ಯುಜಿಡಿ ನೀರು ನಾಲೆಗೆ ಪ್ರತ್ಯಕ್ಷ ಸಾಕ್ಷಿ ಇದೆ, ಡಿಸಿ ಖುದ್ದು ವೀಕ್ಷಣೆಗೆ ಜನಾಗ್ರಹ!!

ತಿಪಟೂರು:

ಹಿಂಡಿಸ್ಕೆರೆ ಮತ್ತು ಕೊಪ್ಪದ ತೋಟದಲ್ಲಿ ಹರಿಯುತ್ತಿರುವ ಯುಜಿಡಿ ನೀರು

      “ಕಂಡಿದ್ದು ಸುಳ್ಳಾಗಬಹುದು, ಕೇಳಿದ್ದು ಸುಳ್ಳಾಗಬಹುದು, ನಿಧಾನಿಸಿ ಯೋಚಿಸಿದಾಗ ನಿಜವು ತಿಳಿಯುವುದು” ಎಂಬ ಗೀತೆಯಂತೆ ಹೇಮಾವತಿ ನಾಲೆಗೆ ಯುಜಿಡಿಯ ಮಲಿನ ನೀರು ಸೇರುತ್ತಿರುವುದು ಸತ್ಯವಾಗಿದ್ದು, ಇದರ ಬಗ್ಗೆ ಜಿಲ್ಲಾಧಿಕಾರಿಗಳು ಜಿಲ್ಲಾ ಕೆಂದ್ರದಲ್ಲಿ ಕುಳಿತು ವರಿದಿಯನ್ನು ನೋಡಿ ತೀರ್ಮಾನ ತೆಗೆದುಕೊಳ್ಳುವ ಬದಲು ಸ್ವತಹ ಪ್ರಮಾಣಿಸಿ ನೋಡಿ ತಪ್ಪಿತಸ್ತರ ಮೇಲೆ ಕ್ರಮ ಜರುಗಿಸಬೇಕೆಂದು ವಾಟ್ಸಾಪ್ ಗುಂಪುಗಳಲ್ಲಿ ಚರ್ಚೆ ಪ್ರಾರಂಭವಾಗಿದೆ.

       ಯುಜಿಡಿ ಕೊಳಚೆನೀರು ಹೇಮಾವತಿ ನಾಲೆಯನ್ನು ಸೇರುತ್ತಿರುವುದರ ಬಗ್ಗೆ ‘ಪ್ರಜಾಪ್ರಗತಿ’ ಪತ್ರಿಕೆಯಲ್ಲಿ 2020 ಸೆಪ್ಟಂಬರ್ 30 ರಂದು ಮತ್ತು 2021 ರ ಜೂನ್ 8 ರಂದು ವರದಿ ಪ್ರಕಟವಾಗಿತ್ತು. ಈ ಬಗ್ಗೆ ಖುದ್ದು ನೋಡಿ ಸತ್ಯಾಂಶ ಅರಿಯದ ಜಿಲ್ಲಾಧಿಕಾರಿಗಳು, ತಿಪಟೂರಿನಲ್ಲಿ ಹೇಮಾವತಿ ನಾಲೆಗೆ ಯುಜಿಡಿತ್ಯಾಜ್ಯ ಮತ್ತು ಮಲಿನಗೊಂಡನೀರು ಸೇರಿಲ್ಲ, ಅದು ಕೇವಲ ಮಳೆ ನೀರಷ್ಟೆ ಎಂದು ಹೇಳಿಕೆ ನೀರುವ ಪತ್ರಿಕೆಗಳ ವರದಿ ತಾಲ್ಲೂಕಿನ ಹಿತರಕ್ಷಣೆಗಾಗಿ ಮಾಡಿಕೊಂಡಿರುವ ವಾಟ್ಸ್‍ಆಪ್‍ಗ್ರೂಪ್‍ಗೆ ಬಂದ ತಕ್ಷಣ ಗ್ರೂಪ್‍ನ ಸಾಕಷ್ಟು ಸದಸ್ಯರು ಜಿಲ್ಲಾಧಿಕಾರಿಗಳ ಈ ಹೇಳಿಕೆ ಕುರಿತು ಗ್ರೂಪ್‍ನಲ್ಲಿ ಚರ್ಚಿಸಿದ್ದಾರೆ.

ಜಾಲತಾಣಗಳಲ್ಲಿ ಚರ್ಚೆ:

       ಜಿಲ್ಲಾಧಿಕಾರಿಗಳು ಜಿಲ್ಲಾ ಕೇಂದ್ರದಲ್ಲಿ ಕುಳಿತು ತೀರ್ಮಾನ ತೆಗೆದುಕೊಳ್ಳುವುದಲ್ಲ, ಸ್ವತಹ ಸ್ಥಳಕ್ಕೆ ಬಂದು ಪರೀಶೀಲಿಸಬೇಕು, ಆಗ ನಿಮಗೆ ಇಲ್ಲಿನ ಜನರ ಕಷ್ಟಗಳು ತಿಳಿಯುತ್ತವೆ. ಈ ಯುಜಿಡಿ ತ್ಯಾಜ್ಯದಿಂದ ನಮ್ಮ ತೋಟಗಳು ಹಾಳಾಗಿ ಓಣಗುತ್ತಿವೆ, ಜೊತೆಗೆ ತೋಟಕ್ಕೆ ಹೋದರೆ ಮೊಳಕಾಲುದ್ದ ನೀರಿದ್ದು ಅದಕ್ಕೆ ಇಳಿದರೆ ತುರಿಕೆ, ಗಬ್ಬುವಾಸನೆ ಬರುತ್ತದೆ. ಈ ಬಗ್ಗೆ ಪತ್ರಿಕೆಯಲ್ಲಿ ಪ್ರಕಟವಾದರೂ ಯಾವುದೇ ಕ್ರಮ ಕೈಗೊಳ್ಳದೇ ಇದ್ದವರು, ಈಗ ಹೇಮಾವತಿ ನಾಲೆಗೆ ಯುಜಿಡಿ ಮಲಿನ ನೀರು ಸೇರಿಲ್ಲವೆಂದು ಹೇಳುತ್ತಿದ್ದಾರಲ್ಲ ಹಾಗಾದರೇ ಇದ್ಯಾವ ನೀರು? ತೋಟಕ್ಕೆ ಹೋಗಿ ಇಲ್ಲಸಲ್ಲದ ರೋಗಗಳನ್ನು ಅಂಟಿಸಿಕೊಳ್ಳುವುದು ಬೇಡವೆಂದು ಎಷ್ಟೋ ಜನ ತಮಗೆ ತೋಟವಿದೆ ಎಂಬುದನ್ನೆ ಮರೆತಿದ್ದಾರೆ.

      ಇನ್ನು ಯುಜಿಡಿ ಜಾಕ್‍ವೆಲ್‍ನಲ್ಲಿ ದುರಸ್ತಿವೇಳೆ ತ್ಯಾಜ್ಯನೀರನ್ನು ತಪ್ಪಿಸಲಾಗುವುದೆಂದು ನಗರಸಭೆ ಅಧ್ಯಕ್ಷ ರಾಮ್‍ಮೋಹನ್ ಪತ್ರಿಕೆಯೊಂದಕ್ಕೆ ತಿಳಿಸಿದ್ದಾರೆ. ಚರಂಡಿ ನಿರ್ಮಾಣ ಮಾಡುವ ವೇಳೆ ಸ್ವತಃ ಅಧ್ಯಕ್ಷರ ವಾರ್ಡ್‍ನಲ್ಲಿ ಯುಜಿಡಿಯನ್ನು ಒಡೆದು ಅದರ ನೀರನ್ನು ನೇರವಾಗಿ ಚರಂಡಿಗೆ ಬಿಟ್ಟಿದ್ದು ಅದನ್ನೇ ಸರಿಪಡಿಸಿಲ್ಲವೆಂದು ಮಾವಿನತೋಪಿನ ಸಾರ್ವಜನಿಕರು ಆರೋಪಿಸಿದ್ದು, ಇಲ್ಲಿ ದಿನನಿತ್ಯ ಮಲಿನ ನೀರನ ವಾಸನೆ ಜೊತೆಗೆ ಸೊಳ್ಳೆಕಾಟ ಮತ್ತು ಸಾಂಕ್ರಾಮಿಕ ರೋಗದ ಭೀತಿಯಲ್ಲಿ ಬದುಕುತ್ತಿದ್ದು ಮೊದಲು ಸರಿಪಡಿಸಿಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

      ಪೂರ್ವಯೋಜಿತ ಕೃತ್ಯವೇ ಅಥವಾ ಅವಸರಕ್ಕೆ ಮಾಡಿದ ಎಡವಟ್ಟೇ:

     ಈಡೇನಹಳ್ಳಿ ಬಳಿ ಯುಜಿಡಿ ವೆಟ್‍ವೆಲ್ ನಿರ್ಮಾಣ ಮಾಡಿದ ನಗರ ನೀರು ಸರಬರಾಜು ಮತ್ತು ಒಳ ಚರಂಡಿ ಮಂಡಳಿ ಅಧಿಕಾರಿಗಳ ಮತ್ತು ಜನಪ್ರತಿನಿಧಿಗಳ ನಿರ್ಲಕ್ಷ್ಯ ಸ್ಪಷ್ಟವಾಗಿ ಕಾಣುತ್ತಿದೆ. ಜೊತೆಗೆ ಏನಾದರು ದುರಸ್ತಿಯಾದರೆ ನೀರನ್ನು ಇಲ್ಲಿಂದ ರಾಜಕಾಲುವೆಗೆ ಬಿಟ್ಟರೆ ದುರಸ್ಥಿಗೆ ಅನುಕೂಲವಾಗುತ್ತದೆಂಬ ಉದ್ದೇಶದಿಂದ ಮಾಡಿದ್ದಾರೆ. ಮೊದಲಿಗೆ ಇಲ್ಲಿಂದ ಎಸ್‍ಡಿಪಿ ಘಟಕಕ್ಕೆ ಯುಜಿಡಿ ನೀರನ್ನು ಪಂಪ್‍ಮಾಡುವ ಮೋಟಾರುಗಳು ಯಾವಾಗಲು ಕೆಟ್ಟು ನಿಂತಿರುತ್ತವೆ.

      ಈಗ ಡಿಸೇಲ್‍ನಿಂದ ಪಂಪ್‍ಚಾಲನೆ ಮಾಡುತ್ತೇವೆ ಎನ್ನುವ ನಗರಸಭೆಯವರು ಇಷ್ಟು ದಿನ ಏಕೆ ಈ ಕೆಲಸವನ್ನು ಮಾಡಿರಲಿಲ್ಲವೆಂದರೆ ಇಲ್ಲಿ ಹರಿದಿರುವುದು ಯುಜಿಡಿ ತ್ಯಾಜ್ಯವೆಂದು ಅವರೇ ಒಪ್ಪಿಕೊಂಡಂತಾಗಿದೆ. ಆದರೆ ಇಲ್ಲಿಂದ ಹರಿದ ನೀರು ಮಾತ್ರ ನಾಲೆ ಸೇರಿಲ್ಲವೆಂದರೆ ಅದು ತೋಟಗಳ ಮೂಲಕ ಹಾಯ್ದು ನೈಸರ್ಗಿಕವಾಗಿ ಶುದ್ಧಿಕರಣಗೊಂಡು ನಾಲೆ ಸೇರಿದೆ ಎಂದು ಹೇಳುವುದನ್ನು ಅಧಿಕಾರಿಗಳು ಮರೆತಂತಿದೆ.

     ಇಷೆಲ್ಲಾ ಸಮಸ್ಯೆಗಳಿದ್ದರೂ ಜಿಲ್ಲಾಧಿಕಾರಿಗಳು ಮಾತ್ರ ಇಲ್ಲಿನ ಅಧಿಕಾರಿಗಳ ಮಾತನ್ನು ಕೇಳಿ ನಾಲೆಗೆ ಮಲಿನನೀರು ಸೇರಿಲ್ಲವೆಂದು ಹೇಳುವ ಬದಲು ಪ್ರತ್ಯಕ್ಷವಾಗಿ ಪ್ರಮಾಣಿಕರಿಸಿ ನೋಡಿ ಸೂಕ್ತ ಕ್ರಮ ಕೈಗೊಂಡು ಜನರ ಆರೋಗ್ಯವನ್ನು ಕಾಪಾಡುವ ಗುರುತರ ಜವಾಬ್ದಾರಿ ಇದೆ ಎಂಬುದನ್ನು ಅರಿಯಬೇಕಾಗಿದೆ.

  ಯುಜಿಡಿ ನೀರು ಹರಿದು ನಮ್ಮ ತೋಟಗಳು ಸಂಪರ್ಣವಾಗಿ ಹಾಳಾಗಿವೆ, ತೆಂಗಿನ ಮರಗಳು ಸಂಪೂರ್ಣವಾಗಿ ಹಾಳಾಗಿದ್ದು ಹಳದಿ ಬಣ್ಣಕ್ಕೆ ತಿರುಗಿ ನಮ್ಮ ಮೂಲ ಆದಾಯಕ್ಕೆ ಪೆಟ್ಟು ಬಿದ್ದಿದೆ.

-ನೊಂದ ರೈತರು

     ಎಸ್‍ಡಿಪಿ ಘಟಕದಲ್ಲಿ ಸೂಕ್ತ ನಿರ್ವಹಣೆ ಇಲ್ಲದೇ ಮಲಿನನೀರನ್ನು ಶುದ್ಧಿಕರಿಸಲು ಅಲ್ಲಿರುವ ಸ್ಲರಿಯನ್ನು ತೆಗೆಯಬೇಕು ಈಗ ಸ್ಲರಿಯಿಂದಲೇ ತೊಟ್ಟಿಗಳು ತುಂಬಿದ್ದು ಕಲುಷಿತ ನೀರು ನೇರವಾಗಿ ಹೂವಿನಕಟ್ಟೆಗೆ ಸೇರುತ್ತಿದೆ. ಒಟ್ಟಾರೆಯಾಗಿ ಯು.ಜಿ.ಡಿ ಯೋಜನೆಯೇ ಸಂಪೂರ್ಣವಾಗಿ ವಿಫಲವಾಗಿದೆ.

-ಸಿ.ಬಿ.ಶಶಿಧರ್, ಅಧ್ಯಕ್ಷರು, ಜನಸ್ಪಂದನಾ ಟ್ರಸ್ಟ್, ತಿಪಟೂರು

-ರಂಗನಾಥ್ ಪಾರ್ಥಸಾರಥಿ

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link