ಹುಳಿಯಾರು
ಹುಳಿಯಾರು-ಕೆಂಕೆರೆ ರಸ್ತೆಯಲ್ಲಿರುವ ಮುಕ್ತಿಧಾಮದಲ್ಲಿ ಸರ್ವ ಜನಾಂಗದವರ ಶವಸಂಸ್ಕಾರಕ್ಕೆ ಅವಕಾಶ ಕಲ್ಪಿಸುವಂತೆ ಪಪಂ ಸದಸ್ಯರು ಸೇರಿದಂತೆ ಸಾರ್ವಜನಿಕರು ಒತ್ತಾಯಿಸಿದ ಘಟನೆ ಹುಳಿಯಾರು ಪಪಂನಲ್ಲಿ ಶುಕ್ರವಾರ ನಡೆದ ಬಜೆಟ್ ಸಾರ್ವಜನಿಕ ಸಭೆಯಲ್ಲಿ ಜರುಗಿತು.
ಜಯಕರ್ನಾಟಕ ಸಂಘಟನೆಯ ಮೋಹನಕುಮಾರ ರೈ ಅವರು ಈ ವಿಷಯದ ಬಗ್ಗೆ ಪ್ರಸ್ತಾಪಿಸಿ ಇಲ್ಲಿಯವರೆವಿಗೂ ಹುಳಿಯಾರು ಕೆರೆ ಅಂಚಿನಲ್ಲಿ ಶವಸಂಸ್ಕಾರ ಮಾಡಲಾಗುತ್ತಿತ್ತು. ಆದರೆ ಕೆರೆ ಮೈದುಂಬಿದ್ದರಿಂದ ಶವಸಂಸ್ಕಾರಕ್ಕೆ ಸ್ಥಳಾವಕಾಶ ಇಲ್ಲದೆ ಪರದಾಡುವಂತಾಗಿದೆ. ಹಾಗಾಗಿ ಮುಕ್ತಿಧಾಮದಲ್ಲಿ ಸರ್ವ ಜನಾಂಗಕ್ಕೂ ಶವಸಂಸ್ಕಾರಕ್ಕೆ ಅವಕಾಶ ಕಲ್ಪಿಸುವಂತೆ ಒತ್ತಾಯಿಸಿದರು.
ಈಗ ಮುಕ್ತಿಧಾಮದ ನಿರ್ವಾಹಣೆ ಜವಾಬ್ದಾರಿಯನ್ನು ಖಾಸಗಿಯವರು ವಹಿಸಿಕೊಂಡಿದ್ದಾರೆ. ಆದರೆ ಜನಿವಾರ ಇಲ್ಲದವರ ಶೂದ್ರರ ಶವಸಂಸ್ಕಾರಕ್ಕೆ ಸ್ಮಶಾನದ ಬೀಗದ ಕೀ ನೀಡುವುದಿಲ್ಲ. ಒತ್ತಾಯ ಮಾಡಿದಾಗ ಕೀ ಕೊಟ್ಟರೂ ಸಹ ಮನಸ್ಸಿಗೆ ಬಂದಂತೆ ಶುಲ್ಕ ವಸೂಲಿ ವಸೂಲಿ ಮಾಡುತ್ತಿದ್ದಾರೆ. ಅಲ್ಲದೆ ರಾತ್ರಿ ಸಮಯದಲ್ಲಿ ಶವಸಂಸ್ಕಾರ ಮಾಡಲು ಬೀಗದ ಕೀ ಪಡೆಯಲು ಸಾಧ್ಯವಾಗುವುದಿಲ್ಲ. ಹಾಗಾಗಿ ನಿರ್ವಹಣೆಯ ಜವಾಬ್ದಾರಿಯನ್ನೂ ಸಹ ಪಂಚಾಯ್ತಿ ವಹಿಸಿಕೊಳ್ಳುವಂತೆ ತಿಳಿಸಿದರು.
ಸಕ್ಕಿಂಗ್ ಯಂತ್ರವಿಲ್ಲದೆ ಪರದಾಟ :
ಪಪಂ ಸದಸ್ಯ ಹೇಮಂತ್‌ಕುಮಾರ್ ಮಾತನಾಡಿ, ಪಪಂ ವ್ಯಾಪ್ತಿಯಲ್ಲಿ ಶೌಚಾಲಯ ತ್ಯಾಜ್ಯ ಹೀರುವ (ಸಕ್ಕಿಂಗ್) ಯಂತ್ರವಿಲ್ಲದೆ ಬೇರೆ ಬೇರೆ ತಾಲ್ಲೂಕುಗಳ ಖಾಸಗಿಯವರ ಯಂತ್ರಗಳನ್ನು ಹೆಚ್ಚು ಹಣಕೊಟ್ಟು ತರಿಸುವ ಅನಿವಾರ್ಯತೆ ಸೃಷ್ಠಿಯಾಗಿದೆ. ಹಾಗಾಗಿ ಪಂಚಾಯ್ತಿಯ ಅನುದಾನದಲ್ಲಿ ಹೊಸ ಯಂತ್ರ ಖರೀದಿಸುವಂತೆ ಹೇಳಿದರು. ಇದಕ್ಕೆ ಎಂಜಿನಿಯರ್ ಮಂಜುನಾಥ್ ಅವರು ಈಗಾಗಲೇ 5 ಬಾರಿ ಖರೀದಿಗಾಗಿ ಜಾಹೀರಾತು ಕೊಟ್ಟಿದ್ದರೂ ಸಹ ಯಾರೊಬ್ಬರೂ ಮುಂದೆ ಬರುತ್ತಿಲ್ಲ. ಮತ್ತೊಮ್ಮೆ ಜಾಹೀರಾತು ನೀಡಿ ಯಂತ್ರ ಖರೀದಿಸುವ ಪ್ರಯತ್ನ ಮಾಡುವುದಾಗಿ ತಿಳಿಸಿದರು.
ಬೀದಿ ನಾಯಿ, ಹಂದಿಗಳ ಹಾವಳಿ :
ಪಟ್ಟಣ ಪಂಚಾಯ್ತಿಯಲ್ಲಿ ಬೀದಿನಾಯಿಗಳು ಹಾಗೂ ಹಂದಿಗಳ ಹಾವಳಿ ಹೆಚ್ಚಾಗಿದೆ. ಬೀದಿ ನಾಯಿಗಳಂತೂ ರಾತ್ರಿಹೊತ್ತು ಓಡಾಡಲು ಬಿಡದೆ ಮೈ ಮೇಲೆ ಎಗರುತ್ತವೆ. ಶಾಲಾ ಮಕ್ಕಳಿಗೆ ಕಡಿದ ಉದಾಹರಣೆಗಳು ಸಾಕಷ್ಟಿವೆ. ಕೆರೆಗೆ ನೀರು ಬಂದಿರುವುದರಿಂದ ಹಂದಿಗಳು ಪಟ್ಟಣದಲ್ಲಿ ಹೆಚ್ಚಾಗಿದ್ದು ಈ ಎರಡೂ ಪ್ರಾಣಿಗಳನ್ನು ಹಿಡಿಯುವಂತೆ ಕಳೆದ ಆರು ತಿಂಗಳ ಹಿಂದೆ ಮನವಿ ಕೊಟ್ಟಿದ್ದರೂ ಸ್ಪಂಧಿಸಿಲ್ಲ ಎಂದು ಸಾರ್ವಜನಿಕರು ಆರೋಪಿಸಿದರು. ಇದಕ್ಕೆ ಮುಖ್ಯಾಧಿಕಾರಿಗಳು ಮೇಲಾಧಿಕಾರಿಗಳೊಂದಿಗೆ ಚರ್ಚಿಸಿ ನಾಯಿ ಮತ್ತು ಹಂದಿಗಳ ಹಾವಳಿಗೆ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.
ವಳಗೆರೆಹಳ್ಳಿಯಲ್ಲಿ ಹಾವುಗಳ ಕಾಟ :
ಹುಳಿಯಾರು ಪಟ್ಟಣದಲ್ಲಿ ಹಂದಿನಾಯಿಗಳ ಹಾವಳಿ ಹೆಚ್ಚಾಗಿದೆ ಎಂದು ಸಾರ್ವಜನಿಕರು ಪಪಂ ಗಮನಕ್ಕೆ ತಂದಾಗ ವಳಗೆರೆಹಳ್ಳಿಯಲ್ಲಿ ಹಾವುಗಳ ಕಾಟ ಹೆಚ್ಚಾಗಿದೆ ಎಂದು ಸದಸ್ಯ ಚಂದ್ರಶೇಖರ್ ಗಮನ ಸೆಳೆದರು. ಕೆರೆಗೆ ನೀರು ಬಂದಿದ್ದರಿಂದ ಅಲ್ಲಿ ಆಶ್ರಯ ಪಡೆದಿದ್ದ ಹಾವುಗಳು ಕೆರೆಯ ಹಂಚಿನಲ್ಲಿದ್ದ ವಳಗೆರೆಹಳ್ಳಿ ಗ್ರಾಮಕ್ಕೆ ನುಗ್ಗಿದ್ದು ಇಲ್ಲಿನ ನಿವಾಸಿಗಳು ಭಯದಿಂದ ವಾಸಿಸುತ್ತಿದ್ದಾರೆ. ಹಾಗಾಗಿ ಹಾವು ಹಿಡಿಯುವವರನ್ನು ಕರೆಸಿ ಹಿಡಿಸುವಂತೆ ಮನವಿ ಮಾಡಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ