ಮಂಡ್ಯ:
ಟಿಪ್ಪು ಜಯಂತಿ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ನ.10ರಂದು ಶ್ರೀರಂಗಪಟ್ಟಣದಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ತಹಸೀಲ್ದಾರ್ ಪರಶುರಾಮ್ ಸತ್ತಿಗೇರಿ ಅವರು ಬಿಎನ್‌ಎಸ್‌ಎಸ್ ಸೆಕ್ಷನ್ 163ರ ಅನ್ವಯ ನಿಷೇಧಾಜ್ಞೆ ಜಾರಿ ಮಾಡಿ ಆದೇಶ ಹೊರಡಿಸಿದ್ದಾರೆ. ಆದರೆ, ಇದಕ್ಕೆ ಕೆಲ ಮುಸ್ಲಿಂರು ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದು, ನಿಷೇಧಾಜ್ಞೆ ಜಾರಿ ಮಾಡುವ ಮೂಲಕ ಕಾಂಗ್ರೆಸ್ ಸರ್ಕಾರ ಮತ್ತೊಮ್ಮೆ ಮುಸ್ಲಿಂ ಹಾಗೂ ಟಿಪ್ಪು ವಿರೋಧಿ ಎಂಬುವುದನ್ನು ಸಾಬೀತುಪಡಿಸಿದೆ ಎಂದು ಕಿಡಿಕಾರಿದ್ದಾರೆ.
ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ 163 ರ ಅನ್ವಯ ಪ್ರದತ್ತವಾದ ಅಧಿಕಾರದ ಮೇರೆಗೆ ಶ್ರೀರಂಗಪಟ್ಟಣ ಟೌನ್ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಶಾಂತಿ, ಕಾನೂನು ಸುವ್ಯವಸ್ಥೆ ಹಾಗೂ ಸುರಕ್ಷತೆ ದೃಷ್ಟಿಯಿಂದ ಹಾಗೂ ಸಾರ್ವಜನಿಕ ವ್ಯಕ್ತಿಗಳ ಪ್ರಾಣರಕ್ಷಣೆ ಹಾಗೂ ಸಾರ್ವಜನಿಕ ಮತ್ತು ಖಾಸಗಿ ಆಸ್ತಿಯನ್ನು ರಕ್ಷಿಸುವ ದೃಷ್ಟಿಯಿಂದ ನ.10ರ ಬೆಳಗ್ಗೆ 6 ಗಂಟೆಯಿಂದ ರಾತ್ರಿ 9-00 ಗಂಟೆಯವರೆಗೆ ನಿಷೇದಾಜ್ಞೆಯನ್ನು ಜಾರಿಗೊಳಿಸಿ ಆದೇಶ ಹೊರಡಿಸಲಾಗಿದೆ ಎಂದು ಪರಶುರಾಮ ಸತ್ತಿಗೇರಿ ತಿಳಿಸಿದ್ದಾರೆ.
ನಿಷೇದಾಜ್ಞೆಯ ನಿಭಂದನೆಗಳು:
- ಐದು ಅಥವಾ ಅದಕ್ಕಿಂತಲೂ ಹೆಚ್ಚು ಜನರು ಒಂದು ಕಡೆ ಸೇರಬಾರದು.
- ಯಾವುದೇ ರೀತಿಯ ಸಭೆ, ಸಮಾರಂಭ ಮತ್ತು ಮೆರವಣಿಗೆ ಇತ್ಯಾದಿಗಳನ್ನು ನಡೆಸಬಾರದು.
- ನಿಷೇದಾಜ್ಞೆ ಜಾರಿಯಲ್ಲಿರುವ ಪ್ರದೇಶದಲ್ಲಿ ಯಾವುದೇ ರೀತಿಯ ಮಾರಕಾಸ್ತ್ರಗಳನ್ನು ಹಿಡಿದು ತಿರುಗಾಡಬಾರದು.
- ಪ್ರತಿಭಟನೆ, ಮೆರವಣಿಗೆ, ರ‍್ಯಾಲಿ, ಬ್ಯಾನರ್ಸ್, ಬಂಟಿಂಗ್ಸ್, ಬಾವುಟಗಳು ಧ್ವನಿವರ್ದಕಗಳು, ಪಟಾಕಿ ಸಿಡಿಸುವುದು, ಡಿ.ಜೆ.ಅಳವಡಿಸಿಕೊಂಡು ಘೋಷಣೆ ಕೂಗದಂತೆ ಹಾಗೂ ಟ್ಯಾಬ್ಲೋ, ಪ್ರಚೋದನಾತ್ಮಕ ಚಿತ್ರವಿರುವ ಟೀ ಶರ್ಟ್ ಧರಿಸಬಾರದು.
- ಯಾವುದೇ ವಿನಾಶಕಾರಿಯಾದಂತಹ ವಸ್ತು ಅಥವಾ ಸ್ಫೋಟಕ ವಸ್ತುಗಳನ್ನು ತೆಗೆದುಕೊಂಡು
ಹೋಗುವುದು ನಿಷೇಧಿಸಿದೆ. - ರಸ್ತೆ ತಡೆ ಚಳುವಳಿಯನ್ನು ನಿಷೇಧಿಸಲಾಗಿದೆ.