ಬೆಂಗಳೂರು
ಬೆಂಗಳೂರು ರಾಜ್ಯದ ದೇವಾಲಯಗಳ ಹುಂಡಿ ಹಣವನ್ನು ರಾಜ್ಯ ಸರ್ಕಾರ ಒಳ್ಳೆಯ ಕಾರ್ಯಗಳಿಗೆ ಬಳಸುತ್ತಿದೆಯೇ ಹೊರೆತು ಯಾವುದೇ ರೀತಿಯಲ್ಲೂ ದುರುಪಯೋಗವಾಗುತ್ತಿಲ್ಲ. ಬಿಜೆಪಿ ನಾಯಕರು ಈ ವಿಚಾರದಲ್ಲಿ ಸುಳ್ಳು ಆರೋಪ ಅಪಪ್ರಚಾರ ಮಾಡುವುದು ಸರಿಯಲ್ಲ ಎಂದು ರಾಜ್ಯ ಅರ್ಚಕರ ಸಂಘ ಹೇಳಿದೆ.
ವಿಧಾನ ಮಂಡಲ ಅಧಿವೇಶನದಲ್ಲಿ ಮಂಡನೆಯಾದ ಹಿಂದೂ ಧಾರ್ಮಿಕ ಸಂಸ್ಥೆ ಮತ್ತು ಧರ್ಮರಾಯ ದತ್ತಿ ವಿಧೇಯಕವನ್ನು ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಕೂಟ ನಾನಾ ಕಾರಣಗಳನ್ನು ನೀಡಿ ವಿರೋಧಿಸುತ್ತಿದೆ. ವಿಧಾನ ಪರಿಷತ್ತಿನಲ್ಲಿ ‘ಹಿಂದೂ ಧಾರ್ಮಿಕ ಸಂಸ್ಥೆ ಮತ್ತು ಧರ್ಮದಾಯ ದತ್ತಿ ವಿಧೇಯಕ’ವನ್ನು ಅಂಗೀಕಾರಕ್ಕೆ ವಿರೋಧ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಅಖಿಲ ಕರ್ನಾಟಕ ಧಾರ್ಮಿಕ ದೇವಾಲಯಗಳ ಅರ್ಚಕರ ಸಂಘದ ಪ್ರಧಾನ ಕಾರ್ಯದರ್ಶಿ ಕೆ.ಎಸ್.ಎಸ್ ದೀಕ್ಷಿತ್ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ವಿಧೇಯಕ ಪರವಾಗಿ ಬೆಂಬಲಿಸಿದರು.
ರಾಜ್ಯದ ‘ಎ’ ದರ್ಜೆಯ ದೇವಸ್ಥಾನಗಳ ಬಗ್ಗೆ ಅಪಪ್ರಚಾರ ನಡೆಯುತ್ತಿದೆ. ಈ ದೇವಸ್ಥಾನಗಳಲ್ಲಿ ನೂರಾರು ಕೋಟಿ ವ್ಯವಹಾರ ನಡೆಯುತ್ತಿದೆ. ಹಿಂದೂ ದೇವಾಲಯಗಳ ಹುಂಡಿ ಹಣ ಮಸೀದಿ ಮತ್ತು ಚರ್ಚ್‌ಗಳಿಗೆ ಹೋಗುತ್ತಿದೆ ಎಂಬ ಆರೋಪವನ್ನು ಅಲ್ಲಗೆಳೆಯುತ್ತೇವೆ. ಈ ವಿಚಾರದಲ್ಲಿ ಸರ್ಕಾರದ ವಿರುದ್ಧ ಬಿಜೆಪಿಯವರ ಆರೋಪಗಳೆಲ್ಲವೂ ಸತ್ಯಕ್ಕೆ ದೂರವಾದವು. ರಾಜ್ಯದ ಎ,ಬಿ,ಸಿ ದರ್ಜೆಯ ದೇವಾಲಯಗಳ ಹುಂಡಿ ಹಣ ಯಾವುದೇ ಕಾರಣಕ್ಕೂ ದುರುಪಯೋಗ ಆಗುತ್ತಿಲ್ಲ. ದೇವಾಲಯಗಳ ಹಣವನ್ನು ರಾಜ್ಯ ಸರ್ಕಾರ ಒಳ್ಳೆಯ ಕೆಲಸಕ್ಕೆ ಉಪಯೋಗಿಸುತ್ತಿದೆ. ದೇವಾಲಯಗಳಲ್ಲಿ ನಿತ್ಯ ಕೋಟ್ಯಂತರ ಹಣ ಸಂಗ್ರಹ ಆಗುತ್ತಿದ್ದು, ಇದನ್ನು ಬಿಜೆಪಿ ಸಹಿಸುತ್ತಿಲ್ಲ ಎನಿಸುತ್ತಿದೆ. ಈ ಬಗ್ಗೆ ಅಪಪ್ರಚಾರ ಮಾಡದಂತೆ ಬಿಜೆಪಿಯ ನಾಯಕರಿಗೂ ಮನವಿ ಮಾಡುತ್ತೇನೆ ಎಂದು ಕೆ.ಎಸ್.ಎಸ್ ದೀಕ್ಷಿತ್ ಹೇಳಿದರು.
ಈ ಹಿಂದಿನ ಸರ್ಕಾರ ನಮಗೆ ತಸ್ತಿಕ್ ಕೊಟ್ಟಿರಲಿಲ್ಲ. ಆದರೆ ಹೊಸ ಸರ್ಕಾರ ಬಂದ ತಕ್ಷಣ ಸಚಿವ ರಾಮಲಿಂಗಾರೆಡ್ಡಿ ಅವರು ನಮ್ಮ ಬೇಡಿಕೆ ಈಡೇರಿಸಿದ್ದಾರೆ. ಈ ವಿಚಾರದಲ್ಲಿ ಯಾರ ವಿರುದ್ಧವೂ ಪ್ರತಿಭಟನೆ ಮಾಡುವುದಿಲ್ಲ. ಆದರೆ, ಪ್ರತಿಯೊಬ್ಬ ಬಿಜೆಪಿ ನಾಯಕರ ಮನೆಗೂ ಹೋಗಿ ವಸ್ತು ಸ್ಥಿತಿ ತಿಳಿಸಿ ನಿಮ್ಮ ವಿರೋಧ ಸರಿಯಲ್ಲ ಎಂಬುದನ್ನು ಮನವರಿಕೆ ಮಾಡಿಕೊಡುತ್ತೇವೆ ಎಂದರು. ಸಂಘದ ಪ್ರಧಾನ ಸಲಹೆಗಾರ ರಾಧಾಕೃಷ್ಣ ಮತ್ತಿತರರು ಸುದ್ದಿಗೋಷ್ಠಿಯಲ್ಲಿ ಇದ್ದರು.
ಬಿಜೆಪಿಗೆ ಸಿದ್ಧರಾಮಯ್ಯ ತಿರುಗೇಟು ಕೊಟ್ಟಿದ್ದರು. ಶುಕ್ರವಾರ ಟ್ವೀಟ್ ಮಾಡಿರುವ ಸಿದ್ದರಾಮಯ್ಯನವರು, ಹಿಂದೂಯೇತರ ಸಮುದಾಯಗಳಿಗೆ ಹಿಂದೂ ದೇವಸ್ಥಾನಗಳ ಹಣವನ್ನು ಮತ್ತು ಹಿಂದೂ ದೇವಸ್ಥಾನಗಳ ಮೇಲೆ ಅನ್ಯಾಯಯುತ ತೆರಿಗೆ ಹಾಕಲಾಗುತ್ತಿದೆ. ಈ ಆರೋಪ ಕರ್ನಾಟಕ ಬಿಜೆಪಿ ನಾಯಕರ ಸಂಪೂರ್ಣ ಕಪೋಲಕಲ್ಪಿತ ಆರೋಪವಾಗಿದೆ. ಅಮಾಯಕ ಹಿಂದೂಗಳನ್ನು ನಮ್ಮ ಸರ್ಕಾರದ ವಿರುದ್ಧ ಎತ್ತಿಕಟ್ಟುವ ದುರುದ್ದೇಶದಿಂದ ಬಿಜೆಪಿ ನಾಯಕರು ಇಂತಹ ಕ್ಷುಲಕ ಪ್ರಯತ್ನ ಮಾಡುತ್ತಿದ್ದಾರೆ ಎಂದು ಅವರು ತಿರುಗೇಟು ಕೊಟ್ಟರು.
ದೇವಸ್ಥಾನಗಳ ಹುಂಡಿಗಳಲ್ಲಿ ಸಂಗ್ರಹವಾಗುವ ಹಣವನ್ನು ಹಿಂದೂ ಧರ್ಮದ ಧಾರ್ಮಿಕ ಆಚರಣೆಗಳಿಗೆ ಸಂಬಂಧಪಟ್ಟಂತೆ ಮಾತ್ರ ಬಳಸಲಾಗುತ್ತದೆ. ಈ ನಿಧಿಯು 2003ರಲ್ಲಿ ಕಾಯಿದೆಯು ಜಾರಿಗೆ ಬಂದಾಗಿನಿಂದ ಧಾರ್ಮಿಕ ಕಾರ್ಯಗಳಿಗೆ ಮಾತ್ರ ಬಳಕೆಯಾಗುತ್ತಿದೆ ಭವಿಷ್ಯದಲ್ಲಿಯೂ ಅದಕ್ಕೆ ಮಾತ್ರವೇ ಬಳಕೆಯಾಗಲಿದೆ ಎಂದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ