ನಾಗ್ಪುರ:
ಪ್ರವಾಸಿ ಇಂಗ್ಲೆಂಡ್ ಮತ್ತು ಭಾರತ ವಿರುದ್ಧದ ಏಕದಿನ ಸರಣಿ ನಾಳೆಯಿಂದ ಆರಂಭವಾಗಲಿದೆ. ಮೊದಲ ಪಂದ್ಯವನ್ನಾಡಲು ಈಗಾಗಲೇ ಉಭಯ ತಂಡಗಳ ಆಟಗಾರರು ನಾಗ್ಪುರ ತಲುಪಿದ್ದು ಅಭ್ಯಾಸ ಕೂಡ ಆರಂಭಿಸಿದ್ದಾರೆ. ಟೀಮ್ ಇಂಡಿಯಾ ಸದಸ್ಯರು ಅಭ್ಯಾಸ ಮುಗಿಸಿ ಹೋಟೆಲ್‌ಗೆ ಬರುವ ವೇಳೆ ತಂಡದ ಸದಸ್ಯರೊಬ್ಬರನ್ನು ಅಭಿಮಾನಿ ಎಂದು ಭಾವಿಸಿ ಪೊಲೀಸರು ತಡೆದು ನಿಲ್ಲಿಸಿದ ಘಟನೆ ನಡೆದಿದೆ. ಈ ವಿಡಿಯೊ ವೈರಲ್ ಆಗಿದೆ.
ಟೀಮ್ ಇಂಡಿಯಾ ಆಟಗಾರರು ಅಭ್ಯಾಸ ಮುಗಿಸಿ ಬಸ್‌ನಲ್ಲಿ ಹೋಟೆಲ್‌ಗೆ ಆಗಮಿಸಿದ ವೇಳೆ ಕಾರ್‌ನಲ್ಲಿ ಬಂದಿದ್ದ ಥ್ರೋಡೌನ್ ಸ್ಪೆಷಲಿಸ್ಟ್ ಕರ್ನಾಟಕ ಮೂಲದ ರಘು ಆಟಗಾರರ ಜತೆ ಹೋಟೆಲ್ ಒಳಗಡೆ ಹೋಗಲು ಬರುತ್ತಿದ್ದರು. ಈ ವೇಳೆ ಅವರನ್ನು ಪೊಲೀಸರು ತಡೆದು ನಿಲ್ಲಿಸಿದ್ದಾರೆ. ತಾವು ಭಾರತೀಯ ತಂಡದ ಸದಸ್ಯ ಎಂದು ಹೇಳಿದರೂ ಪೊಲೀಸರು ರಘು ಅವರನ್ನು ಒಳಗೆ ಬಿಡಲಿಲ್ಲ. ಸ್ವಲ್ಪ ಗೊಂದಲದ ನಂತರ ತಮ್ಮ ತಪ್ಪು ಅರಿತ ಪೊಲೀಸರು ರಘು ಅವರನ್ನು ಹೋಟೆಲ್‌ಗೆ ಬಿಟ್ಟಿದ್ದಾರೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಕಳೆದ ಒಂದು ದಶಕದಿಂದ ಟೀಮ್ ಇಂಡಿಯಾ ಸಿಬ್ಬಂದಿಯಾಗಿ ಕೆಲಸ ಮಾಡಿರುವ ರಘು ವಿವಿಧ ಹುದ್ದೆಗಳನ್ನು ನಿಭಾಯಿಸಿದ್ದಾರೆ. ಕಳೆದ ಹಲವು ವರ್ಷಗಳಿಂದ ಅವರಿಗೆ ಥ್ರೋಡೌನ್ ಸ್ಪೆಷಲಿಸ್ಟ್ ಜವಾಬ್ದಾರಿ ನೀಡಲಾಗಿದೆ. ಇವರು ಉತ್ತರ ಕನ್ನಡ ಜಿಲ್ಲೆಯ ಕುಮಟಾದವರು.
ಟೀಮ್ ಇಂಡಿಯಾದ ಪ್ರ್ಯಾಕ್ಟೀಸ್ ಅವಧಿಯಲ್ಲಿ ಥ್ರೋಡೌನ್ ಮಾಡುವ ವಿಶೇಷ ಕೌಶಲವನ್ನು ರಘು ಹೊಂದಿದ್ದಾರೆ. ಇದು ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾದಂತಹ ಪಿಚ್‌ಗಳ ವೇಗ ಮತ್ತು ಬೌನ್ಸ್‌ಗೆ ತಯಾರಾಗಲು ಅವರಿಗೆ ಸಹಾಯ ಮಾಡುತ್ತದೆ. ಆಸ್ಟ್ರೇಲಿಯಾ ಹಾಗೂ ದಕ್ಷಿಣ ಆಫ್ರಿಕಾದ ಪಿಚ್‌ಗಳು ಬೌನ್ಸರ್‌ಗಳಿಗೆ ಹೆಸರುವಾಸಿ. ನೆಟ್ಸ್ ಅಭ್ಯಾಸ ವೇಳೆ ಬೌಲರ್‌ಗಳಿಂದ ಬೌನ್ಸರ್ ಎದುರಿಸುವ ಅಭ್ಯಾಸ ಮಾಡುವುದರೊಂದಿಗೆ, ಥ್ರೋಡೌನ್ ಸ್ಪೆಷಲಿಸ್ಟ್‌ಗಳ ಸಹಾಯವನ್ನು ಪಡೆಯುತ್ತಾರೆ. ಥ್ರೋಡೌನ್ ಸ್ಟಿಕ್‌ನಿಂದ ಚೆಂಡನ್ನು ಹಿಡಿದು ರಘು, ಬ್ಯಾಟ್ಸ್‌ಮನ್‌ಗಳತ್ತ ಎಸೆಯುತ್ತಾರೆ.