ತಿಪಟೂರು :
ನಗರದ ಹಲವು ರಸ್ತೆಗಳು ಈಗಾಗಲೇ ಹಾಳಾಗಿವೆ. ಉಳಿದ ಕೆಲವು ರಸ್ತೆ ಹಾಗೂ 24/7 ಕುಡಿಯುವ ನೀರು, ಯುಜಿಡಿ ಯೋಜನೆಗಳ ಕಾಮಗಾರಿಗಳು ನಡೆಯುತ್ತಿದ್ದು, ಈ ಸಂದರ್ಭದಲ್ಲಿ ಯಾವುದನ್ನು ಪರೀಕ್ಷಿಸದೇ ಪೈಪ್‍ಲೈನ್ ಮಾಡಿ ಗುಂಡಿ ಮುಚ್ಚಿ ರಸ್ತೆ ಮಾಡಿರುತ್ತಾರೆ. ಮತ್ತೆ ಹೊಸ ರಸ್ತೆಯನ್ನು ಕೀಳುತ್ತಾರೆ ಇದರಿಂದ ಸಾರ್ವಜನಿಕರ ತೆರಿಗೆ ಹಣ ನೀರಿನಲ್ಲಿ ಹೋಮ ಮಾಡಿದಂತಾಗಿದ್ದು ಇದಕ್ಕೆ ಅಧಿಕಾರಿಗಳು ಹೊಣೆಯಾಗುತ್ತಾರೊ ಇಲ್ಲ ಗುತ್ತಿಗೆದಾರರು ಹೊಣೆಯಾಗುತ್ತರೊ ಎಂದು ನಗರಸಭಾ ಸದಸ್ಯ ಪ್ರಭು ಪ್ರಶ್ನಿಸಿದರು.
ಚಿಂದಿ ಆಯುವರ ಪಾಲಾದ ಮೀಟರ್‍ಗಳು :
24/7 ನೀರಿನ ಕಾಮಗಾರಿ 2017ರಲ್ಲಿ ಪ್ರಾರಂಭವಾಗಿದ್ದು, 18 ತಿಂಗಳಲ್ಲಿ ಮುಗಿಯಬೇಕಿತ್ತು. ಆದರೆ ಇನ್ನೂ ಎಷ್ಟೋ ಬಡಾವಣೆಗಳಲ್ಲಿ ಕಾಮಗಾರಿ ಮುಗಿದಿಲ್ಲ. ಮನೆಗಳಿಗೆ ಹಾಕಿರುವ ನಲ್ಲಿಗಳು ತಕ್ಕುಹಿಡಿಯುತ್ತಿವೆ. ಹೊರಗಡೆ ಹಾಕಿದ ಮೀಟರ್‍ಗಳು ಗುಜರಿ ಆಯುವವರ ಪಾಲಾಗಿವೆ. ಎಂದು ಎಲ್ಲಾ ಸದಸ್ಯರು ದನಿಗೂಡಿಸಿ ನೀರು ಯಾವಾಗ ಬರುತ್ತದೆ ಸದಸ್ಯ ಪ್ರಭು ಮತ್ತೆ ಅಧಿಕಾರಿಗಳನ್ನು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಜಲ ಮಂಡಳಿ ಅಧಿಕಾರಿಗಳು ಡಿಸೆಂಬರ್ 2021ಕ್ಕೆ ಕಾಮಗಾರಿ ಮುಗಿಯುತ್ತದೆ ಎಂದು ತಿಳಿಸಿದರು.
ಕೆಲಸ ಆಗಬೇಕಾದರೇ ಪತ್ರ ನೀಡಿ :
ಸಭೆಯಲ್ಲಿ ನೀರು, ಬೀದಿ ದೀಪದ ಸಮಸ್ಯೆಗಳು ಪ್ರಮುಖವಾಗಿ ಚರ್ಚೆಯಾಗುತ್ತಿದ್ದ ವೇಳೆ ಪೌರಾಯುಕ್ತ ಉಮಾಕಾಂತ್ ಅವರು ನಿಮ್ಮ ಕೆಲಸಗಳು ಆಗಬೇಕಾದರೆ ಪತ್ರ ನೀಡಬೇಕೆಂದಾಗ, ಸದಸ್ಯರು ಸರಿ ನಾವು ಕಛೇರಿಗೆ ಬರುವುದಿಲ್ಲ. ಕೇವಲ ಪತ್ರದಲ್ಲೇ ವ್ಯವಹಾರ ಮಾಡುತ್ತೇವೆಂದು ಆಕ್ರೋಶ ವ್ಯಕ್ತ ಪಡಿಸಿದರು.
ಲಾಕ್‍ಡೌನ್ ಬಿಲ್ ನೀಡಬೇಡಿ :
ಕೊರೊನಾ ಮೊದಲನೇ ಅಲೆಯ ಸಂದರ್ಭದಲ್ಲಿ ಬೀದಿ ದೀಪಗಳ ನಿರ್ವಹಣೆ ಇರಲಿಲ್ಲ, ಗುತ್ತಿಗೆದಾರರು ಸೂಕ್ತವಾದ ಪರಿಕರಗಳು ಸಿಗದೇ ಸುಮಾರು 3 ತಿಂಗಳು ಬೀದೀ ದೀಪಗಳ ನಿರ್ವಹಣೆ ಮಾಡಿಲ್ಲ. ಆದ್ದರಿಂದ ಲಾಕ್‍ಡೌನ್ ಅವಧಿಯ 3 ತಿಂಗಳ ಬಿಲ್ ನೀಡಬೇಡಿ ಎಂದು ನಗರಸಭಾ ಸದಸ್ಯರಾದ ಗಂಗಾಮಣಿ, ಮಹೇಶ್ ಮುಂತಾದವರು ಪೌರಾಯುಕ್ತರಿಗೆ ಪತ್ರ ಸಲ್ಲಿಸಿದ್ದರು. ಇದಕ್ಕೆ ಸಂಬಂಧಿದಂತೆ ನವೆಂಬರ್ ತಿಂಗಳಲ್ಲಿ 5 ಲಕ್ಷ ರೂ.ಗಳಿಗೂ ಅಧಿಕ ಮೊತ್ತದ ಬಿಲ್ ಪಾಸ್ ಮಾಡಿ ಗುತ್ತಿಗೆದಾರರಿಗೆ ಹಣ ನೀಡಿದ್ದೀರಿ ಎಂದಾದರೆ ಜನಪ್ರತಿನಿಧಿಗಳಿಗೆ ಬೆಲೆ ಇಲ್ಲವೇ ಎಂದು ಪ್ರಶ್ನಿಸಿದರು.
ದಾಖಲೆ ತರದ ಅಧಿಕಾರಿಗೆ ತರಾಟೆ :
ಸದಸ್ಯರ ಎಲ್ಲಾ ಪ್ರಶ್ನೆಗಳಿಗೆ ಪೌರಾಯುಕ್ತರು ಉತ್ತರಿಸಿ, ಇನ್ನು ಮುಂದೆ ನಿಮ್ಮ ಕೆಲಸಗಳು ಆಗಬೇಕೆಂದರೆ ಎಲ್ಲದಕ್ಕೂ ಪತ್ರಗಳನ್ನು ನೀಡಿ ಅದನ್ನು ನೋಡಿಕೊಂಡು ನಾವು ಕೆಲಸಮಾಡುತ್ತೇವೆ ಎಂದು ಉತ್ತರಿಸಿದರು. ಹಾಗೂ ಈ ಬಗ್ಗೆ ದಾಖಲೆಗಳನ್ನು ನೀಡಲು ಎಇ ಮುನಿಸ್ವಾಮಿ ತಡಬಡಾಯಿಸಿದರು. ಆಗ ಅಧ್ಯಕ್ಷರಾದ ರಾಮ್‍ಮೋಹನ್ ಅವರು ಸಭೆಗೆ ಎಲ್ಲಾ ದಾಖಲೆಗಳನ್ನು ತೆಗೆದುಕೊಂಡು ಬರಬೇಕು ಏಕೆ ತೆಗೆದುಕೊಂಡು ಬಂದಿಲ್ಲವೆಂದು ತರಾಟೆಗೆ ತೆಗೆದುಕೊಂಡರು.
ಮಂಗಳವಾರ ನಡೆದ ಸಾಮಾನ್ಯ ಸಭೆ ಕಳೆದ ವಾರ ನಡೆದ ಸಭೆಯ ಮುಂದುವರೆದ ಭಾಗವಾಗಿದ್ದು, ಸಂಜೆಯಾದರೂ ಸಭೆ ಮುಗಿಯಲೇ ಇಲ್ಲ. ಸಭೆಯಲ್ಲಿ ನೀರು ಮತ್ತು ಬೀದಿ ದೀಪದ ವಿಷಯಗಳೇ ಪ್ರಮುಖವಾಗಿದ್ದು, ಹಲವಾರು ಸಮಸ್ಯೆಗಳು ಚರ್ಚೆಯಾದವು.
ಸಭೆಯಲ್ಲಿ ನಗರಸಭಾ ಉಪಾಧ್ಯಕ್ಷ ಸೊಪ್ಪುಗಣೇಶ್, ನಗರಸಭಾ ಸದಸ್ಯರುಗಳು ಹಾಗೂ ನಗರಸಭೆ ಅಧಿಕಾರಿಗಳು ಇದ್ದರು.
ಸಚಿವರಿಗೂ ಪ್ರಭುಗೂ ಆಗುವುದಿಲ್ಲ ಎನ್ನುತ್ತಾರೆ
ನನ್ನ ವಾರ್ಡ್‍ನಲ್ಲಿ ಕೋಟ್ಯಾಂತ ರೂಪಾಯಿಗಳ ರಸ್ತೆ ಕಾಮಗಾರಿಗಳು ನಡೆಯುತ್ತಿದ್ದು, 24/7 ನೀರಿನ ಕಾಮಗಾರಿ ಹಾಗೂ ಯುಜಿಡಿ ಕೆಲಸ ಮುಗಿದಿಲ್ಲ ಮತ್ತು ಕಾಮಗಾರಿ ಪರಿಶೀಲನೆ ಮಾಡಿಲ್ಲ ಹಾಗಾಗಿ ನಡೆಯುತ್ತಿರುವ ಕಾಮಗಾರಿಗಳನ್ನು ನಿಲ್ಲಿಸಿದ್ದೇನೆ. ಈಗ ರಸ್ತೆ ಕಾಮಗಾರಿ ಮಾಡುತ್ತಾರೆ. ಜೊತೆಗೆ ಮತ್ತೆ ಯುಜಿಡಿ ಮತ್ತು 24/7 ನೀರಿನ ಕಾಮಗಾರಿಗಾಗಿ ರಸ್ತೆ ಅಗೆಯುತ್ತಾರೆ ಇದರ ಪರಿಹಾರವನ್ನು ಕಟ್ಟಿಕೊಡುವವರು ಯಾರು. ನಾನು ರಸ್ತೆ ಕಾಮಗಾರಿಯನ್ನು ನಿಲ್ಲಿಸಿದರೆ ಸಚಿವರಿಗೂ ಪ್ರಭುಗೂ ಆಗುವುದಿಲ್ಲ ಅದಕ್ಕೆ ಇಲ್ಲದ ಅಡೆತಡೆಗಳನ್ನು ತಂದು ಕಾಮಗಾರಿಗಳನ್ನು ನಿಲ್ಲಿಸುತ್ತಾರೆ ಎನ್ನುತ್ತಾರೆ ಇದಕ್ಕೆ ಯಾರು ಹೊಣೆ ಎಂದು ಸದಸ್ಯ ಪ್ರಭು ಪ್ರಶ್ನಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ