ಬೆಂಗಳೂರು:
ರಾಜ್ಯದ ಹಲವೆಡೆ ಸಾಧಾರಣ ಮಳೆಯ ಜೊತೆಗೆ ಚಳಿಯ ಪ್ರಮಾಣವೂ ಹೆಚ್ಚಾಗಿದೆ. ದಕ್ಷಿಣ ಭಾರತದ 4 ಕರಾವಳಿ ರಾಜ್ಯಗಳಲ್ಲಿ ಇಂದಿನಿಂದ ನವೆಂಬರ್ 14 ರವರೆಗೆ ಮಳೆಯಾಗುವ ಮುನ್ಸೂಚನೆ ನೀಡಲಾಗಿದೆ. ಕರ್ನಾಟಕ, ಕೇರಳ, ತಮಿಳುನಾಡು, ಆಂಧ್ರಪ್ರದೇಶ ಮತ್ತು ಪುದುಚೇರಿಯಲ್ಲಿ ನವೆಂಬರ್ 14ರ ವರೆಗೆ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಸೂಚನೆ ನೀಡಿದ್ದು, ಆರೆಂಜ್ ಅಲರ್ಟ್ ಘೋಷಣೆ ಮಾಡಲಾಗಿದೆ.
ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಕರಾವಳಿ ಜಿಲ್ಲೆಗಳು ಸೇರಿ 11 ಜಿಲ್ಲೆಗಳಲ್ಲಿ ನಾಳೆ ಹಗುರ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆಯು ಮುನ್ಸೂಚನೆ ನೀಡಿದೆ. ಉಳಿದಂತೆ ಇಂದು ಮತ್ತು ನಾಳೆ ರಾಜ್ಯದ ಬಹುತೇಕ ಕಡೆಗಳಲ್ಲಿ ಒಣಹವೆ ಇರಲಿದೆ ಎಂದು ಮಾಹಿತಿ ನೀಡಲಾಗಿದೆ. ರಾಮನಗರ, ಚಿಕ್ಕಬಳ್ಳಾಪುರ, ಕೋಲಾರ, ಚಾಮರಾಜನಗರ, ಶಿವಮೊಗ್ಗ, ಚಿಕ್ಕಮಗಳೂರು ಜಿಲ್ಲೆಗಳ ಒಂದೆರಡು ಕಡೆಗಳಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ. ಉತ್ತರ ಒಳನಾಡಿನ ಎಮತ್ತು ದಕ್ಷಿಣ ಒಳನಾಡಿನ ಉಳಿದ ಜಿಲ್ಲೆಗಳಲ್ಲಿ ಒಣ ಹವೆ ಕಾಣಿಸಿಕೊಳ್ಳುವ ಸಾಧ್ಯತೆಯಿದೆ ಎಂದು ತಿಳಿಸಲಾಗಿದೆ.
ನವೆಂಬರ್ 12ರಿಂದ 14ರ ವರೆಗೆ ಕರಾವಳಿ ಮತ್ತು ದಕ್ಷಿಣ ಒಳನಾಡಿನಲ್ಲಿ ಭಾರಿ ಮಳೆಯಾಗಲಿದೆ ಎನ್ನಲಾಗಿದೆ. ಉತ್ತರ ಒಳನಾಡಿನಲ್ಲಿ ಸಹ ಇದೆ ವೇಳೆಯಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ಸಂಭವವಿದೆ. ಡಿಸೆಂಬರ್ 15ರ ರಾಜ್ಯದಲ್ಲಿ ಪೂರ್ತಿಯಾಗಿ ಮಳೆ ಕಡಿಮೆಯಾಗುವ ಸಾಧ್ಯತೆಯಿದೆ. ಅಕ್ಟೋಬರ್, ನವೆಂಬರ್ ಮತ್ತು ಡಿಸೆಂಬರ್ ತಿಂಗಳಿನಲ್ಲಿ ಚಂಡಮಾರುತಗಳು ಕಾಣಿಸಿಕೊಳ್ಳುವುದು ಸಾಮಾನ್ಯವಾಗಿದೆ. ಹೀಗಾಗಿ ಈ ಬಾರಿ ರಾಜ್ಯದಲ್ಲಿ ಅಕ್ಟೋಬರ್, ನವೆಂಬರ್ ತಿಂಗಳಿನಲ್ಲಿ ದಾಖಲೆಯ ಮಳೆ ಸುರಿದಿದೆ.
ನವೆಂಬರ್ ಮತ್ತು ಡಿಸೆಂಬರ್ ತಿಂಗಳಲ್ಲಿಯೂ ರಾಜ್ಯದಲ್ಲಿ ಹೆಚ್ಚು ಮಳೆಯಾಗಲಿರುವ ಬಗ್ಗೆ ಭಾರತೀಯ ಹವಾಮಾನ ಇಲಾಖೆಯ ಮುನ್ಸೂಚನೆ ನೀಡಿದೆ. ಆದರೆ ಅಕ್ಟೋಬರ್ ತಿಂಗಳಿನಷ್ಟು ಮಳೆಯ ಪ್ರಭಾವ ಇರುವುದಿಲ್ಲ ಎನ್ನಲಾಗಿದೆ.