ತಿಪಟೂರು

ಸಂತೆಯಲ್ಲಿ ಅಪ್ಪನ ನೋಡಿ, ಮನೆಯಲ್ಲಿ ತಾಯಿಯನ್ನು ನೋಡಿದರೆ ಮಕ್ಕಳು ಹೇಗಿರುತ್ತಾವೆಂದು ಗೊತ್ತಾಗುತ್ತದೆ ಎಂದು ಜನಪದರು ಗಾದೆ ಮೂಲಕ ತಿಳಿಸಿದ್ದಾರೆ. ಅದರಂತೆಯೇ ತಂದೆಯ ನಡತೆ, ಅಮ್ಮನ ಕರುಣೆ ಎರಡನ್ನೂ ತನ್ನದಾಗಿಸಿಕೊಂಡಿದ್ದ ಅಪ್ಪು ನಮ್ಮನ್ನು ಅಗಲಿರುವ ಸುದ್ದಿಯನ್ನು ನಂಬಲು ಆಗುತ್ತಿಲ್ಲ ಆದರೂ ವಿಧಿಯ ಮುಂದೆ ಎಲ್ಲರೂ ತಲೆಬಾಗಲೇಬೇಕೆಂದು ಡಾ.ರಾಜ್‍ಕುಮಾರ್ ಸ್ನೇಹಿತ ತಿಪಟೂರು ರಾಮಸ್ವಾಮಿ ಮರುಗಿದರು.
ದೊಡ್ಮನೆಗೆ ಕಲ್ಪತರು ನಾಡಿನ ನಂಟು :

ತಿಪಟೂರಿಗೂ ವರನಟ ರಾಜಕುಮಾರರಿಗೂ ಅವಿನಾಭಾವ ನಂಟಿದ್ದು, ಪುನೀತ್ ನಿಧನಕ್ಕೆ ಕಲ್ಪತರುನಾಡು ದುಖಃದ ಕಡಲಲ್ಲಿ ಮುಳುಗಿದೆ. ವರನಟ ಡಾ.ರಾಜ್‍ಕುಮಾರ್ ಅವರ ಸ್ನೇಹ ಎಂತಹದು ಎಂಬುದು ಇಡೀ ನಾಡಿಗೆ ತಿಳಿದಿದೆ. ನಾನು ಮೇರುನಟ, ತನಗೆ ಹಲವಾರು ಪ್ರಶಸ್ತಿಗಳು ಅರಸಿ ಬಂದರೂ ತನ್ನ ಸ್ನೇಹ ಮಾತ್ರ ಎಂದಿನಂತೆ ಇದೆ ಎಂಬುದನ್ನು ನೆನಪಿಸುವಂತಹ ಸ್ನೇಹಿತರಿದ್ದರೆ ಅದು ಡಾ.ರಾಜ್‍ಕುಮಾರ್ ಮಾತ್ರವೆಂದು ತಿಳಿಸಿದ ಅವರು ನಾನು ಮತ್ತು ಡಾ.ರಾಜ್‍ಕುಮಾರ್ ಗಳಸ್ಯ-ಕಂಟಸ್ಯ ಎಂದರೆ ತಪ್ಪಾಗಲಾರದು. ತಮ್ಮ ಬಿಡುವಿರದ ವೇಳೆಯಲ್ಲಿ ಬಿಡುವು ಮಾಡಿಕೊಂಡು ತಿಪಟೂರಿಗೆ ತನ್ನ ಸಂಸಾರ ಸಮೇತರಾಗಿ ಬಂದು ಹೋಗುತ್ತಿದ್ದ ವ್ಯಕ್ತಿಯಾಗಿದ್ದರು.
ನಾನು ಎತ್ತಿ ಆಡಿಸಿದ ಕೂಸು :

ಶುಕ್ರವಾರ ಮುಂಜಾನೆಯಿಂದಲೇ ಒಂದು ರೀತಿಯ ಅಸಹನೆ, ಹೇಳಿಕೊಳ್ಳಲಾರದಷ್ಟು ತಳಮಳ, ಉದ್ವಿಗ್ನತೆ, ಯಾವುದೇ ಕೆಲಸ ಮಾಡಲು ಹೋದರೂ ಆಲಸ್ಯ, ಇಂದು ನಡೆಯಬಾರದ್ದು ಏನೋ ನಡೆಯುತ್ತದೆ ಎನ್ನುವ ಆತಂಕ ಬೆಳಿಗ್ಗಿನಿಂದಲೇ ನನ್ನನ್ನು ಕಾಡುತ್ತಿತ್ತು. ಇಂತಹ ಸಮಯದಲ್ಲಿ ಶುಕ್ರವಾರ ಬೆಳಗ್ಗೆ 10 ಗಂಟೆಗೆ ಪುನೀತ್‍ರಾಜ್‍ಕುಮಾರ್‍ಗೆ ಹೃದಯಾಘಾತ ಎನ್ನುವ ಸುದ್ದಿ ತಿಳಿಯುತ್ತಿದ್ದಂತೆ ಬರಸಿಡಿಲು ಬಡಿದಂತಾಯಿತು.
ಪುನೀತ್ ನಾನು ಆಡಿಸಿದ ಕೂಸು ಎಂಬುದೇ ನನ್ನ ನೆನಪಿಗೆ ಬರುತ್ತಿದೆಯೇ ಹೊರತು ಒಬ್ಬ ಮಹಾನಟ ಎಂಬ ಅರಿವು ಸಹ ನನಗೆ ಬರಲೇ ಇಲ್ಲ. ಅಂದಿನ ಮುಗ್ದತೆಯ ಅಪ್ಪು ಇಂದು ನಮ್ಮನ್ನು ಅಗಲಿದ್ದಾನೆಂದರೆ ನಂಬಲು ಸಾಧ್ಯವಾಗುತ್ತಿಲ್ಲ. ಭಗವಂತನಿಗೆ ಒಳ್ಳಯವರೆಂದರೆ ಅಷ್ಟು ಪ್ರೀತಿ ಇರಬೇಕು. ಮುಮ್ಮಲ ಮರುಗಿದರು.
ಮೊನ್ನೆ ತಾನೆ ಶಿವಣ್ಣ ಕರೆಮಾಡಿ ನಾನು ಮತ್ತು ಅಪ್ಪು ಸದ್ಯದಲ್ಲಿಯೇ ಒಟ್ಟಾಗಿ ಸಿನಿಮಾ ಮಾಡುತ್ತೇವೆ ಕಾದು ನೋಡಿ ಎಂದಿದ್ದು ನನ್ನ ಕಿವಿಯಲ್ಲಿ ಇನ್ನೂ ಗುನುಗುತ್ತಲೇ ಇದೆ. ಆದರೆ ಇಂದು ಅಪ್ಪು ಇನ್ನಿಲ್ಲ, ಭಗವಂತ ಅವರ ಕುಟುಂಬಕ್ಕೆ ದುಖಃವನ್ನು ಅರಗಿಸಿಕೊಳ್ಳುವ ಶಕ್ತಿಯನ್ನು ದಯಪಾಲಿಸಲಿ.
-ರಾಮಸ್ವಾಮಿ, ರಾಜ್‍ಕುಮಾರ್ ಸ್ನೇಹಿತ, ತಿಪಟೂರು
ಪುನೀತ್‍ರಾಜ್‍ಕುಮಾರ್ ಅಪ್ಪನಿಗೆ ತಕ್ಕ ಮಗ ಎಂಬಂತೆ ಬಾಳುತ್ತಿದ್ದ ದೊಡ್ಡಮನೆಯ ಕಿರಿಯ ದೀಪದಂತಿದ್ದರು. ಅವರು ಇಂದು ನಮ್ಮನ್ನು ಅಗಲಿರುವುದು ಕನ್ನಡ ಚಿತ್ರರಂಗಕ್ಕೆ ತುಂಬಲಾರದ ನಷ್ಟವಾಗಿದೆ.
-ದಯಾನಂದ್‍ಸಾಗರ್, ಕಿರುತರೆ ನಟ
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
