ತಿಪಟೂರು :

ನೋಟೀಸ್ ಕೂಡ ನೀಡದೆ ರೈತರ ಜಮೀನನ್ನು ಭೂ ಸ್ವಾಧಿನ ಮಾಡಿಕೊಂಡು ಬೀದಿಗೆ ತಂದಿದ್ದಾರೆ. ಇದನ್ನು ಕಂಡು ಕಾಣದಂತೆ ಜನಪ್ರತಿನಿಧಿಗಳು ಜಾಣ ಕುರುಡು ತೋರಿಸುತ್ತಿದ್ದಾರೆ ಎಂದು ಕೆಪಿಸಿಸಿ ಕಾರ್ಮಿಕ ಘಟಕದ ಕಾರ್ಯದರ್ಶಿ ಕೆ.ಟಿ.ಶಾಂತಕುಮಾರ್ ಆಕ್ರೋಶ ವ್ಯಕ್ತಪಡಿಸಿದರು.
ನಗರದ ಖಾಸಗಿ ಹೋಟೆಲ್‍ನಲ್ಲಿ ಆಯೋಜಿಸಿದ್ದ ಪತ್ರಿಕಾಘೋಷ್ಟಿಯಲ್ಲಿ ಮಾತನಾಡಿದ ಅವರು ಎತ್ತಿನಹೊಳೆ ಕಾಮಗಾರಿ ಕೇವಲ ಗುತ್ತಿಗೆದಾರರಿಗೆ ಪ್ರಿಯವಾದ ಯೋಜನೆಯಾಗಿದೆ. ಪಶ್ಚಿಮ ಘಟ್ಟದ ಎತ್ತಿನಹೊಳೆಯಿಂದ ಕುಡಿಯುವ ನೀರಿಗಾಗಿ ಕೋಲಾರ ಮತ್ತು ಚಿಕ್ಕಬಳ್ಳಾಪುರಕ್ಕೆ ನೀರು ಸಾಗಿಸುವ ಮಾರ್ಗದ ಮದ್ಯದಲ್ಲಿ ಬರುವ ನಮ್ಮ ತಾಲ್ಲೂಕಿಗೆ ಯಾವುದೇ ಉಪಯೋಗವಿಲ್ಲ. ಇಲ್ಲಿ ಚೆಕ್‍ಡ್ಯಾಮ್ ಮಾಡುತ್ತೇವೆಂದು ಹೇಳಿದ್ದರು. ಆದರೆ ಈಗ ಆ ಕಾಮಗಾರಿ ಇಲ್ಲ ಎಂದು ಹೇಳುತ್ತಿದ್ದಾರೆ. ಜೊತೆಗೆ ಯೋಜನೆಗೆ ಸಂಬಂಧಿಸಿದ ಬ್ಲೂಪ್ರಿಂಟ್ ಕೂಡ ಸಿಗುತ್ತಿಲ್ಲ. ಇಂತಹ ಸಂದರ್ಭದಲ್ಲಿ ಕಾಮಗಾರಿ ಶೀಘ್ರವಾಗಿ ಮುಗಿಸಿ ತಮ್ಮ ಹಣವನ್ನು ನೋಡಿಕೊಳ್ಳುತ್ತಿದ್ದಾರೆ. ರಾಷ್ಟ್ರೀಯ ಭೂಕಾಯ್ದೆ ಪ್ರಕಾರ ಭೂಮಿಯನ್ನು ವಶಕ್ಕೆ ಪಡೆದುಕೊಳ್ಳುವ ಮೊದಲು ಕಾಯ್ದೆಗಳ ಪ್ರಕಾರ ಭೂಮಿಯನ್ನು ವಶಪಡಿಸಿಕೊಳ್ಳದೇ, ಅವಾರ್ಡ್ ನೋಟೀಸ್ ನೀಡದೆ, ಕೇವಲ ಬೆಳೆ ಪರಿಹಾರವನ್ನು ನೀಡಿ, ರೈತರ ಭೂಮಿಯಲ್ಲಿ ಕಾಮಗಾರಿಯನ್ನು ಮಾಡುತ್ತಿದ್ದಾರೆ. ಕೆಲವು ರೈತರು ಸಣ್ಣ ಹಿಡುವಳಿದಾರರಾಗಿದ್ದು, ಅವರಿಗೆ ಇರುವ 20-30 ಗುಂಟೆಗಳಲ್ಲೇ ಜೀವನ ಸಾಗಿಸುತ್ತಿದ್ದಾರೆ. ಇಂತಹ ಭೂಮಿಯನ್ನು ಪರಿಹಾರವೂ ಇಲ್ಲದೇ ಕಿತ್ತುಕೊಂಡರೆ ಅವರ ಜೀವನದ ಪಾಡೇನು? ಆದ್ದರಿಂದ ಸೂಕ್ತ ಪರಿಹಾರವನ್ನು ನೀಡುವವರೆಗೂ ಕಾಮಗಾರಿಗಾಗಿ ಭೂಮಿಯನ್ನು ಬಿಟ್ಟುಕೊಡುವ ಮಾತೇ ಇಲ್ಲ, ಪರಿಹಾರ ನೀಡದಿದ್ದರೆ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.
ಇದೇ ಸಂದರ್ಭದಲ್ಲಿ ನೂತನವಗಿ ಸಚಿವರಾದ ಬಿ.ಸಿ.ನಾಗೇಶ್ ಅವರಿಗೆ ಶುಭಾಷಯ ತಿಳಿಸಿ ತಾಲ್ಲೂಕಿನಲ್ಲಿ ಹಲವಾರು ಜ್ವಲಂತ ಸಮಸ್ಯೆಗಳಿದ್ದು, ನೂತನ ಸಚಿವರು ಪರಿಹಾರವನ್ನು ಹುಡುಕಿ ಅಭಿವೃದ್ದಿಪಡಿಸಿ ಎಂದು ಸಲಹೆ ನೀಡಿದರು.
ಕೊಬ್ಬರಿ ದೊಡ್ಡಯ್ಯನಪಾಳ್ಯದ ರೈತ ಯೋಗೀಶ್ ಮಾತನಾಡಿ ಕೊರೊನಾ ಸಂದರ್ಭದಲ್ಲಿ ಸೂಕ್ತ ಉದ್ಯೋಗ, ಕೂಲಿ ಇಲ್ಲದೆ ಬಳಲಿರುವ ಸಣ್ಣ ಹಿಡುವಳಿದಾರರು, ಕಾಮಗಾರಿ ನಡೆದರೂ, ಕೂಲಿ ಸಿಗುತ್ತದೆ ಎನ್ನುವ ಉದ್ದೇಶದಿಂದ ಭೂಮಿಯನ್ನು ಬಿಟ್ಟುಕೊಟ್ಟು ಮಾನವೀಯತೆ ಮೆರೆದಿದ್ದಾರೆ ಆದರೆ ಗುತ್ತಿಗೆದಾರರು ಅದನ್ನೇ ಬಂಡವಾಳ ಮಾಡಿಕೊಂಡಿದ್ದಾರೆಂದು ಆರೋಪಿಸಿದರು.
ಪತ್ರಿಕಾಗೋಷ್ಟಿಯಲ್ಲಿ ಜಕ್ಕನಹಳ್ಳಿ ಕೇಶವ, ರಾಮಚಂದ್ರಪ್ಪ, ಮಾದಿಹಳ್ಳಿ ಪ್ರಭು, ಕುಮಾರ್, ರೈತರು ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








