ಬೆಂಗಳೂರು:
ಪ್ರಯಾಣಿಕರ ಬೆಲೆ ಬಾಳುವ ವಸ್ತುಗಳನ್ನು ಕಳವು ಮಾಡುತ್ತಿದ್ದ ದಂಪತಿ ಸೇರಿ ಐವರು ಸಂಬಂಧಿಕರ ಗ್ಯಾಂಗ್ ಸೇರಿ 8 ಮಂದಿಯನ್ನು ಬಂಧಿಸಿರುವ ಉಪ್ಪಾರಪೇಟೆ ಪೊಲೀಸರು ನಗದು ಸೇರಿ 37 ಲಕ್ಷ 65 ಸಾವಿರ ಮೌಲ್ಯದ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಕೋಲಾರಜಿಲ್ಲೆ ಬೇತಮಂಗಲದ ವೆಂಕಟೇಶ್ (39) ಆತನ ಪತ್ನಿ ಲಕ್ಷ್ಮಿ ಅಲಿಯಾಸ್ ವರಲಕ್ಷ್ಮಿ (30), ಆನೇಕಲ್‍ನ ಹುಲಿಮಂಗಲದ ಮನುಕುಮಾರ್ ಅಲಿಯಾಸ್ ಮನು (29), ತಮಿಳುನಾಡಿನ ಬಳ್ಳೂರಿನ ಭಾಗ್ಯಮ್ಮ ಅಲಿಯಾಸ್ ಭಾಗ್ಯ (50), ಮಾಗಡಿ ರಸ್ತೆ ಗೊಲ್ಲರಹಟ್ಟಿಯ ಮಂಜ ಅಲಿಯಾಸ್ ಪಾನಿಪುರಿ ಮಂಜ (24)ಬಂಧಿತ ಆರೋಪಿಗಳಾಗಿದ್ದು ಇವರೆಲ್ಲರೂ ಒಂದಲ್ಲಿ ಒಂದು ರೀತಿಯಲ್ಲಿ ಸಂಬಂಧಿಕರಾಗಿದ್ದಾರೆ.
ಕಳ್ಳತನ ಕೃತ್ಯ ವೆಸಗುವ ವೇಳೆ ಪರಿಚಿತನಾಗಿದ್ದ ಜೀವನ್‍ಪಾಳ್ಯದ ಅಮ್ಜದ್ ಅಲಿಯಾಸ್ ಅಂಗದ್ ಸಿಂಗ್ (30) ಕೂಡ ಬಂಧಿತರ ಗ್ಯಾಂಗ್ ಸೇರಿಕೊಂಡಿದ್ದನು ಬಂಧಿತ ಗ್ಯಾಂಗ್‍ನ ಎಲ್ಲರೂ ಹಿಂದೆ ಅಪರಾದ ಕೃತ್ಯಗಳಲ್ಲಿ ಜೈಲಿಗೆ ಹೋಗಿ ಬಿಡುಗಡೆಯಾಗಿ ಬಂದು ಮೂರ್ನಾಲ್ಕು ತಿಂಗಳಿಗೆ ಮನೆ ಬದಲಿಸಿಕೊಂಡು ತಿರುಗುತ್ತಿದ್ದರು ಇವರೆಲ್ಲರ ಮೇಲೂ ವಾರೆಂಟ್ ಜಾರಿಯಾಗಿದ್ದರಿಂದ ಪೊಲೀಸರ ಕಣ್ತಪ್ಪಿಸಿ ಓಡಾಡಲು ಕೋಲಾರ, ಪಾಂಡವಪುರ, ಮಂಡ್ಯ,ಕುಣಿಗಲ್ ಇನ್ನಿತರ ಕಡೆಗಳಲ್ಲಿ 3-4 ತಿಂಗಳಿಗೊಮ್ಮ ಮನೆ ಬದಲಿಸಿ ಕೃತ್ಯ ಎಸಗುತ್ತಿದ್ದರು
ಜೇಬುಗಳ್ಳರ ಸೆರೆ.
ಇವರ ಜತೆ ಜೇಬುಗಳವು ಮಾಡುತ್ತಿದ್ದ ಶಾಖಾಂಬರಿ ನಗರದ ಸೈಯದ್ ಇಸ್ಮಾಯಿಲ್ (32), ವಿದ್ಯಾರಣ್ಯಪುರದ ಸುರೇಶ್ (49)ನನ್ನು ಬಂಧಿಸಲಾಗಿದೆ.ಬಂಧಿತ 8 ಮಂದಿಯಿಂದ 3 ಲಕ್ಷ 9 ಸಾವಿರ ನಗದು, 1 ಕೆಜಿ 225 ಗ್ರಾಂ ಚಿನ್ನಾಭರಣಗಳು ಸೇರಿ 37 ಲಕ್ಷ 65 ಸಾವಿರ ಮೌಲ್ಯದ ಮಾಲುಗಳನ್ನು ವಶಪಡಿಸಿಕೊಂಡು 29 ಕಳವು ಪ್ರಕರಣಗಳನ್ನು ಪತ್ತೆ ಹಚ್ಚಲಾಗಿದೆ ಎಂದು ಡಿಸಿಪಿ ರವಿಚೆನ್ನಣ್ಣನವರ್ ತಿಳಿಸಿದ್ದಾರೆ.
ಆರೋಪಿಗಳು ಗ್ಯಾಂಗ್ ಕಟ್ಟಿಕೊಂಡು ಉಪ್ಪಾರಪೇಟೆ, ಕಲಾಸಿಪಾಳ್ಯ, ಕಾಟನ್‍ಪೇಟೆ, ಚಂದ್ರಾಲೇಔಟ್, ಕೆಂಗೇರಿ ಇನ್ನಿತರ ಕಡೆಗಳಲ್ಲಿ ಸುತ್ತಾಡುತ್ತ ಪ್ರಯಾಣಿಕರ ಬ್ಯಾಗ್‍ಗಳಿಂದ ನಗದು, ಚಿನ್ನಾಭರಣ ಸೇರಿ ಬೆಲೆ ಬಾಳುವ ವಸ್ತುಗಳನ್ನು ಕಳವು ಮಾಡಿ ಪರಾರಿಯಾಗುತ್ತಿದ್ದರು.
ಬಂಧಿತ ಮಹಿಳೆಯರಿಬ್ಬರು ಅಮಾಯಕರಂತೆ ನಟಿಸಿ, ಪ್ರಯಾಣಿಕರ ಬ್ಯಾಗ್‍ಗಳಲ್ಲಿದ್ದ ಬೆಲೆಬಾಳುವ ವಸ್ತುಗಳನ್ನು ದೋಚುತ್ತಿದ್ದರೆ, ಅವರಿಗೆ ಸಹಾಯಕರಾಗಿ ಇತರ ಆರೋಪಿಗಳು ಕೆಲಸ ಮಾಡುತ್ತಿದ್ದರು. ಪ್ರಯಾಣಿಕರ ಬ್ಯಾಗುಗಳಲ್ಲಿನ ನಗದು, ಚಿನ್ನಾಭರಣ ಕಳವು ಮಾಡುತ್ತಿದುದ್ದಲ್ಲದೆ 2 ಮನೆಗಳವು ಕೃತ್ಯಗಳಲ್ಲೂ ಗ್ಯಾಂಗ್ ಭಾಗಿಯಾಗಿರುವುದು ತನಿಖೆಯಲ್ಲಿ ಪತ್ತೆಯಾಗಿದೆ.
ವೆಂಕಟೇಶ್ ಹಾಗೂ ವರಲಕ್ಷ್ಮಿ ದಂಪತಿಯೇ ಈ ಖತರ್ನಾಕ್ ಗ್ಯಾಂಗಿನ ಮಾಸ್ಟರ್ ಮೈಂಡ್ ಆಗಿದ್ದು, ಒಂದೇ ಕುಟುಂಬದ ಐವರ ಖತರ್ನಾಕ್ ಗ್ಯಾಂಗ್ ಜೊತೆ ಸೇರಿ ಕೃತ್ಯವನ್ನು ಮಾಡುತ್ತಿದ್ದರು. ಇವರು ಬಸ್ಸುಗಳನ್ನು ಹತ್ತಿ ಅಮಾಯಕರಂತೆ ವರ್ತಿಸಿ ಕ್ಷಣಾರ್ಧದಲ್ಲಿ ಬ್ಯಾಗ್ ಗಳನ್ನು ಎಗರಿಸುತ್ತಿದ್ದರು.
ಬಹುಮಾನ
ಆರೋಪಿಗಳ ವಿರುದ್ಧ ಮಳವಳ್ಳಿ, ಮಂಡ್ಯ, ಪಾಂಡವಪುರ, ಶ್ರೀರಂಗಪಟ್ಟಣ, ಗಿರಿನಗರ, ಇನ್ನಿತರ ಪೊಲೀಸ್ ಠಾಣೆಗಳಲ್ಲಿ ಕಳವು ಪ್ರಕರಣಗಳು ದಾಖಲಾಗಿದ್ದು, ಹೆಚ್ಚಿನ ತನಿಖೆ ಕೈಗೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಪ್ರಯಾಣಿಕರ ಬೆಲೆಬಾಳುವ ವಸ್ತುಗಳು ಕಳುವಾಗುತ್ತಿರುವ ಸಂಬಂಧ ಚಿಕ್ಕಪೇಟೆ ಎಸಿಪಿ ನಿರಂಜನ್ ರಾಜ್ ಅರಸ್‍ಅವರ ನೇತೃತ್ವದಲ್ಲಿ ರಚಿಸಿದ್ದ ವಿಶೇಷ ತಂಡ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.ಆರೋಪಿಗಳನ್ನು ಬಂಧಿಸಿದ ಪೊಲೀಸ್ ತಂಡಕ್ಕೆ ವಿಶೇಷ ಬಹುಮಾನ ಘೋಷಿಸಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ