ಮಡಿಕೇರಿ
ಮಡಿಕೇರಿ ಪ್ರವಾಸಿಗರ ಪಾಲಿಗೆ ಹಾಟ್ ಸ್ಪಾಟ್ ಆಗಿದೆ. ವಾರಾಂತ್ಯದಲ್ಲಿ ಸಹಸ್ರಾರು ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸ್ತಾರೆ. ಹೀಗೆ ಬರುವ ಪ್ರವಾಸಿಗರು ಪ್ಲಾಸ್ಟಿಕ್ ನೀರಿನ ಬಾಟಲಿಗಳನ್ನು ತರುತ್ತಾರೆ. ನೀರು ಕುಡಿದು ಬಾಟಲಿಗಳನ್ನು ಎಲ್ಲೆಂದರಲ್ಲಿ ಬಿಸಾಕಿ ಹೋಗ್ತಾರೆ. ಇದು ಸಾವಿರಾರು ಕೆಜಿಯಷ್ಟು ಸಂಗ್ರಹವಾಗುತ್ತಿದೆ. ಈ ಬಾಟಲಿಗಳನ್ನು ಮಡಿಕೇರಿ ನಗರಸಭೆ ಸಿಬ್ಬಂದಿ ಸಂಗ್ರಹಿಸಿ ವಿಲೇವಾರಿ ಮಾಡುತ್ತಾರೆ.
ಆದರೆ, ಸದ್ಯ ಮಡಿಕೇರಿಯಲ್ಲಿ ಕಸ ವೈಜ್ಞಾನಿಕವಾಗಿ ವಿಲೇವಾರಿ ಆಗುತ್ತಿಲ್ಲ. ಹೀಗಾಗಿ ಸಹಸ್ರಾರು ಕೆಜಿ ಪ್ಲಾಸ್ಟಿಕ್ ಬಾಟಲಿಗಳನ್ನ ತೆಗೆದುಕೊಂಡು ಹೋಗಿ ಬೆಟ್ಟದ ಮೇಲೆ ಡಂಪ್ ಮಾಡಲಾಗುತ್ತಿದೆ. ಇದೇ ಇದೀಗ ಟನ್ಗಟ್ಟಲೆ ಸಂಗ್ರಹವಾಗಿದೆ. ಈ ಸಮಸ್ಯೆಯಿಂದ ಮುಕ್ತವಾಗಲು ಇದೀಗ ಮಡಿಕೇರಿ ನಗರಸಭೆ ಮಡಿಕೇರಿ ನಗರದಲ್ಲಿ ಎರಡು ಲೀಟರ್ವರೆಗಿನ ಪ್ಲಾಸ್ಟಿಕ ವಾಟರ್ ಬಾಟಲಿಗಳ ಮಾರಾಟವನ್ನ ನಿಷೇಧಿಸಿ ಆದೇಶ ಹೊರಡಿಸಿದೆ.
ಈ ಸಂಬಂಧ ನಗರದ ವರ್ತಕರು, ಹೋಮ್ ಸ್ಟೇ ರೆಸಾರ್ಟ್ ಮಾಲೀಕರು ಹಾಗೂ ಕಲ್ಯಾಣ ಮಂಟಪಗಳ ಜೊತೆ ನಗರಸಭೆ ಮೀಟಿಂಗ್ ಮಾಡಿದ್ದು, ಮಡಿಕೇರಿ ನಗರದಲ್ಲಿ ಪ್ಲಾಸ್ಟಿಕ್ ನೀರಿನ ಬಾಟಲಿಗಳ ಬಳಕೆ ಮಾಡದಂತೆ ಮನವೊಲಿಕೆ ಮಾಡಿದೆ. ಮಡಿಕೇರಿ ನಗರದಲ್ಲಿ ಈಗಾಗಲೇ ಮೂರು ಕಡೆ ಜಲ ಶುದ್ಧೀಕರಣ ಘಟಕ ಇದ್ದು ಅಲ್ಲಿ 1 ರೂ. ಹಾಗೂ 5 ರೂ. ನಾಣ್ಯ ಹಾಕಿದರೆ ಬೇಕಾದಷ್ಟು ಕುಡಿಯುವ ನೀರು ದೊರಯುತ್ತದೆ. ಅದರ ಜೊತೆಗೆ ನಗರದ ಹಲವು ಕಡೆ ವಾಟರ್ ಫಿಲ್ಟರ್ಗಳನ್ನೂ ಅಳವಡಿಸಲು ಕೂಡ ಯೋಜನೆ ಸಿದ್ಧವಾಗಿದೆ. ನಗರದಲ್ಲಿ ಕಸದ ಹೊರೆ ತಗ್ಗಿಸುವ ಉದ್ದೇಶದಿಂದ ನಗರಸಭೆ ಈ ಕ್ರಮ ಕೈಗೊಂಡಿದೆ.
ಸದ್ಯ ಪ್ಲಾಸ್ಟಿಕ್ ಬಾಟಲಿಗಳನ್ನು ನಿಷೇಧಿಸಲಾಗಿದೆಯಾದರೂ ಕಟ್ಟುನಿಟ್ಟಾಗಿ ಜಾರಿಗೆ ತರುವ ಅವಶ್ಯಕತೆ ಇದೆ. ಈಗಾಗಲೆ ಅಂಗಡಿ ಮುಂಗಟ್ಟುಗಳಲ್ಲಿ ಸಾಕಷ್ಟು ಪ್ರಮಾಣದಲ್ಲಿ ನಿರಿನ ಬಾಟಲಿಗಳ ಸಂಗ್ರಹಗವಿದ್ದು ಅವುಗಳ ಮಾರಾಟಕ್ಕೆ ಅವಕಾಶ ನಿಡಲಾಗಿದೆ. ಆದರೆ, ಹೊಸ ಬಾಟಲಿಗಳ ಖರೀದಿ ಮಾಡದಂತೆ ಸೂಚಿಸಲಾಗಿದೆ. ಅಲ್ಲದೆ, ಪ್ಲಾಸ್ಟಿಕ್ ಬಾಟಲಿಗಳ ಬಳಕೆಯಿಂದ ಆಗುತ್ತಿರುವ ಸಮಸ್ಯೆಗಳ ಬಗ್ಗೆ ಪ್ರತಿ ಮಳಿಗೆಗಳಿಗೆ ಭೇಟಿ ನೀಡಿ ಅರಿವು ಮೂಡಿಸಲಾಗಿದೆ. ಮಡಿಕೇರಿ ನಗರಕ್ಕೆ ಬರುವ ಪ್ರವಾಸಿಗರು ಕೂಡ ಪ್ಲಾಸ್ಟಿಕ್ ಬಾಟಲಿ ತರದಂತೆ, ನಗರದ ಪ್ರವೇಶದಲ್ಲಿ ಮತ್ತು ನಗರದ ಒಳಗಡೆ ಸೂಚನಾ ಫಲಕ ಅಳವಡಿಸಲಾಗಿದೆ.
ಎರಡು ತಿಂಗಳವರೆಗೆ ಪ್ರವಾಸಿಗರು ಗ್ರಾಹಕರು ವರ್ತಕರಿಗೆ ಅರಿವು ಮೂಡಿಸಲು ಸಮಯಾವಕಾಶ ನೀಡಲಾಗಿದ್ದು ಅದಾದ ಬಳಿಕ ಕ್ರಮ ಕೈಗೊಳ್ಳಲಾಗುತ್ತದೆ. ನಗರಸಭೆ ನಿರ್ಧಾರವನ್ನು ಸಾರ್ವಜನಿಕರು ಸ್ವಾಗತಿಸಿದ್ದಾರೆ. ಕೊಡಗು ಜಿಲ್ಲೆ ಪ್ರವಾಸಿಗರ ಡಸ್ಟ್ ಬಿನ್ ಆಗುವುದು ಬೇಡ ಎಂದು ಸ್ಥಳೀಯರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಸದ್ಯ ಈ ಯೋಜನೆಯನ್ನ ಪ್ರಾಯೋಗಿಕವಾಗಿ ಮಡಿಕೇರಿ ನಗರದಲ್ಲಿ ಮಾತ್ರ ಜಾರಿಗೆ ತರಲಾಗಿದೆ. ಮುಂದಿನ ದಿನಗಳಲ್ಲಿ ಇಡೀ ಜಿಲ್ಲೆಯನ್ನು ಪ್ಲಾಸ್ಟಿಕ್ ಬಾಟಲಿ ಮುಕ್ತ ಮಾಡುವ ಸಂಬಂಧ ಜಿಲ್ಲಾಡಳಿತ ಯೋಚಿಸುತ್ತಿದೆ. ಮಡಿಕೇರಿ ನಗರಸಭೆಯ ಈ ತೀರ್ಮಾನಕ್ಕೆ ಪ್ರವಾಸಿಗರು ಹಾಗೂ ವರ್ತಕರು ಎಷ್ಟರಮಟ್ಟಿಗೆ ಸಹಕರಿಸ್ತಾರೆ ಕಾದುನೋಡಬೇಕಿದೆ.
