ತಿಪಟೂರು :
ಕಣ್ಣಮುಂದೆ ನೂರಾರು ಬಸ್‍ಗಳ ಸಂಚಾರವಾಗುತ್ತಿದ್ದರೂ ನಾವು ನೋಡಿ ಸುಮ್ಮನಿರಬೇಕೆ ವಿನಹ ಅವುಗಳಲ್ಲಿ ಪ್ರಯಾಣಿಸುವ ಭಾಗ್ಯ ಇಲ್ಲ ಎಂದು ಕರಡಿ ಕೋಡಿ ಹಾಗೂ ಸುತ್ತಮುತ್ತಲ ಗ್ರಾಮಗಳ ಜನರು ವಿಷಾದ ವ್ಯಕ್ತ ಪಡಿಸಿದ್ದಾರೆ.
ಕೊರೊನಾ-ಲಾಕ್‍ಡೌನ್ ಮುಗಿದು ಶಾಲಾ-ಕಾಲೇಜುಗಳು, ಕಚೇರಿಗಳು, ಕಾರ್ಖಾನೆಗಳು, ಗಾರ್ಮೆಂಟ್ಸ್‍ಗಳು ಆರಂಭವಾಗಿವೆ. ಇಂತಹ ಸಂದರ್ಭದಲ್ಲಿ ದಿನನಿತ್ಯ ಕುಪ್ಪಾಳು, ಮದ್ಲೇಹಳ್ಳಿ, ಶೆಟ್ಟಿಹಳ್ಳಿ, ಭೈರಾಪುರ, ಕುಪ್ಪೂರು, ಶಿಡ್ಲೇಹಳ್ಳಿ, ಜಯಂತಿ ಗ್ರಾಮ ಸೇರಿದಂತೆ ಸುತ್ತಮುತ್ತಲ ಗ್ರಾಮದ ವಿದ್ಯಾರ್ಥಿಗಳು, ನೌಕರರು ಬಸ್ ಹತ್ತಲು ಕರಡಿ ಗ್ರಾಮದ ಕೆರೆಕೋಡಿ ಕೇಂದ್ರ ಸ್ಥಳವಾಗಿದೆ. ಈ ಸ್ಥಳವು ತಿಪಟೂರು ಮತ್ತು ಕಿಬ್ಬನಹಳ್ಳಿ ಮಧ್ಯೆ ರಾಷ್ಟ್ರೀಯ ಹೆದ್ದಾರಿಯಲ್ಲಿದ್ದು, ದಿನದ 24 ಗಂಟೆಯೂ ಸಹಸ್ರಾರು ಸಾರಿಗೆ ಬಸ್‍ಗಳು ಈ ಮಾರ್ಗದಲ್ಲಿ ಸಂಚರಿಸುತ್ತವೆ. ಆದರೆ ಕರಡಿ ಕೆರೆಕೋಡಿಯಲ್ಲಿ ಮಾತ್ರ ಯಾವುದೇ ಬಸ್‍ಗಳನ್ನು ನಿಲ್ಲಿಸದೆ ಇರುವುದರಿಂದ ಬರೀ ಕಣ್ಣಿನಲ್ಲಿ ನೋಡುತ್ತಾ ಕೂರಬೇಕು.
ಆಗಲೋ, ಈಗಲೋ ಒಂದು ಸಾಮಾನ್ಯ ಸಾರಿಗೆ ಬಸ್ ಬರುತ್ತದೆ. ಆ ಬಸ್ ಹತ್ತಲು ತುಂಬಿ ತುಳುಕಾಡುವಷ್ಟು ಜನರು ಕಾಯುತ್ತಿರುತ್ತಾರೆ. ಇನ್ನೂ ಆಟೋಗಳಲ್ಲಿ ಹೋಗೋಣವೆಂದರೆ ಅವರ ಹೊಟ್ಟೆಪಾಡು ಆಟೋದ ಸೀಟು ಭರ್ತಿಯಾಗುವವರೆಗೂ ಆಟೋ ಚಾಲನೆ ಮಾಡುವುದಿಲ್ಲ. ಗ್ರಾಮಾಂತರದಲ್ಲಿ ಸಂಚರಿಸುವ ವಾಹನಗಳು ಸರಿಯಾದ ಸಮಯಕ್ಕೆ ತಲುಪುವುದೇ ಇಲ್ಲ. ಇದರಿಂದ ಸಮಯಕ್ಕೆ ಸರಿಯಾಗಿ ಕೆಲಸಗಳಿಗೆ ಹೋಗಲಾಗುತ್ತಿಲ್ಲ. ಎಲ್ಲಿ ಕೊರೊನಾ ಹರಡುತ್ತದೋ ಎಂಬ ಹೆದರಿಕೆಯಿಂದ ಜನ ಪ್ರಯಾಣಿಸಬೇಕಾಗಿದೆ. ಇಷ್ಟೆಲ್ಲಾ ಸಮಸ್ಯೆಗಳಿದ್ದರೂ ವಿದ್ಯಾಭ್ಯಾಸಕ್ಕಾಗಿ ಮತ್ತು ಹೊಟ್ಟೆಪಾಡಿಗಾಗಿ ವಿಧಿ ಇಲ್ಲದೇ ಈ ವಾಹನಗಳಲ್ಲೇ ಸಂಚರಿಸುತ್ತೇವೆ ಎನ್ನುತ್ತಾರೆ ಈ ಭಾಗದ ವಿದ್ಯಾರ್ಥಿಗಳು ಹಾಗೂ ಕಾರ್ಮಿಕರು.
ಇಷ್ಟೆಲ್ಲಾ ತೊಂದರೆಗಳಿರುವಾಗ ತುಮಕೂರು ವಿಭಾಗದಿಂದ ಸಂಚರಿಸುವ ಕೆಎಸ್‍ಆರ್‍ಟಿಸಿ ವೇಗದೂತ ಬಸ್‍ಗಳು ವಿದ್ಯಾರ್ಥಿಗಳ ಅನುಕೂಲಕ್ಕಾಗಿ ತಿಪಟೂರು ತಾಲ್ಲೂಕಿನ ಬಿಳಿಗೆರೆ, ಬಿದರೆಗುಡಿಯಲ್ಲಿ ನಿಲ್ಲಿಸುವಂತೆಯೆ ಕರಡಿ ಕೋಡಿಯಲ್ಲೂ ಬಸ್‍ಗಳನ್ನು ನಿಲ್ಲಿಸಿ ವಿದ್ಯಾರ್ಥಿಗಳಿಗೆ ಮತ್ತು ಕಾರ್ಮಿಕರಿಗೆ ಅನುಕೂಲ ಮಾಡಿಕೊಡಬೇಕೆಂದು ಸುತ್ತಮುತ್ತಲ ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ