಗಳು ಹೇಳಿದ್ದರೂ,ವರುಣ ಕ್ಷೇತ್ರದ ಜತೆ ಕೋಲಾರದಿಂದಲೂ ಸ್ಪರ್ಧಿಸುವ ಇಚ್ಚೆ ಸಿದ್ಧರಾಮಯ್ಯ ಅವರಲ್ಲಿ ಪ್ರಬಲವಾಗಿದೆ. ಆದರೆ ಒಂದು ಸಲ ಈ ಕ್ಷೇತ್ರದಿಂದ ಸ್ಪರ್ಧಿಸುವುದಿಲ್ಲ ಎಂದು ಸಿದ್ಧರಾಮಯ್ಯ ಅವರು ಹೇಳಿದ ನಂತರ,ಅಲ್ಲಿಂದ ಬೇರೊಬ್ಬ ಅಭ್ಯರ್ಥಿಯನ್ನು ಕಣಕ್ಕಿಳಿಸಲು ತಯಾರಿ ನಡೆಸಲಾಗಿದೆ.ಮತ್ತು ಈ ತಯಾರಿ ದೊಡ್ಡ ಮಟ್ಟದಲ್ಲಿ ಆರಂಭವಾಗಿದೆ.
ಆದರೆ ಈಗ ಇದ್ದಕ್ಕಿದ್ದಂತೆ ಪ್ರತಿಪಕ್ಷ ನಾಯಕ ಸಿದ್ಧರಾಮಯ್ಯ ಅವರು,ವರುಣ ಕ್ಷೇತ್ರದ ಜತೆ ಕೋಲಾರ ಕ್ಷೇತ್ರವನ್ನು ಬಯಸುತ್ತಿರುವುದು ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್ ಅವರಿಗೆ ಪಥ್ಯವಾಗುತ್ತಿಲ್ಲ ಎಂದು ಹೇಳಲಾಗಿದೆ.
ಈ ಮಧ್ಯೆ ಬಗೆ ಹರಿಯದ ಕಗ್ಗಂಟಾಗಿ ಉಳಿದಿರುವ ಹಾಸನ ವಿಧಾನಸಭಾ ಕ್ಷೇತ್ರದಿಂದ ತಾವೇ ಕಣಕ್ಕಿಳಿಯಲು ಜೆಡಿಎಸ್ ನಾಯಕ,ದೇವೇಗೌಡರ ಪುತ್ರ ಹೆಚ್.ಡಿ.ರೇವಣ್ಣ ಸಜ್ಜಾಗಿದ್ದಾರೆ. ತಮ್ಮ ಪತ್ನಿ ಶ್ರೀಮತಿ ಭವಾನಿ ರೇವಣ್ಣ ಅವರಿಗೆ ಟಿಕೆಟ್ ಕೊಡಲು ಸಹೋದರ ಹೆಚ್.ಡಿ.ಕುಮಾರಸ್ವಾಮಿ ಆಸಕ್ತಿ ತೋರದಿರುವುದು ರೇವಣ್ಣ ಅವರಿಗೆ ಸಿಟ್ಟು ತರಿಸಿದೆ. ಹಾಸನದಿಂದ ಮಾಜಿ ಶಾಸಕ,ದಿವಂಗತ ಪ್ರಕಾಶ್ ಅವರ ಪುತ್ರ ಸ್ವರೂಪ್ ಅವರಿಗೆ ಟಿಕೆಟ್ ನೀಡುವುದು ಹೆಚ್.ಡಿ.ಕುಮಾರಸ್ವಾಮಿ ಅವರ ಇಚ್ಚೆ.
ಕುಟುಂಬದ ಸದಸ್ಯರಿಗೆ ಟಿಕೆಟ್ ನೀಡಿ,ಕಾರ್ಯಕರ್ತರನ್ನು ನಿರ್ಲಕ್ಷಿಸಿದರೆ ಜೆಡಿಎಸ್ ಬಗ್ಗೆ ವ್ಯತಿರಿಕ್ತ ಸಂದೇಶ ಹೋಗುತ್ತದೆ.ಈಗಾಗಲೇ ಕುಟುಂಬ ರಾಜಕಾರಣದ ಕಳಂಕ ಪಕ್ಷವನ್ನು ಆವರಿಸಿಕೊಂಡಿದ್ದು ,ಇಂತಹ ಸಂದರ್ಭದಲ್ಲಿ ಶ್ರೀಮತಿ ಭವಾನಿ ರೇವಣ್ಣ ಅವರಿಗೆ ಟಿಕೆಟ್ ನೀಡುವುದು ಸರಿಯಲ್ಲ ಎಂಬುದು ಕುಮಾರಸ್ವಾಮಿ ಅವರ ಆತಂಕ.
ಆದರೆ ಹಾಸನದ ಶಾಸಕ,ಬಿಜೆಪಿಯ ಪ್ರೀತಮ್ ಗೌಡ ಅವರು,ರೇವಣ್ಣ ಅವರಿಗೆ ನಿರಂತರವಾಗಿ ಸವಾಲು ಒಡ್ಡುತ್ತಾ ಬರುತ್ತಿದ್ದು ಈ ಸವಾಲನ್ನು ತಮ್ಮ ಕುಟುಂಬದ ಒಬ್ಬರು ಸ್ವೀಕರಿಸಲೇಬೇಕು ಎಂಬುದು ಹೆಚ್.ಡಿ.ರೇವಣ್ಣ ಅವರ ಪಟ್ಟು. ಆದರೆ ಈ ವಿಷಯದಲ್ಲಿ ಉಭಯ ನಾಯಕರು ತಮ್ಮ ತಮ್ಮ ವಾದಕ್ಕೆ ಅಂಟಿಕೊAಡಿದ್ದು,ಈ ಹಿನ್ನೆಲೆಯಲ್ಲಿ ತಮ್ಮ ಪತ್ನಿಗೆ ಟಿಕೆಟ್ ನೀಡದಿದ್ದರೆ ತಮಗೇ ಹಾಸನದ ಟಿಕೆಟ್ ನೀಡಬೇಕು.ಮತ್ತು ಏಕಕಾಲಕ್ಕೆ ನಾನು ಹೊಳೆನರಸೀಪುರ ಮತ್ತು ಹಾಸನ ವಿಧಾನಸಭಾ ಕ್ಷೇತ್ರಗಳಿಂದ ಸ್ಪರ್ಧಿಸುತ್ತೇನೆ ಎಂದು ರೇವಣ್ಣ ಬಿಗಿ ಪಟ್ಟು ಹಾಕಿದ್ದಾರೆ.
ಇನ್ನು ವರುಣಾ ಕ್ಷೇತ್ರದಿಂದ ಸ್ಪರ್ಧಿಸುತ್ತಿರುವ ಪ್ರತಿಪಕ್ಷ ನಾಯಕ,ಕಾಂಗ್ರೆಸ್‌ನ ಸಿದ್ಧರಾಮಯ್ಯ ಅವರ ಎದುರು ಬಿಜೆಪಿಯಿಂದ ಸಮರ್ಥ ಅಭ್ಯರ್ಥಿಯ ಹುಡುಕಾಟದಲ್ಲಿರುವ ಬಿಜೆಪಿ ನಾಯಕರಿಗೆ ಇದೀಗ ಯಡಿಯೂರಪ್ಪ ಅವರ ಪುತ್ರ ಬಿ.ವೈ.ವಿಜಯೇಂದ್ರ ಅವರ ಮೇಲೆ ಕಣ್ಣು ಬಿದ್ದಿದೆ. ಹೀಗಾಗಿ ವಿಜಯೇಂದ್ರ ಅವರನ್ನು ತಮ್ಮ ಬಳಿ ಕರೆಸಿಕೊಂಡಿದ್ದ ಸಂಘಪರಿವಾರ ಮತ್ತು ಬಿಜೆಪಿಯ ನಾಯಕರು,ವರುಣಾ ಕ್ಷೇತ್ರದಿಂದ ಸ್ಪರ್ಧಿಸುವಂತೆ ಮನ ಒಲಿಸುವ ಯತ್ನ ನಡೆಸಿದ್ದಾರೆ.
ಅವರ ಮಾತಿಗೆ ಪ್ರತಿಯಾಗಿ ವಿಜಯೇಂದ್ರ ಅವರು:ನಾನು ವರುಣ ಕ್ಷೇತ್ರದ ರಣಾಂಗಣದಲ್ಲಿ ಸಿದ್ಧರಾಮಯ್ಯ ಅವರ ವಿರುದ್ಧ ಸ್ಪರ್ಧಿಸಲು ಸಿದ್ಧ.ಆದರೆ ಈಗಾಗಲೇ ನಾನು ಶಿಕಾರಿಪುರ ಕ್ಷೇತ್ರದಿಂದ ಸ್ಪರ್ಧಿಸಲು ಎಲ್ಲ ತಯಾರಿ ಮಾಡಿಕೊಂಡಿದ್ದು,ಈಗ ಅಲ್ಲಿಂದ ಸ್ಪರ್ಧಿಸದೇ ಇದ್ದರೆ ತಪ್ಪು ಸಂದೇಶ ರವಾನೆಯಾಗುತ್ತದೆ ಎಂದಿದ್ದಾರೆ.
ಅಷ್ಟೇ ಅಲ್ಲ,ವರುಣ ವಿಧಾನಸಭಾ ಕ್ಷೇತ್ರದಿಂದ ನಾನು ಸ್ಪರ್ಧಿಸಲೇಬೇಕು ಎಂಬುದು ಪಕ್ಷದ ನಿರ್ಧಾರವಾದರೆ ನಾನು ಸಿದ್ಧ.ಆದರೆ ಅದೇ ಕಾಲಕ್ಕೆ ಷಿಕಾರಿಪುರ ವಿಧಾನಸಭಾ ಕ್ಷೇತ್ರದ ಟಿಕೆಟ್ ಅನ್ನೂ ತಮಗೆ ನೀಡಬೇಕು ಎಂದು ವಿಜಯೇಂದ್ರ ಹೇಳಿದ್ದಾರೆ.ಹೀಗೆ ಸುರಕ್ಷಿತ ಕ್ಷೇತ್ರಕ್ಕಾಗಿ ಮೂರೂ ಪಕ್ಷಗಳ ಪಡಸಾಲೆಯಿಂದ ನಾಯಕರು ಪೈಪೋಟಿ ಆರಂಭಿಸಿದ್ದು,ಈ ಪೈಪೋಟಿಯೇ ಮುಂದಿನ ವಿಧಾನಸಭಾ ಚುನಾವಣೆ ಎಷ್ಟು ಜಿದ್ದಾ ಜಿದ್ದಿಯಾಗಿರಲಿದೆ ಎಂಬುದಕ್ಕೆ ಸಾಕ್ಷಿಯಾಗುವಂತಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ