ತಿಪಟೂರು :
ನಗರದ ಮಿನಿವಿಧಾನ ಸೌಧಕ್ಕೆ ಸೂಕ್ತ ಯುಜಿಡಿ ಸಂಪರ್ಕವಿಲ್ಲದೇ ಮಲಿನಯುಕ್ತ ನೀರು ಕಟ್ಟಡದ ಮುಂದೆ ಬಂದು ನಿಲ್ಲುತ್ತಿದ್ದು, ಸರ್ಕಾರಿ ಕೆಲಸ-ಕಾರ್ಯಗಳಿಗಾಗಿ ಇಲ್ಲಿಗೆ ಬರುವ ಸಾರ್ವಜನಿಕರು ಮೂಗು ಮುಚ್ಚಿಕೊಂಡು ಓಡಾಡುವ ದುಸ್ಥಿತಿ ಎದುರಾಗಿದೆ.
ಸಾರ್ವಜನಿಕ ಆಸ್ಪತ್ರೆಯಲ್ಲಿ ಕೊರೋನಾ ಲಸಿಕೆಯನ್ನು ಕೊಟ್ಟರೆ ಜನಸಂದಣಿ ಹೆಚ್ಚಾಗುತ್ತದೆ ಎನ್ನುವ ಉದ್ದೇಶದಿಂದ ಮಿನಿ ವಿಧಾನಸೌಧದಲ್ಲಿ ಲಸಿಕಾ ವಿತರಣೆಯನ್ನು ಆರಂಭಿಸಿಲಾಗಿದೆ. ಜೊತೆಗೆ ಕಾರ್ಮಿಕ ಇಲಾಖೆಯಿಂದ ತಾಲ್ಲೂಕಿನ ಕಾರ್ಮಿಕರಿಗೆ ಪಡಿತರ ಕಿಟ್ ವಿತರಿಸುತ್ತಿದ್ದು, ಪ್ರತಿದಿನ ಲಸಿಕೆ, ಪಡಿತರ ಕಿಟ್ ಹಾಗೂ ಸರ್ಕಾರಿ ಕೆಲಸ-ಕಾರ್ಯಗಳಿಗೆ ಹೆಚ್ಚು ಜನ ಬರುತ್ತಿದ್ದು, ಮಿನಿ ವಿಧಾನ ಸೌಧದಲ್ಲಿ ಕೆಲ ದಿನಗಳಿಂದ ಜನಜಾತ್ರೆಯಾಗಿದೆ. ಹೆಚ್ಚು ಜನರ ಭೇಟಿಯಿಂದ ಇಲ್ಲಿನ ಶೌಚಾಲಯದ ಗುಂಡಿಗಳು ತುಂಬಿ ಗಬ್ಬು ನಾರುತ್ತಿದ್ದು, ಸರ್ಕಾರಿ ಕಟ್ಟಡಕ್ಕೂ ಸೂಕ್ತ ಯುಜಿಡಿ ಸಂಪರ್ಕವಿಲ್ಲದಿರುವುದನ್ನು ಕಂಡ ನಗರದ ನಾಗರೀಕರು ವ್ಯವಸ್ಥೆಗೆ ಹಿಡಿ ಶಾಪ ಹಾಕಿದ್ದಾರೆ. ತಾಲ್ಲೂಕು ಕಚೇರಿಗೆ ಸರ್ಕಾರಿ ಸೌಲಭ್ಯ ಪಡೆಯಲು ಬರುವ ಜನ ಇದೀಗ ಕಾಯಿಲೆಗಳನ್ನು ಅಂಟಿಸಿಕೊಂಡು ಮನೆ ಸೇರುವಂತಾಗಿದೆ.
ದಿನನಿತ್ಯ ಜನಜಾತ್ರೆ :
ಲಸಿಕಾ ಅಭಿಯಾನ ಆರಂಭವಾದಾಗಿನಿಂದ ಹಾಗೂ ಈಗ ಪಡಿತರ ಕಿಟ್ ವಿತರಿಸುತ್ತಿರುವುದರಿಂದ ದಿನನಿತ್ಯ ಸಾವಿರಾರು ಜನರು ಸೇರುತ್ತಿದ್ದು, ಇಲ್ಲಿ ಯಾವುದೇ ಕೊರೋನಾ ನಿಯಮಗಳು ಪಾಲನೆಯಾಗದೇ ಜನರು ನೂಕು ನುಗ್ಗಲಿನಿಂದ ನಾಮುಂದು, ತಾಮುಂದು ಎಂದು ಕಿಟ್ ಪಡೆಯಲು ಮುಗಿಬೀಳುತ್ತಿದ್ದಾರೆ. ಕಾರ್ಮಿಕರು ಎಂಬ ಪದದ ಅರ್ಥ ಗೊತ್ತಿಲ್ಲದ ಜನಸಾಮಾನ್ಯರು ಸಹ ಪಡಿತರ ಕಿಟ್ ಪಡೆದುಕೊಳ್ಳಲು ಆಧಾರ್, ರೇಷನ್‍ಕಾರ್ಡ್ ಹಿಡಿದು ನನಗೊಂದು ಕಿಟ್ ಕೊಡಿಸಿ ಎಂದು ಕೇಳುತ್ತಿದ್ದು, ದಿನನಿತ್ಯ ಪರಿಷೆಯಾಗಿದೆ.
ಯುಜಿಡಿ ಸಂಪರ್ಕ ಇಲ್ಲವೆ?:
ನಗರಸಭೆಯ ವತಿಯಿಂದ ಸಾರ್ವಜನಿಕರು ಯಾರಾದರೂ ಯುಜಿಡಿ ಸಂಪರ್ಕ ಪಡೆದಿಲ್ಲ ಹಾಗೂ ಸೂಕ್ತ ಸಮಯಕ್ಕೆ ಕಂದಾಯ ಕಟ್ಟಿಲ್ಲ ಎಂದರೆ ದಂಡ ಹಾಕುತ್ತಾರೆ ಆದರೆ ತಾಲ್ಲೂಕು ದಂಡಾಧಿಕಾರಿಗಳು ಆಡಳಿತ ನಡೆಸುವ ಮಿನಿ ವಿಧಾನಸೌಧದಂತಹ ಸರ್ಕಾರಿ ಕಟ್ಟಡಕ್ಕೆ ಯುಜಿಡಿ ಸಂಪರ್ಕ ಕಲ್ಪಿಸಿಲ್ಲವೆಂದರೇ ಹೇಗೆ? ಇವರಿಗೆ ದಂಡ ಹಾಕುವವರು ಯಾರು? ಎಂಬುದು ತಾಲ್ಲೂಕಿನ ಸಾರ್ವಜನಿಕರ ಪ್ರಶ್ನೆಯಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ