ತಿಪಟೂರು :
ಗ್ರಾಮ ಪಂಚಾಯಿತಿ ಚುನಾವಣೆ ಕಾವು ಒಂದು ಕಡೆ ಏರುತ್ತಿದ್ದು, ಮೊದಲನೇ ಸುತ್ತಿನಲ್ಲಿ ಚುನಾವಣೆ ನಡೆಯುವ ಕಡೆಗಳಲ್ಲಿ ನಾಮಪತ್ರ ಸಲ್ಲಿಕೆ ಆರಂಭವಾಗಿದೆ. ಆದರೆ 2ನೇ ಸುತ್ತಿನಲ್ಲಿ ಚುನಾವಣೆ ನಡೆಯುವ ತಿಪಟೂರು ತಾಲ್ಲೂಕಿನ ಹೊನ್ನವಳ್ಳಿ ಸುತ್ತಮುತ್ತಲ ಗ್ರಾಮಗಳಲ್ಲಿ ಮತ್ತೆ ಚುನಾವಣೆ ಬಹಿಷ್ಕಾರದ ಮಾತುಗಳು ಕೇಳಿ ಬರುತ್ತಿವೆ.
ಕಳೆದ ಲೋಕಸಭಾ ಚುನಾವಣೆ ವೇಳೆ ನಮಗೆ ಸೂಕ್ತ ಕುಡಿಯುವ ನೀರಿನ ವ್ಯವಸ್ಥೆ ಇಲ್ಲ, ಹೇಮಾವತಿ ಮತ್ತು ಎತ್ತಿನ ಹೊಳೆ ಯೋಜನೆಗೆ ಭೂಮಿ ಕೊಟ್ಟಿದ್ದೇವೆ ಆದರೆ ದೀಪದ ಬುಡದಲ್ಲಿ ಕತ್ತಲು ಎಂಬಂತೆ ನಮಗೆ ನೀರು ಸಿಗುತ್ತಿಲ್ಲವೆಂದು, ಚುನಾವಣಾ ಬಹಿಷ್ಕಾರ ಮಾಡುತ್ತೇವೆಂದು ಘೊಷಿಸಿದ್ದರು. ಆದರೆ ರಾಜಕೀಯ ಮೇಲಾಟದಲ್ಲಿ ಇದ್ದ ಗುಂಪನ್ನು ಹೊಡೆದು ನಮ್ಮನ್ನು ಚುನಾವಣೆಯಲ್ಲಿ ಗೆಲ್ಲಿಸಿದರೆ ನಿಮಗೆ ನೀರು ಕೊಡುತ್ತೇವೆಂದು ಸಭೆಗಳು ನಡೆದು ಮತ ಪಡೆದ ರಾಜಕಾರಣಿಗಳು ಮತ್ತೆ ತಿರುಗಿಯು ಕ್ಷೇತ್ರವನ್ನು ನೋಡಿಲ್ಲ, ಹೀಗಾಗಿ ಈ ಬಾರಿಯ ಗ್ರಾಮ ಪಂಚಾಯಿತಿಯ ಚುನಾವಣೆಯನ್ನು ಬಹಿಷ್ಕರಿಸುತ್ತವೆಂದು ಊರಿನ ಮುಖಂಡರು ಹಾಗೂ ಹೇಮಾವತಿ ಮತ್ತು ಎತ್ತಿನಹೊಳೆ ನೀರಾವರಿ ಹೋರಾಟಗಾರರು ಇಂದು ತಹಸೀಲ್ದಾರ್ಗೆ ಅರ್ಜಿ ಸಲ್ಲಿಸಿದ್ದಾರೆ.
ನಾವು ಕುಡಿಯಲು ನೀರಿಲ್ಲದೇ ಪರದಾಡುತ್ತಿದ್ದು, ಕೆಲವು ಶುದ್ದ ಕುಡಿಯುವ ನೀರಿನ ಘಟಕಗಳು ನೀರಿಲ್ಲದೇ ನಿಂತಿವೆ ಹಾಗೂ ಜನುವಾರುಗಳ ಸ್ಥಿತಿಯನ್ನಂತು ಕೇಳುವಹಾಗಿಲ್ಲ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ನಮ್ಮ ಕೆರೆಗಳ ಪಾಲಿನ ನೀರನ್ನು ಸಹ ಸೂಕ್ತವಾಗಿ ನೀಡಿಲ್ಲ. ನಮ್ಮ ಕೆರೆಗಳಿಗೆ ಎಷ್ಟು ನೀರು ಹಂಚಿಕೆಯಾಗಿದೆ, ಅಷ್ಟು ನೀರು ಬಂದಿದೆಯೇ ಎಂಬುದು ಸಹ ತಿಳಿಯದಂತಾಗಿದೆ.
ಜನಪ್ರತಿನಿಧಿಗಳಿಗೆ ಮತ್ತು ಸರ್ಕಾರಕ್ಕೆ ನಮ್ಮ ಮನವಿಯ ದನಿಯು ಕೇಳುತ್ತಿಲ್ಲ, ನಮ್ಮ ಕಷ್ಟ ಕೇಳುವವರ್ಯಾರು ಎಂದು ಸುಮ್ಮನಾಗಿರುವಂತಿದೆ. ಅದಕ್ಕಾಗಿ ನಾವು ಈ ಬಾರಿಯ ಗ್ರಾಮ ಪಂಚಾಯಿತಿ ಚುನಾವಣೆಯನ್ನು ಬಹಿಷ್ಕರಿಸುತ್ತಿದ್ದೇವೆಂದು ಹೊನ್ನವಳ್ಳಿ ಹೋಬಳಿ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ ಹೆಚ್.ಎನ್.ಚಂದ್ರೇಗೌಡರು ತಿಳಿಸಿದರು.
ಮತ್ತೆ ಮನವೊಲಿಸುವರೆ?:
ಕಳೆದ ಚುನಾವಣೆಗಳಲ್ಲಿ ಮತ ಬಹಿಷ್ಕಾರದ ಮಾತುಗಳು ಕೇಳಿಬರುತ್ತಿರುವ ಸಂದರ್ಭದಲ್ಲಿ ಒಟ್ಟಾಗುವ ರಾಜಕಾರಣಿಗಳು ಗ್ರಾಮಸ್ಥರ ಮನವೊಲಿಸಿದ್ದರು. ಹೋರಾಟಗಾರರ ಒಗ್ಗಟ್ಟು ಒಡೆದಿದ್ದರು ಎಂದು ಗ್ರಾಮಸ್ಥರು ಹೇಳಿದ್ದಾರೆ. ಈ ಬಾರಿ ಗ್ರಾಮ ಪಂಚಾಯ್ತಿ ಚುನಾವಣೆ ಬಹಿಷ್ಟರಿಸಿ ನಮ್ಮ ಹತ್ತೊತ್ತಾಯ ಮಂಡಿಸುತ್ತಿದ್ದೇವೆ ಎಂದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
