ಹುಬ್ಬಳ್ಳಿ:
ಬಿಜೆಪಿಯ ಬಣ ರಾಜಕೀಯವು ಜೆಡಿಎಸ್ ಜೊತೆಗಿನ ಮೈತ್ರಿಕೂಟದ ಮೇಲೆ ಪರಿಣಾಮ ಬೀರುವುದಿಲ್ಲ ಎಂದು ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ಅವರು ಭಾನುವಾರ ಹೇಳಿದರು.ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಭಿನ್ನಾಭಿಪ್ರಾಯ ವಿಚಾರ ಪಕ್ಷದ ಆಂತರಿಕ ವಿಷಯ. ಸಮಸ್ಯೆಯನ್ನು ಹಿರಿಯ ನಾಯಕರು ಪರಿಹರಿಸುತ್ತಿದ್ದಾರೆ. ಇದರಿಂದ ಮೈತ್ರಿಕೂಟಕ್ಕೆ ಯಾವುದೇ ಸಮಸ್ಯೆಗಳನ್ನು ಉಂಟುಮಾಡುವುದಿಲ್ಲ ಎಂದು ಹೇಳಿದರು,
ದೆಹಲಿ ಚುನಾವಣಾ ಫಲಿತಾಂಶ ಕುರಿತು ಮಾತನಾಡಿ, ಫಲಿತಾಂಶ ನಿರೀಕ್ಷಿಸಿದಂತೆ ಬಂದಿದೆ. ಆಮ್ ಆದ್ಮಿ ಪಕ್ಷ ಭ್ರಷ್ಟಾಚಾರ ನಿರ್ಮೂಲನೆಗಾಗಿ ಹೋರಾಟ ಮಾಡುತ್ತ ಅಧಿಕಾರಕ್ಕೆ ಬಂದಿತ್ತು. ನಂತರ ಆ ಪಕ್ಷದವರೇ ಭ್ರಷ್ಟಾಚಾರದಲ್ಲಿ ಸಿಲುಕಿ ದೆಹಲಿಯ ಜನರ ಭಾವನೆಗೆ ಧಕ್ಕೆ ತಂದಿದ್ದರು. ಮೂಲಸೌಕರ್ಯ ಸಮಸ್ಯೆ ಕೂಡ ಜನರ ಅಸಮಾಧಾನಕ್ಕೆ ಕಾರಣವಾಗಿತ್ತು. ದೆಹಲಿ ಅಭಿವೃದ್ಧಿಗೆ ಪೂರಕವಾಗುತ್ತದೆ ಎಂಬ ಹಿನ್ನೆಲೆಯಲ್ಲಿ ಜನ ಬಿಜೆಪಿಗೆ ಆಧಿಕಾರ ನೀಡಿದ್ದಾರೆಂದು ತಿಳಿಸಿದರು.
ಹುಬ್ಬಳ್ಳಿಯ ಲ್ಯಾಮಿಗ್ಟಂನ್ ರಸ್ತೆಯಲ್ಲಿನ ಜಾಗ ಕಾಂಗ್ರೆಸ್‌ನಿಂದ ಅತಿಕ್ರಮಣ ಮಾಡಿದ ವಿಚಾರವಾಗಿ ಪ್ರತಿಕ್ರಿಯಿಸಿ, ಈ ಬಗ್ಗೆ ಮೂಲ ದಾಖಲೆಗಳನ್ನು ತೆಗೆಸುವಂತೆ ತಿಳಿಸಲಾಗಿದೆ. ಮುಂದೆ ಕಾದು ನೋಡೋಣ. ಕಾಂಗ್ರೆಸ್‌ನವರು ಆ ಜಾಗ ಕಬ್ಜಾ ಮಾಡುವ ಮೂಲಕ ದಬ್ಬಾಳಿಕೆ ಮಾಡಿದ್ದಾರೆ. ಸೂಕ್ತ ದಾಖಲಾತಿಗಳ ಮೂಲಕ ಸತ್ಯಾಸತ್ಯತೆ ಏನಿದೆ ಎನ್ನುವುದನ್ನು ನೋಡಬೇಕು ಎಂದರು.
ಡಿಸಿಎಂ ಡಿ.ಕೆ. ಶಿವಕುಮಾರ ಕುಂಭಮೇಳ ಪ್ರಯಾಣ ವಿಚಾರವಾಗಿ ಮಾತನಾಡಿ, ಅದು ಅವರವರ ಭಕ್ತಿ ಭಾವಕ್ಕೆ ಬಿಟ್ಟ ವಿಷಯ. ಕುಂಭಮೇಳಕ್ಕೆ ಹೋಗುವ ವಿಚಾರಕ್ಕೆ ಯಾವುದೇ ವ್ಯಾಖ್ಯಾನ ಮಾಡುವ ಅಗತ್ಯವಿಲ್ಲ ಎಂದರು.
