ಕೊರೋನಾ ಚಿಕಿತ್ಸೆಗೆ ಉಚಿತ ಆಂಬುಲೆನ್ಸ್ ಸೇವೆ ಬಳಸಿಕೊಳ್ಳಿ

ತಿಪಟೂರು: 

      ಕೋವಿಡ್-19 ಸಾಂಕ್ರಾಮಿಕ ರೋಗವು ವ್ಯಾಪಕವಾಗಿ ಹರಡುತ್ತಿದ್ದು, ಅಪಾರ ಸಾವು ನೋವುಗಳು ಸಂಭವಿಸಿದ್ದು ಇಂತಹ ಕಷ್ಟಕರ ಸಮಯದಲ್ಲಿ ರೋಗಿಗಳನ್ನು ಆಸ್ಪತ್ರೆಗಳಿಗೆ ಉಚಿತವಾಗಿ, ಸುರಕ್ಷಿತವಾಗಿ ಕರೆದೊಯ್ಯಲು ತುರ್ತು ಸೇವೆಗಾಗಿ ಆಮ್ಲಜನಕ ಸಹಿತ ಆಂಬ್ಯುಲೆನ್ಸ್ ಸೇವೆಯನ್ನ ತಿಪಟೂರು ಬ್ಲಾಕ್ ಕಾಂಗ್ರೆಸ್ ವತಿಯಿಂದ ಒದಗಿಸಲಾಗಿದ್ದು ಸಾರ್ವಜನಿಕರು ತುರ್ತು ಸಂದರ್ಭದಲ್ಲಿ ಬಳಸಿಕೊಳ್ಳಿ ಎಂದು ಮಾಜಿ ಶಾಸಕ ಕೆ.ಷಡಕ್ಷರಿ ತಿಳಿಸಿದರು.

     ನಗರದ ಸರ್ಕಾರಿ ಆಸ್ಪತ್ರೆ ಆವರಣದಲ್ಲಿ ಕಾಂಗ್ರೆಸ್ ಪಕ್ಷದ ವತಿಯಿಂದ ಕಾಂಗ್ರೆಸ್ ಕೇರ್ ಯೋಜನೆಯಡಿ ಆಸ್ಪತ್ರೆಯ ಸಿಬ್ಬಂದಿಗಳಿಗೆ ಫೇಸ್‍ಶೀಲ್ಡ್, ಮಾಸ್ಕ್, ಸ್ಯಾನಿಟೈಸರ್ ಮತ್ತು ಪಿ.ಪಿ.ಇ ಕಿಟ್ ಹಾಗೂ ಉಚಿತ ಆಂಬ್ಯೂಲೆನ್ಸ್‍ಗೆ ಚಾಲನೆನೀಡಿ ಮಾತನಾಡಿದ ಅವರು ತಿಪಟೂರು ನಗರದಿಂದ ಹಾಸನ ಹಾಗೂ ತುಮಕೂರು ನಗರಕ್ಕೆ ಕೋವಿಡ್ ರೋಗಿಗಳನ್ನು ತುರ್ತು ಸೇವೆಗೆ ಕರೆದೊಯ್ಯಲು ಹಾಗೂ ರೋಗಿಗಳು ಮರಣ ಹೊಂದಿದರೆ ಅವರ ಸಹಾಯಕ್ಕೆ ಅನುಕೂಲವಾಗುವಂತೆ 3 ವಾಹನಗಳನ್ನು ವ್ಯವಸ್ಥೆ ಮಾಡಿದ್ದೇವೆ. ಅದಕ್ಕಾಗಿ 9742969612 ಹಾಗೂ 9742656520ಗೆ ಕರೆ ಮಾಡಿ ಬಳಸಿಕೊಳ್ಳಿ ಎಂದರು.

     ನನಗೆ ಕೊರೊನಾ ಇಲ್ಲ ಕೇವಲ ಜ್ವರ, ನೆಗಡಿ ಅಷ್ಟೇ ಎಂದು ಸುಮ್ಮನೆ ಸಿಕ್ಕಸಿಕ್ಕ ಮಾತ್ರೆಗಳನ್ನು ತೆಗೆದುಕೊಂಡು ಸ್ವಯಂ ವೈದ್ಯರಾಗದೇ ಕೊರೊನಾ ಪರೀಕ್ಷೆ ಮಾಡಿಸಿಕೊಂಡು ವೈದ್ಯರ ಸಲಹೆಯಂತೆ ಚಿಕಿತ್ಸೆ ಪಡೆಯಿರಿ. ಕೊರೊನಾ ಮಿತಿ ಮೀರಿದ ಸಂದರ್ಭದಲ್ಲಿ ಪ್ರಾಣವನ್ನು ಉಳಿಸುವುದು ವೈದ್ಯರಿಗೂ ಕಷ್ಟವಾಗುತ್ತದೆ. ಆದ್ದರಿಂದ ರೋಗ ಉಲ್ಭಣಿಸುವ ಮೊದಲೇ ಮುನ್ನಚ್ಚರಿಕೆ ತೆಗೆದುಕೊಂಡರೆ ನೀವು ಸುರುಕ್ಷಿತವಾಗಿರಬಹುದೆಂದು ತಿಳಿಸಿದರು.

      ಮೊದಲನೇ ಅಲೆ ಬಂದಾಗ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳದೇ ಎಡವಿ ಕೊರೊನಾ ಹೋಯಿತು ಎಂದು ಮೈಮರೆತಿದ್ದರಿಂದ ಇಂತಹ ಪರಿಸ್ಥಿತಿ ಉದ್ಭವವಾಗಿದೆ. ಈಗಲಾದರು ಮುನ್ನಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಬೇಕು. ತಜ್ಞರ ಪ್ರಕಾರ ಮೂರನೇ ಅಲೆಯು ಮಕ್ಕಳ ಮೇಲೆ ಪ್ರಭಾವ ಬೀರುವುದರಿಂದ ಸರ್ಕಾರಕ್ಕಿಂತ ಹೆಚ್ಚಿನದ್ದಾಗಿ ಪೋಷಕರ ಮೇಲೆ ಗುರುತರ ಜವಾಬ್ದಾರಿ ಇದ್ದು ಮಕ್ಕಳನ್ನು ಸಾಕಷ್ಟು ಎಚ್ಚರಿಕೆಯಿಂದ ಇರಿಸಿಕೊಳ್ಳಬೇಕು ಎಂದು ಪೋಷಕರಿಗೆ ಎಚ್ಚರಿಸಿದರು.

ಆಸ್ಪತ್ರೆಯಲ್ಲಿ ಸ್ವಚ್ಚತೆ ಇಲ್ಲ:

     ನಾನು ಶಾಸಕನಾಗಿದ್ದಾಗ ಆಸ್ಪತ್ರೆಗೆಂದು ಪ್ರತ್ಯೇಕ ಕಮಿಟಿಯನ್ನು ರಚಿಸಿದ್ದು ಅವರು ಆಸ್ಪತ್ರೆಯ ಸ್ವಚ್ಛತೆ, ಇತರೆ ಸಮಸ್ಯೆಗಳ ಬಗ್ಗೆ ಗಮನ ಹರಿಸಿ ಆಸ್ಪತ್ರೆಯನ್ನು ಸ್ವಚ್ಚವಾಗಿಟ್ಟುಕೊಳ್ಳುತ್ತಿದ್ದರು. ಆದರೆ ಶಾಸಕರು, ಮುಖ್ಯಮಂತ್ರಿಗಳೆ ಹಲವಾರು ಖಾತೆಗಳನ್ನು ಇಟ್ಟುಕೊಂಡು ನಿಭಾಯಿಸುತ್ತಿದ್ದಾರೆ. ನಾನೇ ಎಲ್ಲವನ್ನು ನಿಭಾಯಿಸುತ್ತೇನೆ ಎಂದು ಯಾವುದೇ ಕಮಿಟಿಯನ್ನು ನೇಮಿಸದೇ ಇರುವುದರಿಂದ ಆಸ್ಪತ್ರೆಯಲ್ಲಿ ಸ್ವಚ್ಛತೆ ಮಾಯವಾಗಿದೆ. ಈಗಲಾದರು ಒಂದು ಕಮಿಟಿಯನ್ನು ನೇಮಿಸಿ ಆಸ್ಪತ್ರೆಯಲ್ಲಿ ಸ್ವಚ್ಛತೆಯನ್ನು ಕಾಪಾಡಿ ರೋಗಗಳು ಹರಡದಂತೆ ಮಾಡಲಿ ಎಂದು ಆಗ್ರಹಿಸಿದರು.

     ಈ ವೇಳೆ ತಾಲ್ಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಡೇನೂರು ಕಾಂತರಾಜು, ಕೆ.ಪಿ.ಸಿ.ಸಿ ಹಾಗೂ ನಗರಸಭಾ ಸದಸ್ಯ ವಿ.ಯೋಗೀಶ್, ನಗರ ಕಾಂಗ್ರೆಸ್ ಅಧ್ಯಕ್ಷ ಟಿ.ಎನ್.ಪ್ರಕಾಶ್, ತಾ.ಪಂ ಸದಸ್ಯ ಹಾಗೂ ಮಾಜಿ ಅಧ್ಯಕ್ಷ ನ್ಯಾಕೇನಹಳ್ಳಿ ಸುರೇಶ್, ನಿಖಿಲ್ ರಾಜಣ್ಣ, ಸುನಿಲ್ ಮೇಗಲಮನೆ, ಶ್ರೀನಿವಾಸ್, ಲೋಕನಾಥ್ ಸಿಂಗ್, ಟಿ.ಹೆಚ್.ಓ ರವಿಕುಮಾರ್, ಆಡಳಿತ ವೈದ್ಯಾಧಿಕಾರಿ ಡಾ.ಪ್ರಹ್ಲಾದ್ ಮತ್ತಿತರರು ಹಾಜರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link