ಶಿವಮೊಗ್ಗ
ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಕುರಿತು ಯಾವುದೇ ಆತಂಕ ಇಲ್ಲ, ನಿರೀಕ್ಷೆ ಇದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.ಅವರು ಇಂದು ಶಿವಮೊಗ್ಗದಲ್ಲಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿದರು.
ಹೆಚ್ಚಿನ ಆಕಾಂಕ್ಷಿಗಳಿದ್ದಾಗ ಪೈಪೋಟಿ ಸಹಜವಾಗಿ ಇರಲಿದೆ. 8 ಮತ್ತು 9 ರಂದು ಚುನಾವಣಾ ಆಯ್ಕೆ ಸಮಿತಿ ಸಭೆ ಸೇರಿ, ನಂತರ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡುವುದಾಗಿ ತಿಳಿಸಿದರು.
ಬಿಜೆಪಿ ಪಟ್ಟಿಯು ವ್ಯವಸ್ಥಿತವಾಗಿ ಪ್ರಜಾಪ್ರಭುತ್ವದ ರೀತಿಯಲ್ಲಿ ಸಿದ್ಧವಾಗುತ್ತಿದೆ. ಬಿಜೆಪಿಯ ಎಲ್ಲಾ ಹಂತದ ಕಾರ್ಯಕರ್ತರ ಭಾವನೆ, ತಾಲೂಕು ಹಾಗೂ ಜಿಲ್ಲಾ ಮಟ್ಟದ ಸಮಿತಿಗಳು ಚರ್ಚಿಸಿ ಜೊತೆ ಜನರ ಭಾವನೆಯನ್ನು ಗಮನದಲ್ಲಿಟ್ಟುಕೊಂಡು ಪಟ್ಟಿ ತಯಾರಿಸಲಾಗಿದೆ. ಕ್ಷೇತ್ರಗಳಿಗೂ ಮೂವರು ಅಭ್ಯರ್ಥಿಗಳ ಪಟ್ಟಿಯನ್ನು ಸಿದ್ಧಪಡಿಸಿ ಕಳಿಸಲಾಗಿದೆ ಎಂದರು.
ಕಾಂಗ್ರೆಸ್ಸಿಗೆ ಸರಿಯಾದ ಅಭ್ಯರ್ಥಿಗಳೇ ಇಲ್ಲ
ಕಾಂಗ್ರೆಸ್ ಪಕ್ಷಕ್ಕೆ 60 ಕ್ಷೇತ್ರಗಳಲ್ಲಿ ಸರಿಯಾದ ಅಭ್ಯರ್ಥಿಗಳೇ ಇಲ್ಲ ಅಲ್ಲಿಂದ, ಇಲ್ಲಿಂದ ಅಭ್ಯರ್ಥಿಗಳ ಕರೆತಂದು ಟಿಕೆಟ್ ಕೊಡುವ ಪ್ರಯತ್ನ ನಡೆಸಿದ್ದಾರೆ ಎಂದರು.
ಅಭ್ಯರ್ಥಿಗಳಿಗೆ ಆಮಿಷ
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಎರಡನೇ ಪಟ್ಟಿ ಬಿಡುಗಡೆಗೂ ಮುನ್ನ ಬಿಜೆಪಿಯ ಬಹುತೇಕ ಶಾಸಕರುಗಳಿಗೆ ನಿಮಗಾಗಿ ಟಿಕೆಟ್ ಕಾದಿರಿಸಿದ್ದೇವೆ ಬರುತ್ತೀರಾ ಎಂದು ಕೇಳಿದ್ದರು ಎಂದರು.
ಕಾಂಗ್ರೆಸ್ಸಿಗರು ಹೊರಗಡೆ ಶೂರತದ ಮಾತನಾಡುತ್ತಾರೆ ಒಳಗಡೆ ಹಕೀಕತ್ ಬೇರೆಯೇ ಇದೆ ಎಂದರು.
ಕಾಂಗ್ರೆಸ್ ಹೀನಾಯವಾಗಿ ಸೋಲಲಿದೆ
ಕಳೆದ ಬಾರಿಗಿಂತ ಕಾಂಗ್ರೆಸ್ ಹೀನಾಯವಾಗಿ ಸೋಲುತ್ತದೆ ಕಾಂಗ್ರೆಸ್ಸಿಗೆ ಸರಿಯಾದ ಅಭ್ಯರ್ಥಿಗಳೇ ಇಲ್ಲ, ತಳಮಟ್ಟದಲ್ಲಿ ಸಂಘಟನೆಯೂ ಇಲ್ಲ, ಸರಿಯಾದ ನೀತಿ ಸಿದ್ಧಾಂತಗಳಿಲ್ಲ ಅಭಿವೃದ್ಧಿ ರಾಜಕಾರಣ ಕೂಡ ಇಲ್ಲ ಎಂದರು.
ಒಳಮೀಸಲಾತಿ ಮುಟ್ಟಲು ಸಾಧ್ಯವಿಲ್ಲ
ಒಳಮಿಸಲಾತಿ ಸೇರಿದಂತೆ ಎಲ್ಲವನ್ನು ರದ್ದು ಮಾಡುವುಡಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿಕೆಗೆ ಪ್ರತಿಕ್ರಿಯೆ ನೀಡಿ, ಅದನ್ನು ಮುಟ್ಟಲು ಸಾಧ್ಯವಿಲ್ಲ. ಒಳ ಮೀಸಲಾತಿ ರದ್ದು ಮಾಡಲಿ ನೋಡೋಣ ಎಂದು ಸವಾಲು ಹಾಕಿದರು. ಕಾಂಗ್ರೆಸ್ಸಿನ ಬಣರಾಜಕೀಯಕ್ಕೆ ಮಹತ್ವವಿಲ್ಲ. ಅವರು ದಿನವೂ ಜಗಳ ಮಾಡುತ್ತಾರೆ ಎಂದರು.
ಎಲ್ಲವೂ ಸರಿ ಹೋಗಲಿದೆ
ಮಹೇಶ್ ಕುಮಟಳ್ಳಿ ಸೋಲನ್ನು ನನ್ನ ತಲೆಗೆ ಕಟ್ಟಲು ನೋಡುತ್ತಿದ್ದಾರೆ ಎಂಬ ಲಕ್ಷ್ಮಣ ಸವದಿ ಹೇಳಿಕೆಗೆ ಪ್ರತಿಕ್ರಿಯೆ ನೀಡಿ, ಲಕ್ಷ್ಮಣ್ ಸವದಿ ಅವರ ಬಳಿ ಮಾತನಾಡಿದ್ದು ಆ ರೀತಿ ಏನೂ ಇಲ್ಲ. ಸವದಿ ಅವರು ಬಿಜೆಪಿ ಪಕ್ಷದ ಹಿರಿಯ ನಾಯಕರು, ಡಿಸಿಎಂ ಆಗಿದ್ದವರು. ಅವರ ಜವಾಬ್ದಾರಿಯ ಬಗ್ಗೆ ಅವರಿಗೆ ಅರಿವಿದೆ ಎಂದು ತಿಳಿದಿದ್ದೇನೆ. ಅವರ ಬಳಿ ಮಾತನಾಡಿದ್ದು ಎಲ್ಲವೂ ಸರಿ ಹೋಗುತ್ತದೆ ಎಂದರು.
ಬೇರೆ ಪಕ್ಷದವರಿಗೆ ಬೆಂಬಲಿಸುವುದು ಸುದೀಪ್ ಗೆ ಬಿಟ್ಟ ವಿಚಾರ
ಮುಖ್ಯಮಂತ್ರಿಗಳಿಗೆ ಬೆಂಬಲ ನೀಡಿರುವ ಹಿನ್ನೆಲೆಯಲ್ಲಿ ನಟ ಸುದೀಪ್ ಅವರನ್ನು ಟೀಕೆ ಮಾಡುತ್ತಿರುವ ವಿಚಾರವಾಗಿ ಪ್ರತಿಕ್ರಿಯೆ ನೀಡಿ, ಬೇರೆ ಪಕ್ಷದವರು ಪ್ರಚಾರಕ್ಕೆ ಕರೆದರೆ ಹೋಗುವುದು ಅವರಿಗೆ ಬಿಟ್ಟ ವಿಚಾರ. ಕಷ್ಟಕಾಲದಲ್ಲಿ ನೆರವಾಗಿದ್ದ ಕಾರಣ ಬಂದಿದ್ದೇನೆ, ಉಳಿದವರು ಯಾರು ಬಂದಿಲ್ಲ ಎಂದು ಹೇಳಿದ್ದಾರೆ ಎಂದು ತಿಳಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








