ದೇಶಕ್ಕೆ ಕೊರೊನಾ ಚಿಂತೆ, ಬಿಜೆಪಿಯವರಿಗೆ ಕುರ್ಚಿ ಚಿಂತೆ

ತಿಪಟೂರು :

      ದೇಶವು ಕೊರೊನಾ ಹೊಡೆತಕ್ಕೆ ಸಿಕ್ಕಿ ನರಳುತ್ತಿರುವ ಸಂದರ್ಭದಲ್ಲಿ ರಾಜ್ಯದ ನಾಯಕರಿಗೆ ಮುಖ್ಯಮಂತ್ರಿ ಕುರ್ಚಿ ಚಿಂತೆಯೆ ಹೆಚ್ಚಾಗಿದ್ದು, ಜನರ ಬಗ್ಗೆ ಕಾಳಜಿ ಇಲ್ಲದೆ ಕುರ್ಚಿಗಾಗಿ ಕಿತ್ತಾಡುತ್ತಿದ್ದಾರೆ ಎಂದು ರಾಜ್ಯ ಬಿಜೆಪಿ ಸರ್ಕಾರವನ್ನು ಮಾಜಿ ಶಾಸಕ ಕೆ.ಷಡಕ್ಷರಿ ಟೀಕಿಸಿದರು.

      ರಾಜ್ಯದಾದ್ಯಂತ ಕಾಂಗ್ರೆಸ್ ಪಕ್ಷ ನಡೆಸುತ್ತಿರುವ “100 ನಾಟ್‍ಔಟ್” ಎಂಬ ಪ್ರತಿಭಟನೆಯ ಭಾಗವಾಗಿ ನಗರದ ಗಾಂಧೀ ನಗರದಲ್ಲಿನ ಪೆಟ್ರೋಲ್ ಬಂಕ್ ಮುಂಭಾಗ ಕೇಂದ್ರದ ತೈಲ ಬೆಲೆ ಏರಿಕೆ ವಿರೋಧಿಸಿ ಅವರು ಮಾತನಾಡುತ್ತಿದ್ದರು.

      ಕೊರೊನಾ ಸೊಂಕು ಇರುವುದರಿಂದ ಕೆಪಿಸಿಸಿ ಆದೇಶದಂತೆ ಗ್ರಾ.ಪಂ ಮಟ್ಟದಲ್ಲಿ ತೈಲ ಬೆಲೆ ಮತ್ತು ದಿನಸಿ, ಅಡುಗೆ ಎಣ್ಣೆ, ವಿದ್ಯುತ್ ಮತ್ತಿತರ ಅಗತ್ಯವಸ್ತುಗಳ ದರವನ್ನು ಏರಿಸಿರುವುರ ವಿರುದ್ದ ಪ್ರತಿಭಟನೆಯನ್ನು ಮಾಡುತ್ತಿದ್ದೇವೆ. ಜೂ.15 ರಂದು ತಾಲ್ಲೂಕಿನ ಎಲ್ಲಾ ಗ್ರಾಮ ಪಂಚಾಯತಿಗಳ ಮುಂದೆ ನಮ್ಮ ಕಾರ್ಯಕರ್ತರು ಪ್ರತಿಭಟನೆ ಮಾಡಿದ್ದು ಜೂ.16 ರಂದು ಗುರುಗದಹಳ್ಳಿ, ದಸರೀಘಟ್ಟ, ಗಂಗನಘಟ್ಟ, ಹುಣಸೇಘಟ್ಟ, ಸೂಗೂರು, ನೊಣವಿನಕೆರೆ ಭಾಗದಲ್ಲಿ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ.

      ಈ ಪ್ರತಿಭಟನೆಯಿಂದ ಜನರಿಗೆ ಆಗುತ್ತಿರುವ ತೊಂದರೆಗಳನ್ನು ತಿಳಿಸುವುದು ನಮ್ಮ ಮುಖ್ಯ ಉದ್ದೇಶವಾಗಿದೆ ಎಂದ ಅವರು ಕಾಂಗ್ರೆಸ್ ಯಾವಾಗಲು ಬಡವರ ಪರವಾದ ಪಕ್ಷವಾಗಿದೆ. 2014ರಲ್ಲಿ ಕೇಂದ್ರದಲ್ಲಿ ಅಧಿಕಾರ ಹಿಡಿದಿರುವ ಮೋದಿ ಕಾರ್ಪೋರೇಟ್ ಕಂಪನಿಗಳ ಪರವಾಗಿದ್ದು ಎಲ್ಲವನ್ನು ಖಾಸಗೀಕರಣ ಮಾಡಲು ಹೊರಟಿದ್ದಾರೆ. ಈಗ ಕೇವಲ 35 ರೂ.ಗಳಿರುವ ಪೆಟ್ರೋಲ್‍ಗೆ ಕೇಂದ್ರ ಮತ್ತು ರಾಜ್ಯದ ಸುಂಕ ಸೇರಿ 65 ರೂ.ಗಳನ್ನು ಹೆಚ್ಚುವರಿಯಾಗಿ ಪಡೆಯುತ್ತಿದ್ದು ಇಂತಹ ಲಾಭದ ವ್ಯಾಪಾರ ಮತ್ತೊಂದಿಲ್ಲ ಎಂದರು. ಇದರಿಂದ ಕಾರ್ಪೋರೇಟ್‍ಗಳಿಗೇನು ತೊಂದರೆ ಇಲ್ಲ. ಆದರೆ ನಿತ್ಯದ ಬದುಕಿಗಾಗಿ ಟ್ಯಾಕ್ಸಿ, ಆಟೋ ಹಾಗೂ ರೈತರು ಡಿಸೇಲ್ ಕೊಳ್ಳಲು ಸಾಧ್ಯವಾಗದೆ ವಾಹನಗಳನ್ನು ಮಾರುತ್ತಿದ್ದು ಇವರಯ ತಿನ್ನುವ ಅನ್ನಕ್ಕೆ ಕೇಂದ್ರ ಕಲ್ಲು ಹಾಕಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

      ಈ ಸಂದರ್ಭದಲ್ಲಿ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಸೈಫುಲ್ಲಾ, ಷಫಿ ಅಹ್ಮದ್, ತಾ.ಪಂ ಮಾಜಿ ಅಧ್ಯಕ್ಷ ನ್ಯಾಕೇನಹಳ್ಳಿ ಸುರೇಶ್, ಲೋಕ್‍ನಾಥ್‍ಸಿಂಗ್ ಹಾಗೂ ಮುಸ್ಲಿಂ ಮುಖಂಡರುಗಳು, ಮುತುವಲ್ಲಿಗಳು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಪ್ರತಿಭಟನೆ ನಡೆಸಿದರು.

Recent Articles

spot_img

Related Stories

Share via
Copy link