ಸರ್ಕಾರದಿಂದ ಕೈಗಾರಿಕೆಗಳ ಕಾಳಜಿ, ಬರ ಪ್ರದೇಶ ನಿರ್ಲಕ್ಷ್ಯ

ತಿಪಟೂರು : 

      ತಾಲ್ಲೂಕಿನಲ್ಲಿ ಹಾದು ಹೋಗಿರುವ ಎತ್ತಿನಹೊಳೆ ಯೋಜನೆಗಾಗಿ ಭೂಮಿ ಕಳೆದುಕೊಂಡಿರುವ ರೈತರಿಗೆ ನಮಗೆ ನೀರು ಸಿಗುತ್ತದೆ ಎನ್ನುವುದು ಕೇವಲ ಮರಿಚಿಕೆಯಾಗಿದೆ ಎಂದು ಎತ್ತಿನಹೊಳೆ ಹೋರಾಟ ಸಮಿತಿಯ ಅಧ್ಯಕ್ಷ ತಿಮ್ಮಲಾಪುರ ದೇವರಾಜು ಆರೋಪಿಸಿದ್ದಾರೆ. ಅವರು ನಗರದ ರೈತ ಭವನದಲ್ಲಿ ಏರ್ಪಡಿಸಿದ್ದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದರು.

ಜಮೀನು ಕೊಟ್ಟವರಿಗೆ ನೀರಿಲ್ಲ ಎಂದರೇ ಹೇಗೆ? :

      ತಾಲ್ಲೂಕಿನಲ್ಲಿ ನಡೆಯುತ್ತಿರುವ ಹಲವಾರು ಕಾಮಗಾರಿಗಳಿಗೆ ರೈತರು ತಮ್ಮ ಭೂಮಿಯನ್ನು ಕಳೆದುಕೊಂಡು ನಿರ್ಗತಿಕರಾಗುತಿದ್ದಾರೆ ವಿನಹ ಅವರಿಗೆ ತಲುಪಬೇಕಾದ ಸೂಕ್ತ ಪರಿಹಾರ ದೊರೆಯುತ್ತಿಲ್ಲ. ಎತ್ತಿನಹೊಳೆಯಿಂದ ದೂರದ ಚಿಕ್ಕಬಳ್ಳಾಪುರಕ್ಕೆ ನೀರು ಹೋಗಲು ನಮ್ಮ ರೈತರ ಜಮೀನನ್ನು ಬಳಸಿಕೊಂಡು ನಮಗೆ ನೀರಿಲ್ಲ ಎಂದರೆ ಹೇಗೆ? ಅದು ಹೋಗಲಿ, ರೈತರಿಗೆ ಭೂಸುಧಾರಣೆ ಕಾಯ್ದೆಯ ಪ್ರಕಾರ ಎರಡನೆ ಶೆಡ್ಯೂಲ್ ಪರಿಹಾರ ನೀಡುತ್ತಿಲ್ಲ. ಎತ್ತಿನಹೊಳೆ ಯೋಜನೆಗೆ ಭೂ ಸ್ವಾಧೀನದ ನೋಟಿಸು ಬಂದಾಗಿನಿಂದಲೂ ತಿಪಟೂರಿಗೆ ನೀರಿನ ಹಂಚಿಕೆ ಬಗ್ಗೆ ಮಾಹಿತಿ ತಿಳಿಸಿಲ್ಲ. ಈ ಬಗ್ಗೆ ಉಪವಿಭಾಗಾಧಿಕಾರಿಗೆ ಮಾಹಿತಿ ನೀಡಿದ್ದೇವೆ. ಒಂದನೇ ಹಾಗೂ ಎರಡನೇ ಶೆಡ್ಯೂಲ್ ಪರಿಹಾರಗಳನ್ನು ಸಂತ್ರಸ್ತರಿಗೆ ನೀಡುವವರೆಗೂ ಕಾಮಗಾರಿಯನ್ನು ಆರಂಭಿಸಬಾರದು ಎಂದು ಆಗ್ರಹಿಸಿದ್ದೇವೆ ಎಂದರು.

ಕೈಗಾರಿಕೆಗಳಿಗೆ ಕಾಳಜಿ, ಬರ ಪ್ರದೇಶ ನಿರ್ಲಕ್ಷ್ಯ :

       ರೈತ ಸಂಘದ ಅಧ್ಯಕ್ಷ ಹಾಗೂ ಎತ್ತಿನಹೊಳೆ ಹೋರಾಟ ಸಮಿತಿಯ ಕಾರ್ಯದರ್ಶಿ ಬಸ್ತಿಹಳ್ಳಿ ರಾಜಣ್ಣ ಅವರು ಮಾತನಾಡಿ ಎತ್ತಿನಹೊಳೆ ಯೋಜನೆಯ ಕಾಲುವೆ ತಿಪಟೂರಿನ ಮೇಲೆ ಹಾದು ಹೋಗುತ್ತಿರುವುದು ಸರಿಯಷ್ಟೆ, ಇದರಿಂದ ನಮ್ಮ ರೈತರ 1000 ಎಕರೆ ಭೂಮಿ ಸ್ವಾಧೀನವಾಗುತ್ತಿದೆ. ಈ ಕಾಲುವೆ ಮಾರ್ಗದುದ್ದಕ್ಕೂ ಬರ ಪ್ರದೇಶವಿದ್ದು, ಎಲ್ಲಿಯೂ ನೀರಿನ ಮೂಲಗಳಿಲ್ಲ. ಈ ಯೋಜನೆಯಲ್ಲಿ ನೀರು ಸಿಗಬಹುದೆಂಬ ಆಸೆ ಜನರಲ್ಲಿತ್ತು. ಆದರೆ ಈ ಯೋಜನೆಯಲ್ಲಿ ತಿಪಟೂರಿಗೆ ನೀರಿನ ಹಂಚಿಕೆಯಾಗಿರಲಿಲ್ಲ. ಸರ್ಕಾರ ವಸಂತ ನರಸಾಪುರದಂತಹ ಕೈಗಾರಿಕಾ ಪ್ರದೇಶಗಳಿಗೆ ಬಹಳ ಸುಲಭವಾಗಿ ನೀರು ಹಂಚಿಕೆ ಮಾಡುತ್ತದೆ. ಆದರೆ ಎತ್ತಿನಹೊಳೆ ಹಾದು ಹೋಗುವ ಎಷ್ಟೊ ತಾಲ್ಲೂಕುಗಳಿಗೆ ನೀರಿನ ಹಂಚಿಕೆ ಮಾಡಿಲ್ಲ. ಎತ್ತಿನಹೊಳೆ ಹೋರಾಟ ಸಮಿತಿಯಿಂದ ನೀರಿಗಾಗಿ ಚಳುವಳಿ ನಡೆದ ಮೇಲೆ ನೀರಿನ ಹಂಚಿಕೆಯಾಗಿದೆ ಎಂದು ಪತ್ರಗಳಲ್ಲಿ ಹರಿದಾಡುತ್ತಿದ್ದೆಯೇ ವಿನಹ ಯಾವುದೇ ಮಾಹಿತಿ ಇಲ್ಲ. ಕಾಮಗಾರಿ ನಡೆಸಲು ಬಹಳ ತರಾತುರಿಯಿಂದ ಪ್ರಯತ್ನಗಳು ನಡೆಯುತ್ತಿರುವುದು ಖಂಡನೀಯ ಎಂದರು.

ಬಗರ್‍ಹುಕುಂ ಜಮೀನುಗಳಲ್ಲಿ ಸಮಸ್ಯೆ :

      ಎತ್ತಿನ ಹೊಳೆ ಹೋರಾಟ ಸಮಿತಿ ಕಾರ್ಯದರ್ಶಿ ಆರ್.ಕೆ.ಎಸ್.ಸ್ವಾಮಿ ಮಾತನಾಡಿ ಎತ್ತಿನಹೊಳೆ ಯೋಜನೆ ಹಾದು ಹೋಗುವ ಹಳ್ಳಿಗಳಲ್ಲಿ ಬಗರ್‍ಹುಕುಂ ಜಮೀನುಗಳಿದ್ದು, ಅವುಗಳಲ್ಲಿ ಸಮಸ್ಯೆಗಳಿವೆ. ನಾಗತಿಹಳ್ಳಿ, ಚೌಡ್ಲಾಪುರ ಒಂದೆರೆಡು ಉದಾಹರಣಗಳಷ್ಟೆ. ಅದನ್ನು ಜಿಲ್ಲಾ ಮತ್ತು ತಾಲ್ಲೂಕು ಆಡಳಿತ ಹಾಗೂ ಜನ ಪ್ರತಿನಿಧಿಗಳು ಸೇರಿಕೊಂಡು ಸರಿಪಡಿಸಬೇಕು. ಇಲ್ಲವಾದಲ್ಲಿ ಪರಿಹಾರ ನೀಡುವ ಸಂದರ್ಭದಲ್ಲಿ ಸಮಸ್ಯೆಗಳು ಉದ್ಭವವಾಗುತ್ತವೆ ಎಂದರು.

      ಪತ್ರಿಕಾಘೋಷ್ಠಿಯಲ್ಲಿ ಎತ್ತಿನಹೊಳೆ ಹೋರಾಟ ಸಮಿತಿಯ ಉಪಾಧ್ಯಕ್ಷರಾದ ಬಿ.ಬಿ.ಸಿದ್ದಲಿಂಗಮೂರ್ತಿ, ಸಿ.ಬಿ.ಶಶಿಧರ್, ಸಹಕಾರ್ಯದರ್ಶಿಗಳಾದ ಲೋಕೇಶ್ ಭೈರನಾಯಕನಹಳ್ಳಿ, ಮನೋಹರ್ ಪಟೇಲ್, ಸದಸ್ಯರಾದ ಶ್ರೀಕಾಂತ್ ಕೆಳಹಟ್ಟಿ, ಆರ್.ಡಿ.ಯೋಗಾನಂದಸ್ವಾಮಿ ಮತ್ತಿತರರು ಹಾಜರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link