ತುಮಕೂರು:
ಶೇ.90ರಷ್ಟು ಸೋಂಕಿತರಿಗೆ ಮನೆಯಲ್ಲೇ ಚಿಕಿತ್ಸೆ | ಆಸ್ಪತ್ರೆ ದಾಖಲಾತಿ ಕಡಿಮೆ
ರಾಜ್ಯದಲ್ಲಿ ಕೋವಿಡ್ 3ನೇ ಅಲೆ ಶರವೇಗದಲ್ಲಿ ಹೆಚ್ಚುತ್ತಿರುವುದು ಒಂದೆಡೆಯಾದರೆ, ಹೊಸ ಸೋಂಕಿತರಲ್ಲಿ ಶೇ.90ರಷ್ಟು ಸೋಂಕಿತರು ಹೋಂ ಐಸೋಲೇಷನ್‍ನಲ್ಲಿರುವುದು ಕಂಡುಬಂದಿದ್ದು, ಆಸ್ಪತ್ರೆ. ಐಸಿಯು ದಾಖಲಾತಿ ಕಡಿಮೆಯಿರುವುದು ಆಶಾದಾಯಕ ಸಂಗತಿ.
ಆದರೆ ಸೋಂಕಿನ ಸಂಖ್ಯೆಯಲ್ಲಾಗುತ್ತಿರುವ ಏರುಗತಿ ಮುಂದೆ ಯಾವ ಪರಿಸ್ಥಿತಿ ತಂದೊಡ್ಡಬಹುದೋ ಎಂಬ ಆತಂಕವನ್ನು ಸÀೃಷ್ಟಿಸಿದ್ದು, ಆಡಳಿತ ಈ ದಿಸೆಯಲ್ಲಿ ಕೋವಿಡ್ ಕೇರ್ ಸೆಂಟರ್, ಬೆಡ್‍ಗಳ ಕಾದಿರಿಸುವಿಕೆಯಂತಹ ಪೂರಕ ಕ್ರಮಗಳನ್ನು ಮುನ್ನೆಚ್ಚರಿಕೆಯಾಗಿ ಕೈಗೊಳ್ಳಬೇಕಿದೆ.
2021 ಡಿ.31 ರಿಂದ ಜ.11ರವರೆಗೆ 62,961 ಮಂದಿಗೆ ಸೋಂಕು ವ್ಯಾಪಿಸಿದ್ದು, ಇವರಲ್ಲಿ ಶೇ.93%ರಷ್ಟು ಸೋಂಕಿತರು ಹೋಂ ಐಸೋಲೇಷನ್‍ನಲ್ಲಿದ್ದರೆ, ಶೇ.6ರಷ್ಟು ಮಂದಿ ಮಾತ್ರ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಉಳಿಕೆ 1 % ಮಂದಿ ಮಾತ್ರ ಕೋವಿಡ್ ಕೇರ್ ಸೆಂಟರ್‍ನಲ್ಲಿದ್ದಾರೆ. ಆರೋಗ್ಯ ಇಲಾಖೆಯೇ ಟ್ವಿಟರ್‍ನಲ್ಲಿ ಈ ಅಂಕಿ ಅಂಶವನ್ನು ಬಹಿರಂಗಗೊಳಿಸಿದ್ದು, 2021 ಏಪ್ರಿಲ್‍ನಿಂದ ಈವರೆಗಿನ ಅಂಕಿ ಅಂಶ ತಾಳೆ ಹಾಕಿದರೆ ಹೋಂ ಐಸೊಲೋಷನ್‍ಗೊಳಗಾಗುತ್ತಿರುವ ಸೋಂಕಿತರ ಸಂಖ್ಯೆ ಹಂತ ಹಂತವಾಗಿ ಏರುತ್ತಲೇ ಇದೆ.
ಶೇ.64ರ ಪ್ರಮಾಣದಲ್ಲಿದ್ದ ಹೋಂ ಐಸೋಲೇಷನ್: ಎರಡನೇ ಅಲೆ ತೀವ್ರವಾಗಿದ್ದ 2021 ಏಪ್ರಿಲ್ 15 ರಿಂದ ಏ.22ರ ಅವಧಿಯಲ್ಲಿ ಕಂಡುಬಂದ 1,27,762 ಸೋಂಕಿತರ ಪೈಕಿ ಶೇ.30ರಷ್ಟು ಮಂದಿ ಆಸ್ಪತ್ರೆಯಲ್ಲಿ 64% ಹೋಂ ಐಸೋಲೇಷನ್‍ನಲ್ಲಿ ಚಿಕಿತ್ಸೆ ಪಡೆದಿದ್ದರೆ, ಮೇ 7ರಿಂದ 14ರವರೆಗೆ ಸೋಂಕಿಗೊಳಗಾದ 3,10,263 ಮಂದಿಯಲ್ಲಿ ಶೇ.74ರಷ್ಟು ಮಂದಿ ಹೋಂ ಐಸೋಲೇಷನ್‍ನಲ್ಲಿ ಶೇ.22ರಷ್ಟು ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದರು.
ಜೂ.25ರಿಂದ ಜು.2ರವರೆಗೆ ಕಂಡುಬಂದ 23031 ಮಂದಿ ಸೋಂಕಿತರಲ್ಲಿ ಶೇ.19ರಷ್ಟು ಮಂದಿ ಆಸ್ಪತ್ರೆಯಲ್ಲಿ 6% ಕೋವಿಡ್ ಕೇರ್ ಸೆಂಟರ್‍ನಲ್ಲಿ, ಶೇ.75ರಷ್ಟು ಮಂದಿ ಹೋಂ ಐಸೋಲೇಷನ್‍ಗೊಳಗಾಗಿದ್ದರು. ಡಿ.1 ರಿಂದ ಡಿ.7ರವರೆಗೆ ಕಂಡುಬಂದ 3151 ಸೋಂಕಿತರಲ್ಲಿ ಶೇ.23ರಷ್ಟು ಮಂದಿ ಆಸ್ಪತ್ರೆ.
ಶೇ.3ರಷ್ಟು ಮಂದಿ ಕೋವಿಡ್ ಕೇರ್ ಸೆಂಟರ್‍ನಲ್ಲಿ, ಶೇ.74ರಷ್ಟು ಮಂದಿ ಹೋಂ ಐಸೋಲೇಷನ್‍ನಲ್ಲಿ ಚಿಕಿತ್ಸೆ ಪಡೆದಿದ್ದರು. ಪ್ರಸ್ತುತ 3ನೇ ಅಲೆಯಲ್ಲಿ ಸಚಿವರು, ಗಣ್ಯರಾದಿಯಾಗಿ ಬಹುತೇಕ ಜನಸಾಮಾನ್ಯರು ಮನೆಯಲ್ಲಿ ಸೋಂಕು ಗುಣಪಡಿಸಿಕೊಳ್ಳಲು ಮುಂದಾಗಿರುವುದು ಹೋಂ ಐಸೋಲೇಷನ್ ಸೋಂಕು ನಿಯಂತ್ರಣಕ್ಕೆ ಪರಿಣಾಮಕಾರಿಯೇ ಎಂಬ ಪ್ರಶ್ನೆಯನ್ನು ಹುಟ್ಟಿಹಾಕಿದೆ.
ಹೋಂ ಐಸೋಲೇಷನ್ ಸೂಕ್ತವೇ?:
ಡಿ.12ಕ್ಕೆ ಕೋವಿಡ್ ಪಾಸಿಟಿವಿಟಿ ದರ ಶೇ.10.96ರಷ್ಟಕ್ಕೆ ಏರಿಕೆಯಾಗಿದ್ದು, ಬುಧವಾರ 21390 ಸಂಖ್ಯೆಯಲ್ಲಿ ಹೊಸ ಸೋಂಕಿತರು ರಾಜ್ಯಾದಾದ್ಯಂತ ಕಂಡುಬಂದಿದ್ದಾರೆ. ಮಂಗಳವಾರ ಈ ಸೋಂಕಿತರ ಪ್ರಮಾಣ 14473ರಷ್ಟಿತ್ತು. ಸೋಂಕಿತರ ಸಂಖ್ಯೆ ದಿನವೊಂದಕ್ಕೆ 5 ಸಾವಿರಕ್ಕೂ ಮೇಲ್ಪಟ್ಟು ರಾಜ್ಯದಲ್ಲಿ ಅಧಿಕವಾಗುತ್ತಿರುವುದು ಸೋಂಕು ಶರವೇಗದಲ್ಲಿ ಹಬ್ಬುತ್ತಿರುವುದರ ದ್ಯೋತಕ.
ಇಂತಹ ಸಂದರ್ಭದಲ್ಲಿ ಹೋಂ ಐಸೊಲೇಷನ್ ಪರಿಣಾಮಕಾರಿಯೇ ಎಂಬ ಪ್ರಶ್ನೆ ಸಹಜವಾಗಿ ಜನರಲ್ಲಿ ಮೂಡಿದ್ದು, ಕಿರಿದಾದ ಮನೆಗಳಲ್ಲಿ, ಸೋಂಕಿತರಿಗೆ ಪ್ರತ್ಯೇಕ ಶೌಚಾಲಯ ಇಲ್ಲದೆಡೆ ಕೋವಿಡ್ ಪಾಸಿಟಿವ್ ಬಂದಿರುವವರು ನೆಲೆಸುವುದು ಕುಟುಂಬದ ಇತರ ಸದಸ್ಯರು, ನೆರೆ ಹೊರೆಯವರಿಗೂ ಸೋಂಕು ಬೇಗ ಹರಡಲು ಕಾರಣವಾಗಬಹುದು ಎಂಬ ಆತಂಕಗಳನ್ನು ನಾಗರಿಕರು ವ್ಯಕ್ತಪಡಿಸುತ್ತಿದ್ದಾರೆ.
ಆದರೆ ತಜ್ಞ ವೈದ್ಯರು ಪ್ರಸ್ತುತ ಸೋಂಕು ಸೌಮ್ಯ ಲಕ್ಷಣಗಳಲ್ಲಿರುವುದರಿಂದ ಸಿವಿಯಾರಿಟಿ ಪ್ರಮಾಣ ಕಡಿಮೆಯಿದ್ದಲ್ಲಿÀ ಹೋಂ ಐಸೋಲೇಷನ್ ಸಾಕು. ಇದರಿಂದ ರೋಗಿಗಳು ಮಾನಸಿಕ ಖಿನ್ನತೆಯಿಂದ ಹೊರಬಹುದು. ಆದರೆ ಮನೆಯ ಇತರ ಸದಸ್ಯರಿಗೆ ಹರಡದಂತೆ ಸೋಂಕಿತರು ಎಚ್ಚರವಹಿಸಬೇಕು.
ಸಜ್ಜುಗೊಳ್ಳದ ಕೋವಿಡ್ ಕೇರ್ ಕೇಂದ್ರಗಳು:
ಎರಡನೇ ಅಲೆ ತೀವ್ರಗೊಳ್ಳುವ ಸಂದರ್ಭಕ್ಕೂ ಮುನ್ನವೇ ಕೋವಿಡ್ ಕೇರ್ ಸೆಂಟರ್‍ಗಳ ಸ್ಥಾಪನೆಗೆ ಸರಕಾರ ಆರೋಗ್ಯ ಇಲಾಖೆ ಕ್ರಮ ವಹಿಸಿತ್ತು. ಆದರೆ 3ನೇ ಅಲೆ ತೀವ್ರಗೊಳ್ಳುತ್ತಿರುವ ಸಂದರ್ಭದಲ್ಲಿ ಕೋವಿಡ್ ಕೇರ್‍ಸೆಂಟರ್‍ಗಳು ಇನ್ನೂ ಆರಂಭಗೊಂಡಿಲ್ಲ. ಈಗಷ್ಟೇ ಹಿಂದೆ ತೆರೆಯಲಾಗಿದ್ದ ಸೆಂಟರ್‍ಗಳನ್ನು ನೋಡಿ ಧೂಳು ತೆಗೆಯುವ ಕಾರ್ಯ ಮಾಡಲಾಗುತ್ತಿದೆ.
ಆದಷ್ಟು ಬೇಗ ಕೋವಿಡ್ ಕೇರ್ ಸೆಂಟರ್‍ಗಳನ್ನು ತೆರೆದು, ಸೌಲಭ್ಯವಿಲ್ಲದಿದ್ದರೂ ಹೋಂ ಐಸೋಲೇಷನ್‍ಗೊಳಗಾಗುವುದನ್ನು ತಪ್ಪಿಸಿ ಅವರಿಂದ ಮನೆ ಸದಸ್ಯರಿಗೂ ಸೋಂಕು ಹರಡುವುದನ್ನು ತಪ್ಪಿಸುವ ಕಾರ್ಯ ಆಡಳಿತದಿಂದ ತ್ವರಿತವಾಗಬೇಕಿದೆ ಎಂಬ ಅಭಿಪ್ರಾಯವೂ ಕೇಳಿಬಂದಿದೆ.
ಜಿಲ್ಲೆಯ ಒಟ್ಟು 1472 ಸಕ್ರಿಯ ಪ್ರಕರಣಗಳಲ್ಲಿ ಶೇ.90ರಷ್ಟು ಮಂದಿ ಜಿಲ್ಲೆಯಲ್ಲಿ ಹೋಂ ಐಸೋಲೇಷನ್‍ನಲ್ಲಿದ್ದು, ಅವರಿಗೆ ಅಗತ್ಯ ಮೆಡಿಕಲ್ ಕಿಟ್ ಅನ್ನು ಒದಗಿಸಿ ಟೆಲಿಕಾಲಿಂಗ್ ಮೂಲಕ ಅವರ ಆರೋಗ್ಯ ಪರಿಸ್ಥಿತಿ ಮೇಲೆ ನಿಗಾ ಇರಿಸಲಾಗಿದೆ.
ಜಿಲ್ಲಾಧಿಕಾರಿಗಳು ಬುಧವಾರದ ಸಭೆಯಲ್ಲಿ ತ್ವರಿತ ಕೋವಿಡ್ ಕೇರ್ ಸೆಂಟರ್‍ಗಳನ್ನು ಜಿಲ್ಲೆಯಾದ್ಯಂತ ತೆರೆಯಲು ಸೂಚಿಸಿದ್ದು,ಎರಡನೇ ಅಲೆಯಲ್ಲಿ ಆರಂಭಿಸಲಾಗಿದ್ದ ಹಾಸ್ಟಲ್‍ಗಳಲ್ಲಿ ಮತ್ತೆ ಕೇರ್ ಸೆಂಟರ್ ಸ್ಥಾಪಿಸಲು ಪರಿಶೀಲನೆ ನಡೆಸಲಾಗುತ್ತಿದೆ. ನಿತ್ಯ 6000 ಮಂದಿಗೆ ಕೋವಿಡ್ ಟೆಸ್ಟ್ ಸಹ ಮಾಡಲಾಗುತ್ತಿದೆ.
-ಡಾ.ನಾಗೇಂದ್ರಪ್ಪ, ಡಿಎಚ್‍ಓ, ತುಮಕೂರು.
ಪ್ರಸಕ್ತ ಕೋವಿಡ್ 3ನೇ ಅಲೆಯಲ್ಲಿ ಸೋಂಕಿನ ಸಿವಿಯಾರಿಟಿ ಪ್ರಮಾಣ ಸದ್ಯಕ್ಕೆ ಕಡಿಮೆಯಿರುವುದರಿಂದ ಮನೆಯಲ್ಲಿ ಪ್ರತ್ಯೇಕವಾದ ವ್ಯವಸ್ಥೆಯಿದ್ದಲ್ಲಿ ಹೋಂ ಐಸೋಲೇಷನ್ ಸಾಕಾಗುತ್ತದೆ. ಇದರಿಂದ ರೋಗಿ ಆಸ್ಪತ್ರೆ, ಕೇರ್ ಸೆಂಟರ್‍ಗಳಲ್ಲಿ ಹೋಗಿ ಮಾನಸಿಕ ಖಿನ್ನತೆಗೊಳಗಾಗುವುದು ತಪ್ಪುತ್ತದೆ.
ಆದರೆ ವೈರಸ್ ಸೌಮ್ಯ ಸ್ವರೂಪದಲ್ಲೇ ಇರುತ್ತದೆಂದು ಖಚಿತವಾಗಿ ಹೇಳಲಾಗದು. ಗಂಭೀರ ಸಮಸ್ಯೆ ಕಂಡುಬಂದÀರೆ ನಿರ್ಲಕ್ಷ್ಯಿಸದೆ ಆಸ್ಪತ್ರೆಗೆ ದಾಖಲಾಗುವುದು ಸೂಕ್ತ.
-ಡಾ.ಟಿ.ಎಸ್.ಶಶಿಧರ್, ಫಿಸಿಷಿಯನ್, ತುಮಕೂರು.
-ಎಸ್.ಹರೀಶ್ ಆಚಾರ್ಯ ತುಮಕೂರು
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
