ನವದೆಹಲಿ:
ಅಜ್ಮೀರ್ ದರ್ಗಾ ವಿಷಯವಾಗಿ ನಿವೃತ್ತ ಸಿಜೆಐ ಡಿವೈ ಚಂದ್ರಚೂಡ್ ವಿರುದ್ಧ ಅಸಾದುದ್ದೀನ್ ಓವೈಸಿ ಟೀಕಾ ಪ್ರಹಾರ ನಡೆಸಿದ್ದಾರೆ.ಅಜ್ಮೀರ್ ಷರೀಫ್ ದರ್ಗಾವನ್ನು ಶಿವ ದೇವಾಲಯದ ಮೇಲೆ ನಿರ್ಮಾಣ ಮಾಡಲಾಗಿದೆ, ಈ ಸಂಬಂಧ ಪರಿಶೀಲನೆ ನಡೆಸಲು ಅನುಮತಿ ನೀಡಬೇಕೆಂದು ಕೋರಿದ್ದ ಅರ್ಜಿಯ ವಿಚಾರಣೆ ನಡೆಸಲು ರಾಜಸ್ಥಾನ ಕೋರ್ಟ್ ಒಪ್ಪಿಗೆ ನೀಡಿತ್ತು. ಅಷ್ಟೇ ಅಲ್ಲದೇ ಬಾಬ್ರಿ ಮಸೀದಿ- ರಾಮ ಜನ್ಮಭೂಮಿಗೆ ಸಂಬಂಧಿಸಿದ ಆದೇಶ ಪ್ರಕಟವಾದಾಗಲೇ ಅದರ ಮುಂದಿನ ಪರಿಣಾಮಗಳ ಬಗ್ಗೆ ತಾವು ಎಚ್ಚರಿಸಿದ್ದಾಗಿ ಹೇಳಿರುವ ಓವೈಸಿ, ನಿವೃತ್ತ ಸಿಜೆಐ ಚಂದ್ರಚೂಡ್ ವಿರುದ್ಧ ಟೀಕೆ ಮಾಡಿದ್ದಾರೆ.
“ನಿವೃತ್ತ ನ್ಯಾಯಾಧೀಶರಾದ ಡಿವೈ ಚಂದ್ರಚೂಡ್ ಅವರು ಅವರ ಅವಧಿಯಲ್ಲಿ ಇಂಥಹ ಪ್ರವೃತ್ತಿಗಳನ್ನು (ಮಂದಿರದ ಮೇಲೆ ಮಸೀದಿ ನಿರ್ಮಿಸಿರುವ ಕುರಿತ ಅರ್ಜಿಗಳು) ತಡೆಗಟ್ಟಿದ್ದರೆ. ಇದಕ್ಕೆಲ್ಲಾ ಕಡಿವಾಣ ಬೀಳುತ್ತಿತ್ತು. ಅವರು ತಮ್ಮ ಅವಧಿಯಲ್ಲಿ ಕೆಲವು ತಪ್ಪು ಮೌಖಿಕ ಅವಲೋಕನಗಳನ್ನು ಮಾಡಿದ್ದಾರೆ. ಆದ್ದರಿಂದ 15 ಪ್ರದೇಶಗಳಲ್ಲಿ ಇಂತಹ ಅರ್ಜಿಗಳು ಬರುತ್ತಿವೆ ಎಂದು ಓವೈಸಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
“ಅಲಾವುದ್ದೀನ್ ಖಲ್ಜಿಯ ಆಳ್ವಿಕೆಯಲ್ಲಿ 800 ವರ್ಷಗಳ ಹಿಂದೆ ಆ ದರ್ಗಾ ಇದೆ; ಇದನ್ನು 13 ನೇ ಶತಮಾನದಿಂದ ಅಮೀರ್ ಖುಸ್ರೋ ಅವರ ಪುಸ್ತಕದಲ್ಲಿ ಉಲ್ಲೇಖಿಸಲಾಗಿದೆ ಮತ್ತು 800 ವರ್ಷಗಳ ನಂತರ, ಇದು ದರ್ಗಾ ಅಲ್ಲ ಎಂದು ನೀವು ಹೇಳುತ್ತಿದ್ದೀರಿ. ಏನು ಉಳಿಯುತ್ತದೆ?” ಎಂದು ಪತ್ರಿಕಾಗೋಷ್ಠಿಯಲ್ಲಿ ಓವೈಸಿ ಪ್ರಶ್ನಿಸಿದ್ದಾರೆ.
