ಬಿಡುವು ಕೊಟ್ಟ ಪುಷ್ಯ ಮಳೆ, ಬಿತ್ತನೆ ಕಾರ್ಯಕ್ಕೆ ಅಣಿಯಾದ ರೈತ

ತಿಪಟೂರು : 

      ಪುಷ್ಯಮಳೆ ಆರಂಭವಾದಾಗಿನಿಂದಲೂ ತುಂತುರು ಮಳೆಯಾಗುತ್ತಿದ್ದು, ಕಳೆದ 2 ದಿನದಿಂದ ಮಳೆ ಬಿಡುವುಕೊಟ್ಟಿದ್ದು, ನಿಂತಿದ್ದ ಕೃಷಿ ಚಟುವಟಿಕೆಗಳು ಆರಂಭವಾಗಿ ಅನ್ನದಾತ ತನ್ನ ನಿತ್ಯಕಾಯಕದಲ್ಲಿ ತೊಡಗಿದ್ದಾನೆ.

      ರಾಜ್ಯದಲ್ಲಿ ಬಿ.ಎಸ್.ಯಡಿಯೂರಪ್ಪ ತನ್ನ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಡುತ್ತಿದ್ದರೆ, ಇತ್ತ ನನಗೂ ರಾಜಕೀಯಕ್ಕೂ ಸಂಬಂಧವೇ ಇಲ್ಲವೆಂದು ಕುವೆಂಪು ರಚಿಸಿರುವ ಗೀತೆಯ ಸಾಲುಗಳಾದ ಲೋಕದೊಳೇನೇ ನಡೆಯುತಲಿರಲಿ ತನ್ನೀ ಕಾರ್ಯವ ಬಿಡನೆಂದೂ, ರಾಜ್ಯಗಳು ಉದಯಿಸಲಿ, ರಾಜ್ಯಗಳು ಅಳಿಯಲಿ ಹಾರಲಿ ಗದ್ದುಗೆ ಮುಕುಟಗಳು, ಮುತ್ತಿಗೆ ಹಾಕಲಿ ಸೈನಿಕರೆಲ್ಲ ಬಿತ್ತುಳುವುದ ನಾವು ಬಿಡುವುದೆ ಇಲ್ಲ ಎನ್ನುವಂತೆ ರೈತರು ತನ್ನ ಕಾಯಕದಲ್ಲಿ ತೊಡಗಿದ್ದಾರೆ.

      ತಾಲ್ಲೂಕಿನಲ್ಲಿ ಒಟ್ಟು ರಾಗಿ ಬಿತ್ತನೆಯ ಗುರಿ 18-19 ಸಾವಿರ ಹೆಕ್ಟೇರ್ ಆಗಿದ್ದು, ಹೊನ್ನವಳ್ಳಿ 1000 ಹೆಕ್ಟೇರ್, ನೊಣವಿನಕೆರೆ 200-300 ಹೆಕ್ಟೇರ್ ಹಾಗೂ ಕಸಬಾ ಹಾಗೂ ಕಿಬ್ಬನಹಳ್ಳಿಯಲ್ಲಿ ಸುಮಾರು 30-40 ಹೆಕ್ಟೇರ್ ಬಿತ್ತನೆ ಮಾಡಲಿದ್ದು, ಇನ್ನುಳಿದ ಪ್ರದೇಶದಲ್ಲಿ ಆಗಸ್ಟ್ 15ರ ಹೊತ್ತಿಗೆ ಸೂಕ್ತ ಮಳೆಯಾದರೆ ಬಿತ್ತನೆ ಕಾರ್ಯ ಪೂರ್ಣಗೊಳ್ಳುವ ನಿರೀಕ್ಷೆ ಇದೆ.

ರೈತಕಾರ್ಮಿಕರ ಕೊರತೆ:

      ಕಳೆದ ಬಾರಿ ಕೋವಿಡ್ ಮೊದಲನೇ ಅಲೆಯ ಲಾಕ್‍ಡೌನ್ ಇದ್ದ ಕಾರಣ ನಗರಗಳಿಂದ ಬಂದ ಮಕ್ಕಳು ಮೊಮ್ಮಕ್ಕಳು ಖುಷಿಯಾಗಿ ರೈತ ಚಟುವಟಿಕೆಗಳಲ್ಲಿ ತೊಡಗಿದ್ದರಿಂದ ಕೂಲಿ ಕಾರ್ಮಿಕರ ಕೊರತೆ ಕಾಣಿಸಲಿಲ್ಲ. ಆದರೆ ಈ ಬಾರಿ ಕೃಷಿ ಕಾರ್ಯಗಳಿಗೆ ಕಾರ್ಮಿಕರ ಕೊರತೆ ಕಾಡುತ್ತಿದ್ದು ಹೆಚ್ಚಿನದಾಗಿ ಮುಯ್ಯಾಳುಗಳನ್ನು ನಂಬಿಕೊಳ್ಳುವ ಪರಿಸ್ಥಿತಿಗೆ ಸಣ್ಣ-ಪುಟ್ಟ ರೈತರು ಬಂದಿದ್ದಾರೆ.

ಬಿತ್ತನೆ ಬೀಜ ವಿತರಣೆ :

     ಈವರೆಗೆ ಕೃಷಿ ಇಲಾಖೆಯಿಂದ ಬಿತ್ತನೆ ಬೀಜವಾಗಿ ಎಂ.ಆರ್ 6 ಹಾಗೂ ಎಂ.ಎಲ್ 365 ಸೇರಿದಂತೆ 473 ಕ್ವಿಂಟಾಲ್ ರಾಗಿಯನ್ನು ವಿತರಣೆ ಮಾಡಲಾಗಿದ್ದು, ಸೂಕ್ತ ಮಳೆಯಾದರೆ ಆಗಸ್ಟ್ 15ರವರೆಗೂ ಬಿತ್ತನೆ ಮಾಡಿದರೆ, ಸೂಕ್ತ ಇಳುವರಿ ಪಡೆಯಬಹುದಾಗಿದೆ ಎಂದು ಕೃಷಿ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

ಕಾಣೆಯಾದ ಹುಚ್ಚೆಳ್ಳು, ದ್ವಿದಳ ಧಾನ್ಯ:

      ಕೆಲವು ವರ್ಷಗಳ ಹಿಂದೆ ರೈತರು ತಮಗೆ ಬೇಕಾದ ದ್ವಿದಳ ದಾನ್ಯ, ರಾಗಿಯ ಜೊತೆಗಾರ ಹುಚ್ಚೆಳ್ಳು ಮುಖ್ಯವಾಗಿ ಕೂಲಿ ಕೆಲಸಕ್ಕೆ ಅನುಕೂಲವಾಗಲೆಂದು ರಾಗಿಯ 5 ಸಾಲುಗಳ ಮಧ್ಯದಲ್ಲಿ ಅಕ್ಕಡಿ ಸಾಲುಗಳನ್ನು ಮಾಡಿಕೊಂಡು ಹುಚ್ಚೆಳ್ಳು, ಅವರೆ, ಜೋಳ, ಅಲಸಂದೆ, ಸಾಸಿವೆ ಮುಂತಾದ ಮನೆಗೆ ಬೇಕಾದ ಕಾಳುಗಳನ್ನು ಹಾಕಿಕೊಳ್ಳುತ್ತಿದ್ದರು. ಯಾವಾಗ ರಾಗಿ ಕಟಾವಿಗೆ ಯಂತ್ರ ಬಂತೋ ಅಂದಿನಿಂದ ಕಟಾವಿಗೆ ಅನುಕೂಲವಾಗಲೆಂದು ಅಕ್ಕಡಿ ಸಾಲುಗಳನ್ನು ಮರೆತರೋ ಅಂದಿನಿಂದ ಮನೆಗೆ ಬೇಕಾದ ಕಾಳು, ಬೇಳೆಗಳನ್ನು ಅಂಗಡಿಗಳಲ್ಲಿ ಖರೀದಿಸುವಂತಾಂಗಿದೆ ಎಂದು ರೈತರೇ ಹೇಳುತ್ತಾರೆ.

ಅಕ್ಕಡಿ ಸಾಲಿನ ಪ್ರಯೋಜನೆ:

      ನಮ್ಮ ಪೂರ್ವಿಕರು ತುಂಬಾ ಪರಿಜ್ಞಾನದಿಂದಲೇ ಈ ಅಕ್ಕಡಿ ಸಾಲುಗಳನ್ನು ಮಾಡಿ ಮನೆಗೆ ಬೇಕಾದ ಕಾಳುಗಳನ್ನು ಬೆಳೆದುಕೊಳ್ಳುತ್ತಿದ್ದರೆ ಹಿಂದೆ ವೈಜ್ಞಾನಿಕ ಕಾರಣವೂ ಇದೆ. ದ್ವಿದಳ ಧಾನ್ಯಗಳ ಬೇರುಗಳಲ್ಲಿ ವಾತಾವರಣದಿಂದ ನೇರವಾಗಿ ಸಾರಜನಕವನ್ನು ಹೀರಿಕೊಳ್ಳುವ ವ್ಯವಸ್ಥೆ ಇದ್ದು, ಬೆಳೆ ಕಟಾವಿನ ನಂತರ ಆ ಬೇರುಗಳಲ್ಲಿರುವ ಸಾರಜನಕವು ಮಣ್ಣಿನಲ್ಲಿ ಸೇರಿ ಭೂಮಿಯ ಫಲವತ್ತನ್ನು ಹೆಚ್ಚಿಸುತ್ತಿದ್ದರಿಂದ ಭೂಮಿಯು ತನ್ನ ಫಲವತ್ತತೆಯನ್ನು ಹೆಚ್ಚಿಸಿಕೊಳ್ಳುತ್ತಿತ್ತು.

      ಚಿಕ್ಕದಾದ ಕಟಾವು ಯಂತ್ರಗಳನ್ನು ಬಳಸಿ ರಾಗಿಯನ್ನು ಕಟಾವು ಮಾಡಬಹುದು, ಈ ಪ್ರದೇಶದಲ್ಲಿ ರೈತರು ಒಟ್ಟಾರೆಯಾಗಿ ರಾಗಿಯನ್ನು ಬೆಳೆಯುತ್ತಿದ್ದಾರೆ. ಅಕ್ಕಡಿ ಸಾಲಿನಲ್ಲಿ ಹುಚ್ಚೆಳ್ಳು ಹಾಕುತ್ತಿದ್ದ ಸಂದರ್ಭದಲ್ಲಿ, ದುಂಬಿಗಾಗಿ ಬಂದ ಜೇನುಹುಳುಗಳಿಂದ ಪರಾಗ ಸ್ಪರ್ಶ ಆಗಿ ಹೆಚ್ಚಿನ ಇಳುವರಿಯೂ ದೊರೆಯುತ್ತಿತ್ತು.

ಕೆಂಗೇಗೌಡ, ಸಹಾಯಕ ಕೃಷಿ ನಿರ್ದೇಶಕರು, ತಿಪಟೂರು

     ಕೂಲಿ ಆಳುಗಳ ಸಮಸ್ಯೆಯಿಂದ ಇಂದು ಹೆಚ್ಚಾಗಿ ಟ್ರ್ಯಾಕ್ಟರ್ ಅನ್ನು ಅವಲಂಬಿಸಿದ್ದು, ಅಕ್ಕಡಿ ಸಾಲುಗಳನ್ನು ಮಾಡಲಾಗುತ್ತಿಲ್ಲ, ಅಕ್ಕಡಿ ಸಾಲುಗಳನ್ನು ಮಾಡಿದರೆ ಕಟಾವಿಗೆ ತೊಂದರೆಯಾಗುತ್ತದೆ.

ರಂಗಸ್ವಾಮಿ, ರೈತ

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap