ಹುಳಿಯಾರು
-ಎಚ್.ಬಿ.ಕಿರಣ್‌ಕುಮಾರ್
ಹೋಬಳಿಯ ದಸೂಡಿ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸ್ಟಾಫ್ ನರ್ಸ್ಗಳಿಲ್ಲದೆ ಆರೋಗ್ಯ ಸೇವೆಯಲ್ಲಿ ವ್ಯತ್ಯಯವಾಗಿದೆ ಎಂದು ಸಾರ್ವಜನಿಕರು ಶುಕ್ರವಾರ ಆರೋಪಿಸಿದ್ದಾರೆ.
ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಸೇವೆ ಕಾಯಂ ಗೊಳಿಸುವಂತೆ ಒತ್ತಾಯಿಸಿ ಆರೋಗ್ಯ ಇಲಾಖೆಯ ಎನ್‌ಎಚ್‌ಎಂ ಒಳಗುತ್ತಿಗೆ ನೌಕರರು ಧರಣಿ ನಡೆಸುತ್ತಿದ್ದಾರೆ. ಈ ಧರಣಿಯಲ್ಲಿ ದಸೂಡಿ ಆಸ್ಪತ್ರೆಯ ಐವರು ಸ್ಟಾಫ್ ನರ್ಸಗಳು ಕಳೆದ 25 ದಿನಗಳಿಂದ ಪಾಲ್ಗೊಂಡಿದ್ದಾರೆ. ಪರಿಣಾಮ ಕಳೆದ 25 ದಿನಗಳಿಂದ ದಸೂಡಿ ಆಸ್ಪತ್ರೆಯಲ್ಲಿ ರೋಗಿಗಳಿಗೆ ಸೂಕ್ತ ಚಿಕಿತ್ಸೆ ಮತ್ತು ಆರೈಕೆ ಸಿಗದೆ ತೊಂದರೆಯಾಗಿದೆ ಎಂದು ಸ್ಥಳೀಯರು ದೂರಿದ್ದಾರೆ.
ರಾತ್ರಿ ವೇಳೆ ಸಿಗದ ಚಿಕಿತ್ಸೆ :
ದಸೂಡಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ 24*7 ಆರೋಗ್ಯ ಸೇವೆ ಸಿಗುತ್ತದೆಂದು ಬೋರ್ಡ್ ಹಾಕಿದ್ದಾರೆ. ಆದರೆ ತರ್ತು ಸಂದರ್ಭಗಳಲ್ಲಿರಲಿ ಸಾಮಾನ್ಯ ಸಂದರ್ಭದಲ್ಲೂ ಸೂಕ್ತ ಚಿಕಿತ್ಸೆ ದೊರೆಯುತ್ತಿಲ್ಲ. ಇನ್ನು ರಾತ್ರಿ ವೇಳೆ ಅಪಘಾತವಾದವರು, ವಿಷಜಂತುಗಳ ಕಡಿತಕ್ಕೆ ತುತ್ತಾದವರು, ಗರ್ಭಿಣಿಯರ ಗೋಳನ್ನು ಆ ಭಗವಂತನೇ ಕೇಳಬೇಕು ಎನ್ನುವಂತಾಗಿದೆ ಎಂಬುದು ಈ ಭಾಗದ ಜನರ ಆರೋಪವಾಗಿದೆ.
ಹೊಯ್ಸಳಕಟ್ಟೆ, ಹುಳಿಯಾರಿನಲ್ಲೂ ಇದೇ ಸ್ಥಿತಿ :
ಸದರಿ ಆರೋಗ್ಯ ಕೇಂದ್ರದ ವ್ಯಾಪ್ತಿಯಲ್ಲಿ 16 ಹಳ್ಳಿಗಳು ಬರುತ್ತವೆ. ಈ ಎಲ್ಲಾ ಹಳ್ಳಿಗಳಿಗೂ ಸೂಕ್ತ ಸಾರಿಗೆ ವ್ಯವಸ್ಥೆ ಇರುವುದಿಲ್ಲ. ಅಂತಹದರಲ್ಲಿ ಅವರಿವರನ್ನು ಕಾಡಿ ಬೇಡಿ ವಾಹನಗಳ ಸಹಾಯ ಪಡೆದು ಆಸ್ಪತ್ರೆಗೆ ಬಂದರೆ ಸಿಬ್ಬಂದಿಯೆ ಇರುವುದಿಲ್ಲ. ಇಲ್ಲಿಂದ 10-12 ಕಿ.ಮೀ. ದೂರದ ಹೊಯ್ಸಲಕಟ್ಟೆಗೆ ಹೋದರೆ ಅಲ್ಲಿಯ ಸ್ಥಿತಿಯೂ ಸಹ ಇದೇ ಆಗಿದೆ. ಹೋಗಲಿ ಎಂದು 25 ಕಿ.ಮೀ. ದೂರದ ಹುಳಿಯಾರು ಸರ್ಕಾರಿ ಆಸ್ಪತ್ರೆಗೆ ಹೋದರೆ ಅಲ್ಲಿಯ ಸ್ಥಿತಿಯೂ ದಸೂಡಿ ಆಸ್ಪತ್ರೆಯ ಸ್ಥಿತಿಯಾಗಿದ್ದು ವಿಧಿಯಿಲ್ಲದೆ ಖಾಸಗಿ ಆಸ್ಪತ್ರೆಗೆ ದಾಖಲಾಗುವ ಅನಿವಾರ್ಯ ಕರ್ಮ ಈ ಭಾಗದ ಜನರದ್ದಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ