ಬೆಂಗಳೂರು:
ಶಿವಮೊಗ್ಗ ಜಿಲ್ಲೆಯ ಬೈರಾಪುರದ ಅಂಬಲಿಗೊಳ ಜಲಾಶಯದ ಹಿನ್ನೀರಿನಲ್ಲಿ ಪತ್ತೆಯಾಗಿರುವ ಏಳೆಂಟು ವರ್ಷದ ಗಂಡು ಹುಲಿಯ ಮೃತದೇಹದ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ಅರಣ್ಯ ಸಚಿವ ಈಶ್ವರ ಖಂಡ್ರೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಫೆಬ್ರುವರಿ 18 ರಂದು ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮತ್ತು ಮುಖ್ಯ ವನ್ಯಜೀವಿ ವಾರ್ಡನ್ ಉದ್ದೇಶಿಸಿ ಬರೆದ ಪತ್ರದಲ್ಲಿ, ಹುಲಿಗೆ ಗುಂಡಿನ (ಪೆಲೆಟ್) ಗಾಯವಾಗಿದೆ ಎಂದು ಮಾಧ್ಯಮಗಳಲ್ಲಿ ವರದಿಗಳು ಪ್ರಕಟವಾಗಿದ್ದು, ಈ ಬಗ್ಗೆ ತನಿಖೆ ನಡೆಸಿ 10 ದಿನಗಳಲ್ಲಿ ವರದಿ ಸಲ್ಲಿಸಲು ಸೂಚಿಸಿದ್ದಾರೆ.
ಕಳೇಬರ ಪತ್ತೆಯಾದ ಪ್ರದೇಶದಲ್ಲಿ ಇದುವರೆಗೆ ಹುಲಿ ಕಾಣಿಸಿಕೊಂಡಿಲ್ಲದ ಕಾರಣ, ಇದನ್ನು ಬೇರೆಡೆ ಕೊಂದು ಇಲ್ಲಿ ಬಿಸಾಡಿರಬಹುದು ಎಂದು ಸ್ಥಳೀಯರು ಶಂಕೆ ವ್ಯಕ್ತಪಡಿಸಿರುವ ಬಗ್ಗೆಯೂ ಮಾಧ್ಯಮ ವರದಿಗಳನ್ನು ಉಲ್ಲೇಖಿಸಿದ ಖಂಡ್ರೆ, ಈ ಬಗ್ಗೆಯೂ ತನಿಖೆಗೆ ಸೂಚನೆ ನೀಡಿದ್ದಾರೆ.
