ತಿಪಟೂರು : ಶಾಸಕರ ಹಿಡಿತದಲ್ಲಿ ತಾಲ್ಲೂಕು ಆಡಳಿತ ; ಆರೋಪ!!

 ತಿಪಟೂರು : 

      ತಾಲ್ಲೂಕಿನಲ್ಲಿ ಎಲ್ಲಾ ಸರ್ಕಾರಿ ಕಛೇರಿಗಳು ಶಾಸಕರ ಹಿಡಿತದಲ್ಲಿದ್ದು ಇದಕ್ಕೆ ಉದಾಹರಣೆ ಎಂಬಂತೆ ಕೊರೊನಾ ಲಸಿಕೆಯನ್ನು ಶಾಸಕರು ಹೇಳದ ಹೊರತು ಜನರಿಗೆ ನೀಡುತ್ತಿಲ್ಲ ಇದರಿಂದ ಹಿರಿಯ ನಾಗರೀಕರು, ಜನ ಸಾಮಾನ್ಯರು ತಮ್ಮ ಊಟ-ತಿಂಡಿಯನ್ನು ಬಿಟ್ಟು ಲಸಿಕೆ ಹಾಕಿಸಿಕೊಳ್ಳಲು ಕಾಯುವಂತಾಗಿದೆ ಎಂದು ಮಾಜಿ ಪುರಸಭೆ ಅಧ್ಯಕ್ಷ ಆರ್.ಡಿ.ಬಾಬು ಆರೋಪಿಸಿದರು.

     ಈ ವಿಚಾರವಾಗಿ ಕರೆಯಲಾದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಕೊರೊನಾ ಲಸಿಕೆಯನ್ನು ನೀಡುವ ಸಂಬಂಧ ತಾಲ್ಲೂಕಿನ ಪ್ರಥಮ ಪ್ರಜೆಯಾದ ಶಾಸಕರಿಗೇನು ಕೆಲಸ? ಅವರು ಬಂದು ವಿಚಾರಿಸಿ ಹೋಗಬಹುದು, ಇಲ್ಲವೇ ಇದು ಸರಿ ಇಲ್ಲ, ಅದು ಸರಿ ಇಲ್ಲವೆಂದು ಸರಿಪಡಿಸಿಲು ತಿಳಿಸಬಹುದು. ಅದನ್ನು ಬಿಟ್ಟು ಒಬ್ಬ ನೌಕರನ ಹಾಗೆ ಟೋಕನ್ ಕೊಡುವ ಕೆಲಸವನ್ನು ಮಾಡುವುದು ಎಷ್ಟು ಸರಿ? ಇವರು ಕೆಲಸವನ್ನು ಮಾಡಿಸಬೇಕೆ ಹೊರತು ತಾನೇ ಎಲ್ಲವನ್ನು ಮಾಡುತ್ತೇನೆಂದು ಹೋಗಬಾರದು. ಮುಖ್ಯವಾಗಿ ಲಸಿಕೆಯನ್ನು ಕೊಡುವ ವಿಚಾರದಲ್ಲಿ ಹಿರಿಯ ನಾಗರೀಕರನ್ನು ಬದಿಗೊತ್ತಿ ಪೆಟ್ರೋಲ್‍ಬಂಕ್ ಮತ್ತು ಬ್ಯಾಂಕ್‍ನೌಕರರಿಗೆ ಲಸಿಕೆ ಕೊಡಿಸುತ್ತಿದ್ದು, ಅದರಲ್ಲೂ ಸ್ವಜನಕ್ಕೆ ಮೊದಲ ಆದ್ಯತೆಯಲ್ಲಿ ಲಸಿಕೆಯನ್ನು ನೀಡುತ್ತಿರುವುದು ತಪ್ಪು ಎಂದು ಆರೋಪಿಸಿದರು.

      ಮೊದಲ ಬಾರಿ ಶಾಸಕರಾಗಿ ಸರಳ ಸಜ್ಜನಿಕೆಗೆ ಹೆಸರಾಗಿದ್ದ ನಾಗೇಶ್‍ಗೂ ಈಗಿರುವ ನಾಗೇಶ್‍ಗೂ ತಾಳೆಯೇ ಆಗುತ್ತಿಲ್ಲ. ಶಾಸಕರಾಗಿ 4 ವರ್ಷ ಕಳೆಯುತ್ತಾ ಬಂದರೂ ಬಿ.ಹೆಚ್.ರಸ್ತೆಯಲ್ಲಿರುವ ಬೀದಿ ದೀಪಗಳನ್ನು ಬೆಳಗಿಸಲು ಸಾಧ್ಯವಾಗಲಿಲ್ಲ. ಇವತ್ತು ಎಂಎಲ್‍ಎ, ಡಿಎಸ್‍ಪಿ ಅನುದಾನದ 10 ಲಕ್ಷ ರೂ.ಗಳಲ್ಲಿ ಬೆಳಗದ ಬೀದಿದೀಪಗಳನ್ನು ಬಣ್ಣಹೊಡೆದು ಸಿಂಗರಿಸಲು ಹೊರಟಿದ್ದಾರೆ. ಆದರೆ ಆ ಸಿಂಗಾರಗೊಂಡ ದೀಪಗಳು ಬೆಳಗಿದರೆ ತಾನೆ ಸಿಂಗಾರ ಕಾಣುವುದೆಂದು ಶಾಸಕರನ್ನು ಅಣಕಿಸಿದರು. ಸಣ್ಣಪುಟ್ಟದರಲ್ಲೂ ಹಣದರುಚಿ ನೋಡುತ್ತಿದ್ದಾರೆ ಇದರಿಂದ ಅವರ ಪಕ್ಷದ ಕಾರ್ಯಕರ್ತರಿಂದಲೇ ನಿಷ್ಟುರಕ್ಕೆ ಒಳಗಾಗಿದ್ದಾರೆ.

ರಾಜ್ಯದಲ್ಲಿ ತಿಪಟೂರಿನ ಶಾಸಕ ನಾಗೇಶ್ ಎಂದರೆ ಹೆಮ್ಮೆಯ ವಿಚಾರವಾಗಿತ್ತು ಆದರೆ ಇದು ಇಂದು ಎಲ್ಲಾ ತಿರುಗುಮರುಗಾಗಿದ್ದು ಭಗವಂತ ಏಕೆ ಇಂತಹ ದುಸ್ಥಿಗೆ ತಂದನೆಂದು ಗೊತ್ತಾಗುತ್ತಿಲ್ಲ. ಕಳೆದ ಬಾರಿ ಸರ್ಕಾರದಿಂದ ಬಂದ 3000 ಆಹಾರಕಿಟ್‍ಗಳನ್ನು ಹಂಚದೆ 1800 ಕಿಟ್ ಹಂಚಿ ಉಳಿದವನ್ನು ಹುಳಹುಪ್ಪಟೆ ಹಿಡಿಯುವಂತೆ ಮಾಡಿದ್ದು, ಕಿಟ್ ಕೊಡುವಾಗಲು ಸ್ವಜನ, ಸ್ವಪಕ್ಷದವರಿಗೆ ಹಂಚಿ ಪಕ್ಷಪಾತವೆಸಗಿದ್ದಾರೆ ಇದು ಮುಂದೊಂದು ದಿನ ಅವರಿಗೆ ತಿರುಮಂತ್ರವಾಗಲಿದೆ. ಅಲ್ಲದೆ ಯುಜಿಡಿ ನೀರು ನಾಲೆಗೆ ಸೇರುವುದು ವಿಪರ್ಯಾಸವಾಗಿದೆ. ಜೊತೆಗೆ ನಗರಕ್ಕೆ ನೀರೊದಗಿಸುವ ಜಲ ಶುದ್ದೀಕರಣ ಘಟಕದಲ್ಲಿ ಮುಖ್ಯವಾಗಿ ಬೇಕಾಗಿರುವ ಕ್ಲೋರಿನೈಜೇಷನ್ ಘಟಕ ಕೆಟ್ಟುಹೋಗಿ 2 ವರ್ಷಗಳೇ ಕಳೆದರು ಅದನ್ನು ಸರಿಪಡಿಸಲು ಶಾಕರು, ನಗರಸಭೆ ಅಧ್ಯಕ್ಷರು ಮತ್ತು ಪೌರಾಯುಕ್ತರಿಗೆ ಸಾಧ್ಯವಾಗಿಲ್ಲ ಮತ್ತು ಅದನ್ನು ತರಿಸುವ ಇನ್‍ಡೆಂಟ್ ಹಾಕಿಸೆ ಇಲ್ಲ, ಜನರಿಗೆ ಕೇವಲ ಬ್ಲೀಚಿಂಗ್ ಪೌಡರ್ ಮತ್ತು ಆಲಂ ಹಾಕಿ ಕೆಂಪುನೀರನ್ನು ಕುಡಿಸುತ್ತಿದ್ದಾರೆ, ಜೊತೆಗೆ ಕ್ಲೋರಿನೈಜೇಷನ್ ಘಟಕವನ್ನು ಸರಿಪಡಿಸಿದರೆ ನೀರು ಸ್ಫಟಿಕದಷ್ಟೆ ಶುದ್ಧವಾಗುತ್ತದೆ ಎಂದರು. ಕಳೆದ ಸಾಲಿನಲ್ಲಿ 78 ಲಕ್ಷ ರೂಪಾಯಿಯನ್ನು ಸಾಂಕ್ರಾಮಿಕ ರೋಗ ನಿರ್ವಹಣೆಗೆ ಎಂದು ಖರ್ಚುಮಾಡಿದ್ದಾರೆ, ಇದರಲ್ಲಿ 7 ಲಕ್ಷವನ್ನು ಸಹ ಖರ್ಚುಮಾಡಿರುವುದು ಅನುಮಾನ ಜೊತೆಗೆ ನಗರಸಭೆಗೆ ನಾಟಕವಾಡುವ ಒಬ್ಬ ಅಧ್ಯಕ್ಷ, ನಾಟಕದ ವ್ಯವಸ್ಥಾಪಕನ ಪಾತ್ರದಲ್ಲಿ ಪೌರಾಯುಕ್ತರಿದ್ದಾರೆ. ಇವರಿಂದ ನಗರವನ್ನು ಕಾಪಾಡಿಕೊಳ್ಳುವುದು ಬಹಳ ಕಷ್ಟವಿದೆ. ಶಾಸಕರು ಕೊರೊನಾ ಲಸಿಕೆ ವಿಚಾರದಲ್ಲಿ ಎಚ್ಚೆತ್ತುಕೊಂಡು ಸರ್ವರಿಗೂ ಲಸಿಕೆ ಸಿಗುವಂತೆ ಮಾಡಿದರೆ ಭಗವಂತ ಅವರಿಗೂ ಒಳ್ಳೆಯದನ್ನು ಮಾಡುತ್ತಾನೆಂದು ತಿಳಿಸಿದರು.
ನಗರಸಭೆಯಲ್ಲಿ ವಿರೋಧಪಕ್ಷ ಸಂಪೂರ್ಣವಾಗಿ ವಿಫಲವಾಗಿದೆ. ವಿರೋದ ಪಕ್ಷದ ನಾಯಕರಾದ ಪ್ರಕಾಶ್ ಅವರು ಸಭೆಯನ್ನು ಉತ್ತಮವಾಗಿ ತನ್ನ ಹಿಡಿತಕ್ಕೆ ತೆಗೆದುಕೊಳ್ಳುತ್ತಾರೆ ಆದರೆ ಅದನ್ನು ಮುಗಿಸುವಲ್ಲಿ ವಿಫಲವಾಗುತ್ತಿರುವುದರಿಂದ ಇಷ್ಟೆಲ್ಲಾ ಅನರ್ಥಗಳಾಗುತ್ತಿವೆ ಎಂದು ದೂರಿದರು.

      ನಗರಸಭೆ ಮಾಜಿಸದಸ್ಯ ನಿಜಗುಣ ಮಾತನಾಡಿ ಕೇಬಲ್ ಆಪರೇಟರ್‍ಗಳಿಗೆ ಆದ್ಯತೆಯ ವ್ಯಾಕ್ಸೀನ್ ಹಾಕಲು ಸರ್ಕಾರವೇ ಅನುಮತಿ ನೀಡಿದ್ದರು ಇಲ್ಲಿ ಮಾತ್ರ ಅದು ಹೇಗೆ ಹಾಕಿಸಿಕೊಳ್ಳುತ್ತೀರ ಎಂದು ಧಮಕಿ ಹಾಕುತ್ತಾರೆ ಎಂದರು.
7ನೇ ವಾರ್ಡ್‍ನ ನಗರಸಭಾ ಸದಸ್ಯ ಯೋಗಿಶ್ ಮಾತನಾಡಿ ನಗರಸಭೆಯಲ್ಲಿ ಸಭೆ ನಡೆದು ಕೆಲವು ತಿಂಗಳುಗಳೆ ಕಳೆದರೂ ಸಭಾನಡಾವಳಿ ಕೊಡಿ ಎಂದರೂ ಕೊಡುತ್ತಿಲ್ಲ ಎಂದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link