ತಿಪಟೂರು :
ಮಾನ್ಸೂನ್ ಮಾರುತವು ದೇಶದ ರೈತರೊಂದಿಗೆ ಆಡುವ ಜೂಜಾಟವೆಂಬುದು ಬಹಳ ಹಿಂದಿನಿಂದ ಇರುವ ನಾಣ್ಣುಡಿಯಾಗಿದೆ. ಈ ಮಾತಿನಂತೆ ಈ ಬಾರಿ ಉತ್ತಮ ಮಳೆ ಬಂದಿದೆ ಆದರೇ ಗೊಬ್ಬರ ಸಿಗದೆ ರೈತರು ಪದಾಡುವಂತಾಗಿದ್ದು, ತಮ್ಮಗೋಳನ್ನು ಕೇಳುವವರು ಯಾರು ಎಂದು ಪರಿತಪಿಸುತ್ತಿದ್ದಾರೆ.
ಹಣ ಕೊಟ್ಟರೂ ಸಿಗದ ಗೊಬ್ಬರ :
ಕೊರೊನಾವಿರಲಿ ಯುದ್ದವೇ ಇರಲಿ, ನಾನು ಉಳುವ ಕಾಯಕವನ್ನು ಬಿಡುವುದಿಲ್ಲವೆಂದು ಸಂಕಷ್ಟದಲ್ಲೂ ರಾಗಿಯನ್ನು ಬಿತ್ತಿ, ವರುಣನ ಕೃಪೆಯಿಂದ ಮಳೆಯಾಗುತ್ತಿರುವ ಸಂದರ್ಭದಲ್ಲಿ ತಾಲ್ಲೂಕಿನ ಹೊನ್ನವಳ್ಳಿ ಮತ್ತು ನೊಣವಿನಕೆರೆ ಹೋಬಳಿಯಲ್ಲಿ ಯೂರಿಯಾ ಗೊಬ್ಬರದ ಕೊರತೆಯುಂಟಾಗಿದೆ. ಮಳೆ ಚೆನ್ನಾಗಿ ಬರುತ್ತಿದ್ದು, ಈ ಸಮಯದಲ್ಲಿ ಸ್ವಲ್ಪ ಗೊಬ್ಬರ ಹಾಕೋಣವೆಂದು ಮನೆಯಲ್ಲಿ ಕೂಡಿಟ್ಟ ಹಣವನ್ನು ತೆಗೆದುಕೊಂಡು ಗೊಬ್ಬರದ ಅಂಗಡಿಗೆ ಹೋದರೆ ಗೊಬ್ಬರವಿಲ್ಲವೆಂಬ ಉತ್ತರ ಬರುತ್ತಿದೆ.
ಗೊಬ್ಬರದಂಗಡಿಗಳ ಕಡೆ ದೃಷ್ಠಿ ನೆಟ್ಟ ರೈತರು :
ತಾಲೂಕಿನಲ್ಲಿ ಆಗಸ್ಟ್ ಮಾಹೆಯ ಪ್ರಾರಂಭದಿಂದ 25 ರವರೆಗೆ ತಿಪಟೂರು 99.90 ಎಂಎಂ, ಕಸಬಾ 90.57 ಎಂಎಂ, ಹೊನ್ನವಳ್ಳಿ 95.57 ಎಂಎಂ, ಕಿಬ್ಬನಹಳ್ಳಿ 135.56 ಎಂಎಂ ಹಾಗೂ ನೊಣವಿನಕೆರೆ 86.08 ಎಂಎಂ ಮಳೆಯಾಗಿದ್ದು, ಈ ಬಾರಿ ವಾಡಿಕೆಗಿಂತ ದುಪ್ಪಟ್ಟು ಮಳೆಯಾಗಿದೆ ಎಂದು ಕೃಷಿ ಇಲಾಖೆ ತಿಳಿಸಿದೆ. ಈ ಬಾರಿ ರೈತರು ಬಿತ್ತನೆ ಮಾಡಿದ ರಾಗಿಯು ಚೆನ್ನಾಗಿ ಬಂದಿತ್ತು. ಈ ಸಂದರ್ಭದಲ್ಲಿ ಮಳೆ ಕೈಕೊಟ್ಟಿತು ಎನ್ನುವಾಗ ಮಖೆ ಮಳೆಯು ಆಗಮವಾಗುತ್ತಿದ್ದಂತೆ ಉತ್ತಮವಾಗಿ ಬಿದ್ದು, ರೈತರಿಗೆ ಹೊಸ ಚೈತನ್ಯ ನೀಡಿತು. ಆದರೆ ಗೊಬ್ಬರ ಸಿಗದ ಕಾರಣ ಹತಾಶರಾಗಿರುವ ರೈತರು ಮುಂದಿನ ದಿನಗಳಲ್ಲಿ ಗೊಬ್ಬರ ಬರುತ್ತದೆ ಎಂಬ ಆಶಾಭಾವನೆಯಿಂದ ಗೊಬ್ಬರದ ಅಂಗಡಿಗಳ ಕಡೆ ತಮ್ಮ ದೃಷ್ಠಿ ನೆಟ್ಟಿದ್ದಾರೆ.
ರೈತರಿಗೆ ಸೂಕ್ತ ಸಮಯದಲ್ಲಿ ಗೊಬ್ಬರ ದೊರೆಯದೇ ಇರುವುದು ವಿಪರ್ಯಾಸ. ಇದು ಈ ವರ್ಷವಲ್ಲ ಪ್ರತಿ ವರ್ಷವು ಇದ್ದದ್ದೆ. ಮಳೆ ಬಂದು ರೈತರು ಗೊಬ್ಬರದ ಅಂಗಡಿಗಳ ಮುಂದೆ ನಿಂತಾಗ ಗೊಬ್ಬರ ತರಿಸುತ್ತೇವೆ ಎನ್ನುವುದನ್ನು ಬಿಟ್ಟು ರೈತರಿಗೆ ಸೂಕ್ತ ಸಮಯಕ್ಕೆ ಗೊಬ್ಬರ ದೊರೆಯವ ವ್ಯವಸ್ಥೆಯನ್ನು ಸರ್ಕಾರ ಮಾಡಬೇಕು.
-ಬಸ್ತಿಹಳ್ಳಿ ರಾಜಣ್ಣ, ರೈತ ಸಂಘದ ಅಧ್ಯಕ್ಷ
ಪಿಎಸಿಎಸ್ ನೊಣವಿನಕೆರೆಯಲ್ಲಿ ಗೊಬ್ಬರ ದೊರೆಯುತ್ತಿಲ್ಲವೆಂಬ ವಿಷಯ ತಿಳಿಯಿತು. ಈ ಬಗ್ಗೆ ವಿಚಾರಿಸಿದಾಗ ನಾಳೆ ಗೊಬ್ಬರ ದೊರೆಯುತ್ತದೆ ಎಂದು ತಿಳಿಸಿದ್ದಾರೆ.
– ಪೂಜಾ, ಸಹಾಯಕ ಕೃಷಿ ನಿರ್ದೇಶಕರು, (ಪ್ರಭಾರ)
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ