ಕರ್ನಾಟಕದಲ್ಲಿ ಬ್ಯಾನ್ ಆಗಲಿದೆಯೇ ಕಮಲ್ ಹಾಸನ್ ‘ಥಗ್ ಲೈಫ್’ ……..?

ಬೆಂಗಳೂರು :

    ಕಮಲ್ ಹಾಸನ್  ಕನ್ನಡ ಭಾಷೆಯ ಬಗ್ಗೆ ನೀಡಿರುವ ಹೇಳಿಕೆ ವಿವಾದ ಉಂಟು ಮಾಡಿದೆ. ಅವರ ನಟನೆಯ ‘ಥಗ್ ಲೈಫ್’ ಸಿನಿಮಾದ ಆಡಿಯೋ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಕಮಲ್ ಹಾಸನ್, ‘ತಮಿಳಿನಿಂದಲೇ ಕನ್ನಡ ಜನಿಸಿದ್ದು’ ಎಂದಿದ್ದರು. ಕಮಲ್​ರ ಈ ಹೇಳಿಕೆ ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿದ್ದು, ಕೆಲ ಕನ್ನಡಪರ ಸಂಘಟನೆಗಳು ಕಮಲ್ ಅವರ ಹೇಳಿಕೆಯನ್ನು ಖಂಡಿಸಿವೆ. ಇದರ ಜೊತೆಗೆ ಕಮಲ್ ನಟನೆಯ ‘ಥಗ್ ಲೈಫ್’ ಸಿನಿಮಾವನ್ನು ಕರ್ನಾಟಕದಲ್ಲಿ ನಿಷೇಧಿಸಬೇಕು ಎಂಬ ಒತ್ತಾಯವೂ ಜೋರಾಗಿ ಕೇಳಿ ಬರುತ್ತಿದೆ. ಆದರೆ ಸಿನಿಮಾ ನಿಷೇಧ ಸಾಧ್ಯವೇ? ಕಾನೂನಿನಲ್ಲಿ ಅದಕ್ಕೆ ಅವಕಾಶ ಇದೆಯೇ?

   ‘ದಿ ಕೇರಳ ಸ್ಟೋರಿ’ ಸಿನಿಮಾ ಬಿಡುಗಡೆ ಆಗುವ ಸಮಯದಲ್ಲಿ ಸ್ವತಃ ಕೇರಳ ಸರ್ಕಾರ ಆ ಸಿನಿಮಾ ಕೇರಳ ರಾಜ್ಯದಲ್ಲಿ ಬಿಡುಗಡೆ ಆಗದಂತೆ ತಡೆಯಲು ನಾನಾ ಪ್ರಯತ್ನ ಮಾಡಿತು. ಸುಪ್ರೀಂಕೋರ್ಟ್​ನಲ್ಲಿಯೂ ಕಾನೂನು ಹೋರಾಟ ಮಾಡಿತು. ಏನೇ ಪ್ರಯತ್ನ ಮಾಡಿದರೂ ಸಹ ಸಿನಿಮಾ ಬಿಡುಗಡೆಯನ್ನು ತಡೆಯಲು ಸಾಧ್ಯವಾಗಲಿಲ್ಲ.  ಇದೇ ಸಿನಿಮಾದ ಮೇಲೆ ಪಶ್ಚಿಮ ಬಂಗಾಳ ಸರ್ಕಾರ ನಿಷೇಧ ಹೇರಿತ್ತು. ಆದರೆ ‘ದಿ ಕೇರಳ ಸ್ಟೋರಿ’ ಸಿನಿಮಾ ನಿರ್ಮಾಪಕರು ನಿಷೇಧ ತೆರವುಗೊಳಿಸುವಂತೆ ಸುಪ್ರೀಂಕೋರ್ಟ್​ನಲ್ಲಿ ಮೊಕದ್ದಮೆ ದಾಖಲಿಸಿತು. ಬಳಿಕ ನಿಷೇಧವನ್ನು ತೆರವು ಮಾಡಲಾಯ್ತು. ಸಿನಿಮಾ ಪಶ್ಚಿಮ ಬಂಗಾಳದಲ್ಲಿ ಬಿಡುಗಡೆ ಸಹ ಆಯ್ತು.

   ಬಾಲಿವುಡ್​ನಲ್ಲಂತೂ ಪ್ರತಿ ಎರಡು ತಿಂಗಳಿಗೆ ಯಾವುದಾದರೂ ಒಂದು ಸಿನಿಮಾದ ಬ್ಯಾನ್​ಗೆ ಒತ್ತಾಯ ಕೇಳಿ ಬರುತ್ತದೆ. ಹಲವಾರು ಸಿನಿಮಾಗಳ ಮೇಲೆ ಮುಂಚಿತವಾಗಿ ಪ್ರಕರಣವೂ ದಾಖಲಾಗುತ್ತದೆ ಆದರೆ ಯಾವ ಸಿನಿಮಾ ಸಹ ಬ್ಯಾನ್ ಆಗಿದ್ದು ಇತ್ತೀಚೆಗೆ ನಡೆದಿಲ್ಲ. ‘ದಿ ಕೇರಳ ಸ್ಟೋರಿ’, ‘ಎಮರ್ಜೆನ್ಸಿ’, ‘ರಜಾಕರ್’, ‘ದಿ ಕಶ್ಮೀರ್ ಫೈಲ್ಸ್’, ‘ಪುಲೆ’ ಇನ್ನೂ ಕೆಲವಾರು ಸಿನಿಮಾಗಳ ವಿರುದ್ಧ ನಿಷೇಧದ ಕೂಗು ಕೇಳಿ ಬಂದಿತ್ತು. ಆದರೆ ಯಾವ ಸಿನಿಮಾದ ಮೇಲೂ ನಿಷೇಧ ಹೇರಲಾಗಲಿಲ್ಲ. 

   ಯಾವುದೇ ನಿರ್ದಿಷ್ಟ ಸಿನಿಮಾದ ಬಿಡುಗಡೆಯಿಂದ ಭಾರಿ ದೊಡ್ಡ ಹಾನಿ ಸಂಭವಿಸುತ್ತದೆ, ಗಲಭೆ ಉಂಟಾಗುತ್ತದೆ. ನಾಗರೀಕರ ಭಾವನೆಗಳ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗುತ್ತದೆ ಎಂದೆನಿಸಿದರೆ ಮಾತ್ರವೇ ನ್ಯಾಯಾಲಯವು ಸಿನಿಮಾಗಳ ಮೇಲೆ, ಪುಸ್ತಕಗಳ ಮೇಲೆ ಇತ್ಯಾದಿಗಳ ಬಿಡುಗಡೆ ಮೇಲೆ ನಿಷೇಧ ಹೇರಿ ಆದೇಶ ಹೊರಡಿಸುತ್ತದೆ. ಸಿನಿಮಾಗಳಿಗೆ ಪ್ರಮಾಣ ಪತ್ರ ನೀಡುವ ಸಿಬಿಎಫ್​ಸಿ ಸಹ ಯಾವುದಾದರೂ ಸಿನಿಮಾಕ್ಕೆ ನಿಯಮಾವಳಿಗಳ ಅಡಿಯಲ್ಲಿ ಪ್ರಮಾಣ ಪತ್ರ ನಿರಾಕರಿಸುವ ಹಕ್ಕು ಹೊಂದಿದೆ. ಆದರೆ ಒಂದೊಮ್ಮೆ ಸಿನಿಮಾ ತಂಡವು ನ್ಯಾಯಾಲಯದ ಮೊರೆ ಹೋದರೆ ಪ್ರಕರಣ ಅಲ್ಲಿಯೇ ಇತ್ಯರ್ಥವಾಗಿ ಸಿನಿಮಾ ಬಿಡುಗಡೆ ಆಗಬೇಕೋ ಬೇಡವೊ ಎಂಬುದು ಅಂತಿಮವಾಗಿ ನ್ಯಾಯಾಲಯದಲ್ಲಿಯೇ ತೀರ್ಮಾನ ಆಗುತ್ತದೆ.

   ಕನ್ನಡಪರ ಸಂಘಟನೆಗಳು ಹಾಗೂ ಇತರೆ ಕೆಲವು ಸಂಘಟನೆಗಳು ಈ ರೀತಿ ಸಿನಿಮಾಗಳ ನಿಷೇಧಕ್ಕೆ ಒತ್ತಾಯಿಸಿರುವುದು ಇದು ಮೊದಲೇನೂ ಅಲ್ಲ. ಈ ಹಿಂದೆಯೂ ಕೆಲವು ಸಿನಿಮಾ, ಕಲಾವಿದರ ಮೇಲೆ ನಿಷೇಧಕ್ಕೆ ಒತ್ತಾಯ ಹೇರಲಾಗಿದೆ. ಆದರೆ ನಿಷೇಧ ಎಂಬುದು ಕಾನೂನಿಗೆ ವಿರುದ್ಧವಾದುದು. ಇತ್ತೀಚೆಗಷ್ಟೆ ಸೋನು ನಿಗಂ ಮೇಲೆ ನಿಷೇಧ ಹೇರಬೇಕು ಎಂದು ಒತ್ತಾಯಿಸಲಾಗಿತ್ತು. ಆಗ ಫಿಲಂ ಚೇಂಬರ್, ‘ನಿಷೇಧ ಹೇರುವುದು ಸಾಧ್ಯವಿಲ್ಲ. ಆ ಅಧಿಕಾರ ನಮ್ಮ ಬಳಿ ಇಲ್ಲ, ಅಸಹಕಾರ ತೋರಬಹುದು ಅಷ್ಟೆ’ ಎಂದಿತ್ತು.

   ಈಗ ಕಮಲ್ ಸಿನಿಮಾ ‘ಥಗ್ ಲೈಫ್’ ಅನ್ನು ನಿಷೇಧಿಸಬೇಕು ಎಂಬ ಕೂಗು ಕೇಳಿ ಬರುತ್ತಿದೆ. ಆದರೆ ನಿಷೇಧ ಸಾಧ್ಯವಿಲ್ಲ. ಆದರೆ ಅಸಹಕಾರ ಸಾಧ್ಯವಿದೆ. ಸಿನಿಮಾ ಅನ್ನು ರಾಜ್ಯದ ಸಿನಿಮಾ ಮಂದಿರಗಳು ಪ್ರದರ್ಶಿಸದೇ ಇರುವ ನಿರ್ಣಯ ತಳೆಯುವುದು, ಕನ್ನಡದ ಪ್ರೇಕ್ಷಕರು ಸಿನಿಮಾ ಅನ್ನು ನೋಡದೇ ಇರುವ ನಿರ್ಧಾರ ತಳೆಯುವುದು, ಈ ರೀತಿ ಸಿನಿಮಾಕ್ಕೆ ಪರೋಕ್ಷ ‘ನಿಷೇಧ’ ಹೇರಿ ಬಿಸಿ ಮುಟ್ಟಿಸಬಹುದಾಗಿದೆ.

Recent Articles

spot_img

Related Stories

Share via
Copy link