ಗರ್ಭಿಣಿ ಸಾವು ; ಪೋಷಕರಿಗೆ ತಿಳಿಯದಂತೆ ಶವ ಸಾಗಾಟ!!

ತಿಪಟೂರು :

     ನಗರದ ಜೇನುಕಲ್ ನರ್ಸಿಂಗ್ ಹೋಂನಲ್ಲಿ ಹೆರಿಗೆಗಾಗಿ ದಾಖಲಾಗಿದ್ದ ಮಹಿಳೆಯು ಗಂಡು ಮಗುವನ್ನು ಹೆತ್ತ ನಂತರ ಚಿಕಿತ್ಸೆ ಫಲಕಾರಿಯಾಗದೆ ಮರಣಹೊಂದಿದ್ದು, ಪೋಷಕರಿಗೆ ತಿಳಿಯದಂತೆ ಮೃತ ಮಹಿಳೆಯ ಶವವನ್ನು ಪೊಲೀಸರ ಸಮ್ಮುಖದಲ್ಲಿ ಸರಕಾರಿ ಆಸ್ಪತ್ರೆಗೆ ಸಾಗಿಸಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಮಹಿಳೆಯ ಸಾವಿಗೆ ವೈದ್ಯರ ನಿರ್ಲಕ್ಷ್ಯವೆ ಕಾರಣವೆಂದು ಸಂಬಂಧಿಕರು ಆಕ್ರೋಷ ವ್ಯಕ್ತಪಡಿಸಿದ ಘಟನೆ ಭಾನುವಾರ ನಡೆದಿದೆ.

     ತಾಲ್ಲೂಕಿನ ಕಿಬ್ಬನಹಳ್ಳಿ ಹೋಬಳಿ, ಕುಂದೂರು ಗ್ರಾಮದ ವಾಸಿ ಬಸವರಾಜು ಎಂಬುವವರ ಮಗಳು ಮಮತ (32) ಎಂಬುವವರನ್ನು ಹೆರಿಗೆಗಾಗಿ 3 ದಿನಗಳ ಹಿಂದೆಯೆ ಜೇನುಕಲ್ ನರ್ಸಿಂಗ್ ಹೋಂಗೆ ದಾಖಲಿಸಿದ್ದಾರೆ. ಶನಿವಾರ ಸಂಜೆ ಹೆರಿಗೆ ಮಾಡಿಸಿದ ವೈದ್ಯರು ನನ್ನ ಕೈಗೆ ಮಗುವನ್ನು ಕೊಟ್ಟು ಕೆಳಗೆ ಹೋಗಿ ಎಂದು ಕಳುಹಿಸಿದರು. ಈ ಸಂದರ್ಭದಲ್ಲಿ ನನ್ನ ಪತ್ನಿಯ ಬಾಯಿಂದ ರಕ್ತ ಬರುತ್ತಿತ್ತು. ನನ್ನ ಪತ್ನಿ ಡಾಕ್ಟರ್‍ರನ್ನು ಕರೆಯಿರಿ ಎಂದು ತಿಳಿಸಿ ನಂತರ ಹಲ್ಲುಕಚ್ಚಿಕೊಂಡಳು. ಇದನ್ನು ತೆರೆಸಲು ವೈದ್ಯರಿಗೆ ಆಗಲೇ ಇಲ್ಲ, ಹೆರಿಗೆ ಮಾಡಿಸುವ ಮುನ್ನ ಅನಸ್ತೇಷಿಯಾ ಕೊಟ್ಟಿರುತ್ತಾರೆ, ಇದರಿಂದ ಕೆಲವು ಗಂಟೆಗಳವರೆಗೂ ಮಂಪರಿನಲ್ಲಿ ಇರುತ್ತಾರೆ. ಆದರೆ ಹೆರಿಗೆಯಾದ ನಂತರ ನನ್ನ ಪತ್ನಿ ಹೇಗೆ ಮಾತನಾಡಿದಳು, ಶಸ್ತ್ರಚಿಕಿತ್ಸೆಯ ವೇಳೆ ರೋಗಿಗೆ ಆಸ್ಪತ್ರೆಗಳ ಸಮವಸ್ತ್ರ, ಗೌನ್ ನೀಡದೆ ಹೇಗೆ ಹೆರಿಗೆ ಮಾಡಿಸಿದರು. ಹಾಗೂ ಯಾರಿಗೂ ತಿಳಿಸದೇ ಪೊಲೀಸರನ್ನು ಕರೆಸಿ, ರಾತ್ರೋರಾತ್ರಿ ಸರಕಾರಿ ಆಸ್ಪತ್ರೆಗೆ ಶವವನ್ನು ಸಾಗಿಸಿದ್ದಾರೆ. ಇವರ ಉದ್ದೇಶವೇನೂ ಎಂಬುದೇ ತಿಳಿಯುತ್ತಿಲ್ಲ ಎಂದು ಮೃತ ಮಹಿಳೆಯ ಪತಿ ಚೇತನ್‍ಪಾಟೀಲ್ ವೈದ್ಯರ ವಿರುದ್ಧ ಆರೋಪಿಸಿದ್ದಾರೆ.

      ಇದೇ ಸಂದರ್ಭದಲ್ಲಿ ಜಿಲ್ಲಾ ಡಿಎಸ್‍ಎಸ್ ಸಂಚಾಲಕ ಕುಂದೂರು ತಿಮ್ಮಯ್ಯ ಅವರು ಮಾತನಾಡಿ ಜೇನುಕಲ್ ನರ್ಸಿಂಗ್ ಹೋಂ ನ ಡಾ.ಮಮತ ಅವರು ಅವಧಿ ತುಂಬುವ ಮೊದಲೇ ಸಿಸೇರಿಯನ್ ಹೆರಿಗೆ ಮಾಡಿದ್ದು, ಸೂಕ್ತ ಪ್ರಸೂತಿ ತಜ್ಞರಿಲ್ಲದೆ ಇರುವುದರಿಂದ ಈ ಸಾವಾಗಿದೆ ಎಂದು ಆರೋಪಿಸಿದರು. ಸರ್ಕಾರ ಇಂತಹ ನರ್ಸಿಂಗ್ ಹೋಂಗಳಿಗೆ ಅನುಮತಿಯನ್ನು ಹೇಗೆ ನೀಡುತ್ತಿದೆ, ತಾಲ್ಲೂಕಿನ ನರ್ಸಿಂಗ್ ಹೋಂಗಳಲ್ಲಿ ಹೆರಿಗೆ ಸಂದರ್ಭದಲ್ಲಿ ಎಷ್ಟು ಸಾವುಗಳಾಗಿವೆ ಎಂದಬುನ್ನು ನಾನು ಹೆಸರಿನ ಸಮೇತವಾಗಿ ಹೇಳುತ್ತೇನೆ. ಇಂತಹ ಆಸ್ಪತ್ರೆಗಳಿಂದ ಅದೆಷ್ಟೊ ಬಾಳಿ ಬದುಕಬೇಕಾದ ಹೆಣ್ಣುಮಕ್ಕಳ ಭವಿಷ್ಯ ನಾಶವಾಗುತ್ತಿದೆ. ಮುಖ್ಯವಾಗಿ ವೈದ್ಯೆ ಡಾ.ಮಮತ ಅವರ ಪತಿ ತಿಪಟೂರು ಸರಕಾರಿ ಆಸ್ಪತ್ರೆಯಲ್ಲಿ ವೈದ್ಯರಾಗಿದ್ದು, ರಾತ್ರೋರಾತ್ರಿ ಶವವನ್ನು ಸರಕಾರಿ ಆಸ್ಪತ್ರೆಗೆ ಸಾಗಿಸಲು ನೆರವಾಗಿದ್ದಾರೆ. ಪೊಲೀಸರು ಆಸ್ಪತ್ರೆಗೆ ಏಕೆ ಬಂದರು, ವೈದ್ಯರ ನಿರ್ಲಕ್ಷದ ಕಾರಣದಿಂದ ಪೊಲೀಸರನ್ನು ಆಸ್ಪತ್ರಗೆ ಕರೆಸಿದ್ದಾರೆ. ಈ ಬಗ್ಗೆ ಸಮಗ್ರ ತನಿಖೆಯಾಗಬೇಕು ಮತ್ತು ಭವಿಷ್ಯದ ಕನಸನ್ನು ಹೊತ್ತ ಗರ್ಭಿಣಿಯರ ಸಾವು ಇಲ್ಲ್ಲಿಗೆ ಕೊನೆಯಾಗಬೇಕು ಎಂದು ಆಗ್ರಹಿಸಿದ್ದಾರೆ.
ನಗರ ಪೋಲಿಸ್ ಠಾಣೆಯಲ್ಲಿ ಸಾವಿನ ಬಗ್ಗೆ ಪ್ರಕರಣ ದಾಖಲಾಗಿದ್ದು, ತನಿಖೆಯಿಂದ ಸತ್ಯಾಸತ್ಯತೆ ತಿಳಿಯ ಬೇಕಾಗಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap