ತಿಪಟೂರು :
ಬಸವರಾಜ ಬೊಮ್ಮಾಯಿ ಅವರ ಸಚಿವ ಸಂಪುಟದಲ್ಲಿ ಶಾಸಕ ಬಿ.ಸಿ.ನಾಗೇಶ್ ಅವರಿಗೆ ಸಚಿವ ಸ್ಥಾನ ಸಿಕ್ಕೆ ಸಿಗಬೇಕು ಎಂಬ ಕಾರ್ಯಕರ್ತರ ಬೇಡಿಕೆಯು ನಿರೀಕ್ಷೆ ಯಂತೆ ಫಲಿಸಿದ್ದು, ಬುಧವಾರ ಬೆಳಗ್ಗೆಯಿಂದಲೆ ಶಾಸಕರ ಮನೆಯ ಮುಂದೆ ಸಂಭ್ರಮಾಚರಣೆ ಮನೆಮಾಡಿದ್ದು, ಕಾರ್ಯಕರ್ತರು ಪಕ್ಷದ ಧ್ವಜವನ್ನು ಹಿಡಿದು ಪಕ್ಷ ಮತ್ತು ನಾಯಕರಿಗೆ ಜೈಕಾರ ಕೂಗಿ, ಸಾರ್ವಜನಿಕರಿಗೆ ಸಿಹಿ ಹಂಚಿ, ಪಟಾಕಿ ಸಿಡಿಸಿ ಸಂಭ್ರಮಿಸಿದರು.
ನಗರದ ಸಿಂಗ್ರಿನಂಜಪ್ಪ ವೃತ್ತದಲ್ಲಿ ಜಮಾಯಿಸಿದ್ದ ಕಾರ್ಯಕರ್ತರು ಬೃಹತ್ ಟಿವಿಯ ಮೂಲಕ ನೇರಪ್ರಸಾರವನ್ನು ನೋಡಲು ವ್ಯವಸ್ಥೆ ಮಾಡಿದ್ದರು. ಟಿವಿಯಲ್ಲಿ “ಬೆಳ್ಳೂರು ಚಂದ್ರಶೇಖರಯ್ಯ ನಾಗೇಶ್ ಆದ ನಾನು” ಎಂದು ಶಾಸಕ ನಾಗೇಶ್ ಅವರು ಪ್ರಮಾಣ ವಚನ ಸ್ವೀಕಾರ ವಿಧಿ ತೆಗೆದುಕೊಳ್ಳುತ್ತಿದ್ದಂತೆ ಕಾರ್ಯಕರ್ತರು ಕುಣಿದು ಕುಪ್ಪಳಿಸಿದರು.
ತಿಪಟೂರಿಗೆ 2ನೇ ಸಚಿವರಾದ ನಾಗೇಶ್ : 1990 ರ ದಶಕದಲ್ಲಿ ಕಾಂಗ್ರೆಸ್ ಪಕ್ಷದಿಂದ ಟಿ.ಎಂ.ಮಂಜುನಾಥ್ ಮೊಟ್ಟ ಮೊದಲ ಬಾರಿಗೆ ಕಲ್ಪತರು ನಾಡಿನಿಂದ ರಾಜ್ಯ ಸಚಿವ ಸಂಪುಟದಲ್ಲಿ ಸಹಕಾರ ಮತ್ತು ಲಾಟರಿ ಸಚಿವರಾಗಿದ್ದರು. ನಂತರದಲ್ಲಿ ಎಷ್ಟೋ ಬಾರಿ ತಿಪಟೂರಿಗೆ ಸಚಿವ ಸ್ಥಾನ ಸಿಗುತ್ತದೆ ಎನ್ನುವ ಸಂದರ್ಭದಲ್ಲಿ ತಪ್ಪಿ ಹೋಗುತ್ತಿತ್ತು. 3 ದಶಕಗಳ ನಂತರ ತಾಲ್ಲೂಕಿನಲ್ಲಿ ಬಿ.ಸಿ.ನಾಗೇಶ್ ಸಚಿವರಾಗಿರುವುದು ಜನರ ಸಂತೋಷದ ಜೊತೆಗೆ ತಿಪಟೂರು ಮತ್ತಷ್ಟು ಅಭಿವೃದ್ಧಿಯಾಗಿ, ಮಾದರಿ ನಗರವಾಗಿ, ಜಿಲ್ಲಾ ಕೇಂದ್ರವಾಗುತ್ತದೆ ಎನ್ನುವ ನಿರೀಕ್ಷೆ ಈ ಭಾಗದ ಜನರಲ್ಲಿ ಗರಿಗೆದರಿದೆ.
” ನಾನು 40 ವರ್ಷದಿಂದ ನಾಗೇಶ್ ಅವರರನ್ನು ನೋಡುತ್ತಿದ್ದೇನೆ. ಅವರ ಕಠಿಣ ಪರಿಶ್ರಮವೇ ಇಂದು ಅವರನ್ನು ಸಚಿವ ಸ್ಥಾನಕ್ಕೆ ತಂದು ನಿಲ್ಲಿಸಿದೆ. ಕ್ಷೇತ್ರಕ್ಕೆ, ಜಿಲ್ಲೆಗೆ ಹಾಗೂ ರಾಜ್ಯಕ್ಕೆ ಉತ್ತಮವಾದ ಕೆಲಸಗಳು ಅವರಿಂದ ಆಗಲಿ.”
-ಡಾ. ಚಂದ್ರಮೌಳಿ, ನಿವಾಸಿ, ತಿಪಟೂರು
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ