ಲಾಕ್‍ಡೌನ್ ಮುಗಿದಿಲ್ಲ, ಜನರಿಗೆ ಕೊರೊನಾ ಭಯವಿಲ್ಲ!

ತಿಪಟೂರು:

      ಕೋವಿಡ್-19 ಹೊಡೆತಕ್ಕೆ ಸಿಕ್ಕಿ ನಲುಗದ ಕುಟುಂಬ, ವ್ಯಾಪಾರ, ವ್ಯವಹಾರವೇ ಇಲ್ಲವೆನ್ನ ಬಹುದು. ಇದ್ದಿದ್ದರಲ್ಲಿ ಔಷಧಿ ಮತ್ತು ದಿನಸಿ ವ್ಯಾಪಾರವನ್ನು ಬಿಟ್ಟು ಎಲ್ಲಾ ಉದ್ಯಮಗಳು ನೆಲಕಚ್ಚಿದ್ದು ಈಗ ಕೊರೊನಾ ಸ್ವಲ್ಪ ಬಿಡುವು ಕೊಟ್ಟಿದ್ದು ಅನ್‍ಲಾಕ್ ಪ್ರಾರಂಭವಾಗಿದೆ.

       ಇಂತಹ ಪರಿಸ್ಥಿತಿಯಲ್ಲಿ ಸುಮಾರು ಒಂದುವರೆ ತಿಂಗಳು ಲಾಕ್‍ಡೌನ್‍ನಿಂದ ಮನೆಯಲ್ಲಿದ ಜನರು ಹೊರಗೆ ಹೇಗಿz ಎಂದು ನೋಡಿಕೊಂಡು ಹೋಗಲು ಪ್ರವಾಸಕ್ಕೆ ಬರುವಂತೆ ನಗರದತ್ತ ಧಾವಿಸುತ್ತಿದ್ದಾರೆ. ಇದರ ಮಧ್ಯೆ ಸುಮಾರು ಶೇ.50 ರಷ್ಟು ನೌಕಕರನ್ನು ಬಳಸಿಕೊಂಡು ಗಾರ್ಮೆಂಟ್ಸ್, ಇತ್ಯಾದಿ ಕಾರ್ಖಾನೆಗಳು ಆರಂಭವಾಗಿದ್ದು ಜನರು ನಗರದತ್ತ ಬರಲಾರಂಭಿಸಿದ್ದಾರೆ. ಕಳೆದ ಬಾರಿ ಕೇವಲ ನಗರಕ್ಕೆ ಬಂದರೆ ಮಾತ್ರ ಕೊರೊನಾ ಹರಡುತ್ತದೆ ಎಂಬ ಭಾವನೆ ಇತ್ತು, ಆದರೆ ಈಬಾರಿ ಇದು ತಿರುಗು ಮರುಗಾಗಿದ್ದು ಹಳ್ಳಿ ಹಳ್ಳಿಗಳಲ್ಲೂ ಕೊರೊನಾ ವಿಜೃಂಭಿಸಿದೆ.

       ಹೆಸರಿಗೆ ಮಾತ್ರ ಲಾಕ್‍ಡೌನ್: ಇನ್ನು ನಗರದಲ್ಲಿ ಮನೆಮನೆಗಳು ಅಂಗಡಿಗಳಾಗಿ ಪರಿವರ್ತನೆಯಾಗಿದ್ದು ಎಲ್ಲಾ ಅಂಗಡಿಗಳ ಮೇಲೂ ಅಂಗಡಿ ಮಾಲೀಕರ ಮೊಬೈಲ್ ನಂಬರ್ ಅಂಟಿಸಿರುತ್ತಾರೆ. ಏಕೆಂದರೆ ಅಂಗಡಿ ಮಾಲೀಕರು ಸಾಲ-ಸೋಲಮಾಡಿ ವ್ಯಾಪಾರಕ್ಕೆ ಸರಕನ್ನು ಹಾಕಿದ್ದು ಈಗ ಲಾಕ್‍ಡೌನ್‍ನಿಂದ ವ್ಯಾಪಾರ ಇಲ್ಲದೇ ಹೋದರು ಬ್ಯಾಂಕಿನಿಂದ ತೆಗೆದುಕೊಂಡಿರುವ ಸಾಲವನ್ನು ಕಟ್ಟಲೇಬೇಕು ಹಾಗಾಗಿ ಎಷ್ಟು ಸಾಧ್ಯವೊ ಅಷ್ಟು ವ್ಯಾಪಾರ ಮಾಡಿಕೊಳ್ಳೋಣವೆಂದು ವ್ಯಾಪಾರವನ್ನು ಮಾಡುತ್ತಲೇ ಇದ್ದಾರೆ.

    ಲಾಕ್‍ಡೌನ್‍ನಿಂದ ತೆರಿಗೆ ನಷ್ಟ:

      ಲಾಕ್‍ಡೌನ್‍ನಿಂದ ವ್ಯಾಪಾರ ವಹಿವಾಟು ಇಲ್ಲದೆ ತೆರಿಗೆದಾರರು ತೆರಿಗೆಯನ್ನೆ ಕಟ್ಟುತ್ತಿಲ್ಲ. ಇನ್ನೊಂದು ಕಡೆ ಇದನ್ನೆ ಬಂಡವಾಳ ಮಾಡಿಕೊಂಡ ಕೆಲವರು ಯಾವುದೆ ಬಿಲ್ ಇಲ್ಲದೆ ರಾಜಾರೋಷವಾಗಿ ಬಟ್ಟೆ, ಚಿನ್ನಾಭರಣಗಳು, ಫ್ಯಾನ್ಸಿ ವಸ್ತುಗಳು ಮುಂತಾದವನ್ನು ಲಾಕ್‍ಡೌನ್ ಹೆಸರಿನಲ್ಲಿ ಮಾರುತ್ತಿದ್ದಾರೆ. ಇವರಿಗೆ ಲಾಕ್‍ಡೌನ್ ಮಾಡಿದಷ್ಟು ತೆರಿಗೆ ಹಣವನ್ನು ಉಳಿಸುವುದರ ಜೊತೆಗೆ ತೆರಿಗೆಯಿಂದಲೂ ತಪ್ಪಿಸಿಕೊಳ್ಳಲು ಲಾಕ್‍ಡೌನ್ ಸಹಾಯಮಾಡುತ್ತಿದೆ.

      ಸಿಗರೇಟ್, ತಂಬಾಕು, ಗುಟ್ಕಾ ನಿಷೇಧ ಕೇವಲ ಹೆಸರಿಗೆ ಮಾತ್ರ: ಕಳೆದ ಬಾರಿ ಲಾಕ್‍ಡೌನ್‍ನಲ್ಲಿ ಮದ್ಯ ಮಾರದಂತೆ ತಡೆಯಲಾಗಿತ್ತು ಆದರೆ ಆಗಲೂ ಕೆಲವರು ಹೇಗೊ ಮದ್ಯವನ್ನು ಹುಡುಕಿಕೊಂಡು ಹೆಚ್ಚಿನ ಬೆಲೆಕೊಟ್ಟು ಕುಡಿಯುತ್ತಿದ್ದರು. ಈ ಬಾರಿ ಬೆಳಗ್ಗೆ 6 ರಿಂದ 10 ಗಂಟೆಯವರೆಗೆ ಮದ್ಯ ಮಾರಲು ಅವಕೊಟ್ಟಿದ್ದಾರೆ ಆದರೆ ಸಿಗರೇಟ್, ತಂಬಾಕು ಗುಟ್ಕಾವನ್ನು ನಿಷೇದಿಸಿದ್ದಾರೆ. ಇದರಿಂದ ಇವುಗಳಿಗೆ ಈಗ ಎಲ್ಲಿಲ್ಲದ ಬೇಡಿಕೆ ಸೃಷ್ಠಿಯಾಗಿದ್ದು, ಕಾಳಸಂತೆಯಲ್ಲಿ ತೆರಿಗೆಯನ್ನು ವಂಚಿಸಿ ವ್ಯಾಪಾರವನ್ನು ಮಾಡುತ್ತಿದ್ದು ಇಲ್ಲೂ ಸಹ ಸರ್ಕಾರಕ್ಕೆ ನಷ್ಟವಾಗುತ್ತಿದೆ.

ನನ್ನ ವರದಿ ನೆಗೆಟೀವ್ ಬಂದಿದೆ:

      ನಮ್ಮ ಜನಕ್ಕೆ ಇನ್ನೂ ಬುದ್ದಿ ಬಂದಿಲ್ಲವೊ ಅಥವಾ ಸರ್ಕಾರ ಸರಿಯಾಗಿ ತಿಳಿಸಿಲ್ಲವೊ ತಿಳಿಯುತ್ತಿಲ್ಲ, ಕಳೆದ ಬಾರಿ ಕೊರೊನಾ ಪರೀಕ್ಷೆಯಲ್ಲಿ ನಗೆಟೀವ್ ಬಂದಿದೆ. ಈಗ ನನಗೆ ಕೊರೊನಾ ಇಲ್ಲೆಂದು ಸೀನುತ್ತಾ, ಕೆಮ್ಮುತ್ತಾ ಇದು ಬರಿ ಶೀತವಾಗಿದೆ ಎಂದು ಮಾಸ್ಕ್ ಧರಿಸದೆ ಓಡಾಡುವವರ ಸಂಖ್ಯೆಯೇನೂ ಕಡಿಮೆಯಾಗಿಲ್ಲ, ಜೊತೆಗೆ ನೀವೆಲ್ಲಾ 2-2 ಮಾಸ್ಕ್ ಹಾಕಿದ್ದೀರ, ನೀವು ಇಷ್ಟು ಜಾಗೃತೆ ಇರುವಾಗ ನನಗೆಲ್ಲಿ ಕೊರೊನಾ ಬರುತ್ತದೆಂದು ಉಡಾಫೆಯ ಉತ್ತರವನ್ನು ಕೊಡುವವರು ಸಹ ಹೆಚ್ಚೆ ಇದ್ದಾರೆ. ಒಟ್ಟಿನಲ್ಲಿ ಒಂದು ಬಾರಿ ಕೊರೋನಾ ಪರೀಕ್ಷೇಯಲ್ಲಿ ನೆಗೆಟೀವ್ ಬಂದರೆ ಜೀವಮಾನ ಪೂರ್ತಿ ನನಗೆ ಕೊರೊನಾ ಬರುವುದಿಲ್ಲ ಎಂಬಂತೆ ವರ್ತಿಸುತ್ತಿರುವ ಜನರಿಗೆ ಕೊರೊನಾ ಪರೀಕ್ಷೆಯ ವೇಳೆಯೇಕೊರೊನಾ ಬಂದ ಉದಾಹರಣೆಯ ಬಗ್ಗೆ ಆರೋಗ್ಯ ಇಲಾಖೆ ಇನ್ನಾದರೂ ತಿಳಸಬೇಕಿದೆ.

      ಅನ್‍ಲಾಕ್ ಸರ್ಕಾರದ್ದು, ಕೊರೋನಾದ್ದಲ್ಲ: ಲಾಕ್‍ಡೌನ್ ಮಗಿದಿದ್ದೆ ತಡ ಬ್ಯಾಂಕ್, ಮತ್ತಿತರ ಕಛೇರಿಗಳ ಮುಂದೆ ಜನರು ಸರದಿ ಸಾಲಿನಲ್ಲಿ ಯಾವುದೆ ಅಂತರವಿಲ್ಲದೆ ನಿಲ್ಲುತ್ತಿದ್ದು, ಇಂತಹ ಜನ ನಿಬಿಡ ಪ್ರದೇಶಗಳಲ್ಲಿ ಸೋಂಕಿನ ಪರಿಣಾಮ ಅರಿಯದೆ ನಿಂತರೆ ಕೊರೊನಾ ಮನೆಗೆ ಬರುವುದರಲ್ಲಿ ಯಾವುದೆ ಅನುಮಾನವೆ ಇಲ್ಲ.

     ಇಷ್ಟೆಲ್ಲ ಕಾರಣಗಳಿದ್ದು, ಹೊರಗಡೆ, ನಗರದಲ್ಲಿ ಹೇಗಿದೆ ಒಂದ್ ಧಮ್ ಹೊಡಿಯೋಣ ಬಾರೊ ಮಗಾ ಎಂದು ಹುಡುಗರು, ಅದೆ ರೀತಿ ಇಲ್ಲೆ ಫ್ಯಾನ್ಸಿಸ್ಟೋರಿಗೆ ಹೋಗಿ ಬರೋಣವೆಂದು ಮಹಿಳೆಯರು ಮನೆಯಿಂದ ಹೊರಬಂದರೆ ತಮ್ಮ ಮನೆ ಕೊರೊನಾಗೆ ಆಹುತಿ ಆಗುವುದರಲ್ಲಿ ಅನುಮಾನವೆ ಇಲ್ಲ.

ತಾಲ್ಲೂಕಿನಲ್ಲಿ ಸೋಮವಾರ ಮಾತ್ರ ಅರ್ಧ ಶತಕಕ್ಕಿಂತ ಕಡಿಮೆ ಸೋಂಕಿತರು ಕಾಣಿಸಿಕೊಂಡಿದ್ದು ಬಿಟ್ಟರೆ ತಾಲ್ಲೂಕಿನಾದ್ಯಂತ ಸೋಂಕಿತರ ಸಂಖ್ಯೆ ಹೆಚ್ಚುತ್ತಲೆ ಇದೆ. ಈಗಲಾದರೂ ಹುಷಾರಾಗಿದ್ದರೆ ಮಾತ್ರ ಕೊರೊನಾದಿಂದ ಮುಕ್ತಿ ಪಡೆಯಬಹುದು.

      ನಾವು ಏನು ಮಾಡಲು ಸಾಧ್ಯ, ಸಾಲಮಾಡಿ ಸರಕನ್ನು ಹಾಕಿಕೊಂಡಿದ್ದವೆ. ಒಳ್ಳೆಯ ವ್ಯಾಪಾರದ ಟೈಮ್‍ನಲ್ಲಿ ಲಾಕ್‍ಡೌನ್ ಆಯಿತು, ಇನ್ನು ನಮ್ಮ ಗಿರಾಕಿಗಳಿಗೆ ನಾವು ಐಟಂ ಕೊಡದೆ ಹೋದರೆ ಮತ್ತೆ ಗಿರಾಕಿಗಳನ್ನು ಹಿಡಿಯುವುದು ಕಷ್ಟ.

-ಬಟ್ಟೆ ವ್ಯಾಪಾರಿ

      ನಮ್ಮ ಹೊಟ್ಟೆಪಾಡು ಇರುವುದೆ ವ್ಯಾಪಾರದಲ್ಲಿ, ವ್ಯಾಪಾರ ಮಾಡದಿದ್ದರೆ ನಮಗೆ ಉಪವಾಸವೆ ಗತಿ ಆದ್ದರಿಂದ ಅಂಗಡಿ ಮುಂದೆ ಪೋನ್ ನಂಬರ್ ಹಾಕಿದ್ದು ಕರೆಮಾಡಿದವರಿಗೆ ಮನೆಯಿಂದಲೆ ಅವರಿಗೆ ಬೇಕಾದ ವಸ್ತುಗಳನ್ನು ಕೊಡುತ್ತಿದ್ದೇವೆ.

-ಪ್ರಾವಿಜನ್ ಸ್ಟೋರ್ ಮಾಲೀಕ

ನಮ್ಮ ಮನೆಯಲ್ಲಿ ಮದುವೆ ಇದ್ದು ಲಾಕ್‍ಡೌನ್ ಇರುವುದರಿಂದ ಬಟ್ಟೆ ಮತ್ತಿತರ ವಸ್ತುಗಳು ಸಿಗುತ್ತಿಲ್ಲ, ಈಗ ನಮಗೆ ಅಂಗಡಿ ಮುಂದಿನ ಮೊಬೈಲ್ ನಂಬರ್‍ಗೆ ಕರೆ ಮಾಡದೆ ಬೇರೆ ವಿಧಿ ಇಲ್ಲ.

-ಮದುವೆಗೆ ವಸ್ತುಗಳನ್ನು ಖರೀದಿಸುವ ಜನ

ರಂಗನಾಥ್ ಪಾರ್ಥಸಾರಥಿ

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap