ತಿಪಟೂರು :
ರೈತರು ಬೆಳೆ ಸಮೀಕ್ಷೆ ಮಾಡಿಕೊಳ್ಳುವ ಅವಕಾಶವನ್ನು ಸರಕಾರ ಕಲ್ಪಿಸಿದ್ದು, ರೈತರು ತಾವು ಬೆಳೆದ ಬೆಳೆಯ ವಿವರಗಳನ್ನು ಚಿತ್ರಗಳ ಸಮೇತ ಮಾಹಿತಿಯನ್ನು ಆ್ಯಪ್ ಬಳಸಿ ಮೊಬೈಲ್‍ನಲ್ಲೆ ದಾಖಲಿಸಬಹುದು. ಹೀಗೆ ಮಾಡುವ ಮೂಲಕ ಸರಕಾರದಿಂದ ಸಿಗುವ ಎಲ್ಲಾ ಸವಲತ್ತುಗಳನ್ನು ಪಡೆಯಲು ಅನುಕೂಲವಾಗಿದೆ ಎಂದು ಸಹಾಯಕ ಕೃಷಿ ನಿರ್ದೇಶಕ ಡಾ.ಎನ್.ಕೆಂಗೇಗೌಡ ತಿಳಿಸಿದರು.
ತಾಲ್ಲೂಕಿನ ಹೊನ್ನವಳ್ಳಿ ಹೋಬಳಿಯ ಸಾರ್ಥವಳ್ಳಿ ಗ್ರಾಮದ ರೈತರೊಂದಿಗೆ ಪ್ರಾತ್ಯಕ್ಷಿಕೆ ನೀಡಿ ಮಾತನಾಡಿದ ಅವರು ಸರಕಾರಗಳ ಸೌಲಭ್ಯ ಸಿಗಲು ಬೆಳೆ ಸಮೀಕ್ಷೆಯೇ ಮೂಲವಾಗಿದು, ್ದರೈತರು ತಮ್ಮ ಜಮೀನಿನ ಪಹಣಿ ರಕ್ಷಣೆಯಷ್ಟೇ ಮುಖ್ಯವಾಗಿ ಬೆಳೆ ಸಮೀಕ್ಷೆಯನ್ನು ಮಾಡಲು ಮುತುವರ್ಜಿ ವಹಿಸಬೇಕು. ರೈತರೇ ನೇರವಾಗಿ ಬೆಳೆ ಸಮೀಕ್ಷೆಯನ್ನು ಆ್ಯಪ್‍ನಲ್ಲಿ ಡೌನ್‍ಲೋಡ್ ಮಾಡಬಹುದು. ಹಿಂದೆಲ್ಲಾ ಅಧಿಕಾರಿಗಳು ಇಲ್ಲವೇ ಗುತ್ತಿಗೆ ಸಿಬ್ಬಂದಿ ಬೆಳೆ ಸಮೀಕ್ಷೆ ಮಾಡುತ್ತಿದ್ದರು. ಆದರೆ ಈಗ ತಂತ್ರಜ್ಞಾನ ಬೆಳೆದಂತೆ ಎಲ್ಲವೂ ಬದಲಾಗಿದೆ. ಮೊಬೈಲ್‍ನಲ್ಲೆ ಬೆಳೆ ಸಮೀಕ್ಷೆ ಮಾಡಿ ಸವಲತ್ತು ಪಡೆಯಬಹುದಾಗಿದೆ ಎಂದರು.
ಬೆಳೆ ಸಮೀಕ್ಷೆಗೆ ಒತ್ತು ನೀಡಿ :
ಬೆಳೆ ಸಮೀಕ್ಷೆ ವಿಷಯದಲ್ಲಿ ಮೊದಲ ಹಂತದಲ್ಲಿ ರೈತರಿಗೆ ಬೆಳೆ ಸಮೀಕ್ಷೆ ಮಾಡಲು ಅವಕಾಶ ನೀಡಲಾಗುತ್ತದೆ. ಆನಂತರ ಬೆಳೆ ಸಮೀಕ್ಷೆ ಮಾಡಲು ಗುತ್ತಿಗೆ ಆಧಾರದ ಮೇಲೆ ಖಾಸಗಿ ವ್ಯಕ್ತಿಗಳನ್ನು ಕಳುಹಿಸಲಾಗುತ್ತದೆ. ಮೂರನೇ ಹಂತದಲ್ಲಿ ಖಾಸಗಿ ವ್ಯಕ್ತಿಗಳು ಕೊಟ್ಟ ಮಾಹಿತಿಯನ್ನು ಕಂದಾಯ, ಕೃಷಿ, ತೋಟಗಾರಿಕೆ ಅಧಿಕಾರಿಗಳು ಪರಿಶೀಲಿಸಿ ಅನುಮೋದಿಸಿದರಷ್ಟೇ ಬೆಳೆ ಸಮೀಕ್ಷೆ ಅಂತಿಮವಾಗಲಿದೆ. ಹೀಗಾಗಿ ರೈತರು ಪರಿಹಾರ ಸಿಗಲಿಲ್ಲ, ಯಾವುದೇ ಸೌಲಭ್ಯ ಸಿಗಲಿಲ್ಲ ಎಂದು ಇಲಾಖೆಗಳಿಗೆ ದೂರು ಕೊಡುವುದನ್ನು ಬಿಟ್ಟು ಕಾಲಕಾಲಕ್ಕೆ ಪಕ್ಕಾ ಬೆಳೆ ಸಮೀಕ್ಷೆಗೆ ಒತ್ತು ಕೊಡಬೇಕಿದೆ.
ಸರಕಾರದ ಯೋಜನೆ ರೈತರಿಗೆ :
ಪ್ರಕೃತಿ ವಿಕೋಪಗಳಾದಾಗ ನಷ್ಟದ ಸಮೀಕ್ಷೆ, ಬೆಳೆ ವಿಮೆ, ರಾಗಿಗೆ ಬೆಂಬಲ ಬೆಲೆ, ಸಹಾಯಧನ, ಬೆಳೆ ಪರಿಹಾರ ಹೀಗೆ ಎಲ್ಲಕ್ಕೂ ಬೆಳೆ ಸಮೀಕ್ಷೆ ಕಡ್ಡಾಯವಾಗಿದೆ. ನಿಮ್ಮ ಜಮೀನಿನಲ್ಲಿ ಏನು ಬೆಳೆಯಾಗುತ್ತಿದೆ ಎನ್ನುವುದರ ಆಧಾರದ ಮೇಲೆ ಸರಕಾರದ ಯೋಜನೆಗಳು ರೈತರಿಗೆ ಸಿಗಲಿವೆ. ಹೀಗಾಗಿ ಎಲ್ಲಾ ರೈತರು ತಮ್ಮ ಜಮೀನಿನ ದಾಖಲೆಗಳ ಕಡೆ ಹೇಗೆ ಗಮನಹರಿಸುತ್ತೀರೋ ಹಾಗೇ ಬೆಳೆ ಸಮೀಕ್ಷೆಯನ್ನು ಮಾಡಬೇಕಾದ ಅನಿವಾರ್ಯತೆ ಇದೆ.
ಯಾವುದು ಆ ಆ್ಯಪ್ ? :
ಖಾರೀಫ್ ಸೀಸನ್ ಫಾರ್ಮರ್ ಸರ್ವೆ 2021-22 ಇದು ಬೆಳೆ ಸಮೀಕ್ಷೆ ಮಾಡಲು ಇರುವ ಆ್ಯಪ್, ಸ್ಮಾರ್ಟ್ ಫೋನ್‍ಗಳಲ್ಲಿ ಪ್ಲೇ-ಸ್ಟೋರ್‍ಗೆ ಹೋಗಿ ಆ್ಯಪ್ ಡೌನ್‍ಲೋಡ್ ಮಾಡಿಕೊಂಡರೆ ಬೆಳೆ ಸಮೀಕ್ಷೆಗೆ ಸಂಬಂಧಿಸಿದ ಎಲ್ಲ ಮಾಹಿತಿಯೂ ಆ್ಯಪ್‍ನಲ್ಲಿ ಲಭ್ಯವಾಗಲಿದೆ. ಬೆಳೆಯ ಫೋಟೋಗಳ ಜೊತೆಗೆ ಸರ್ವೆ ನಂಬರ್, ಬೆಳೆಯ ಸ್ಥಿತಿ ಎಲ್ಲವನ್ನೂ ಈ ಆ್ಯಪ್‍ನಲ್ಲಿ ಡೌನ್‍ಲೋಡ್ ಮಾಡಬಹುದು. ರೈತರಿಗೆ ಅನುಕೂಲವಾಗುವ ದೃಷ್ಟಿಯಿಂದ ಸರಕಾರ ಈ ಆ್ಯಪ್ ಅನ್ನು ಅಭಿವೃದ್ದಿಪಡಿಸಿದ್ದು, ರೈತರಿಗೆ ತಿಳಿಯದಿದ್ದರೆ ಮನೆಯಲ್ಲಿನ ವಿದ್ಯಾವಂತರಿಂದಲಾದರೂ ಬೆಳೆ ಸಮೀಕ್ಷೆ ಮಾಡಿಸಬೇಕು.
ಬೆಳೆ ಸಮೀಕ್ಷೆ ಆ್ಯಪ್ ಕುರಿತು ಹೆಚ್ಚಿನ ಮಾಹಿತಿ ಬೇಕಿದ್ದರೆ ರೈತ ಸಂಪರ್ಕ ಕೇಂದ್ರ, ಕಸಬಾ, ತಿಪಟೂರು -8277932821, ಹೊನ್ನವಳ್ಳಿ-8277932818, ಬಿಳಿಗೆರೆ/ಕಿಬ್ಬನಹಳ್ಳಿ-8277932822, ನೊಣವಿನಕೆರೆ-8277932826 ಈ ನಂಬರ್‍ಗಳಿಗೆ ಕರೆ ಮಾಡಬಹುದು ಅಥವಾ ಕಂದಾಯ ಇಲಾಖೆಯ ಗ್ರಾಮ ಲೆಕ್ಕಾಧಿಕಾರಿಗಳು, ರೇಷ್ಮೆ ಇಲಾಖೆ ಮತ್ತು ಆಯಾ ಗ್ರಾಮಗಳಿಗೆ ನಿಯೋಜಿಸಿದ ಇಲಾಖೆಯ ಗುತ್ತಿಗೆ ಆಧಾರಿತ ನೌಕರರನ್ನು ಸಂಪರ್ಕಿಸಿ ಎಂದು ಸಹಾಯಕ ಕೃಷಿ ನಿರ್ದೇಶಕ ಡಾ.ಎನ್.ಕೆಂಗೇಗೌಡ ತಿಳಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ