ಬಸ್ ಇಲ್ಲ ವಿದ್ಯಾರ್ಥಿಗಳಿಗೆ ಗೋಳು ತಪ್ಪಲಿಲ್ಲ

ಕೊರಟಗೆರೆ:

ಶೈಕ್ಷಣಿಕ ವರ್ಷ ಪ್ರಾರಂಭವಾದಾಗಿನಿಂದಲೂ ತಾಲ್ಲೂಕಿನ ಹೊಳವನಹಳ್ಳಿ ಹೋಬಳಿಯ ನೂರಾರು ವಿದ್ಯಾರ್ಥಿಗಳು ಶಾಲಾ ಕಾಲೇಜು ಸಮಯಕ್ಕೆ ಬಸ್ಸುಗಳು ಬಾರದೆ ಹಲವು ಬಾರಿ ಮನವಿ ಸಲ್ಲಿಸಿದರೂ ಪ್ರಯೋಜನವಾಗದ ಕಾರಣ ಮಂಗಳವಾರ ಎಬಿವಿಪಿ ಸಂಘಟನೆ ಸೇರಿದಂತೆ ನೂರಾರು ವಿದ್ಯಾರ್ಥಿ-ವಿದ್ಯಾರ್ಥಿನಿಯರು ಬಸ್ ತಡೆದು ರಸ್ತೆ ತಡೆ ನಡೆಸಿದ ಘಟನೆ  ಹೊಳವನಹಳ್ಳಿಯಲ್ಲಿ ಜರುಗಿದೆ.

ಹೊಳವನಹಳ್ಳಿಯಲ್ಲಿ ಪ್ರತಿಭಟನೆಯ ಬಿಸಿ ತಾಕಿಸಿದ ವಿದ್ಯಾರ್ಥಿ ಸಂಘಟನೆಗಳು ಮಂಗಳವಾರ ಬೆಳಗ್ಗೆ 7-30 ಗಂಟೆಯಿಂದ 10 ರವರೆಗೆ ಕೇವಲ ಎರಡು ಸರ್ಕಾರಿ ಬಸ್ಸುಗಳು ಈ ಮಾರ್ಗವಾಗಿ ಪ್ರಯಾಣಿಸುತ್ತಿದ್ದು, 400-500 ವಿದ್ಯಾರ್ಥಿಗಳು ಹೇಗೆ ಪ್ರಯಾಣಿಸುವುದು? ಸರ್ಕಾರ ನೆಪಮಾತ್ರಕ್ಕೆ ಬಸ್ ಪಾಸ್ ನೀಡಿದೆಯೇ ಎಂದು ಆರೋಪಿಸಿ ನೂರಾರು ವಿದ್ಯಾರ್ಥಿಗಳು ಎಬಿವಿಪಿ ಸಂಘಟನೆಯೊಂದಿಗೆ ಕೂಡಿ ರಸ್ತೆ ತಡೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.

ಕಾಲೇಜು ತರಗತಿಗಳು ಬೆಳಗ್ಗೆ 8 ಗಂಟೆಯಿಂದ 9 ಗಂಟೆ ಒಳಗಡೆ ಪ್ರಾರಂಭಗೊಳ್ಳಲಿದ್ದು, ಈ ಭಾಗದಿಂದ ಸರಿಸುಮಾರು 300 ರಿಂದ 400 ವಿದ್ಯಾರ್ಥಿಗಳು ಕೊರಟಗೆರೆಯ ಶಾಲಾ-ಕಾಲೇಜುಗಳಿಗೆ ಪ್ರಯಾಣಿಸುತ್ತಿದ್ದಾರೆ. ಇಷ್ಟು ಜನ ಕೇವಲ ಎರಡು ಬಸ್ಸಿನಲ್ಲಿ ಹೇಗೆ ಪ್ರಯಾಣಿಸಲು ಸಾಧ್ಯ? ಅದೂ ತಾಲ್ಲೂಕಿನ ಗಡಿ ಭಾಗ ಅರಸಾಪುರ, ಭೈರೇನÀಹಳ್ಳಿ, ಬೈಚಾಪುರ, ಕಾದಲಾಪುರ, ಹೊಸಳ್ಳಿ, ಚಿಕ್ಕನಹಳ್ಳಿ, ಬಿಳೇಕಲ್ಲಹಳ್ಳಿ, ಚಟ್ಟೇನಹಳ್ಳಿ, ಬಿಡಿಪುರ ಸೇರಿದಂತೆ ಹತ್ತಾರು ಹಳ್ಳಿಗಳಿಂದ ಹೊಳವನಹಳ್ಳಿ ಭಾಗದ ಮೂಲಕ ಕೊರಟಗೆರೆಯ ಶಾಲಾ-ಕಾಲೇಜುಗಳಿಗೆ ನೂರಾರು ವಿದ್ಯಾರ್ಥಿಗಳು ಪ್ರಯಾಣಿಸುತ್ತಿದ್ದಾರೆ.

ಸರ್ಕಾರ ವಿದ್ಯಾರ್ಥಿಗಳ ಸಮಸ್ಯೆ ಆಲಿಸಿ, ಬಸ್ ಪಾಸ್ ನೀಡಿದರೂ ಸಹ ಅದು ಬಸ್‍ಗಳು ಇಲ್ಲದೆ ನಿಷ್ಪ್ರಯೋಜಕವಾಗಿದೆ. ಸಂಬಂಧಪಟ್ಟ ಅಧಿಕಾರಿಗಳಿಗೆ ಸುಮಾರು ಬಾರಿ ಮನವಿ ಸಲ್ಲಿಸಿದರೂ ಪ್ರಯೋಜನವಾಗದೆ ವಿದ್ಯಾರ್ಥಿಗಳು ಅನಿವಾರ್ಯವಾಗಿ ರಸ್ತೆ ತಡೆ ನಡೆಸಿ, ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನೂರಾರು ವಿದ್ಯಾರ್ಥಿ-ವಿದ್ಯಾರ್ಥಿನಿಯರು ರಸ್ತೆಗಿಳಿದು ಪ್ರತಿಭಟನೆ ನಡೆಸಿ ಒಂದು ಶೈಕ್ಷಣಿಕ ವರ್ಷವನ್ನು ಕೊರೋನಾ ನುಂಗಿ ಹಾಕಿದೆ, ಶೈಕ್ಷಣಿಕ ಗುಣಮಟ್ಟ ಹೆಚ್ಚಿಸುವ ಆಲೋಚನೆಯಲ್ಲಿರುವ ರಾಜ್ಯ ಸರ್ಕಾರ ಹಲವು ಯೋಜನೆಗಳನ್ನು ಜಾರಿಗೆ ತಂದು ಶಿಕ್ಷಣದ ಗುಣಮಟ್ಟ ಹೆಚ್ಚಿಸುವ ಧ್ಯೇಯೋದ್ದೇಶದೊಂದಿಗೆ ನೂರಾರು ಕೋಟಿ ಖರ್ಚು ಮಾಡುತ್ತಿದೆ. ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಬಸ್‍ಪಾಸ್ ಜಾರಿಗೊಳಿಸಿದರೂ ಅಧಿಕಾರಿಗಳ ನಿರ್ಲಕ್ಷ್ಯದಿಂದ ಬಸ್‍ಗಳು ಸಮರ್ಪಕ ಸಮಯಕ್ಕೆ ಬರುತ್ತಿಲ್ಲ.

ವಿದ್ಯಾರ್ಥಿಗಳು ಬಸ್ಸಿಗಾಗಿ ಬೆಳ್ಳಂಬೆಳಗ್ಗೆ ಊಟ, ತಿಂಡಿ ಬಿಟ್ಟು ಕಾದರೂ ನಿಗದಿತ ಸಮಯಕ್ಕೆ ಶಾಲಾ-ಕಾಲೇಜುಗಳಿಗೆ ಹೋಗಲಾಗದೆ 1-2 ಪೀರಿಯಡ್‍ಗಳು ಮುಗಿದ ನಂತರ ತರಗತಿಗೆ ಹೋಗುವ ಅನಿವಾರ್ಯ ಪರಿಸ್ಥಿತಿ ಒದಗಿದೆ. ಇದರಿಂದ ಶಿಕ್ಷಣದ ಗುಣಮಟ್ಟ ಸಹ ಕ್ಷೀಣಿಸುವ ಪರಿಸ್ಥಿತಿ ಒದಗಿದೆ. ನಮ್ಮ ಪರಿಸ್ಥಿತಿ ಆಲಿಸುವವರು ಯಾರೂ ಇಲ್ಲದಂತಾಗಿದ್ದಾರೆ ಎಂದು ಆರೋಪಿಸಿ ರಸ್ತೆ ತಡೆ ನಡೆಸುವ ಮೂಲಕ ವಿದ್ಯಾರ್ಥಿಗಳು ಆಕ್ರೋಶ ಹೊರಹಾಕಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link