ಬೆಂಗಳೂರು
ಗೃಹಲಕ್ಷ್ಮಿಯೋಜನೆಯ ಮೂಲಕ ಒಂದು ಕೋಟಿಗೂ ಹೆಚ್ಚು ಮಹಿಳೆಯರ ಖಾತೆಗೆ ನೇರವಾಗಿ ಹಣ ಜಮಾ ಆಗಿದ್ದು, ಇಂತಹ ಯೋಜನೆ ವಿಶ್ವದ ಯಾವ ಭಾಗದಲ್ಲೂ ಇಲ್ಲ. ಇದು ವಿಶ್ವದಲ್ಲಿಯೇ ಅತ್ಯಂತ ದೊಡ್ಡ ಹಣಕಾಸು ನೆರವು ನೀಡುವ ಯೋಜನೆ ಎಂದು ಕಾಂಗ್ರೆಸ್ ವರಿಷ್ಠ ರಾಹುಲ್ ಗಾಂಧಿ ಬಣ್ಣಿಸಿದ್ದಾರೆ. ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರದ ಅಭಿವೃದ್ಧಿ ಕೆಲಸಗಳು ದೇಶಾದ್ಯಂತ ಪ್ರತಿಧ್ವನಿಸಲಿದೆ ಎಂದು ಹೇಳಿದ್ದಾರೆ.
ಮೈಸೂರಿನ ಮಹಾರಾಣಿ ಕಾಲೇಜಿನ ?ಗೃಹಲಕ್ಷ್ಮಿ? ಯೋಜನೆಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ವಿಶೇಷ ಅತಿಥಿ ರಾಹುಲ್ ಗಾಂಧಿ ದೀಪ ಬೆಳಗಿಸಿ ಯೋಜನೆ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ಚುನಾವಣೆಯ ಪೂರ್ವದಲ್ಲಿ ಕರ್ನಾಟಕದಲ್ಲಿ ಕಾಂಗ್ರೆಸ್ ಐದು ಗ್ಯಾರಂಟಿಗಳನ್ನು ಘೋಷಿಸಿತ್ತು. ಕಾಂಗ್ರೆಸ್ ಏನು ವಾಗ್ದಾನ ಮಾಡುತ್ತದೋ, ಅದನ್ನು ಈಡೇರಿಸುತ್ತದೆ ಎಂದು ಹೇಳಿದರು.
ಕರ್ನಾಟಕ ಇಡೀ ದೇಶಕ್ಕೆ ಮಾದರಿಯಾಗಿದೆ. ನಮ್ಮ ಗ್ಯಾರಂಟಿ ಘೋಷಣೆ ವೇಳೆ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಬಿಜೆಪಿಯ ನಾಯಕರು ಟೀಕೆ ಮಾಡಿದ್ದರು. ನಾವಿಂದು ನುಡಿದಂತೆ ನಡೆದಿದ್ದೇವೆ. ಎರಡು ಸಾವಿರ ಖಾತೆಗೆ ನೀಡುವ ಹಣ ಹಾಗೂ ಯೋಜನೆ ಚಿಕ್ಕ ವಿಷಯವೇನಲ್ಲ. ಇದರಿಂದ ಮಹಿಳೆಯರು ಹಣ ಉಳಿತಾಯ ಮಾಡಬಹುದು, ಮಕ್ಕಳಿಗೆ ಪುಸ್ತಕ ಕೊಡಿಸಬಹುದು. ಇದರ ಸಂಪೂರ್ಣ ಉಪಯೋಗ ಮಹಿಳೆಯರ ಮೇಲಿದೆ ಎಂದು ರಾಹುಲ್ ಗಾಂಧಿ ಹೇಳಿದರು.
ಕರ್ನಾಟಕದ ನಮ್ಮ ತಾಯಂದಿರು, ಅಕ್ಕ-ತಂಗಿಯರು ಉಚಿತವಾಗಿ ಕರ್ನಾಟಕ ಸುತ್ತಾಡುತ್ತಿದ್ದಾರೆ. ಉಚಿತ ವಿದ್ಯುತ್ ನೀಡಲಾಗಿದೆ, ಇಂದು ಒಂದು ಕೋಟಿಗೂ ಹೆಚ್ಚು ಮಹಿಳೆಯರ ಖಾತೆಯಲ್ಲಿ ಎರಡು ಸಾವಿರ ಹಣ ಇದೆ. ಭಾರತ ದೇಶದ ಅತಿ ದೊಡ್ಡ ಹಣ ವರ್ಗಾವಣೆಯನ್ನು ನಮ್ಮ ಕಾಂಗ್ರೆಸ್ ಸರ್ಕಾರ ಮಾಡಿದೆ. ಕರ್ನಾಟಕ ಮಾಡೆಲ್ ಈ ದೇಶಕ್ಕೆ ಮಾದರಿಯಾಗಿದೆ ಎಂದು ಹೇಳಿದರು.
ರಾಜ್ಯದ ಮಹಿಳೆಯರೇ ರಾಜ್ಯದ ಏಳಿಗೆಗೆ ಕಾರಣ. 75 ವರ್ಷಗಳ ಅಭಿವೃದ್ಧಿ ನಿಮ್ಮಿಂದಲೇ ಆಗಿದೆ. ನಾವು ಸುಳ್ಳು ಆಶ್ವಾಸನೆ ಕೊಡುವುದಿಲ್ಲ. ಸಾಧ್ಯವಾಗುವುದಾರೆ ಅನುಷ್ಠಾನ ಮಾಡುತ್ತೇವೆ. ಇಲ್ಲವಾದಲ್ಲಿ ಇಲ್ಲ. ಇದು ನಮ್ಮ ಯೋಜನೆಯಲ್ಲ; ನಿಮ್ಮ ಯೋಜನೆ. ಕಾಂಗ್ರೆಸ್ ಪಕ್ಷದ ಥಿಂಕ್ ಟ್ಯಾಂಕ್ ಮಾಡಿದ್ದಲ್ಲ. ನೀವು ನಮಗೆ ಯೋಜನೆಯ ದಾರಿ ತೋರಿಸಿದಿರಿ ಎಂದರು.
‘ಭಾರತ್ ಜೋಡೋ ಯಾತ್ರೆಯಲ್ಲಿ ಸಾವಿರಾರು ಮಹಿಳೆಯರನ್ನು ಭೇಟಿ ಮಾಡಿದ್ದೆ. ರಾಜ್ಯದಲ್ಲಿ 600 ಕಿಮೀ ನಡೆದಿದ್ದೆ. ಬೆಲೆ ಏರಿಕೆಯು ಮಹಿಳೆಯರ ಮೇಲೆ ಬರೆ ಹಾಕಿದೆ ಎಂದು ಆಗ ಅನ್ನಿಸಿತ್ತು. ಪೆಟ್ರೋಲ್, ಡೀಸೆಲ್, ಅಡುಗೆ ಅನಿಲದ ಬೆಲೆ ಏರಿಕೆ ಎಲ್ಲದ್ದರ ಏಟು ಮಹಿಳೆಯರ ಮೇಲೇ ಬೀಳುತ್ತದೆ. ಆ ಬಗ್ಗೆ ಮಹಿಳೆಯರು ನನಗೆ ಹೇಳಿದ್ದರು. ನಡೆಯುತ್ತಾ ನಡೆಯುತ್ತಾ, ಮಹಿಳೆಯರೇ ಈ ರಾಜ್ಯದ ಅಡಿಪಾಯ. ಅವರಿಲ್ಲದೆ ಈ ರಾಜ್ಯ ನಿಲ್ಲದು ಎಂಬುದು ಅರಿವಿಗೆ ಬಂದಿತ್ತು. ಮರದ ಬೇರು ಕಾಣದ ರೀತಿಯಲ್ಲಿ, ಮನೆಯಲ್ಲೆ ಉಳಿದ ಮಹಿಳೆಯರು, ಯಾವುದೇ ಊರಾಗಿರಲಿ, ಇಡೀ ರಾಜ್ಯದ ಭದ್ರ ಬುನಾದಿ ನೀವೇ ಎಂದರು.
‘ರಾಜ್ಯ ಸರ್ಕಾರ 100 ದಿನಗಳನ್ನು ಪೂರೈಸಿರುವ ಈ ಹೊತ್ತಿನಲ್ಲಿ ಜನರಿಗೆ ನೀಡಿದ್ದ ಭರವಸೆಗಳನ್ನು ಈಡೇರಿಸಿದೆ. ರಕ್ಷಾಬಂಧನದ ದಿನವಾದ ಇಂದು ನಾಡಿನ ಕೋಟ್ಯಂತರ ಅಕ್ಕ ತಂಗಿಯರಿಗೆ ಕೊಟ್ಟ ಮಾತನ್ನು ಈಡೇರಿಸಿದ್ದೇವೆ. ಕೇಂದ್ರ ಸರ್ಕಾರವು ಕೋಟ್ಯಧಿಪತಿಗಳಿಗಾಗಿ ಕೆಲಸ ಮಾಡುತ್ತಿದೆ. ಇಬ್ಬರು ಮೂವರಿಗಷ್ಟೇ ಅಭಿವೃದ್ಧಿಯ ಹೊಣೆ ನೀಡಲಾಗಿದೆ. ಆದರೆ ಕರ್ನಾಟಕದ ಐದು ಭರವಸೆಗಳು ಆಡಳಿತದ ನೀಲಿ ನಕ್ಷೆಯಾಗಿದೆ. ಬಡವರಿಗಾಗಿ ಸರ್ಕಾರಗಳು ಕೆಲಸ ಮಾಡಬೇಕು. ಜಾತಿ, ಧರ್ಮ ಮೀರಿ ನೆರವಾಗಬೇಕು. ರಾಜ್ಯದ ಯೋಜನೆಗಳನ್ನು ಇಡೀ ದೇಶದಲ್ಲಿ ಮಾದರಿಯಾಗಿ ಜಾರಿಗೆ ತರಲಾಗುವುದು. ಇವು ದೇಶಕ್ಕೆ ಸರಿಯಾದ ದಾರಿ ತೋರಿವೆ’ ಎಂದು ರಾಹುಲ್ ಗಾಂಧಿ ಹೇಳಿದರು.
ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮಾತನಾಡಿ, ರಾಜ್ಯದ ಸುಮಾರು 1.10 ಕೋಟಿ ತಾಯಂದಿರು ಇಂದು ಈ ಗೃಹಲಕ್ಷ್ಮಿ ಯೋಜನೆ ಫಲಾನುಭವಿಗಳಾಗಿದ್ದಾರೆ. ಆ ಮೂಲಕ ಇಂದಿರಾ ಗಾಂಧಿ ಅವರ ಕಾಲದ ಗತ ವೈಭವ ಮರುಸೃಷ್ಟಿಯಾಗಿದೆ. ಇಡೀ ದೇಶದಲ್ಲಿ ಬದಲಾವಣೆ ಗಾಳಿ ಆರಂಭವಾಗಿದೆ. ರಾಹುಲ್ ಗಾಂಧಿ ಅವರು ಇದೇ ಭೂಮಿ ಮೇಲೆ ಭಾರತ ಜೋಡೋ ಯಾತ್ರೆ ಮಾಡಿದ್ದರು. ಚಾಮರಾಜನಗರದಿಂದ ರಾಯಚೂರು ವರೆಗೂ 510 ಕಿ.ಮೀ ಹೆಜ್ಜೆ ಹಾಕಿದರು. ರಾಜ್ಯದ ಮೂಲೆ ಮೂಲೆಯಿಂದ ನೀವು ಬಂದು ಶಕ್ತಿ ತುಂಬಿದಿರಿ ಎಂದರು.
ಈ ಯಾತ್ರೆ ಸಂದರ್ಭದಲ್ಲಿ ರಾಹುಲ್ ಗಾಂಧಿ ಅವರು ನಿಮ್ಮ ಹಸಿವು, ಬೆಲೆ ಏರಿಕೆ, ರೈತರ ಸಮಸ್ಯೆ, ಯುವಕರ ನಿರುದ್ಯೋಗ ಸಮಸ್ಯೆಗಳನ್ನು ಕಣ್ಣಾರೆ ಕಂಡಿದ್ದಾರೆ. ನಂತರ ನಡೆದ ಚುನಾವಣೆ ಸಮಯದಲ್ಲಿ ನಾವು ರಾಜ್ಯದ ಜನರ ಮುಂದೆ ಐದು ಗ್ಯಾರಂಟಿ ಯೋಜನೆಗಳನ್ನು ಮುಂದಿಟ್ಟಿದ್ದೆವು. ಗೃಹಜ್ಯೋತಿ ಯೋಜನೆ ಮೂಲಕ 200 ಯೂನಿಟ್ ವರೆಗೂ ಉಚಿತ ವಿದ್ಯುತ್, ಗೃಹಲಕ್ಷ್ಮಿ ಯೋಜನೆ ಮೂಲಕ ಪ್ರತಿ ಮನೆಯೊಡತಿಗೆ 2 ಸಾವಿರ ಮಾಸಿಕ ಧನ ಮಹತ್ವದ ಕಾರ್ಯಕ್ರಮ ಜಾರಿ ಮಾಡಲಾಗಿದೆ. ಅಧಿಕಾರಕ್ಕೆ ಬಂದ 100 ದಿನಗಳಲ್ಲಿ ನಾಲ್ಕು ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಿ ನುಡಿದಂತೆ ನಡೆದಿದ್ದೇವೆ. ಇಂದು ಎಲ್ಲಾ ಗೃಹಲಕ್ಷ್ಮಿಯರ ಖಾತೆಗೆ ನೇರವಾಗಿ ಹಣ ತಲುಪುವಂತೆ ಮಾಡಲಾಗಿದೆ ಎಂದು ಹೇಳಿದರು.
ಈ ಮೂಲಕ ದೇಶಕ್ಕೆ ?ಕರ್ನಾಟಕ ಮಾದರಿ?ಯನ್ನು ಪರಿಚಯಿಸಿದ್ದೇವೆ. ಸಚಿವ ಜಾರ್ಜ್ ಅವರ ನೇತೃತ್ವದಲ್ಲಿ ಗೃಹಜ್ಯೋತಿ ಯೋಜನೆಯಲ್ಲಿ 1.41 ಕೋಟಿ ಮನೆಗಳು ಉಚಿತ ವಿದ್ಯುತ್ ಜಾರಿ ಮಾಡಲಾಗಿದೆ. ಸಚಿವ ಮುನಿಯಪ್ಪ ಅವರ ನೇತೃತ್ವದಲ್ಲಿ 1.30 ಕೋಟಿ ಫಲಾನುಭವಿಗಳಿಗೆ 5 ಕೆ.ಜಿ ಅಕ್ಕಿ ಹಾಗೂ 5 ಕೆ.ಜಿಗೆ ಹಣ ನೀಡಲಾಗಿದೆ. ಸಚಿವ ರಾಮಲಿಂಗಾ ರೆಡ್ಡಿ ಅವರ ನೇತೃತ್ವದಲ್ಲಿ ಶಕ್ತಿ ಯೋಜನೆ ಮೂಲಕ ರಾಜ್ಯದ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಕಲ್ಪಿಸಿ 46 ಕೋಟಿ ಮಹಿಳೆಯರು ಇದರ ಫಲಾನುಭವಿಗಳಾಗಿದ್ದಾರೆ. ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರ ನೇತೃತ್ವದಲ್ಲಿ ಗೃಹಲಕ್ಷ್ಮಿ ಯೋಜನೆ ಜಾರಿ ಮೂಲಕ ಗೃಹಲಕ್ಷ್ಮಿ ಯೋಜನೆ ಜಾರಿ ಮಾಡಲಾಗಿದೆ.
ರಾಹುಲ್ ಗಾಂಧಿ ಅವರು ನ್ಯಾಯ್ ಯೋಜನೆ ಘೋಷಿಸಿ 6 ಸಾವಿರ ಪೆÇ್ರೀತ್ಸಾಹ ಧನವನ್ನು ಘೋಷಣೆ ಮಾಡಿದ್ದರು. ಅದರ ಅನುಗುಣವಾಗಿ ಐದು ಗ್ಯಾರಂಟಿ ಯೋಜನೆಗಳ ಮೂಲಕ ಪ್ರತಿ ಕುಟುಂಬಕ್ಕೆ ಸರಾಸರಿ ಸುಮಾರು 5 ಸಾವಿರದಷ್ಟು ಆರ್ಥಿಕ ನೆರವು ನೀಡಲಾಗುತ್ತಿದೆ. ಇದರಿಂದ ನಿಮ್ಮ ಬದುಕಿಗೆ ಅನುಕೂಲ ಮಾಡಿಕೊಡುತ್ತಿದೆ. ನೀವು ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತಂದಿದ್ದೀರಿ, ನಾವು ದೇಶದಲ್ಲೇ ಯಾವುದೇ ಸರ್ಕಾರ ಮಾಡಲಾಗದ ಕೆಲಸವನ್ನು ಕೇವಲ 100 ದಿನಗಳಲ್ಲಿ ನಾವು ಮಾಡಿ ತೋರಿಸಿದ್ದೇವೆ. ಆ ಮೂಲಕ ನುಡಿದಂತೆ ನಡೆದಿದ್ದೇವೆ ಎಂದು ಹೇಳಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ